ಗುರುವಾರ , ಮಾರ್ಚ್ 4, 2021
30 °C
ಹುಡ್ಕೊ ಸಾಲದ ಕಂತು ಚುಕ್ತಾ

ನಗರದ ಪಾರಂಪರಿಕ ಕಟ್ಟಡಗಳು ಋಣಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಪಾರಂಪರಿಕ ಕಟ್ಟಡಗಳು ಋಣಮುಕ್ತ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಹಿಂದೆ ಸಾಲ ಪಡೆಯಲು ಅಡಮಾನ ಇಟ್ಟಿದ್ದ 11 ಕಟ್ಟಡಗಳಲ್ಲಿ ಎರಡು ಕಟ್ಟಡಗಳನ್ನು ಶನಿವಾರ ಋಣಮುಕ್ತ ಮಾಡಲಾಗುತ್ತಿದೆ.ಮೇಯೊ ಹಾಲ್‌ ಮತ್ತು ಕೆಂಪೇಗೌಡ ಮ್ಯೂಸಿಯಂ ಆ ಎರಡು ಕಟ್ಟಡಗಳಾಗಿವೆ. ಬಿಬಿಎಂಪಿ ತಾನು ಪಡೆದಿದ್ದ ₹ 1676. 85 ಕೋಟಿ ಸಾಲಕ್ಕೆ ಪ್ರತಿಯಾಗಿ 2011–12 ಮತ್ತು 2012–13ನೇ ಸಾಲಿನಲ್ಲಿ ತನ್ನ 11 ಕಟ್ಟಡಗಳನ್ನು ಅಡಮಾನ ಇಟ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 245 ಕೋಟಿ ಸಾಲ ತೀರಿಸಲಾಗಿದ್ದು, ಎರಡು ಕಟ್ಟಡಗಳನ್ನು ಋಣಮುಕ್ತ ಮಾಡಲಾಗುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರಿಗೆ ಹುಡ್ಕೊ ಅಧಿಕಾರಿಗಳು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರ ಮಾಡಲಿದ್ದಾರೆ. ಮುಖ್ಯಮಂತ್ರಿ ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಈ ಹಸ್ತಾಂತರ ನಡೆಯಲಿದೆ.ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್‌ ಮಾರುಕಟ್ಟೆ, ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌, ಮೇಯೊ ಹಾಲ್‌, ಕೆಂಪೇಗೌಡ ಮ್ಯೂಸಿಯಂ, ವೆಸ್ಟರ್ನ್ ರೇಜರ್‌್ಸ ಆಫೀಸ್‌, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಮಾರುಕಟ್ಟೆ ಹಾಗೂ ಟ್ಯಾನರಿ ರಸ್ತೆ ವಧಾಗಾರವನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿತ್ತು.ಮೇಯೊಹಾಲ್‌ ನಿರ್ಮಾಣವಾದ ಮೇಲೆ (ಉದ್ಘಾಟನೆ: 1883 ಜೂನ್‌ 6) ಈ ಕಟ್ಟಡವೇ ಬೆಂಗಳೂರು ಪಾಲಿಕೆ ಕೇಂದ್ರ ಕಚೇರಿ ಆಗಿತ್ತು. ಕೌನ್ಸಿಲ್‌ ಸಭೆ ಸಹ ಇಲ್ಲಿಯೇ ನಡೆಯುತ್ತಿತ್ತು. 1950ರ ದಶಕದಲ್ಲಿ ರಿಜಿಸ್ಟರ್ಡ್‌ ಮದುವೆಗಳ ತಾಣವಾಗಿ ಅದು ಹೆಸರು ಮಾಡಿತ್ತು. ಅದೇ ಮೇಯೊಹಾಲ್‌ನ ಮೊದಲ ಮಹಡಿಯಲ್ಲಿ ಕೆಂಪೇಗೌಡ ಮ್ಯೂಸಿಯಂ ಇದೆ.‘ಮೇಯೊಹಾಲ್‌ ಮತ್ತು ಕೆಂಪೇಗೌಡ ಮ್ಯೂಸಿಯಂ ಎರಡೂ ನಗರದ ಹೆಮ್ಮೆಯ ಪಾರಂಪರಿಕ ತಾಣಗಳು. ಅವುಗಳನ್ನು ಅಡಮಾನ ಇಟ್ಟಿದ್ದು ಮುಖ್ಯಮಂತ್ರಿ ಅವರಿಗೆ ತುಂಬಾ ನೋವು ತರಿಸಿತ್ತು. ಅವರ ಸೂಚನೆ ಮೇರೆಗೆ ನಾವು ಸತತ ಪ್ರಯತ್ನ ಹಾಕಿ, ಸಾಲದ ಕಂತು ತೀರಿಸಿ ಈಗ ಆ ಕಟ್ಟಡಗಳನ್ನು ಮತ್ತೆ ನಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು.‘ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಂತ–ಹಂತವಾಗಿ ಉಳಿದ ಕಟ್ಟಡಗಳನ್ನೂ ಋಣಮುಕ್ತ ಮಾಡಲಾಗುವುದು’ ಎಂದು ಅವರು ಹೇಳುತ್ತಾರೆ.‘ಕಳೆದ 136 ದಿನಗಳಲ್ಲಿ ₹ 315 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ಸಾಲದ ವಾರ್ಷಿಕ ಕಂತು ತುಂಬಿದ್ದಲ್ಲದೆ ಮುಂದಿನ ಹಣಕಾಸು ವರ್ಷದ ಕಂತಿನಲ್ಲೂ ₹ 98 ಕೋಟಿ  ಈಗಲೇ ತುಂಬಿದ್ದೇವೆ. ಇದರಿಂದ ₹ 5.88 ಕೋಟಿ ಬಡ್ಡಿ ಉಳಿತಾಯವಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.