ಶುಕ್ರವಾರ, ಮೇ 27, 2022
23 °C

ನಗರಸಭೆ ಆಸ್ತಿ: ಲೀಸ್ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತೀವ್ರ ವಿವಾದಕ್ಕೆ ಕಾರಣವಾಗಿರುವ ನಗರದ ಹಳೆ ಕಾಟನ್ ಮಾರ್ಕೆಟ್ ಆಸ್ತಿಗಳನ್ನು ಅವುಗಳ ಹಾಲಿ ಮಾಲೀಕರಿಗೆ ಸದ್ಯದ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡುವುದಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದಕ್ಕೆ ಮಂಜೂರಾತಿ ದೊರಕುವವರೆಗೆ ಸದ್ಯದ ಬಾಡಿಗೆಯನ್ನು ಹೆಚ್ಚಿಸಿ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ನಗರಸಭೆ ತೀರ್ಮಾನಿಸಿದೆ.ನಗರಸಭೆಯ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.ಕೋಟ್ಯಂತರ ರೂಪಾಯಿ ಬೆಲೆಬಾಳುವ ಹಳೆ ಕಾಟನ್ ಮಾರ್ಕೆಟ್‌ನ 20 ಆಸ್ತಿಗಳ(ಸಿಟಿ ಸರ್ವೆ ನಂ.49ರಿಂದ 62) ಲೀಸ್ ಅವಧಿಯು ಮಾರ್ಚ್ 31, 2011ಕ್ಕೆ ಕೊನೆಗೊಳ್ಳಲಿರುವುದರಿಂದ ಬಾಡಿಗೆಯನ್ನು ಶೇ.20ರಷ್ಟು ಹೆಚ್ಚಿಸಿ ಲೀಸ್ ಅವಧಿಯನ್ನು ವಿಸ್ತರಿಸಲು ಸಭೆಯು ಒಪ್ಪಿಗೆ ನೀಡಿತು.ಲೀಸ್ ಅವಧಿ ವಿಸ್ತರಿಸುವಂತೆ ಕೋರಿ ಲೀಸ್‌ದಾರರಿಂದ ಯಾವುದೇ ಮನವಿ ಬಂದಿಲ್ಲ. ಆದರೆ ಲೀಸ್ ಅವಧಿ ಮುಕ್ತಾಯಗೊಳ್ಳಲಿರುವುದರಿಂದ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನಿಸಬೇಕಾಗುತ್ತದೆ ಎಂದು ಪೌರಾಯುಕ್ತ ಬಿ.ಎ. ಶಿಂಧೆ ಸಭೆಗೆ ತಿಳಿಸಿದರು.ಇದೇ ರೀತಿ ಹಳೆ ಬಾಗಲಕೋಟೆಯಲ್ಲಿರುವ ನಗರಸಭೆ ಒಡೆತನದ ಕಿರಾಣಿ ಅಂಗಡಿಗಳು ಹಾಗೂ ಹೊಸ ಕಾಯಿಪಲ್ಲೆ ಮಾರುಕಟ್ಟೆಯಲ್ಲಿನ ಆಸ್ತಿಗಳ ಲೀಸ್ ಅವಧಿಯನ್ನು ಶೇ.20 ಬಾಡಿಗೆ ಹೆಚ್ಚಳದೊಂದಿಗೆ ಐದು ವರ್ಷದವರೆಗೆ ವಿಸ್ತರಿಸಲು ಶಾಸಕ ವೀರಣ್ಣ ಚರಂತಿಮಠ ಸಲಹೆ ನೀಡಿದರು. ಶಾಸಕರ ಸಲಹೆಯ ಮೇರೆಗೆ ಈ ಆಸ್ತಿಗಳ ಲೀಸ್ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಲಾಯಿತು.ಕಿರಾಣಿ ಅಂಗಡಿಗಳು ಹಾಗೂ ಹೊಸ ಕಾಯಿಪಲ್ಲೆ ಮಾರುಕಟ್ಟೆಯಲ್ಲಿನ ಅನೇಕ ಆಸ್ತಿಗಳ ಲೀಸ್‌ದಾರರು ಅನೇಕ ವರ್ಷಗಳ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಅಂತವರಿಗೆ ತಕ್ಷಣವೇ ನೋಟಿಸ್ ನೀಡಿ ಬಾಕಿ ವಸೂಲಿ ಮಾಡುವಂತೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.ಹಳೆ ಬಾಕಿ ವಸೂಲಿ ಮಾಡಬೇಕು ಹಾಗೂ ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಪಾವತಿಸಬೇಕು ಎಂಬ ಕರಾರಿನೊಂದಿಗೆ ಅವಧಿ ವಿಸ್ತರಣೆ ಮಾಡಬೇಕು ಎಂದು ಹೇಳಿದರು.ಪ್ರತ್ಯೇಕ ಚರ್ಚೆ: ನಗರಸಭೆ ವ್ಯಾಪ್ತಿಯಲ್ಲಿನ ಕೃಷಿ ಭೂಮಿಯನ್ನು ವಿವಿಧ ಉದ್ದೇಶಕ್ಕಾಗಿ ಪರಿವರ್ತಿಸಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಸಮಗ್ರವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಚರಂತಿಮಠ ತಿಳಿಸಿದರು.“ಈ ಬಗ್ಗೆ ತಾವು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಕಾಯ್ದೆ ಪ್ರಕಾರ ನಗರಸಭೆ ವತಿಯಿಂದ ನಿರಾಕ್ಷೇಪಣಾ ಪತ್ರ ನೀಡಬೇಕಾಗುತ್ತದೆ” ಎಂದು ಪೌರಾಯುಕ್ತ ಶಿಂಧೆ ಮಾಹಿತಿ ನೀಡಿದರು.ಕೃಷಿ ಭೂಮಿ ಪರಿವರ್ತನೆಗಾಗಿ ನಿರಾಕ್ಷೇಪಣಾ ಪತ್ರ ಕೋರಿ 50 ಜನರು ಅರ್ಜಿ ಸಲ್ಲಿಸಿದ್ದು, ಒಟ್ಟು ಎಷ್ಟು ಭೂಮಿ ಇದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಇದರ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು ಎಂದು ಶಾಸಕರು ಸಲಹೆ ನೀಡಿದರು.2007-08, 2008-09 ಹಾಗೂ 2009-10ನೇ ಸಾಲಿನಲ್ಲಿ ಬಾಕಿ ಉಳಿದಿರುವ ಹಾಗೂ 2010-11ನೇ ಸಾಲಿನಲ್ಲಿ ಮಂಜೂರಾಗಿರುವ ಕಾಮಗಾರಿಗಳು ಸೇರಿದಂತೆ ಒಟ್ಟು 1.60 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಳುಗಡೆ ಪ್ರದೇಶ ಹೊರತುಪಡಿಸಿ ಇತರ ಕಡೆಗಳಲ್ಲಿ ಅನುಷ್ಠಾನಗೊಳಿಸಲು ಸಭೆ ಅನುಮೋದನೆ ನೀಡಿತು.ಘನತ್ಯಾಜ್ಯ ವಸ್ತುಗಳ ಸಂಸ್ಕರಣೆಗಾಗಿ ಬಯೋಮೆಥಿವೇಷನ್ ಘಟಕ ಸ್ಥಾಪನೆಗೆ ಅಗತ್ಯವಿರುವ ಜಾಗವನ್ನು ಗುರುತಿಸಿ, ಪೌರಾಡಳಿತ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಯಿತು.

ನಳ ಸಕ್ರಮಕ್ಕೆ ಅವಕಾಶ: ಹಳೆ ನಗರದಲ್ಲಿರುವ ಅನಧಿಕೃತ ನಳಗಳನ್ನು ಸಕ್ರಮಗೊಳಿಸಲು ಹಾಗೂ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಒಟ್ಟು 1.76 ಕೋಟಿ ರೂಪಾಯಿ ನೀರಿನ ಕರವನ್ನು ವಸೂಲಾತಿಗೆ ಓಟಿಎಸ್(ಒನ್ ಟೈಮ್ ಸೆಟ್ಲಮೆಂಟ್) ಅಡಿ ಕ್ರಮಕೈಗೊಳ್ಳಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲು ಸದಸ್ಯರು ಸಲಹೆ ನೀಡಿದರು.ಹತ್ತಾರು ವರ್ಷಗಳಿಂದ ಒಟ್ಟು 1.76 ಕೋಟಿ ರೂಪಾಯಿ ನೀರಿನ ಕರ ಬಾಕಿ ಉಳಿದಿದ್ದು, ಇದನ್ನು ವಸೂಲಿ ಮಾಡಲು ಹದಿನೈದು ದಿನದೊಳಗೆ ನೋಟಿಸ್ ನೀಡಲಾಗುವುದು ಎಂದು ಪೌರಾಯುಕ್ತರು ಹೇಳಿದರು.ಆಸ್ತಿ ತೆರಿಗೆ ದರ ಹೆಚ್ಚಿಸುವ ಬಗ್ಗೆ ಕಾನೂನು ಸಲಹೆ ಪಡೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಶಾಸಕರು ಸೂಚನೆ ನೀಡಿದರು.ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶರಣಪ್ಪ ಗುಳೇದ, ಸಭಾಪತಿ ಸುರೇಶ ಕುದರಿಕಾರ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಸದಸ್ಯರಾದ ಮಂಜುಳಾ ಭೂಸಾರೆ, ಹನುಮಂತ ರಾಕುಂಪಿ, ಯಲ್ಲಪ್ಪ ದೂದಿಗೊಲ್ಲರ, ರೇಖಾ ಹುಲಗಬಾಳಿ, ಸಂಗಣ್ಣ, ಸುನಂದಾ ನಾಯಕ, ಹನುಮಂತ ನಾರಾಯಣಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.