ಶುಕ್ರವಾರ, ಮೇ 14, 2021
21 °C

ನಗರಸಭೆ ಸದಸ್ಯರು ಅಯೋಗ್ಯರು, ಭ್ರಷ್ಟರು: ಡಿಸಿ ಕೆಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:  ನಗರಸಭೆ ಸದಸ್ಯರು ಅಯೋಗ್ಯರು (ರೋಗ್ಸ್), ಭಷ್ಟರು. ಸದಸ್ಯರಾಗಿ ಜವಾಬ್ದಾರಿಯಿಂದ ಮಾಡಬೇಕಾದ ಕೆಲಸ ಬಿಟ್ಟು, ಮಾಡಬಾರದ ಕೆಲಸವನ್ನೇ ಮಾಡಲು ಹೆಚ್ಚು ಆಸಕ್ತಿ. ಸರ್ಕಾರದಿಂದ ಬಿಡುಗಡೆಯಾಗಿರುವ ಹಣ ಹೀಗಾಗಿಖರ್ಚೇ ಆಗಿಲ್ಲ. ಸಮಸ್ಯೆಗಳೂ ಹಾಗೇ ಉಳಿದಿವೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಕುಡಿಯುವ ನೀರಿನ ಸಮಸ್ಯೆ ಸಲುವಾಗಿ ಚರ್ಚಿಸಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಸದಸ್ಯರ ಕಾರ್ಯವೈಖರಿ ಬಗ್ಗೆ ಸಚಿವರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.`ನಗರಸಭೆ ಮೇಲೆ ನಿಯಂತ್ರಣ ಸಾಧಿಸಬೇಕಾದವರು ಜಿಲ್ಲಾಧಿಕಾರಿ~ ಎಂಬ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಆಕ್ಷೇಪಣೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಮೀನಾ, ಸಭಾಂಗಣದಲ್ಲಿ ನಿಂತಿದ್ದ ಸದಸ್ಯರತ್ತ ಕೈತೋರಿಸಿ, `ಇವರೆಲ್ಲ ನಗರಸಭೆ ಸದಸ್ಯರು. ಪ್ರತಿ ತಿಂಗಳು ನಗರಸಭೆಯಲ್ಲಿ ಸಭೆ ನಡೆಸಬೇಕಾದವರು. ಅಧ್ಯಕ್ಷರು, ಎಂಜಿನಿಯರ್‌ರಿಂದ ಕೆಲಸ ಮಾಡಿಸಬೇಕಾದವರು.

 

ಆದರೆ ಆ ಕೆಲಸವನ್ನೇ ಮಾಡುತ್ತಿಲ್ಲ. ಸದಸ್ಯರು ಭ್ರಷ್ಟರಾಗಿದ್ದಾರೆ. ನಗರಸಭೆಯ ಗುತ್ತಿಗೆದಾರರಾಗಿದ್ದಾರೆ. ಅಕ್ರಮವಾಗಿ ಖಾತೆ ಮಾಡಿಸುವುದು, ಅಕ್ರಮವಾಗಿ ನೀರಿನ ಸಂಪರ್ಕ ಪಡೆಯುವುದು, ಕಂದಾಯ ವಸೂಲಿಗೆ ತಡೆಯೊಡ್ಡುವ ಕೆಲಸ ಮಾಡುತ್ತಿದ್ದಾರೆ. ನನ್ನ ಬಳಿ ಅದಕ್ಕೆ ದಾಖಲೆಗಳಿವೆ~ ಎಂದು ಹೇಳಿದರು.ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ, ಸಭಾಂಗಣದ ಒಂದು ಬದಿಯಲ್ಲಿ ನಿಂತಿದ್ದ ಸದಸ್ಯ ಸಲಾವುದ್ದೀನ್ ಬಾಬು, `ಜವಾಬ್ದಾರಿಯುತ ಸ್ಥಾನದಲ್ಲಿರುವವರು ನೀವು ಸರಿಯಾಗಿ ಮಾತನಾಡಿ. ಇಲ್ಲವಾದರೆ ಇಲ್ಲಿಯೇ ಧರಣಿ ನಡೆಸುತ್ತೇವೆ~ ಎಂದರು.ಕೂಡಲೇ ಅವರ ಕಡೆಗೆ ತಿರುಗಿದ ಮೀನಾ, `ಸಲಾವುದ್ದೀನ್ ಬಾಬು ಕಾನೂನು ಪ್ರಕಾರ ನಾನು ಕ್ರಮ ಕೈಗೊಂಡಿದ್ದರೆ ಇಷ್ಟು ಹೊತ್ತಿಗೆ ಜೈಲಿನಲ್ಲಿರುತ್ತಿದ್ದೀರಿ. ನಗರಸಭೆಯಲ್ಲಿ ಹೆಚ್ಚು ಅಕ್ರಮ ಚಟುವಟಿಕೆ ನಡೆಸುತ್ತಿರುವವರೇ ನೀವು. ನಗರಸಭೆ ಅಧ್ವಾನ ಸ್ಥಿತಿಗೆ ತಲುಪಲು ನೀವೇ ಕಾರಣ~ ಎಂದರು. `ವರದಿಗಳಿದ್ದರೆ ಹೀಗೆ ಮಾತನಾಡುವ ಬದಲು ಕ್ರಮ ಕೈಗೊಳ್ಳಿ~ ಎಂದು ನಸೀರ್ ಅಹ್ಮದ್ ಹೇಳಿದಾಗ, ರಾಜಕೀಯ ಪ್ರಭಾವದಿಂದ ಅವರೆಲ್ಲರೂ ಹೊರಗಡೆ ಇದ್ದಾರೆ. ಸಲಾವುದ್ದೀನ್ ಬಾಬು ಅಯೋಗ್ಯ. ಆದರೆ ನಾನು ಆತನ ಹೆಸರು ಹೇಳದಿದ್ದರೂ ಪ್ರತಿಕ್ರಿಯಿಸಿದ್ದು ಯಾಕೆ? ನಾನು ವ್ಯಕ್ತಪಡಿಸಿದ್ದು ಸಾಮಾನ್ಯ ಅಭಿಪ್ರಾಯ. ಯಾರನ್ನೂ ಹೆಸರಿಸಿಲ್ಲ. ಯಾರೂ ಒತ್ತಡ ಹೇರದಿದ್ದರೆ ಕನಿಷ್ಠ ಐವರು ಸದಸ್ಯರನ್ನು ಜೈಲಿಗಟ್ಟುವೆ~ ಎಂದು ಮೀನಾ ನುಡಿದರು.ಮೀನಾ ಅವರನ್ನು ಕೇಂದ್ರ ಸಚಿವ ಮುನಿಯಪ್ಪ ಸಮಾಧಾನಗೊಳಿಸಲು ಯತ್ನಿಸಿದರು.

ಆದರೂ ಸಮಾಧಾನಗೊಳ್ಳದ ಮೀನಾ, ನಗರಸಭೆಯಲ್ಲಿ ಪ್ರತಿ ತಿಂಗಳೂ ನಿಯಮಿತವಾಗಿ ಸಭೆ ನಡೆಸುತ್ತಿಲ್ಲ. ಸಭೆ ನಡೆಸದಿದ್ದರೆ ಕಾಮಗಾರಿಗಳ ಗುತ್ತಿಗೆ ಟೆಂಡರ್ ಕರೆಯಲಾಗುವುದಿಲ್ಲ. ನಿರ್ಣಯ ಕೈಗೊಳ್ಳಲಾಗುವುದಿಲ್ಲ. ಹಲವು ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಆಕ್ಷೇಪಿಸಿದರು.ಒಂದೂವರೆ ತಿಂಗಳ ಹಿಂದೆ ಆಯವ್ಯಯ ಸಭೆ ಕರೆಯಲು ಹೇಳಿದರೂ, ಆಯುಕ್ತೆ ಆರ್.ಶಾಲಿನಿ ಸುಮ್ಮನಿದ್ದಾರೆ. ಹಲವು ನಿರ್ಣಯ ಜಾರಿಯಾಗಿಲ್ಲ ಎಂದು ನಗರಸಭೆ ಅಧ್ಯಕ್ಷೆ ನಾಜಿಯಾ ಇದೇ ಸಂದರ್ಭದಲ್ಲಿ ಆರೋಪಿಸಿದರು.ಆಯುಕ್ತರು ಕೆಲಸ ಮಾಡದಿದ್ದರೆ ಅದನ್ನು ಜಿಲ್ಲಾಧಿಕಾರಿ ಪ್ರಶ್ನಿಸಬೇಕಲ್ಲವೆ? ಎಂದು ನಸೀರ್ ಅಹ್ಮದ್ ಅವರು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.