ಮಂಗಳವಾರ, ಮೇ 11, 2021
19 °C

ನಗರಸಭೆ ಸದಸ್ಯರ ಮೇಲೆ ಪಾಲಿಕೆ `ತೂಗುಕತ್ತಿ'

ಕೆ.ಎನ್.ನಾಗಸುಂದ್ರಪ್ಪ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ನಗರಸಭೆ ನೂತನ ಸದಸ್ಯರ ಮೇಲೆ ಅಧಿಕಾರ ಪಡೆಯುವ ಮುನ್ನವೇ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರುವ `ತೂಗುಗತ್ತಿ'ಯ ಆತಂಕ ಸೃಷ್ಟಿಸಿದೆ. ನಗರದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 3 ಲಕ್ಷ ಮೀರಿದ್ದು, ಸರ್ಕಾರ ಯಾವ ಕ್ಷಣದಲ್ಲಿ ಬೇಕಾದರೂ ನಗರ ಪಾಲಿಕೆಯಾಗಿ ಘೋಷಿಸಬಹುದು.ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದು, ಫಲಿತಾಂಶ ಬಂದು ಮೂರು ತಿಂಗಳು ಸಮೀಪಿಸುತ್ತಿದೆ. ಆದರೆ ಅಧ್ಯಕ್ಷ- ಉಪಾಧ್ಯಕ್ಷ ಪದವಿಯ ಮೀಸಲಾತಿ ಇನ್ನೂ ಪ್ರಕಟವಾಗದ ಕಾರಣ ಸದಸ್ಯರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ನಗರಸಭೆಯಲ್ಲಿ ಅಧಿಕೃತವಾಗಿ ಅಧಿಕಾರ ಚಲಾಯಿಸಿ ತಮ್ಮ ವಾರ್ಡ್‌ನ ಕೆಲಸ ಕಾರ್ಯ ಮಾಡಿಸಲಾಗುತ್ತಿಲ್ಲ. ಗೆಲುವಿನ ಸಿಹಿ ಮಾಸುವ ಮುನ್ನವೇ ನಗರ ಪಾಲಿಕೆಯಾದರೆ ಮುಂದಿನ ಭವಿಷ್ಯ ಏನು ಎಂಬ ಚಿಂತೆ ಸದಸ್ಯರಲ್ಲಿ ಆರಂಭವಾಗಿದೆ.ಕಳೆದ ಬಾರಿ ಬಿಜೆಪಿ ಸರ್ಕಾರ ನಗರಸಭೆಯನ್ನು ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿತ್ತು. ಆದರೆ ನಿಯಮದ ಪ್ರಕಾರ ಆಗ ನಗರದ ಜನಸಂಖ್ಯೆ 3 ಲಕ್ಷ ದಾಟಿರರಲಿಲ್ಲ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸದಸ್ಯರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ಸರ್ಕಾರದ ನಿರ್ಧಾರ ಬಿದ್ದು ಹೋಗಿತ್ತು. ಆದರೆ ಈ ಬಾರಿ ಜನಸಂಖ್ಯೆ 3 ಲಕ್ಷ ಮೀರಿರುವುದರಿಂದ ತುಮಕೂರು ನಗರ ಪಾಲಿಕೆಯಾಗುವುದು ಖಚಿತ. ನಗರಪಾಲಿಕೆಯಾಗುವ ನಗರಗಳ ಪಟ್ಟಿಯಲ್ಲಿ ಶಿವಮೊಗ್ಗ ಮತ್ತು ತುಮಕೂರು ಹೆಸರಿದೆ.ನೂತನ ನಗರಸಭೆ ಸದಸ್ಯರ ಅಧಿಕಾರಾವಧಿ ಮೊದಲ ಕೌನ್ಸಿಲ್ ಸಭೆಯ ದಿನದಿಂದ ಲೆಕ್ಕಕೆ ಬರಲಿದೆ. ಈಗ ಕಳೆದು ಹೋಗಿರುವ ಮೂರು ತಿಂಗಳು ಲೆಕ್ಕಕ್ಕೆ ಬರುವುದಿಲ್ಲ. ಅಲ್ಲದೆ ಮೀಸಲಾತಿ ಪ್ರಕಟವಾಗಿ ಕೊನೆಗೆ ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಲು ಕನಿಷ್ಠ ಮತ್ತೊಂದು ತಿಂಗಳು ಬೇಕಾಗುತ್ತದೆ. ಅದಕ್ಕೂ ಮೊದಲೇ ತುಮಕೂರನ್ನು ನಗರಪಾಲಿಕೆಯಾಗಿ ಘೋಷಣೆ ಮಾಡಿದರೆ ಈಗಾಗಲೇ ಆಯ್ಕೆಯಾಗಿರುವ ಸದಸ್ಯರನ್ನು ಮುಂದಿನ 5 ವರ್ಷದ ಅವಧಿಗೆ ಮುಂದುವರಿಸಬಹುದೇ ಎಂಬ ಬಗ್ಗೆ ನೂತನ ಸದಸ್ಯರಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈ ವಿಚಾರ ಸರ್ಕಾರದ ಮರ್ಜಿಗೆ ಒಳಪಟ್ಟಿದೆ.ಇದೇ ಚುನಾಯಿತ ಸದಸ್ಯರನ್ನು ಮುಂದುವರಿಸದಿದ್ದರೆ ಕಳೆದ ಬಾರಿಯಂತೆ 6 ತಿಂಗಳ ಅವಕಾಶ ನೀಡಬಹುದು. ಆನಂತರ ಚುನಾವಣೆ ನಡೆಸಬಹುದು. ಇದನ್ನು ಪ್ರಶ್ನಿಸಿ ಮತ್ತು ತಮ್ಮನ್ನು 5 ವರ್ಷಗಳ ಅವಧಿಗೆ ಮುಂದುವರಿಸಬೇಕೆಂದು ಕೋರಿ ಸದಸ್ಯರು ಮತ್ತೆ ಹೈಕೋರ್ಟ್ ಮೊರೆ ಹೋಗಬಹುದು. ಇದು ನಗರ ಪಾಲಿಕೆಯಾಗಲು ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಹುದು.ಇದರಿಂದ ನಗರದ ಅಭಿವೃದ್ಧಿಗೆ ಸಹ ತೊಡಕಾಗಲಿದೆ. ನಗರಪಾಲಿಕೆಯಾದರೆ ನಗರಾಭಿವೃದ್ಧಿಗೆ ವಾರ್ಷಿಕ ರೂ. 100 ಕೋಟಿ ಹಣ ದೊರೆಯಲಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ವಿಶೇಷ ಅನುದಾನ ಪಡೆಯಬಹುದು. ಇದು ರಾಜ್ಯ ಸರ್ಕಾರದ ಮುಂದಿನ ನಿರ್ಧಾರದ ಮೇಲೆ ನಿಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.