ಶುಕ್ರವಾರ, ಜುಲೈ 30, 2021
23 °C

ನಗರ ಜಿಲ್ಲಾ ಪಂಚಾಯಿತಿ: 189 ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಜಿಲ್ಲಾ ಪಂಚಾಯಿತಿಯ ಒಟ್ಟು 34 ಕ್ಷೇತ್ರಗಳಿಗೆ 189 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಕಾಂಗ್ರೆಸ್‌ನಿಂದ 43, ಬಿಜೆಪಿಯಿಂದ 48, ಜೆಡಿಎಸ್‌ನಿಂದ 39, ಜೆಡಿಯು ಮತ್ತು ಸಿಪಿಎಂನಿಂದ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರೆ, 53 ಮಂದಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ನಾಲ್ಕು ತಾಲ್ಲೂಕು ಪಂಚಾಯಿತಿಗಳ 72 ಕ್ಷೇತ್ರಗಳಿಗೆ 348 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 3 ತಿರಸ್ಕೃತಗೊಂಡಿವೆ. ಕಾಂಗ್ರೆಸ್‌ನಿಂದ 95, ಬಿಜೆಪಿಯಿಂದ 88, ಜೆಡಿಎಸ್‌ನಿಂದ 85, ಬಿಎಸ್‌ಪಿಯಿಂದ 9, ಸಿಪಿಎಂನಿಂದ 3 ನಾಮಪತ್ರಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ 68 ನಾಮಪತ್ರಗಳು ಸಲ್ಲಿಕೆಯಾಗಿವೆ.  

ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕೆಲವು ಗ್ರಾಮಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕೇವಲ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ ಮಾತ್ರ ಕ್ಷೇತ್ರಗಳ ಪುನರ್‌ವಿಂಗಡಣೆಯಾಗಿದ್ದು, ಒಟ್ಟು ಸ್ಥಾನಗಳ ಸಂಖ್ಯೆ 26ರಿಂದ 34ಕ್ಕೆ ಏರಿದೆ. ರಾಜಧಾನಿಗೆ ಹೊಂದಿಕೊಂಡಿರುವ ನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ ಮತ್ತು ಆನೇಕಲ್ ತಾಲ್ಲೂಕು ಪಂಚಾಯಿತಿ ಬರಲಿದ್ದು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಏಕಕಾಲದಲ್ಲಿ ಅಂದರೆ ಇದೇ 26ರಂದು ಚುನಾವಣೆ ನಡೆಯಲಿದೆ.

ಮಾಚೋಹಳ್ಳಿ, ದಾಸನಪುರ, ಮಾದಾವರ, ಗೋಪಾಲಪುರ, ಸೋಮಶೆಟ್ಟಿಹಳ್ಳಿ, ಹೆಸರಘಟ್ಟ, ಸೊಣ್ಣೇನಹಳ್ಳಿ, ಸಿಂಗನಾಯಕನಹಳ್ಳಿ, ಬೆಟ್ಟಹಲಸೂರು, ಬಾಗಲೂರು, ಹುಣಸಮಾರನಹಳ್ಳಿ, ಬಿದರಹಳ್ಳಿ, ಮಂಡೂರು, ಆವಲಹಳ್ಳಿ, ತಾವರೆಕೆರೆ, ಚೋಳನಾಯಕನಹಳ್ಳಿ, ಕುಂಬಳಗೋಡು, ಅಗರ, ಕಗ್ಗಲೀಪುರ, ಕೋನಪ್ಪನ ಅಗ್ರಹಾರ, ಸರ್ಜಾಪುರ, ದೊಮ್ಮಸಂದ್ರ, ಹಂದೇನಹಳ್ಳಿ, ಬೊಮ್ಮಸಂದ್ರ, ನೆರಳೂರು, ಹೆಬ್ಬಗೋಡಿ, ಅತ್ತಿಬೆಲೆ, ಸಮಂದೂರು, ಮರಸೂರು, ಇಂಡ್ಲವಾಡಿ, ಹುಲಿಮಂಗಲ, ಜಿಗಣಿ, ಬನ್ನೇರುಘಟ್ಟ ಮತ್ತು ಹಾರಗದ್ದೆ ಕ್ಷೇತ್ರಗಳು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿವೆ.

ಇದಲ್ಲದೆ ಉತ್ತರ ತಾಲ್ಲೂಕು ಪಂಚಾಯಿತಿಯಲ್ಲಿ 22, ದಕ್ಷಿಣ ತಾಲ್ಲೂಕು ಪಂಚಾಯಿತಿಯಲ್ಲಿ 12, ಪೂರ್ವ ತಾಲ್ಲೂಕು ಪಂಚಾಯಿತಿಯಲ್ಲಿ 11 ಮತ್ತು ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ 27 ಕ್ಷೇತ್ರಗಳಿವೆ. ನಗರ ಜಿಲ್ಲಾ ವ್ಯಾಪ್ತಿಯ ಬಹುತೇಕ ಎಲ್ಲ ಕಡೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.