ಗುರುವಾರ , ಜೂಲೈ 9, 2020
28 °C

ನಗರ ಸೌಂದರ್ಯಕ್ಕೆ ಬಣ್ಣದ ಭಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರ ಸೌಂದರ್ಯಕ್ಕೆ ಬಣ್ಣದ ಭಯ!

ಬೆಳಗಾವಿ: ನಗರದಲ್ಲಿ ಮಾ. 20ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಹೋಳಿ ಹಬ್ಬ ನಡೆಯಲಿದ್ದು, ಈ ಭಾಗದ ನಾಗರಿಕರ ಸಂಭ್ರಮದ ಸಂಕೇತವಾಗಿದೆ. ಆದರೆ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಚಿತ್ರಿಸಲಾಗಿರುವ ಗೋಡೆಚಿತ್ರಗಳಿಗೆ ಅದೇ ಹೋಳಿ ಸಂಭ್ರಮ ಭೀತಿ ತಂದೊಡ್ಡಿದೆ.ಹೋಳಿ ಸಂದರ್ಭದಲ್ಲಿ ಪರಸ್ಪರ ಬಣ್ಣ ಎರಚಿಕೊಳ್ಳುವ ಸಂಭ್ರಮದಲ್ಲಿ ಗೋಡೆ ಚಿತ್ರಗಳ ಮೇಲೆ ಬಣ್ಣ ಬಿದ್ದು, ಅಂದಗೆಡುವ ಸಾಧ್ಯತೆ ಇದೆ. ಜೊತೆಗೆ ಕುಡಿದ ಗಮ್ಮತ್ತಿನಲ್ಲಿರುವ ಜನರು ಪಾನ್, ಗುಟ್ಕಾ ತಿಂದು ಅಂತಹ ಚಿತ್ರಗಳ ಮೇಲೆ ಉಗುಳುವ ಸಾಧ್ಯತೆಯೂ ಇರುತ್ತದೆ. ಕಾರಣ ಹೋಳಿ ದಿನದಂದು ಬೆಳಗಾವಿ ನಗರಾಡಳಿತ ಗೋಡೆ ಚಿತ್ರಗಳನ್ನು ರಕ್ಷಿಸಲು ಸೂಕ್ತ ಕ್ರಮ ತೆಗದುಕೊಳ್ಳಬೇಕು. ಪೊಲೀಸರೂ ಈ ಸಂಬಂಧ ನಿಗಾ ವಹಿಸಬೇಕು ಎಂದು ಈ ಭಾಗದ ಸಾರ್ವಜನಿಕರು, ಕನ್ನಡಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.ವಿಶ್ವ ಕನ್ನಡ ಸಮ್ಮೇಳನ ನಿಮಿತ್ತ ನಗರದ ವಿವಿಧ ಪ್ರದೇಶಗಳಲ್ಲಿ ಸುಮಾರು 80 ಸಾವಿರ ಚದುರ ಅಡಿ ಪ್ರದೇಶದ ಗೋಡೆಯ ಮೇಲೆ ಸುಂದರ ಚಿತ್ರಗಳನ್ನು ಬರೆಯಲಾಗಿದೆ. ಕನ್ನಡ ನಾಡು- ನುಡಿ, ಈ ಭಾಗದ ಪ್ರಸಿದ್ಧ ಸ್ಥಳಗಳು, ಜೀವ ವೈವಿಧ್ಯ, ಕ್ರೀಡೆಗಳು, ಸಂಗೀತ ಮೊದಲಾದ ಸುಂದರ ಚಿತ್ರಗಳನ್ನು ಚಿತ್ರಿಸಲಾಗಿದೆ. ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಈ ಚಿತ್ರಗಳಿಂದ ನಗರದ ಸೌಂದರ್ಯ ಇಮ್ಮಡಿಯಾಗಿದೆ ಎಂಬ ಬಗ್ಗೆ ಎರಡು ಮಾತಿಲ್ಲ.ಸ್ಪಷ್ಟ ಸಂದೇಶ: ವಿಶ್ವ ಕನ್ನಡ ಸಮ್ಮೇಳನ ಕನ್ನಡ ಭಾಷೆ ಕುರಿತು ಸ್ಪಷ್ಟ ಸಂದೇಶ ನೀಡದಿದ್ದರೂ ಇಲ್ಲಿನ ಗೋಡೆ ಬರಹಗಳು ಸ್ಪಷ್ಟ ಸಂದೇಶ ನೀಡುತ್ತಿವೆ. ಕಾರಣ ಈ ಗೋಡೆ ಬರಹಗಳು ವಿಶ್ವಕನ್ನಡ ಸಮ್ಮೇಳನದ ದೊಡ್ಡ ಆಸ್ತಿಗಳಾಗಿವೆ. ಇವು ಹಾಳಾಗದಂತೆ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಬೆಳಗಾವಿ ನಗರದಲ್ಲಿ ನಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ಮನವಿ: ಹೋಳಿ ಆಡುವವರು ಇಂತಹ ಚಿತ್ರಗಳು ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬಣ್ಣ ಎರಚಬಾರದು. ಜೊತೆಗೆ ಯಾವುದೇ ಕಾರಣಕ್ಕೂ ಚಿತ್ರಗಳನ್ನು ಕೆಡಿಸುವ ಪ್ರಯತ್ನ ಮಾಡಬಾರದು. ನಾಡಿನ ಹಲವಾರು ಕಲಾವಿದರು ಮಾದರಿಯಾಗಿ ಈ ಚಿತ್ರಗಳನ್ನು ತೆಗೆದಿದ್ದಾರೆ. ಅಲ್ಲಿ ಹಲವಾರು ಕಲಾವಿದರ ಶ್ರಮವಿದೆ. ವಿಶ್ವಕನ್ನಡ ಸಮ್ಮೇಳನ ಸಮಿತಿ ಗೋಡೆಚಿತ್ರ ಬರೆಸುವ ಉದ್ದೇಶದಿಂದ 30ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿದೆ. ಚಿತ್ರಗಳೂ ಉತ್ತಮ ಗುಣಮಟ್ಟದಿಂದ ಕೂಡಿವೆ.ಬೆಂಗಳೂರು ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲೂ ಅಲ್ಲಿನ ಗೋಡೆಗಳ ಮೇಲೆ ಚಿತ್ರ ಬರೆಯಲಾಗಿದೆ. ಅಂತಹ ಚಿತ್ರಗಳಿಗಿಂತ ಬೆಳಗಾವಿಯ ಕಲಾವಿದರು ರಚಿಸಿದ ಚಿತ್ರಗಳು ಗುಣಮಟ್ಟದಲ್ಲಿ ಚೆನ್ನಾಗಿವೆ ಎಂದು ಬೆಂಗಳೂರು ಭಾಗದ ಪ್ರಸಿದ್ಧ ಕಲಾವಿದರು ಆಗಲೇ ಶ್ಲಾಘಿಸಿದ್ದಾರೆ. ಅಂತಹ ಚಿತ್ರಗಳು ಕನಿಷ್ಠ ಮುಂದಿನ ಎರಡು ವರ್ಷ ಕಾಲವಾದರೂ ನಳನಳಿಸಬೇಕು, ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುವವರು ಯಾವುದೇ ಕಾರಣಕ್ಕೆ ಗೋಡೆಚಿತ್ರಗಳ ಅಂದಗೆಡಿಸಬಾರದು ಎಂದು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.ಹೋಳಿ ವಿಶೇಷ: ನಗರದ ಟಿಳಕವಾಡಿ ಲೇಲೆ ಮೈದಾನದಲ್ಲಿ ಶಾಸಕ ಅಭಯ ಫಾಟೀಲ ಅವರ ನೇತೃತ್ವದಲ್ಲಿ ಹೋಳಿ ನಿಮಿತ್ತ ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಅಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮ, ವಿವಿಧ ಜನಪದ ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಹೋಳಿ ನಿಮಿತ್ತ ಲೇಲೆ ಮೈದಾನವನ್ನು ಸಿಂಗರಿಸುವ ಕಾರ್ಯ ಭರದಿಂದ ನಡೆದಿದೆ. ಹೋಳಿ ನಿಮಿತ್ತ ನಗರದ ವಿವಿಧ ಪ್ರದೇಶಗಳಲ್ಲಿ ಬಣ್ಣ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.