ಸೋಮವಾರ, ಜನವರಿ 20, 2020
25 °C

ನಟಿ ಜಿಯಾ ಖಾನ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ವರ್ಮಾ ಅವರ `ನಿಶ್ಯಬ್ದ್' ಚಿತ್ರದಲ್ಲಿ ಅಮಿತಾಬ್‌ಬಚ್ಚನ್ ಜತೆ ನಟಿಸಿದ್ದ ಉದಯೋನ್ಮುಖ ನಟಿ ಜಿಯಾಖಾನ್ ಮುಂಬೈನ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 25 ವರ್ಷವಾಗಿತ್ತು.ಹೊರಗೆ ಹೋಗಿದ್ದ ಇವರ ತಾಯಿ ಹಾಗೂ ಸಹೋದರಿ ರಾತ್ರಿ 11 ಗಂಟೆಗೆ ಮನೆಗೆ ಬಂದು ನೋಡಿದಾಗ ಜಿಯಾ ಅವರು ತಮ್ಮ ದುಪ್ಪಟದಿಂದಲೇ ನೇಣು ಹಾಕಿಕೊಂಡಿದ್ದು ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು, ಕಾವಲುಗಾರರನ್ನು ಹಾಗೂ ಅಕ್ಕಪಕ್ಕದವರನ್ನು ಪೊಲೀಸರು ಪ್ರಶ್ನಿಸಿದ್ದು, ಆತ್ಮಹತ್ಯೆಗೆ ಕಾರಣ ಹುಡುಕುವ ಪ್ರಯತ್ನದಲ್ಲಿದ್ದಾರೆ. 2007ರಲ್ಲಿ ತೆರೆ ಕಂಡ ರಾಮ್‌ಗೋಪಾಲ್ ಮರ್ಮಾರ `ನಿಶ್ಯಬ್ದ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜತೆ ನಟಿಸಿ ಮನೆಮಾತಾಗಿದ್ದ ಈಕೆ ಫಿಲಂಫೇರ್ ಪ್ರಶಸ್ತಿಗೆ ನಾಮಾಂಕಿತರೂ ಆಗಿದ್ದರು.ಅಮೀರ್‌ಖಾನ್ ನಟಿಸಿದ `ಘಜಿನಿ' ಚಿತ್ರದಲ್ಲೂ ತಮ್ಮ ನಟನೆಯ ಛಾಪು ಮೂಡಿಸಿದ್ದರು. ಸಾಜಿದ್ ಖಾನ್ ಅವರ `ಹೌಸ್‌ಫುಲ್' ಚಿತ್ರದಲ್ಲಿ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಹಾಗೂ ಲಾರಾ ದತ್ತ ಅವರೊಂದಿಗೆ ಅಭಿನಯಿಸಿದ್ದರು.ಮೂಲತ: ಬ್ರಿಟನ್‌ನಲ್ಲಿ ಜನಿಸಿದ ಈಕೆಯ ಮೊದಲ ಹೆಸರು ನಫೀಜಾ ಖಾನ್. ಈಕೆಯ ತಾಯಿ ರಬಿಯಾ ಅಮೀನ್ ಕೂಡ 1980ರ ದಶಕದಲ್ಲಿ ನಟಿಯಾಗಿದ್ದರು.ಇವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅಮಿತಾಬ್ ಬಚ್ಚನ್ `ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.ಜಿಯಾ ಧೈರ್ಯ ಹಾಗೂ ಸ್ಫೂರ್ತಿಯ ಹುಡುಗಿಯಾಗಿದ್ದಳು. ಇಷ್ಟೊಂದು ಉತ್ಸಾಹದ ನಟಿಯನ್ನು ತಾವು ಇದುವರೆಗೂ ನೋಡಿಯೇ ಇಲ್ಲ ಎಂದಿರುವ ರಾಮ್‌ಗೋಪಾಲ್ ವರ್ಮಾ ತಮ್ಮ ನಿಶ್ಯಬ್ದ್ ಸಿನಿಮಾದಲ್ಲಿದ್ದ ಪ್ರತಿಯೊಬ್ಬರೂ ಅಕ್ಷರಶ: ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.ತುಂಬಾ ಹಾಸ್ಯಪ್ರಜ್ಞೆಯ ನಟಿಯಾಗಿದ್ದ ಜಿಯಾ ತಮಗೆ ಒಳ್ಳೆಯ ಸ್ನೇಹಿತೆಯಾಗಿದ್ದಳು. ತಾವು ಇದೀಗ ಅವರನ್ನು ಕಳೆದುಕೊಂಡು ತೀರಾ ದು:ಖಿತನಾಗಿದ್ದೇನೆ ಎಂದು ನಟ ರಿತೀಶ್ ದೇಶ್‌ಮುಖ್ ಕಂಬನಿ ಮಿಡಿದಿದ್ದಾರೆ.ಜಿಯಾ ಅವರ ಅಕಾಲಿಕ ಸಾವು ತಮ್ಮನ್ನು ಕಲಕುವಂತೆ ಮಾಡಿದೆ ಎಂದಿರುವ ಮತ್ತೊಬ್ಬ ಖ್ಯಾತ ನಟ ಶಾಹೀದ್ ಕಪೂರ್  ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.ಇದೊಂದು ದುರಂತ ಹಾಗೂ ತಮಗೆ ಆಘಾತ ಉಂಟು ಮಾಡಿದೆ ಎಂದು ನಟಿ ಸೋನಮ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.ಜಿಯಾ ಖಾನ್ ಇನ್ನಿಲ್ಲವೆಂದರೆ ತಮಗೆ ನಂಬಲು ಸಾಧ್ಯವೇ ಆಗುತ್ತಿಲ್ಲ ಎಂದಿರುವ ಪ್ರಸಿದ್ದ ಕೋರಿಯಾಗ್ರಾಫರ್ ಫಾರ:ಖಾನ್ ತುಂಬಾ ಸುಂದರ ಅಷ್ಟೆ ಒಳ್ಳೆಯ ಮನಸಿನ ಹುಡುಗಿಯಾಗಿದ್ದಳು ಎಂದು ಶೋಕಿಸಿದ್ದಾರೆ.ನೇಹಾ ದುಪಿಯಾ, ದಿಯಾ ಮಿರ್ಜಾ, ಬಿಪಾಶಾ ಬಸು, ಅನುಪಮ್ ಖೇರ್ ಮೊದಲಾದ ಬಾಲಿವುಡ್ ಗಣ್ಯರು ಜಿಯಾ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಪ್ರತಿಕ್ರಿಯಿಸಿ (+)