ಬುಧವಾರ, ಮಾರ್ಚ್ 3, 2021
30 °C
ಸಂಸದೀಯ ಸಮಿತಿ ಸಭೆ: ಸಂಸದರಿಗೆ ಅಸಮಾಧಾನ

ನಡುವೆ ಎದ್ದು ಹೋದ ಗೃಹ ಕಾರ್ಯದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಡುವೆ ಎದ್ದು ಹೋದ ಗೃಹ ಕಾರ್ಯದರ್ಶಿ

ನವದೆಹಲಿ (ಪಿಟಿಐ): ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಮಹರ್ಷಿ ಅವರು ಸೋಮವಾರ ನಡೆದ ಸಂಸದೀಯ ಸಮಿತಿ ಸಭೆಯಿಂದ ಅರ್ಧದಲ್ಲೇ ಹೊರ ನಡೆದು ಇತರ ಸದಸ್ಯರ ಅಸಮಾಧಾನಕ್ಕೆ ಕಾರಣರಾದರು.ಚೆನ್ನೈ ಪ್ರವಾಹ ಒಳಗೊಂಡಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಮಹರ್ಷಿ ಅವರು ಚರ್ಚೆಯ ನಡುವೆಯೇ ಎದ್ದು ಹೋದರು. ಇದನ್ನು ಪ್ರತಿಭಟಿಸಿ ಟಿಎಂಸಿಯ ಇಬ್ಬರು ಸಂಸದರು ಕೂಡಾ ಸಭೆಯಿಂದ ಹೊರನಡೆದರು.ಸಂಸದೀಯ ಸಮಿತಿ ಮುಖ್ಯಸ್ಥ ಮತ್ತು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಎಂ.ಪಿ. ಭಟ್ಟಾಚಾರ್ಯ ಅವರು ಮಹರ್ಷಿ  ಅವರನ್ನು ಮತ್ತೆ ಕರೆದರಲ್ಲದೆ, ಮುಂದಿನ ದಿನಗಳಲ್ಲಿ ಈ ವರ್ತನೆ ಪುನರಾವರ್ತಿಸದಂತೆ ಸೂಚಿಸಿದ್ದಾರೆ.ಆದರೆ ಮಹರ್ಷಿ ಅವರ ನಡೆಯನ್ನು ಪ್ರತಿಭಟಿಸಿ ಆ ವೇಳೆಗಾಗಲೇ ಹೆಚ್ಚಿನ ಸದಸ್ಯರು ಸಭೆಯಿಂದ ಹೊರನಡೆದಿದ್ದರು. ಈ ಕಾರಣ ಸಭೆಯನ್ನು ಮುಂದೂಡಲಾಯಿತು.ಟಿಎಂಸಿ ಸದಸ್ಯ ಡೆರೆಕ್‌ ಒಬ್ರಿಯನ್‌ ಅವರು ಈ ವಿವಾದದ ಬಗ್ಗೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಗೃಹ ಕಾರ್ಯದರ್ಶಿಯವರು ಸಂಸದೀಯ ಸಮಿತಿಯ ಎರಡು ಸಭೆಗಳಿಗೆ ಬಂದಿರಲಿಲ್ಲ. ಈ ಬಾರಿ ಕೇವಲ 30 ನಿಮಿಷ ಮಾತ್ರ ಸಭೆಯಲ್ಲಿ ಪಾಲ್ಗೊಂಡರು’ ಎಂದು ‘ಟ್ವೀಟ್‌’ ಮಾಡಿದ್ದಾರೆ.ಸೋಮವಾರ ನಡೆದ ಸಭೆಯಲ್ಲಿ ಪಠಾಣ್‌ಕೋಟ್‌ ವಾಯು ನೆಲೆ ಮೇಲಿನ ಉಗ್ರರ ದಾಳಿ ಘಟನೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಈ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿರುವುದರಿಂದ ಗೃಹ ಸಚಿವಾಲಯ ಇನ್ನಷ್ಟು ಕಾಲಾವಕಾಶ ಕೇಳಿಕೊಂಡಿತ್ತು. ಆದ್ದರಿಂದ  ವಿಷಯವನ್ನು ಬದಲಿಸಿ, ಚೆನ್ನೈ ಪ್ರವಾಹದ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿತ್ತು.ಮಹರ್ಷಿ ಅವರು ಚೆನ್ನೈ ಪ್ರವಾಹಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ಸಭೆಯ ಮುಂದಿಟ್ಟರು. ಆ ಬಳಿಕ ತಮಿಳುನಾಡು ಸರ್ಕಾರದ ಪ್ರತಿನಿಧಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಆದರೆ ಆ ವೇಳೆಗಾಗಲೇ ಮಹರ್ಷಿ ಸಭೆಯಿಂದ ಹೊರನಡೆದಿದ್ದರು.ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಪಿಎಂನ ಸೀತಾರಾಂ ಯೆಚೂರಿ ಅವರೂ ಮಹರ್ಷಿ ಕ್ರಮವನ್ನು ಟೀಕಿಸಿದರು.

‘ನಾವು ಗಂಭೀರ ಚರ್ಚೆಯಲ್ಲಿ ಪಾಲ್ಗೊಂಡಿದ್ದಾಗ ಅವರು ಹೊರನಡೆದರು. ಇದು ಯಾವ ರೀತಿಯ ವರ್ತನೆ’ ಎಂದು ಖರ್ಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.