ಶುಕ್ರವಾರ, ಮೇ 14, 2021
27 °C

ನದಿಗೆ ಜೀವಕಳೆ: ದೋಣಿಯಾನ ಶುರು

ಪ್ರಜಾವಾಣಿ ವಾರ್ತೆ/ ಜಗದೀಶ ಎಂ. ಗಾಣಿಗೇರ Updated:

ಅಕ್ಷರ ಗಾತ್ರ : | |

ನದಿಗೆ ಜೀವಕಳೆ: ದೋಣಿಯಾನ ಶುರು

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಕೃಷ್ಣಾ ನದಿ ಮೈದುಂಬಿ ಹರಿದುಬಂದು ಆಲಮಟ್ಟಿ ಜಲಾಶಯ ಹಂತಹಂತವಾಗಿ ತುಂಬತೊಡಗಿದೆ. ಪರಿಣಾಮ ಬಾಗಲಕೋಟೆ ನಗರ ಸಮೀಪದ ಮುಳುಗಡೆ ಪ್ರದೇಶ ನಿಧಾನವಾಗಿ ಹಿನ್ನೀರು ಆವರಿಸತೊಡಗಿದೆ.ಘಟಪ್ರಭಾ ನದಿ ಆಚೆಯ ಹತ್ತಾರು ಹಳ್ಳಿಗಳ ಜನತೆ ಬಾಗಲಕೋಟೆ ನಗರಕ್ಕೆ ಪ್ರತಿನಿತ್ಯ ಬಂದುಹೋಗುವ ದಾರಿ ಮೂರ‌್ನಾಲ್ಕು ದಿನದಿಂದ ಹಿನ್ನೀರಿನಿಂದ ಆವೃತವಾದ ಕಾರಣ ಜನರ ಓಡಾಟಕ್ಕೆ ಶನಿವಾರದಿಂದ ದೋಣಿ ಸಂಚಾರಕ್ಕೆ ಅನುವು ಮಾಡಲಾಗಿದೆ.ಘಟಪ್ರಭಾ ನದಿ ದಂಡೆಯಲ್ಲಿರುವ ಕದಾಂಪುರ, ಹಳೆ ಸಾಳಗುಂದಿ, ಅಂಡಮುರನಾಳ, ಸಿದ್ನಾಳ, ಯಂಕಂಚಿ, ಸಿಂದಗಿ  ಗ್ರಾಮಸ್ಥರು ಬೇಸಿಗೆಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ಖಾಲಿಯಾದಂತೆ ಕಾಲ್ನಡಿಗೆ ಮೂಲಕ ಮೂರು ಕಿ.ಮೀ. ಅಂತರವನ್ನು ಕೇವಲ 15ರಿಂದ 20 ನಿಮಿಷದಲ್ಲಿ ಬಾಗಲಕೋಟೆ ನಗರ ತಲುಪುತ್ತಾರೆ. ಆದರೆ, ಜಲಾಶಯ ಏರಿಕೆಯಾದಂತೆ ಈ ಗ್ರಾಮಗಳ ಜನತೆ ನಗರಕ್ಕೆ ನಡೆದುಕೊಂಡು ಬರಲು ಅಸಾಧ್ಯವಾಗುತ್ತದೆ.ಜಲಾವೃತವಾದ ಬಳಿಕ ಗ್ರಾಮಸ್ಥರು ಬಾಗಲಕೋಟೆ ನಗರಕ್ಕೆ ಬರಬೇಕಾದರೆ ಸುಮಾರು 15 ರಿಂದ 25 ಕಿ.ಮೀ. ಸುತ್ತುಹಾಕಿ ಬರಬೇಕಾಗುತ್ತದೆ. ಪ್ರಯಾಣಕ್ಕೆ ಬಸ್ ಹಾಗೂ ಖಾಸಗಿ ವಾಹನಗಳ ಅವಲಂಭಿಸಬೇಕಾದ ಅನಿವಾರ್ಯತೆ ಇದೆ. 25ರಿಂದ 30 ರೂಪಾಯಿ ಹಣವನ್ನು ಪ್ರಯಾಣಕ್ಕೆ ತೆರಬೇಕಾಗುತ್ತದೆ. ಅದೇ ದೋಣಿಯಲ್ಲಿ ಪ್ರಯಾಣಿಸಿದರೆ ಕೇವಲ 2 ರೂಪಾಯಿಗೆ ಬಾಗಲಕೋಟೆಯನ್ನು ತಲುಪಬಹುದಾಗಿದೆ.ಕಳೆದ ವರ್ಷ ಸರಿಯಾದ ದೋಣಿ ವ್ಯವಸ್ಥೆ ಇರಲಿಲ್ಲ. ಜನರಿಗೆ ಅಪಾಯವಾಗಬಾರದೆಂಬ ಉದ್ದೇಶದಿಂದ ಒಳನಾಡು ಹಾಗೂ ಬಂದರು ಇಲಾಖೆಯಿಂದ ಹೊಸ ದೋಣಿ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಪ್ರಯಾಣಿಕರಿಗೆ ಯಾವುದೇ ತೊಂದರೆ ಇಲ್ಲದಂತಾಗಿದೆ.`ದೋಣಿ ಸಂಚಾರದಿಂದ ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಬಾಗಲಕೋಟೆಗೆ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಬಂದುಹೋಗಲು ಅನುಕೂಲವಾಗುತ್ತಿದೆ' ಎಂದು ಸಾಳಗುಂದಿ ಗ್ರಾಮದ ಬಸವರಾಜ ತಿಳಿಸಿದರು.

`ಶ್ರಾವಣ ಮಾಸದಲ್ಲಿ ಭಾರಿ ಗಾಳಿ ಬೀಸುವುದರಿಂದ ಒಂದು ತಿಂಗಳು ಕಾಲ ದೋಣಿ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ.ಇದಕ್ಕೂ ಮುನ್ನ ಗಾಳಿ ಬಂದರೆ ದೋಣಿ ಸಂಚಾರವನ್ನು ಸ್ಥಗಿತಗೊಳಿಸುತ್ತಾರೆ. ಆಗ ಒಲ್ಲದ ಮನಸ್ಸಿನಿಂದ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.