ಶನಿವಾರ, ಏಪ್ರಿಲ್ 10, 2021
29 °C

ನನ್ನ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುತ್ತೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಪಿಟಿಐ): ‘ನಾನು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುತ್ತೇನೆ. ಮತ್ತು ನನ್ನ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುತ್ತೇನೆ’ ಪಿ.ಜೆ ಥಾಮಸ್ ಅವರನ್ನು ಕೇಂದ್ರ ಜಾಗೃತ ಆಯುಕ್ತರನ್ನಾಗಿ ಕೇಂದ್ರ ಸರ್ಕಾರ ಮಾಡಿದ್ದ ವಿವಾದಾತ್ಮಕ ನೇಮಕಾತಿಯನ್ನು ಸುಪ್ರೀಂಕೋರ್ಟ್ ರದ್ದುಮಾಡಿದ ಒಂದು ದಿನದ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಈ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ್ದು ಹೀಗೆ.‘ಇಂತಹ ಸಂಗತಿಗಳು ಮತ್ತೊಮ್ಮೆ ನಡೆಯದಂತೆ ನೋಡಿಕೊಳ್ಳಬೇಕಾದ ಅಗತ್ಯ ಇದೆ’ ಎಂದು ಸುದ್ದಿಗೋಷ್ಠಿಯಲ್ಲಿ ಸಿಂಗ್ ಅಭಿಪ್ರಾಯಪಟ್ಟರು. ಥಾಮಸ್ ನೇಮಕಾತಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಪ್ರಧಾನಿ ಅವರು, ಈ ವಿಚಾರವು ತಾವು ಈ ಹಿಂದೆ ಪ್ರಸ್ತಾಪಿಸಿದ್ದ ‘ಮೈತ್ರಿ ಒತ್ತಡ’ ವಿಷಯದೊಂದಿಗೆ ತಳುಕು ಹಾಕಿಲ್ಲ ಎಂದರು.‘ಸಿವಿಸಿ ನೇಮಕಾತಿ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ದೇಶದ ನಿಷ್ಠಾವಂತ ಪ್ರಜೆಯಾಗಿ ನಾನು ಆ ತೀರ್ಪನ್ನು  ಒಪ್ಪುತ್ತೇನೆ. ಇದರ ಜೊತೆಯಲ್ಲಿ ನನ್ನ ಜವಾಬ್ದಾರಿಗಳನ್ನೂ ಒಪ್ಪುತ್ತೇನೆ’ ಎಂದು ಸಿಂಗ್ ಹೇಳಿದರು. 2ಜಿ ತರಂಗಾಂತರ ಹಂಚಿಕೆ ಹಗರಣ  ಬಯಲಿಗೆ ಬಂದ ನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೈತ್ರಿ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದರು.ಥಾಮಸ್ ಅವರನ್ನು ಜಾಗೃತ ಆಯುಕ್ತರನ್ನಾಗಿ ನೇಮಿಸಿದ, ಗೃಹ ಸಚಿವ ಪಿ ಚಿದಂಬರಂ ಮತ್ತು  ಲೋಕಸಭಾ ಪ್ರತಿಪಕ್ಷದ ನಾಯಕಿ ಸುಷ್ಮಾಸ್ವರಾಜ್ ಸದಸ್ಯರಾಗಿರುವ ಉನ್ನತಾಧಿಕಾರ ಸಮಿತಿಗೆ ಪ್ರಧಾನಿ ಸಿಂಗ್ ಅವರು ಮುಖ್ಯಸ್ಥರಾಗಿರುವುದರಿಂದ ಥಾಮಸ್ ಅವರ ನೇಮಕಾತಿ  ವಿಚಾರದಲ್ಲಿ ತಮ್ಮನ್ನು ದಾರಿ ತಪ್ಪಿಸಲಾಗಿದೆಯೇ ಎಂದು ಸಿಂಗ್ ಅವರನ್ನು ಸುದ್ದಿಗಾರರು ಇದೇ ಸಂದರ್ಭದಲ್ಲಿ ಕೇಳಿದರು.ಭವಿಷ್ಯದಲ್ಲಿ ಈ ವಿಚಾರ ಕುರಿತಂತೆ ಏನು ನಿರ್ಧಾರ ಕೈಗೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ. ‘ಈ ಸಂಬಂಧ ಮೊದಲಿಗೆ ನಾನು ಸಂಸತ್‌ನಲ್ಲಿ ಮಾತನಾಡುತ್ತೇನೆ. ಭವಿಷ್ಯದಲ್ಲಿ ಇಂತಹ ಸಂಗತಿಗಳು ನಡೆಯದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಪ್ರಧಾನಿ ಸಿಂಗ್  ಉತ್ತರಿಸಿದರು.ಮುಂದಿನ ವಾರದೊಳಗೆ ಸೂಕ್ತ ಉತ್ತರ: ಸರ್ಕಾರದ ಭರವಸೆ (ನವದೆಹಲಿ ವರದಿ): ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಪಿ.ಜೆ. ಥಾಮಸ್ ಅವರ ನೇಮಕವನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ ಆದೇಶದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ‘ಈ ಕುರಿತು ಮುಂದಿನ ವಾರದೊಳಗೆ ಸೂಕ್ತ ಉತ್ತರ’ ನೀಡಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅಶ್ವಿನಿ ಕುಮಾರ್ ಅವರು ರಾಜ್ಯಸಭೆಗೆ ತಿಳಿಸಿದರು.ರಾಜ್ಯಸಭಾ ಬಿಜೆಪಿ ಸದಸ್ಯ ವೆಂಕಯ್ಯನಾಯ್ಡು ಶುಕ್ರವಾರ ಎತ್ತಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು. ಈ ಕುರಿತು ಪ್ರಧಾನಿ ಅವರೇ ಉತ್ತರ ನೀಡುವರೇ? ಎಂದು ಬಿಜೆಪಿ ಸದಸ್ಯರು ಕೆಣಕಿದರು. ‘ಅಗತ್ಯ ಬಿದ್ದರೆ ಮಾತ್ರ ಸರ್ಕಾರ ಥಾಮಸ್ ನೇಮಕ ಕುರಿತು ಉತ್ತರಿಸಲಿದೆ’ ಎಂಬ ಸಚಿವರ ಹೇಳಿಕೆಯಿಂದ ಪ್ರತಿಭಟನೆಗೆ ಮುಂದಾದ ಬಿಜೆಪಿ ಸದಸ್ಯರು ‘ಸರ್ಕಾರ ನಿಖರ ಹೇಳಿಕೆ ನೀಡಬೇಕು’ ಎಂದು ಪಟ್ಟು ಹಿಡಿದರು.ಆಗ, ಸಚಿವರು ‘ ಮುಂದಿನ ವಾರದ ಒಳಗಾಗಿ ಸೂಕ್ತ ಉತ್ತರ ನೀಡಲಿದೆ’ ಎಂದು ಭರವಸೆ ನೀಡಿದ ನಂತರ ಬಿಜೆಪಿ ಸದಸ್ಯರು ಸುಮ್ಮನಾದರು.ತಾಳೆಎಣ್ಣೆ ಆಮದು ಹಗರಣದಲ್ಲಿ ಕೇರಳದ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ವಿಚಾರಣೆ ಎದುರಿಸುತ್ತಿರುವ ಥಾಮಸ್ ಅವರನ್ನು ಸಿವಿಸಿ ಆಗಿ ನೇಮಕ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.