ಭಾನುವಾರ, ಮೇ 22, 2022
27 °C

ನಮ್ಮ ಮೆಟ್ರೊದ ಎರಡನೇ ಹಂತದ ಯೋಜನೆ: ವಿನ್ಯಾಸ ಸಲಹೆ, ಟೆಂಡರ್ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ದ ಎರಡನೇ ಹಂತದ ಯೋಜನೆಯಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಎತ್ತರಿಸಿದ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ವಿವರವಾದ ವಿನ್ಯಾಸ ಸಲಹಾ ಸೇವೆಗಾಗಿ ಟೆಂಡರ್ ಕರೆಯಲಾಗಿದೆ. ಇದರ ಜತೆಗೆ ಬೈಯಪ್ಪನಹಳ್ಳಿಯಲ್ಲಿ `ಇಂಟರ್‌ಮೊಡಲ್ ಟ್ರಾನ್ಸಿಟ್ ಹಬ್~ ಎಂಬ ಸಾರಿಗೆ          ಕೇಂದ್ರ ನಿರ್ಮಾಣದ ವಿನ್ಯಾಸ ರಚನೆಗೂ ಟೆಂಡರ್ ಆಹ್ವಾನಿಸಲಾಗಿದೆ.ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವಿನ ಮಾರ್ಗವು 12.50 ಕಿ.ಮೀ. ಉದ್ದದ ವಿಸ್ತರಣಾ ಮಾರ್ಗವಾಗಿದೆ. ಈ ಮಾರ್ಗದಲ್ಲಿ 14 ನಿಲ್ದಾಣಗಳು ತಲೆ ಎತ್ತಲಿವೆ.ಪಕ್ಕದಲ್ಲೇ ರೈಲು ನಿಲ್ದಾಣ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಮಹಾನಗರ ಸಾರಿಗೆ ಸಂಸ್ಥೆ ನಿಲ್ದಾಣಗಳಿರುವ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣವನ್ನು ಸುಸಜ್ಜಿತ ಸಂಪರ್ಕ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು ಉದ್ದೇಶಿಸಿದೆ.ಈ ವಿಸ್ತರಣಾ ಮಾರ್ಗ, ಅದರ ನಿಲ್ದಾಣಗಳು ಹಾಗೂ ಟ್ರಾನ್ಸಿಟ್ ಹಬ್‌ನ ವಿನ್ಯಾಸ ಹೇಗಿರಬೇಕೆಂಬ ಬಗ್ಗೆ ಗುತ್ತಿಗೆ ಪಡೆಯುವ ಸಂಸ್ಥೆಗಳು ಶಿಫಾರಸು ಮಾಡಲಿವೆ.ಮೆಟ್ರೊದ ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ಮೂರು ಮಾರ್ಗಗಳ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಭೂಗರ್ಭ ತಾಂತ್ರಿಕ ಪರೀಕ್ಷಾ ಕಾರ್ಯ ಪ್ರಗತಿಯಲ್ಲಿದ್ದು, ಇದೀಗ ಎತ್ತರಿಸಿದ ಮಾರ್ಗ ಮತ್ತು ನಿಲ್ದಾಣಗಳ ವಿನ್ಯಾಸ ರಚನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ.ಮೈಸೂರು ರಸ್ತೆಯ ನಾಯಂಡನಹಳ್ಳಿಯಿಂದ ಕೆಂಗೇರಿವರೆಗೆ 5.9 ಕಿ.ಮೀ. ಉದ್ದ ಮತ್ತು  ಪುಟ್ಟೇನಹಳ್ಳಿ ಕ್ರಾಸ್‌ನಿಂದ ಅಂಜನಾಪುರ ಟೌನ್‌ಷಿಪ್‌ವರೆಗೆ 6.4 ಕಿ.ಮೀ. ಉದ್ದದ ಎರಡು ವಿಸ್ತರಣಾ ಮಾರ್ಗಗಳು ಹಾಗೂ ಗೊಟ್ಟಿಗೆರೆ ನಿಲ್ದಾಣದಿಂದ ಸ್ವಾಗತ್ ಕ್ರಾಸ್ ನಿಲ್ದಾಣದವರೆಗೆ 7.4 ಕಿ.ಮೀ. ಉದ್ದದ ಮಾರ್ಗದಲ್ಲಿ ಯಾವ ವಿನ್ಯಾಸದ ಎತ್ತರಿಸಿದ ಮಾರ್ಗ ಮತ್ತು ನಿಲ್ದಾಣಗಳನ್ನು ನಿರ್ಮಿಸಬೇಕೆಂಬ ಬಗ್ಗೆ ಸಲಹೆಗಳನ್ನು ಪಡೆಯಲು ಈ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

1ನೇ ಹಂತದಲ್ಲಿ 42.30 ಕಿ.ಮೀ, 2ನೇ ಹಂತದಲ್ಲಿ 72.09 ಕಿ.ಮೀ- ಒಟ್ಟು 114.39 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳಲಿದೆ. 1ನೇ ಹಂತದಲ್ಲಿ 6.7 ಕಿ.ಮೀ. ಉದ್ದದ ರೀಚ್- 1ರ ಮಾರ್ಗದಲ್ಲಿ ಈಗಾಗಲೇ ರೈಲುಗಳ ಸಂಚಾರ ಪ್ರಾರಂಭವಾಗಿದೆ. ಉಳಿದ ರೀಚ್‌ಗಳ ನಿರ್ಮಾಣ ಕಾಮಗಾರಿ ವಿವಿಧ ಹಂತಗಳಲ್ಲಿದೆ.

2ನೇ ಹಂತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಜನವರಿ ತಿಂಗಳಲ್ಲಿ ಮಂಜೂರಾತಿ ನೀಡಿದ್ದು, ಫೆಬ್ರುವರಿ ತಿಂಗಳಲ್ಲಿ ಯೋಜನೆ ಜಾರಿ ಸಂಬಂಧ ಆದೇಶವನ್ನು (ಜಿಒ) ಹೊರಡಿಸಿತ್ತು.ಜತೆಗೆ ಪೂರ್ವ ಸಿದ್ಧತೆ ಕಾಮಗಾರಿ ಕೈಗೊಳ್ಳಲು ಹಸಿರು ನಿಶಾನೆ ತೋರಿಸಿತ್ತು. ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡುವುದು ಬಾಕಿ ಉಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.