ಶುಕ್ರವಾರ, ಜನವರಿ 17, 2020
22 °C

ನರಭಕ್ಷಕ 'ಇಲಿ' ಹಿಡಿದ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ನರಭಕ್ಷಕ ‘ಇಲಿ‘ ಹಿಡಿಯಲಾಗಿದೆ ಎಂದು ಹೇಳುವ ಮೂಲಕ ಅರಣ್ಯ ಸಚಿವ ಬಿ.ರಮಾನಾಥ ರೈ ಗುರುವಾರ ವಿಧಾನಸಭೆಯಲ್ಲಿ ನಗುವಿನ ಅಲೆ ಎಬ್ಬಿಸಿದರು. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹುಲಿಯೊಂದು ಈಚೆಗೆ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿರುವ ಕುರಿತು ಜೆಡಿಎಸ್ ಸದಸ್ಯ ಚಿಕ್ಕಮಾದು ಹಾಗೂ ಬಿಜೆಪಿ ಸದಸ್ಯ  ಸಿ.ಟಿ.ರವಿ ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸುವಾಗ ಸಚಿವರಿಂದ ಬಾಯಿ ತಪ್ಪಿ ಈ ಪ್ರಮಾದ ನಡೆಯಿತು.ಸಚಿವರು, ‘ಹುಲಿಯನ್ನು ಜೀವಂತವಾಗಿ ಹಿಡಿಯಲಾಗಿದೆ‘ ಎಂದು ೨-೩ ಬಾರಿ ಹೇಳಿದರು. ಆಗ ಮಧ್ಯಪ್ರವೇಶಿಸಿದ ರವಿ, ‘ಹಿಡಿದಿರುವುದು ನರಭಕ್ಷಕ ಹುಲಿಯನ್ನೊ ಅಥವಾ ಬೇರೆ ಹುಲಿಯನ್ನೊ’ ಎಂದು ಕೆಣಕಿದರು. ಅದಕ್ಕೆ ಉತ್ತರಿಸುವಾಗ ತಬ್ಬಿಬ್ಬಾದ ರಮಾನಾಥ ರೈ, 'ಇಲಿ ಹಿಡಿಯಲಾಗಿದೆ' ಎಂದು ಹೇಳಿದ ಮಾತು ಸದನದಲ್ಲಿ ನಗುವಿಗೆ ಎಡೆಮಾಡಿಕೊಟ್ಟಿತು.

ತಕ್ಷಣವೇ ಎಚ್ಚೆತ್ತುಕೊಂಡ ರೈ, ‘ನರ ಭಕ್ಷಕ ಹುಲಿಯನ್ನೇ ಹಿಡಿಯಲಾಗಿದೆ. ಹುಲಿಯಿಂದ ಜೀವ ಕಳೆದುಕೊಂಡಿರುವ ನಾಲ್ಕು ಮಂದಿಯ ಕುಟುಂಬಗಳಿಗೆ ಈಗಾಗಲೇ ತಲಾ ₨ 1 ಲಕ್ಷ  ಪರಿಹಾರ ನೀಡಲಾಗಿದೆ. ಇನ್ನುಳಿದ ತಲಾ ₨ 4  ಲಕ್ಷವನ್ನು ಶವಪರೀಕ್ಷೆ ವರದಿ ಬಂದ ನಂತರ ನೀಡಲಾಗುವುದು’ ಎಂದು ತಿಳಿಸಿದರು. ಆನೆ ದಾಳಿಯಿಂದ ಸತ್ತಿರುವ ಜಯರಾಮೇಗೌಡ ಕುಟುಂಬಕ್ಕೂ ಮಾನವೀಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದರು.

ಪ್ರತಿಕ್ರಿಯಿಸಿ (+)