ಬುಧವಾರ, ಜೂನ್ 23, 2021
28 °C
ಸರ್ವಜನ ಶಕ್ತಿ ಪಕ್ಷದ ಅಧ್ಯಕ್ಷ ಶಂಕರ ಬಿದರಿ

ನರ್ಮದಾ ಮಾದರಿಯಲ್ಲಿ ಪುನರ್ವಸತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಆಲಮಟ್ಟಿ ಜಲಾಶಯದಿಂದ ಜಿಲ್ಲೆಯಲ್ಲಿ ಸಂತ್ರಸ್ತರಾದವರಿಗೆ ನರ್ಮದಾ ಮಾದರಿಯಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಶ್ರಮಿಸುವುದಾಗಿ ಬಾಗಲಕೋಟೆ ಲೋಕಸಭೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ, ಸರ್ವಜನ ಶಕ್ತಿ ಪಕ್ಷದ ಅಧ್ಯಕ್ಷ ಶಂಕರ ಬಿದರಿ ಭರವಸೆ ನೀಡಿದರು.ಬಾಗಲಕೋಟೆ ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿದ್ದ ಯಾವೊಬ್ಬ ಸಂಸದರೂ ಜಿಲ್ಲೆಗೆ ಕೇಂದ್ರದ ಯೋಜನೆಗಳನ್ನು ತರಲು ಪ್ರಯತ್ನಿಸಿಲ್ಲ, ಜಿಲ್ಲೆಯ ಅಭಿವೃದ್ಧಿಗೆ ಇದುವರೆಗೆ ಆಯ್ಕೆಯಾದ ಸಂಸದರ ಕೊಡುಗೆ ಶೂನ್ಯ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಜಿಲ್ಲೆಯಲ್ಲಿ ಪ್ರಸಿದ್ಧ ಪ್ರವಾಸಿತಾಣಗಳಿದ್ದರೂ ಯಾತ್ರಿ ನಿವಾಸದ ಕೊರತೆ ಇದೆ, ಬೃಹತ್‌ ಪ್ರಮಾಣದಲ್ಲಿ ನೇಕಾರಿಕೆ ಇರುವುದರಿಂದ ಜಿಲ್ಲೆಗೆ ಜವಳಿ ಪಾರ್ಕ್‌  ಮತ್ತು ಸ್ಪಿನಿಂಗ್‌ ಮಿಲ್‌ ಅಗತ್ಯವಿದೆ. ತೋಟಗಾರಿಕೆ ಮತ್ತು ಕೃಷಿ ಉತ್ಪಾದನೆ ಅಧಿಕ ಇರುವುದರಿಂದ ಫುಡ್‌ ಪಾರ್ಕ್‌ ಅಗತ್ಯವಿದೆ, ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡುವ ಅಗತ್ಯವಿದ್ದು, ಪಕ್ಷ ಇವುಗಳಿಗೆ ಆದ್ಯತೆ ನೀಡಲಿದೆ ಎಂದರು.ಯುಪಿಎಸ್‌ಸಿ, ಕೆಪಿಎಸ್‌ಸಿ ಮತ್ತಿತರರ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಉದ್ದೇಶದಿಂದ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಉದ್ಯೋಗ ಮಾರ್ಗದರ್ಶನ ಕೇಂದ್ರವನ್ನು ಸ್ವಂತ ಖರ್ಚಿನಿಂದ ಮುಂಬರುವ ಆಗಸ್ಟ್‌ ಒಳಗಾಗಿ ತೆರೆಯಲಾಗುವುದು ಎಂದು ಭರವಸೆ ನೀಡಿದರು.ಜನತೆಗೆ ಹಣ, ಹೆಂಡ ನೀಡಿ ವೋಟ್‌ ಕೇಳುವುದಿಲ್ಲ, ನಾನು ಕಣದಲ್ಲಿರುವ ಇತರೆ ಪಕ್ಷಗಳ ಅಭ್ಯರ್ಥಿಗಳಿಗಿಂತ ಸಮರ್ಥನಿದ್ದೇನೆ, ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತೇನೆ, ಜಿಲ್ಲೆಯ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಮತದಾರರೂ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತಹಾಕಬೇಕು ಎಂದು ಮನವಿ ಮಾಡಿದರು.‘ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಎರಡು ಮತ್ತು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ನನ್ನ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‘ಬಾಗಲಕೋಟೆ ಹೊಸ ಜಿಲ್ಲೆಯಾಗಿ ರಚನೆಯಾಗುವಲ್ಲಿ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಜಮಖಂಡಿ ಸಕ್ಕರೆ ಕಾರ್ಖಾನೆ, ರನ್ನ ಸಕ್ಕರೆ ಕಾರ್ಖಾನೆ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸ್ಥಾಪನೆಯಲ್ಲಿ ನನ್ನ ಕೊಡುಗೆ ಇದೆ’ ಎಂದು ನೆನಪಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಖಾಸಗಿ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿರುವಂತೆ ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜನತೆಗೆ ಅನುಕೂಲವಾಗಿಸಲು ಖಾಸಗಿ ಬಸ್‌ ಸಂಚಾರಕ್ಕೆ ಅವಕಾಶ ಒದಗಿಸಲು ಪಕ್ಷ ಹೋರಾಟ ನಡೆಸಲಿದೆ ಎಂದರು.ಜಿಲ್ಲೆಯಲ್ಲಿ 40 ಸಾವಿರ ಜನ ಎಚ್‌ಐವಿಯಿಂದ ಬಾಧಿತರಾಗಿದ್ದಾರೆ, ಅವರಿಗೆ ಸೂಕ್ತ ಚಿಕಿತ್ಸೆ, ಔಷಧಿ ಸಿಗುತ್ತಿಲ್ಲ. ಎಚ್‌ಐವಿ ಬಾಧಿತರ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆಯ ಅಗತ್ಯವಿದ್ದು, ಇದರ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.ದೇಶದಲ್ಲಿ ನ್ಯಾಯದಾನ ಸಂಪೂರ್ಣ ಶಿಥಿಲವಾಗಿದೆ, ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಸಿಗುತ್ತಿಲ್ಲ, ನ್ಯಾಯದಾನದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್‌ ಮತ್ತು ಬಿಜೆಪಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.

ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗಿಲ್ಲ, ಸರ್ಕಾರಗಳ ಆದಾಯದಲ್ಲಿ ಶೇ 75 ಭಾಗ ಸೋರಿಹೋಗುತ್ತಿದೆ. ಸರ್ಕಾರ ವಿವಿಧ ಯೋಜನೆ, ಕಾರ್ಯಕ್ರಮಗಳಿಗೆ ನೀಡುವ ಹಣದಲ್ಲಿ ಶೇ 75 ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ರಾಜಕಾರಣಿಗಳ ಪಾಲಾಗುತ್ತಿದೆ, ಕೇವಲ ಶೇ 25 ಭಾಗ ಮಾತ್ರ ಜನರಿಗೆ ತಲುಪುತ್ತಿವೆ ಎಂದರು.ದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಅಸಮತೋಲನ ನಿರ್ಮಾಣವಾಗಿದೆ. ಸಂಪತ್ತು ನಗರ ಕೇಂದ್ರೀಕೃತವಾಗುತ್ತಿದೆ. ಹಳ್ಳಿಗಳು ದಟ್ಟ ದರಿದ್ರವಾಗತೊಡಗಿವೆ. ಈ ಕಾರಣದಿಂದ ದೇಶದ 600 ಜಿಲ್ಲೆಗಳಲ್ಲಿ ಸುಮಾರು 125 ಜಿಲ್ಲೆಗಳ ಜನರು ನಕ್ಸಲಿಜಂ ಮೊರೆ ಹೋಗಿದ್ದಾರೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.