ಶನಿವಾರ, ಮೇ 8, 2021
26 °C

ನವಜಾತ ಶಿಶು ಬೇಡ ಆತಂಕ

- ಡಾ. ಮೈತ್ರಿ ಅಡಿಗ Updated:

ಅಕ್ಷರ ಗಾತ್ರ : | |

ತಾಯಿ ಗರ್ಭವತಿ ಆದಾಗಿನಿಂದ ಮಗು ಹೊರಜಗತ್ತಿಗೆ ಕಾಲಿಡುವ ಕ್ಷಣದವರೆಗೂ ತಾಯಿ ಮತ್ತು ಮನೆಯವರು ಖುಷಿ, ಆತಂಕ, ನಿರೀಕ್ಷೆಗಳೆಲ್ಲ ಒಟ್ಟಾಗಿ ದ್ವಂದ್ವ ಮನಃಸ್ಥಿತಿಯಲ್ಲಿ ಇರುತ್ತಾರೆ. ಆದರೆ ಮಗು ಹುಟ್ಟಿದ ತಕ್ಷಣ, ಇದ್ದ ಆತಂಕಗಳೆಲ್ಲವೂ ದೂರಾಯಿತು ಎಂದುಕೊಂಡು ಮಗುವನ್ನು ಮುದ್ದಿಸಿ, ಆನಂದಿಸುತ್ತಿರುವಾಗಲೇ ಒಂದೊಂದಾಗಿ ಸಮಸ್ಯೆಗಳು ಹುಟ್ಟಿಕೊಳ್ಳತೊಡಗುತ್ತವೆ. ಇದು ಸಾಮಾನ್ಯವಾಗಿ ಹುಟ್ಟಿದ ಪ್ರತಿ ಮಗುವಿನಲ್ಲೂ ಕಾಣುವ ಲಕ್ಷಣ.ಬೆಚ್ಚಗೆ ಗರ್ಭದೊಳಗೆ ಮಲಗಿದ್ದ ಮಗು ಇದ್ದಕ್ಕಿದ್ದಂತೆ ತಾಯಿಯ ದೇಹದಿಂದ ಬೇರ್ಪಟ್ಟಾಗ ಅದಕ್ಕೆ ಪ್ರಕೃತಿ ಸಹಜವಾದ ಅಡೆತಡೆಗಳು ಉಂಟಾಗುತ್ತವೆ. ತಾಯಿಯ ಹಾಲು, ಆರೈಕೆಗಳೆಲ್ಲವೂ ಒಟ್ಟಾಗಿ ಮಗು ಹೊರ ಪ್ರಪಂಚದಲ್ಲಿ ಸಮತೋಲನ ಕಂಡುಕೊಂಡು ಬೆಳೆಯಲು ಕೆಲ ದಿನಗಳು ಹಿಡಿಯುತ್ತವೆ. ಹೀಗೆ ಮಗು ಹುಟ್ಟಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೂ ಕಂಡುಬರುವ ತೊಂದರೆಗಳಾವುವು; ಅವಕ್ಕೆ ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳೋಣ.

-ಮಗು ಹುಟ್ಟಿದ ಮೊದಲ ವಾರದಲ್ಲಿ ಶೇಕಡಾ 8ರಿಂದ 10ರವರೆಗೆ ತೂಕ ಕಳೆದುಕೊಳ್ಳುತ್ತದೆ. ಇದು ಸಹಜ. ಪುನಃ 8-10 ದಿನಗಳಲ್ಲಿ ಮತ್ತೆ ತೂಕ ಪಡೆದುಕೊಳ್ಳಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ದಿನಕ್ಕೆ ಸರಾಸರಿ 20ರಿಂದ 40 ಗ್ರಾಂನಂತೆ ತೂಕ ಹೆಚ್ಚುತ್ತಾ ಹೋಗಬೇಕು.

-ಮಗುವಿನ ಮೂತ್ರಚೀಲ ತುಂಬಿದಾಗ ಅದು ಅಳುವುದು ಸಾಮಾನ್ಯ ಹಾಗೂ ಮೂತ್ರ ವಿಸರ್ಜನೆ ಶುರುವಾದ ತಕ್ಷಣ ಅಳು ನಿಲ್ಲುತ್ತದೆ. ಮೂತ್ರ ಮಾಡುವಾಗಲೂ ಅತ್ತರೆ, ಮೂತ್ರ ಸೋಂಕಿನ ಸಾಧ್ಯತೆ ಇರುತ್ತದೆ. ಹಾಗಾದಾಗ ವೈದ್ಯರನ್ನು ಸಂಪರ್ಕಿಸಬೇಕು.

-ಮೊದಲ ವಾರ, ಹೊಕ್ಕುಳ ಬಳ್ಳಿ ಉದುರುವವರೆಗೆ ಕೇವಲ ಹಸಿ ಬಟ್ಟೆಯಿಂದ ಮಗುವನ್ನು ಒರೆಸಿದರೂ ಸಾಕು. ಅನಂತರ 2-3 ದಿನಕ್ಕೊಮ್ಮೆ ಸ್ನಾನ ಮಾಡಿಸಬಹುದು. ಕೆಲವು ಪ್ರದೇಶಗಳಲ್ಲಿ ಹುಟ್ಟಿದ ತಕ್ಷಣ ಸ್ನಾನ ಮಾಡಿಸುವ ರೂಢಿಯೂ ಇದೆ. ದಿನಂಪ್ರತಿ ಸ್ನಾನದ ರೂಢಿಯು ಮಗುವಿನಲ್ಲಿ ನೈರ್ಮಲ್ಯ ಗುಣ ಬೆಳೆಸಲು ಸಹಾಯಕ.

-ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸುವುದರಿಂದ ಮಗುವಿಗೆ ನೆಗಡಿ ಆಗುವುದನ್ನು ತಡೆಯಬಹುದು. ಮೈಯನ್ನು ಮೊದಲು ತಿಕ್ಕಿ ಸ್ನಾನ ಮಾಡಿಸಿ ತಲೆಯನ್ನು ಕೊನೆಯಲ್ಲಿ ತೊಳೆದು, ಕೂಡಲೇ ಬಟ್ಟೆಯಿಂದ ಒರೆಸಬೇಕು. ಸ್ನಾನ ಮಾಡಿಸುವಾಗ ಹೊಕ್ಕುಳ ಬಳ್ಳಿ, ಕಣ್ಣು, ಚರ್ಮವನ್ನು ಸೂಕ್ಷ್ಮವಾಗಿ ನೋಡಬೇಕು. ಬದಲಾವಣೆ ಕಂಡಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

-ಮಗುವಿನ ಚರ್ಮ ಅತಿ ಸೂಕ್ಷ್ಮವಾಗಿರುವುದರಿಂದ ಆಲಂಕಾರಿಕ ವಸ್ತುಗಳನ್ನು ಆದಷ್ಟೂ ಕಡಿಮೆ ಬಳಸಬೇಕು. ಸುಗಂಧ ಭರಿತ ಸೋಪು, ಕಾಡಿಗೆಗಳನ್ನು ಉಪಯೋಗಿಸಬಾರದು.

-ಮಗುವಿನ ಮೈಗೆ ಎಳ್ಳೆಣ್ಣೆ ಬಿಟ್ಟು ಉಳಿದ ಯಾವುದೇ ಎಣ್ಣೆ ಹಚ್ಚಬಹುದು.

-ಹೊಕ್ಕುಳ ಬಳ್ಳಿಗೆ ಏನನ್ನೂ ಹಚ್ಚಬಾರದು. ಅದು ಹಾನಿಕಾರಕ. ಅನಿವಾರ್ಯವಾದಾಗ ಪರಿಶುದ್ಧ ನೀರಿನಿಂದ ತೊಳೆದರೆ ಸಾಕು. ಅದರ ಸುತ್ತ ಕೆಂಪಾಗುವುದು ಅಥವಾ ಕೀವು ಒಸರುವುದು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

-ಹಾಲುಣಿಸಿದ ತಕ್ಷಣ ಮೊಸರಿನಂತಹ ವಾಂತಿ ಮಾಡಿಕೊಳ್ಳುವುದು ನವಜಾತ ಮಕ್ಕಳಲ್ಲಿ ಸಹಜ. ಹಾಲುಣಿಸಿದ ಬಳಿಕ ಮಗುವನ್ನು ಹೆಗಲ ಮೇಲೆ ಮಲಗಿಸಿಕೊಂಡು ಬೆನ್ನು ನೀವುವುದರಿಂದ ವಾಂತಿ ಆಗುವುದನ್ನು ತಡೆಗಟ್ಟಬಹುದು. ಆದರೆ ವಾಂತಿಯ ಜೊತೆ ಮಗು ತೂಕ ಕಳೆದುಕೊಂಡರೆ ಅಥವಾ ಮೂತ್ರ ವಿಸರ್ಜನೆ ಕಡಿಮೆಯಾದರೆ ವೈದ್ಯರ ಸಲಹೆ ಪಡೆಯಿರಿ.

-ಮೊದಲ ವಾರ ಕಳೆಯುವುದರೊಳಗಾಗಿ ಮಗುವಿನ ಹಸಿರು ಮಲ ಹಳದಿಯಾಗಿ, ನೀರಾಗಿ ಹಲವಾರು ಬಾರಿ ಹೋಗಬಹುದು. ಇದು ಪೋಷಕರಲ್ಲಿ ವಿನಾಕಾರಣ ಆತಂಕಕ್ಕೆ ಎಡೆ ಮಾಡುತ್ತದೆ. ಆದರೆ ಮಗುವಿನ ಚಲನವಲನಗಳಲ್ಲಿ ಬದಲಾವಣೆಆದರೆ ಮಾತ್ರ ಚಿಕಿತ್ಸೆ ಅನಿವಾರ್ಯ. ಮಗುವಿನ ಮೈ ಬಿಸಿಯಾದರೆ, ನೀರಿನಂಶ ಕಡಿಮೆಯಾದಂತೆ ಕಂಡುಬಂದರೆ ಸೂಕ್ತ ವೈದ್ಯರನ್ನು ಸಂಪರ್ಕಿಸಬೇಕು.

ಎಂದಿನಂತೆ ಹಾಲು ಕುಡಿಯುತ್ತಾ, ಯಾವುದೇ ತೊಂದರೆಯಿಲ್ಲದೆ 6-8 ಬಾರಿ ಮೂತ್ರ ವಿಸರ್ಜಿಸುತ್ತಾ ಸಮರ್ಪಕವಾಗಿ ತೂಕ ಪಡೆದುಕೊಳ್ಳುತ್ತಿದ್ದರೆ ಪೋಷಕರು ಯಾವುದೇ ಆತಂಕ ಪಡುವುದು ಬೇಡ.

-ನವಜಾತ ಗಂಡು ಅಥವಾ ಹೆಣ್ಣು ಶಿಶುವಿನ ಮೊಲೆಯಿಂದ ಅಲ್ಪ ಪ್ರಮಾಣದಲ್ಲಿ ಹಾಲು ಒಸರುವುದು ಸಹಜ. ಮೊಲೆಗಳನ್ನು ಒತ್ತಿದಾಗ ಮಗುವಿಗೆ ನೋವುಂಟಾಗಬಹುದು. ಕೆಲವು ದಿನಗಳಲ್ಲಿ ಇದು ಸಹಜವಾಗಿ ಕಡಿಮೆಯಾಗುತ್ತದೆ. ಮಕ್ಕಳಿಗೆ ಎಣ್ಣೆ ಹಚ್ಚುವಾಗ, ಸ್ನಾನ ಮಾಡಿಸುವಾಗ ಎಚ್ಚರಿಕೆ ವಹಿಸಬೇಕು.-ಹೆಣ್ಣು ಶಿಶುಗಳ ಜನನಾಂಗದಿಂದ ರಕ್ತ ಒಸರುವುದು ಕೂಡ ಸಾಮಾನ್ಯ. ಇದಕ್ಕೆ ತಾಯಿಯ ಹಾರ್ಮೋನುಗಳು ಕಾರಣ. ಯಾವುದೇ ಚಿಕಿತ್ಸೆ ಇಲ್ಲದೆ ಕೆಲವು ದಿನಗಳಲ್ಲಿ ಇದು ತಾನಾಗಿಯೇ ನಿಲ್ಲುತ್ತದೆ.

-ಹುಟ್ಟಿದ 2-3 ದಿನಗಳಲ್ಲಿ ಮಗುವಿನ ಎದೆ ಮತ್ತು ಮುಖದ ಮೇಲೆ ಚಿಕ್ಕ-ಚಿಕ್ಕ ಕೆಂಪು ಗುಳ್ಳೆಗಳಾಗುವುದು ಸಹಜ. ಇದು ಸಹ ಯಾವುದೇ ಚಿಕಿತ್ಸೆ ಇಲ್ಲದೆ ಗುಣವಾಗುತ್ತದೆ.

ಕೀವು ತುಂಬಿದ ಗುಳ್ಳೆಗಳು ಕಂಡುಬಂದರೆ, ಅದು ಚರ್ಮರೋಗದ ಲಕ್ಷಣ ಆಗಿರುತ್ತದೆ. ಇದು ಹೆಚ್ಚಾಗಿ ತೊಡೆ ಸಂದಿಯಲ್ಲಿ, ಕುತ್ತಿಗೆಯ ಹಿಂದೆ ಕಂಡುಬರುತ್ತದೆ. ಗುಳ್ಳೆಗಳು 10ಕ್ಕಿಂತ ಕಡಿಮೆ ಇದ್ದು, ಜ್ವರ ಇರದೇ, ಮಗು ಚಟುವಟಿಕೆಯಿಂದ ಇದ್ದರೆ ಗುಳ್ಳೆಗಳಿದ್ದ ಜಾಗವನ್ನು ಚೆನ್ನಾಗಿ ತೊಳೆದು, ಮೆದು ಬಟ್ಟೆಯಿಂದ ಒರೆಸಿ, ಆ್ಯಂಟಿಸೆಪ್ಟಿಕ್ ದ್ರವ ಹಚ್ಚಿದರೆ ಗುಳ್ಳೆಗಳು ವಾಸಿಯಾಗುತ್ತವೆ. ಹತ್ತಕ್ಕಿಂತ ಜಾಸ್ತಿ ಗುಳ್ಳೆಗಳಿದ್ದು ಜ್ವರ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

-ದಿನ ತುಂಬಿದ ನಂತರ ಹುಟ್ಟುವ ಮಕ್ಕಳಲ್ಲಿ ಹಾಗೂ ಗರ್ಭದಲ್ಲಿ ಬೆಳವಣಿಗೆ ಕಡಿಮೆ ಇರುವ ಮಕ್ಕಳಲ್ಲಿ ಚರ್ಮ ಹಣ್ಣಿನ ಸಿಪ್ಪೆಯಂತೆ ಕಿತ್ತು ಬರುವುದು ಸಾಮಾನ್ಯ. ಎಣ್ಣೆಯಿಂದ ಮಸಾಜ್ ಮಾಡಿದರೆ ಇದು ಕಡಿಮೆಯಾಗುತ್ತದೆ.

-ಶೇಕಡಾ 60 ನವಜಾತ ಶಿಶುಗಳಲ್ಲಿ ಕಾಮಾಲೆ ರೋಗ ಕಂಡುಬರುತ್ತದೆ. ಹುಟ್ಟಿದ 2-3 ದಿನಗಳಲ್ಲಿ ಮೈ ಹಳದಿಯಾಗಿ 7ರಿಂದ 10 ದಿನಗಳಲ್ಲಿ ಕಡಿಮೆ ಆಗುತ್ತದೆ. ಅತಿಯಾದ ಕಾಮಾಲೆ ಮೆದುಳನ್ನು ಹಾನಿ ಮಾಡುವ ಸಂಭವ ಇರುವುದರಿಂದ ತಕ್ಕ ಶುಶ್ರೂಷೆ ಅಗತ್ಯ.-ಮಗುವಿನ ನಾಲಿಗೆ ಮೇಲೆ ಬಿಳಿಯಾದ ಪದರು ಕಂಡುಬರುವುದು ಸಹಜ. ಇದನ್ನು ತೆಗೆಯಲು ಪ್ರಯತ್ನಿಸಿದರೆ ರಕ್ತ ಒಸರುವ ಸಾಧ್ಯತೆ ಇರುತ್ತದೆ. ಇದಕ್ಕೆ ಕ್ಯಾಂಡಿಡ್ ಎಂಬ ಫಂಗಸ್ ಕಾರಣ. ವೈದ್ಯರಿಂದ ಔಷಧಿ ಪಡೆದು ದಿನಕ್ಕೆ 4 ಬಾರಿ ಹಾಲುಣಿಸಿದ ನಂತರ ನಾಲಿಗೆಗೆ ಹಚ್ಚಬೇಕು. ಬಿಳಿ ಪದರು ಹೋದ ನಂತರವೂ ಎರಡು ದಿನಗಳವರೆಗೆ ಔಷಧಿಯನ್ನು ಹಚ್ಚುತ್ತಿರಬೇಕು.

>-ಹುಟ್ಟಿದ ಮಕ್ಕಳ ಕಣ್ಣಿನಿಂದ ಸಾಮಾನ್ಯವಾಗಿ ಏನೂ ಒಸರುವುದಿಲ್ಲ. ಕಣ್ಣೀರು ಅಥವಾ ಹಿಕ್ಕೆ ಒಸರಿದರೂ ಅದು ರೋಗದ ಲಕ್ಷಣ ಆಗಿರಬಹುದು. ಅತಿಯಾದ ಕಣ್ಣೀರು ಅಥವಾ ಬೇರೇನೇ ಒಸರಿದರೂ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು.

ಈ ಅಂಶಗಳನ್ನೆಲ್ಲ ಅರಿತಾಗ ತಾಯಿಗೆ ನವಜಾತ ಶಿಶುವಿನ ಆರೈಕೆಯು ಆತಂಕಕ್ಕಿಂತ ಹೆಚ್ಚಾಗಿ ಖುಷಿ ಕೊಡುವ ಪ್ರಕ್ರಿಯೆ ಆಗುತ್ತದೆ.

ಪ್ರತಿ ಶನಿವಾರ ಭೂಮಿಕಾ ಓದಿರಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.