ಶುಕ್ರವಾರ, ಏಪ್ರಿಲ್ 16, 2021
20 °C

ನವನಗರ ಯುನಿಟ್-2: ಭೂಸ್ವಾಧೀನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಉದ್ದೇಶಿತ ನವನಗರ ಯುನಿಟ್ 2ಕ್ಕೆ ಅಗತ್ಯವಿರುವ 3600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಬಾರದು ಎಂದು ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘಟನೆ ಗಳ ಮುಖಂಡರು ಜಿಲ್ಲಾಡಳಿತವನ್ನು ಮಂಗಳವಾರ ಆಗ್ರಹಿಸಿದರು.ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಘನಶ್ಯಾಂ ಭಾಂಡಗೆ, ಶಂಭು ಲಿಂಗಪ್ಪ ಅಕ್ಕಿಮರಡಿ, ರಾಮಣ್ಣ ಪಾತ್ರೋಟಿ, ಬಿ.ಕೆ. ನಾಗನೂರ, ಬಾಗಲಕೋಟೆ ಪುನರುತ್ಥಾನ ಹೋರಾಟ ಸಮಿತಿ ಅಧ್ಯಕ್ಷ ಅಶೋಕ ಲಿಂಬಾವಳಿ ಮತ್ತಿತರರು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರನ್ನು ಮಂಗಳ ವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿ ಸಮಸ್ಯೆಯನ್ನು ತಕ್ಷಣ ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಮತ್ತು ಬಿಟಿಡಿಎ ಗೊಂದಲದ ನಿರ್ಧಾರದಿಂದ ಈ ಸಮಸ್ಯೆ ಉಂಟಾಗಿದೆ. ಬಾಗಲಕೋಟೆ ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ರೈತರು ತಮ್ಮ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ಕಾನೂನು ಬಾಹಿರವಾಗಿ ತಡೆಯೊಡ್ಡಲಾಗುತ್ತಿದೆ ಎಂದು ಆರೋಪಿಸಿದರು.ಆಲಮಟ್ಟಿ ಜಲಾಶಯದಲ್ಲಿ ಮುಳುಗಡೆಯಾಗುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಆರಂಭದಲ್ಲೇ ಭೂಮಿಯನ್ನು ವಶಪಡಿಸಿಕೊಳ್ಳ ಲಾಗಿದೆ. ವಶಪಡಿಸಿಕೊಂಡಿರುವ ಭೂಮಿಯನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿರುವುದರಿಂದ ನವನಗರ ಯುನಿಟ್ 2ಕ್ಕೆ ಭೂಮಿ ಕೊರತೆಯಾಗಿದೆ ಎಂದು ಆರೋಪಿಸಿದರು.ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ವಶಪಡಿಸಿಕೊಂಡಿದ್ದ ಭೂಮಿಯನ್ನು ತೋಟಗಾರಿಕಾ ವಿಶ್ವವಿದ್ಯಾಲಯ, ವಿವಿಧ ಸಂಘಟನೆ ಗಳಿಗೆ, ಕಾರ್ಖಾನೆಗಳಿಗೆ ನೀಡುವ ಮೂಲಕ ಭೂಮಿಯನ್ನು ಕಂಡ ಕಂಡವರಿಗೆ ಹಂಚಿಕೆ ಮಾಡಲಾಗಿದೆ. ಇದನ್ನು ಮೊದಲು ಸರಿಪಡಿಸಬೇಕು ಎಂದು ಒತ್ತಾಯಿಸಿದರು.ಉದ್ದೇಶಿತ ಯುನಿಟ್ 2 ನಿರ್ಮಾಣ ಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳು ವುದಾದರೆ ತಕ್ಷಣ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಸೂಕ್ತ ಪರಿಹಾರ ನೀಡಬೇಕು. ಇಲ್ಲವೇ, ಸಂತ್ರಸ್ಥರು ತಮ್ಮ ಭೂಮಿ ಯನ್ನು ಬೇರೆಯವರಿಗೆ ಪರಭಾರೆ ಮಾಡಲು ಅವಕಾಶ ನೀಡಬೇಕು.ಅನಗತ್ಯವಾಗಿ ಗೊಂದಲ ಮೂಡಿಸಿ ಜನರನ್ನು ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಶಾಸಕರು ಕೈಬಿಡಬೇಕು ಎಂದು ಆಗ್ರಹಿಸಿದರು.ಅಶೋಕ ಲಿಂಬಾವಳಿ ಮಾತನಾಡಿ, ಶಾಸಕ ವೀರಣ್ಣ ಚರಂತಿಮಠ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರೈತರು ಮತ್ತು ಸಂತ್ರಸ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಸಮಸ್ಯೆಯನ್ನು ತಕ್ಷಣ ಇತ್ಯಾರ್ಥ ಪಡಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ. ಜೊತೆಗೆ ಬೀದಿಗಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಬಳಿಕ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಮಾತನಾಡಿ,  ನಗರಕ್ಕೆ ಭೇಟಿ ನೀಡುವ ಆರ್ ಅಂಡ್ ಆರ್ ಆಯುಕ್ತರ ಗಮನಕ್ಕೆ ತರುವುದಾಗಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.