ಶನಿವಾರ, ಮೇ 15, 2021
24 °C
5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ನವ ವಧುವಿನಂತೆ ಸಿಂಗಾರಗೊಂಡ ಮುಂಡರಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಜೂನ್ 15 ಹಾಗೂ 16ರಂದು ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನದಲ್ಲಿ ಜರುಗಲಿರುವ ಐದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಪಟ್ಟಣವು ನವ ವಧುವಿನಂತೆ ಅಲಂಕಾರಗೊಂಡಿದೆ.ಕಾಲೇಜು ಮೈದಾನದಲ್ಲಿ ಪುಸ್ತಕ ಮಳೆಗೆಗಳು ಸೇರಿದಂತೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, ಎರಡು ದಿನಗಳ ಕಾಲ ಕಾಲೇಜು ಮೈದಾನದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳು ಜರುಗಲಿವೆ.ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ತಾಲ್ಲೂಕು ಹಾಗೂ ಪಟ್ಟಣದ ನೂರಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ಕೇಂದ್ರ ಬಸ್ ನಿಲ್ದಾಣ, ಕೊಪ್ಪಳ ಕ್ರಾಸ್, ಕಾಲೇಜು ರಸ್ತೆ, ಬೃಂದಾವನ ಸರ್ಕಲ್ ಮೊದಲಾದ ಭಾಗಗಳಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಕಟ್ಟಿದ್ದು ಪಟ್ಟಣವೆಲ್ಲ ಪ್ಲೆಕ್ಸ್‌ಗಳಿಂದ ತುಂಬಿಹೋಗಿದೆ.ಶುಕ್ರವಾರ ಮುಂಜಾನೆ ಪಟ್ಟಣದ ಆಟೊ ಚಾಲಕರ ಸಂಘದ ಕಾರ್ಯಕರ್ತರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನದ ಅಂಗವಾಗಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಉಂಟು ಮಾಡಿದರು.

ಪಟ್ಟಣದ ರಸ್ತೆಗಳ ಮೇಲೆ ಓಡಾಡುತ್ತಿರುವ ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ಬಗೆಯ ವಾಹನಗಳ ಮೇಲೆ ಕನ್ನಡ ಧ್ವಜಗಳು ಹಾರಾಡುತ್ತಿದ್ದು, ಪಟ್ಟಣದ ವಿವಿಧ ಭಾಗಗಳಲ್ಲಿರುವ ಹೈಮಾಸ್ಟ್ ದೀಪದ ಬೃಹತ್ ಕಂಬಗಳಿಗೆ ದೊಡ್ಡ ಗಾತ್ರದ ಕನ್ನಡ ಧ್ವಜಗಳನ್ನು ಕಟ್ಟಲಾಗಿದೆ.ಜಗದ್ಗುರು ಅನ್ನದಾನೀಶ್ವರ ಕಾಲೇಜು ಪಕ್ಕದಲ್ಲಿರುವ ಕ.ರಾ. ಬೆಲ್ಲದ ಮಹಾವಿದ್ಯಾಲಯದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದ್ದು, ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಎಲ್ಲ ಪ್ರತಿನಿಧಿಗಳಿಗೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಮತ್ತಿತರ ಮುಖಂಡರು ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ವೇದಿಕೆ ಹಾಗೂ ಮತ್ತಿತರ ವ್ಯವಸ್ಥೆಗಳನ್ನು ಖದ್ದಾಗಿ ಪರಿಶೀಲಿಸಿದರು.ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಚಂದ್ರಹಾಸ ಉಳ್ಳಾಗಡ್ಡಿ, ಲಿಂಗನಗೌಡ ಪಾಟೀಲ, ಮುದಿಯಪ್ಪ ಕುಂಬಾರ, ವೀರಣ್ಣ ಸಜ್ಜನರ, ಬಸವರಾಜ ರಾಮೇನಹಳ್ಳಿ, ರಾಘವೇಂದ್ರ ಕುರಿ, ನಬಿಸಾಬ ಕೆಲೂರ, ಬಸವರಾಜ ಗಣಾಚಾರಿ, ಪಾಲಾಕ್ಷಿ ಗಡದಿನ್ನಿ, ದಿಲೀಪಕುಮಾರ ಬನ್ಸಾಲಿ, ಡಾ.ಬಿ.ಎಸ್. ಮೇಟಿ, ದ್ರುವ ಹೊಸಮನಿ, ಆನಂದಗೌಡ ಪಾಟೀಲ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ

ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಮೈದಾನದಲ್ಲಿ ಜೂನ್ 15ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನ ಪ್ರಾರಂಭವಾಗಲಿದ್ದು, ಮುಂಜಾನೆ 8ಗಂಟೆಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ರಾಷ್ಟ್ರಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶಿವಪ್ಪ ಕುರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.ನಂತರ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ ಮೆರವಣಿಗೆ ನಡೆಯಲಿದೆ.ಮುಂಜಾನೆ 10.30ಕ್ಕೆ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸಮ್ಮಳನವನ್ನು ಉದ್ಘಾಟಿಸಲಿದ್ದಾರೆ.ಕವಿವಿಯ ಡಾ. ಕೆ.ಆರ್. ದುರ್ಗಾದಾಸ ಆಶಯ ನುಡಿಗಳನ್ನಾಡಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಪುಂಡಲಿಕ ಹಾಲಂಬಿ ತಾಲ್ಲೂಕು ಸಾಹಿತ್ಯ ಭವನದ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಬಿ.ಆರ್. ಯಾವಗಲ್ಲ ವಿವಿಧ ಪುಸ್ತಕಗಳನ್ನು ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ `ತುಂಗಭದ್ರೆ' ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.ಮಧ್ಯಾಹ್ನ 1.30ಕ್ಕೆ `ಗದಗ ಜಿಲ್ಲಾ ದರ್ಶನ' ಗೋಷ್ಠಿ ಜರುಗಲಿದ್ದು, ಕೆ.ಎಚ್.ಬೇಲೂರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಂದಾನೆಪ್ಪ ವಿಭೂತಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ.ಜಿ.ಎಸ್. ಕೋಟಿಮಠ, ಚಂದ್ರಹಾಸ ಉಳ್ಳಾಗಡ್ಡಿ, ವೈ.ಎನ್. ಗೌಡರ ಹಾಗೂ ಡಿ.ಐ. ಅಸುಂಡಿ ಮಾತನಾಡಲಿದ್ದಾರೆ.  3ಕ್ಕೆ ಕವಿತಾ ವಿಹಾರ ಕವಿಗೋಷ್ಠಿ ಜರುಗಲಿದ್ದು, ಕೆ.ಬಿ. ತಳಗೇರಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಶಾಂತಮೂರ್ತಿ ಕುಲಕರ್ಣಿ ಆಶಯ ನುಡಿಗಳನ್ನಾಡಲಿದ್ದಾರೆ. ವೀರಣ್ಣ ಮಡಿವಾಳರ ಕಾವ್ಯ ಚಿಂತನೆ ನಡೆಸಲಿದ್ದಾರೆ. ಸುಮಾರು 50 ಕವಿಗಳು ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಸಂಜೆ 5.30ಕ್ಕೆ ಸಮ್ಮಳನಾಧ್ಯಕ್ಷರ ಬದುಕು ಬರಹ ಕುರಿತು ಗೋಷ್ಠಿ ನಡೆಯಲಿದ್ದು, ಶಾಂತಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಶ್ರಿಗಳ ಬದುಕು ಕುರಿತು ಆರ್.ಎಲ್. ಪೊಲೀಸ್‌ಪಾಟೀಲ, ಬರಹ ಕುರಿತು ಎಸ್.ಬಿ. ಕರಿಭರಮಗೌಡರ ಹಾಗೂ ಶ್ರಿಗಳ ವಿವಿಧ ಮುಖಗಳ ಕುರಿತು ಡಾ. ಶರಣಬಸವೇಶ್ವರ ವೆಂಕಟಾಪೂರ ಮಾತನಾಡಲಿದ್ದಾರೆ. ಸಂಜೆ 7ಗಂಟೆಗೆ ಡಾ. ಎಂ.ಬಿ. ಬೆಳವಟಗಿಮಠ ಅವರ ಅಧ್ಯಕ್ಷತೆಯಲ್ಲಿ ಡಾ. ಶಂಬು ಬಳಿಗಾರ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಡಿ.ಜಿ. ಹಿರೇಮಠ ಮಾತನಾಡುವರು.ಜೂನ್ 16ರಂದು ಮುಂಜಾನೆ 10ಕ್ಕೆ ಕಪೋತಗಿರಿಯ ಐಸಿರಿ ಗೋಷ್ಠಿ ನಡೆಯಲಿದ್ದು, ಶಿವಕುಮಾರ ಸ್ವಾಮೀಜಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಹು.ಬಾ. ವಡ್ಡಟ್ಟಿ, ಗೋಣಿಬಸಪ್ಪ ಕೊರ್ಲಹಳ್ಳಿ, ಸಿ.ಎಸ್. ಅರಸನಾಳ, ಈಶ್ವರಪ್ಪ ಹಂಚಿನಾಳ ಮಾತನಾಡಲಿದ್ದಾರೆ. 11.30ಕ್ಕೆ ಜನಪದ ಗೋಷ್ಠಿ ಜರುಗಲಿದ್ದು, ಡಾ.ಸಿದ್ಧಣ್ಣ ಜಕಬಾಳ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.ರವೀಂದ್ರ ಕೊಪ್ಪರ, ಡಾ.ಶ್ರಿಶೈಲ ಹುದ್ದಾರ, ಎ.ವೈ. ನವಲಗುಂದ, ಸಿ.ಜಿ.ಹುಡೇದಗಡ್ಡಿ ಮಾತನಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಇತ್ತೀಚಿನ ಸಾಹಿತ್ತಿಕ ಒಲವು ಕುರಿತು ಗೋಷ್ಠಿ ಜರುಗಲಿದ್ದು, ಶಿವಲಿಂಗು ಬಳಿಗಾರ, ಡಾ. ಎಂ.ಪಿ. ಕುಲಕರ್ಣಿ, ಡಾ. ನಿಂಗು ಸೊಲಗಿ, ಪ್ರಕಾಶ ಅಸುಂಡಿ, ಡಾ. ಎಚ್.ಬಿ. ಪೂಜಾರ ಭಾಗವಹಿಸಲಿದ್ದಾರೆ. 3.30ಕ್ಕೆ ಮಹಿಳೆ ಮತ್ತು ವಾಸ್ತವಿಕ ಬದುಕು ಕುರಿತು ಗೋಷ್ಠಿ ನಡೆಯಲಿದ್ದು, ಡಾ. ಮಲ್ಲಿಕಾ ಗಂಟಿ, ಗಿರಿಜಾ ಹಸಬಿ, ಡಾ. ವಾಣಿ ಶಿವಪುರ, ಸಾವಿತ್ರಿ ಮುಜುಮದಾರ ಭಾಗವಹಿಸಲಿದ್ದಾರೆ.ಸಂಜೆ 5ಗಂಟೆಗೆ ಡಾ. ಶಿವಪ್ಪ ಕುರಿ ಅವರ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಡಾ.ಸಂಗಮೆಶ ತಮ್ಮನಗೌಡ್ರ ಹಾಗೂ ಶರಣು ಗೋಗೇರಿ ನಿರ್ಣಯ ಮಂಡಿಸಲಿದ್ದಾರೆ. ಸಂಜೆ 6.30ಗಂಟೆಗೆ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.