ಬುಧವಾರ, ಜೂಲೈ 8, 2020
29 °C

ನಾಟಕವಾಡಿಸಿ ನಾಟಕ ಮುಗಿಸಿದ ಲಿಂಗದೇವರು

ಪ್ರಜಾವಾಣಿ ವಾರ್ತೆ/ ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ನಾಟಕವಾಡಿಸಿ ನಾಟಕ ಮುಗಿಸಿದ ಲಿಂಗದೇವರು

ಶಿವಮೊಗ್ಗ: ಅವರೇ ರೂಪಾಂತರಿಸಿದ ನಾಟಕ `ನೆರಳಿಲ್ಲದ ಮನುಷ್ಯರು~ ರಂಗದ ಮೇಲೆ ಪ್ರದರ್ಶನ ಕಾಣುತ್ತಿರುವ ಸಮಯದಲ್ಲೇ ಪ್ರೊ.ಲಿಂಗದೇವರು ಹಳೆಮನೆ ಇನ್ನಿಲ್ಲವಾಗಿದ್ದಾರೆ. ಅವರೇ ರಂಗಾಯಣದಲ್ಲಿ ಹೊಸದಾಗಿ ಸೃಷ್ಟಿಸಿದ ರಂಗಶಾಲೆಯ ನಟರು ತಮ್ಮ ನಾಟಕಗಳ ಮೊಟ್ಟ ಮೊದಲ ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡುತ್ತಿರುವಾಗಲೇ ಲಿಂಗದೇವರು ಬದುಕಿನ ಪಾತ್ರ ಮುಗಿಸಿದ್ದಾರೆ.ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ರಂಗಾಯಣ ನಾಟಕೋತ್ಸವ ನಡೆಯುತ್ತಿದ್ದು, ಎರಡು ದಿನಗಳಿಂದ ಲಿಂಗದೇವರು ಶಿವಮೊಗ್ಗದಲ್ಲೇ ಠಿಕಾಣಿ ಹೂಡಿದ್ದರು. ಮಂಗಳವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಊಟ ಮಾಡಿ, ಅವರಿಗೆಲ್ಲ ಕೈ ಕುಲಕಿ, ಮೈಸೂರಿಗೆ ಕಾರು ಹತ್ತಿದವರು ಮತ್ತೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.ರಂಗಶಾಲೆಯ ನಾಟಕಗಳ ಪ್ರಥಮ ಪ್ರದರ್ಶನ ಶಿವಮೊಗ್ಗದಲ್ಲೇ ಆಗಬೇಕು; ಇಲ್ಲಿನ ಕಲಾರಸಿಕರಿಂದ ಸೈ ಎನಿಸಿಕೊಳ್ಳಬೇಕೆಂಬ ನಿರೀಕ್ಷೆ ಲಿಂಗದೇವರದ್ದಾಗಿತ್ತು. ಅದರಂತೆ  ಜೂನ್ 6, 7 ಮತ್ತು 8ರಂದು ನಾಟಕೋತ್ಸವ ಹಮ್ಮಿಕೊಳ್ಳಲಾಗಿತ್ತು. 6, 7ರಂದು ನಾಟಕಗಳು ಯಶಸ್ವಿ ಪ್ರದರ್ಶನ ಕಂಡವು. ಆದರೆ, 8ರಂದು ಕೊನೆ ದಿನ ನಾಟಕ ಪ್ರದರ್ಶನ ಕಾಣುವ ಮೊದಲೇ ಲಿಂಗದೇವರು ಮಧ್ಯದಲ್ಲೇ ಎದ್ದು ಹೋಗಿದ್ದಾರೆ!8ರಂದು ರಂಗಶಾಲೆಯ ವಿದ್ಯಾರ್ಥಿಗಳು ಪ್ರೊ.ಚಂದ್ರಶೇಖರ ಪಾಟೀಲರ `ಗೋಕರ್ಣದ ಗೌಡಶಾನಿ~ ನಾಕಟವನ್ನು ಲಿಂಗದೇವರಿಗೆ ಅರ್ಪಿಸಿ, ಪ್ರದರ್ಶಿಸಿದರು. ನಟರು, ನೇಪಥ್ಯದವರೆಲ್ಲ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡೇ  ತಾವು ನೋವು ಉಂಡು, ಪ್ರೇಕ್ಷಕರಿಗೆ ನಲಿವು ನೀಡಿದರು.ಶಿವಮೊಗ್ಗದಲ್ಲಿ ರಂಗಾಯಣದ ಶಾಖೆಯನ್ನು ಈ ವರ್ಷದಿಂದಲೇ ಆರಂಭಿಸಬೇಕೆಂಬ ಉತ್ಸಾಹ ಹೊಂದಿದ್ದ ಲಿಂಗದೇವರು ಅದಕ್ಕೆ ಸಾಕಷ್ಟು ಸಿದ್ಧತೆಯನ್ನೂ ಕೈಗೊಂಡಿದ್ದರು. ಸರ್ಕಾರ, ರಂಗಾಯಣಕ್ಕೆ ಸುವರ್ಣ ಸಾಂಸ್ಕೃತಿಕ ಭವನ ನೀಡಲು ಮುಂದಾದಾಗ ಅವರೇ, ಅದು ರಂಗಭೂಮಿಗೆ ಯೋಗ್ಯವಾದ ಭವನ ಅಲ್ಲ ಎಂದು ನೇರವಾಗಿ ಹೇಳಿದ್ದರು. ಸ್ಥಳೀಯ ಕೆಲವು ಹಿತಾಸಕ್ತಿಗಳು ಈ ಜಾಗದ ಬಗ್ಗೆ ತರಕಾರು ತೆಗೆದಾಗ, ತಾತ್ಕಾಲಿಕವಾಗಿ ರಂಗಾಯಣ ಸುವರ್ಣ ಸಾಂಸ್ಕೃತಿಕ ಭವನ ಬಳಸಬಹುದು ಬಿಟ್ಟರೆ, ಈ ಕಾರ್ಪೋರೇಟ್ ಬಿಲ್ಡಿಂಗ್‌ನಲ್ಲಿ ರಂಗಾಯಣಕ್ಕೇನು ಕೆಲಸ ಎಂದಿದ್ದರು. ಒಂದೇ ಕಲ್ಲಿನಲ್ಲಿ ಎರಡೆರೆಡು ಹಕ್ಕಿಗಳನ್ನು ಲಿಂಗದೇವರು ಹೊಡೆದಿದ್ದರು.ರಂಗಾಯಣಕ್ಕೆ ಬೇಕಿರುವುದು ಮೂರು ಎಕರೆ ಜಾಗ. ಸುವರ್ಣ ಸಾಂಸ್ಕೃತಿಕ ಭವನದ ಪಕ್ಕದಲ್ಲಿರುವ ಖಾಲಿ ಜಾಗವನ್ನು ಸರ್ಕಾರ ನೀಡಿದರೆ ಒಳ್ಳೆಯದು ಎಂದು ಮನವಿ ಮಾಡಿದ್ದ ಅವರು, ಶಿವಮೊಗ್ಗ ರಂಗಾಯಣವನ್ನು ಮಾದರಿ ಮಾಡುವ ಕನಸು ಕಂಡಿದ್ದರು. ರಂಗಾಯಣದ ನಾಟಕೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು.ಸರ್ಕಾರ, ಶಿವಮೊಗ್ಗದಲ್ಲಿ ರಂಗಾಯಣ ಸ್ಥಾಪನೆಗೆ ಈ ವರ್ಷದ ಬಜೆಟ್‌ನಲ್ಲಿ 35 ಲಕ್ಷ ರೂ ಅನುದಾನ ನೀಡಿದ್ದು, ಇನ್ನೆರಡು ತಿಂಗಳಲ್ಲಿ ಅದರ ಶಿಲಾನ್ಯಾಸಕ್ಕೆ ಸಿದ್ಧತೆ ನಡೆದಿದ್ದವು. ಈ ಹಂತದಲ್ಲೇ ಅವರ ಸಾವು ಶಿವಮೊಗ್ಗದ ಜನರಿಗೆ ಬರಸಿಡಿಲಿನಂತೆ ಎರಗಿದೆ.ರಂಗಾಯಣದ ನಿರ್ದೇಶಕರಾದ ಮೇಲೆ ತಮ್ಮ ಬರವಣಿಗೆ ನಿಂತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದ ಅವರು, ಸಮಾಜ ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ ಏನಾದರೂ ಹೇಳುವುದಕ್ಕೆ, ಬರೆಯುವುದಕ್ಕೆ ಮನಸ್ಸು ತುಡಿಯುತ್ತಿದೆ. ಆದರೆ, ಸರ್ಕಾರಿ ವ್ಯವಸ್ಥೆ ನನ್ನನ್ನು ಕಟ್ಟಿಹಾಕಿದೆ ಎಂದು ಅವರು ಖಾಸಗಿಯಾಗಿ ಗೊಣಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.