ಸೋಮವಾರ, ಏಪ್ರಿಲ್ 19, 2021
25 °C

ನಾನು ಮತ್ತು ಪ್ರಧಾನ ಮಂತ್ರಿ

ಗಿರೀಶ ಕಾರ್ನಾಡ Updated:

ಅಕ್ಷರ ಗಾತ್ರ : | |

ಪಿ.ವಿ. ನರಸಿಂಹರಾಯರು ಪ್ರಧಾನ ಮಂತ್ರಿಗಳಾಗುವ ಮೊದಲೇ ನಾನು ಅವರ ಪ್ರತಿಭೆಯ ಬಗ್ಗೆ, ಬುದ್ಧಿವಂತಿಕೆಯ ಬಗ್ಗೆ, ವಿದ್ವತ್ತೆಯ ಬಗ್ಗೆ ಸಾಕಷ್ಟು ಕೇಳಿದ್ದೆ - ವಿಶೇಷತಃ ಮಿತ್ರರಾದ ವೈಎನ್ಕೆಯಿಂದ.

 

ಆದರೆ ಅವರ ಪ್ರಭಾವಲಯದಾಚೆಗೊಂದು ಛಾಯಾವಲಯ ಕೂಡ ಇದೆ ಎಂಬ ಮಾತು ಕೂಡ ಅವರು ವಿ.ಪಿ. ಸಿಂಗರ ವಿರುದ್ಧ ಸೇಂಟ್ ಕಿಟ್ಸ್ ಪ್ರಕರಣವನ್ನು ಹುಟ್ಟಿಸುವುದರಲ್ಲಿ ತೊಡಗಿಸಿದ ಜಾಣತನದಿಂದಲೇ ಸಾರ್ವಜನಿಕರಿಗೆ ಪರಿಚಿತವಾಗಿತ್ತು.

 

ಅವರ ಅಸಾಮಾನ್ಯ ಪ್ರತ್ಯುತ್ಪನ್ನಮತಿಯ ಹಿನ್ನೆಲೆಯಲ್ಲೇ ಅಸಾಧಾರಣ ಕುಹಕವೂ ಅಡಗಿರುವುದು ದಿಲ್ಲಿಯ ರಾಜಕಾರಣದಲ್ಲಿ ಆಸಕ್ತಿ ಇದ್ದ ಪತ್ರಕರ್ತರೆಲ್ಲ ಬಲ್ಲ ಅಂಶವಾಗಿತ್ತು.ಆದರೆ ವೈಎನ್ಕೆ ಭವಿಷ್ಯ ನುಡಿದಂತೆ ನರಸಿಂಹರಾವ್ ಪ್ರಧಾನಿಗಳಾದ ಗಳಿಗೆಯಿಂದ ದೇಶದ ಆರ್ಥಿಕ ರಚನೆಯನ್ನೇ ಬದಲಾಯಿಸಲಾರಂಭಿಸಿದರು. ಭಾರತ ಸ್ವತಂತ್ರವಾದಾಗಿಂದ ನಮ್ಮ ಸರ್ವಮಾನ್ಯ ಸಾಮಾಜಿಕ ದರ್ಶನವಾಗಿರುವ ಸಮಾಜವಾದವನ್ನು ಹೊರ ತಳ್ಳಿ ನವ್ಯ ಉದಾರೀಕರಣವನ್ನು ಬರಮಾಡಿಕೊಂಡ ಇತಿಹಾಸ ಪುರುಷರಾದರು.

 

ಇದರಿಂದ ನಮ್ಮ ಬಡದೇಶ ಗಳಿಸಿದ್ದೆಷ್ಟು ಕಳೆದುಕೊಂಡಿದ್ದೆಷ್ಟು ಎಂಬ ಅಂಶ ವಿವಾದಾಸ್ಪದವಾಗಿದ್ದರೂ ಅದರಿಂದ ನಮ್ಮ ಆರ್ಥಿಕ ಸ್ವರೂಪವೇ ಬದಲಾಯಿತೆಂಬುದನ್ನು ಒಪ್ಪಿಕೊಳ್ಳಲೇಬೇಕು.ಇಂಥ ಕ್ರಾಂತಿಕಾರಕ ಬದಲಾವಣೆಯನ್ನು ಸಾಧಿಸುವುದರ ಜೊತೆಗೇ ನರಸಿಂಹರಾವ್ ದಿಲ್ಲಿಯ ದಗಲ್‌ಬಾಜಿ ರಾಜಕೀಯದಲ್ಲಿ ಕೂಡ ಪ್ರಧಾನಿ ಪದದಲ್ಲಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರು.ನಾನು 1988ರಲ್ಲಿ Indo-us sub commission ಎಂಬ ಭಾರತ - ಅಮೇರಿಕಾ ಸಾಂಸ್ಕೃತಿಕ ವಿನಿಮಯ ಸಂಸ್ಥೆಯ ಮಾಧ್ಯಮ ಸಮಿತಿಯ ಅಧ್ಯಕ್ಷನಾಗಿದ್ದೆ. ಆ ಸಂಸ್ಥೆಯ ಅಮೇರಿಕನ್ ಸದಸ್ಯರು ದಿಲ್ಲಿಗೆ ಬಂದಾಗ ನರಸಿಂಹರಾಯರನ್ನು ಕಾಣಬಯಸಿದರು. ನಮ್ಮ ಪ್ರಧಾನಿಗಳು ಅವರೊಡನೆ ಚಹಾಪಾನ ಮಾಡುತ್ತ ಅವರೊಡನೆ ಸುಮಾರು ಒಂದು ಗಂಟೆ ನಿರರ್ಗಳವಾಗಿ ಹರಟೆ ನಡೆಸಿದರು.ಅದರಿಂದ ಪ್ರಭಾವಿತರಾದ ಅಮೇರಿಕದ ಗಣ್ಯರು, `ಅಯ್ಯೋ, ನಿಮ್ಮ ಪ್ರಧಾನಿ ಎಂಥ ಪ್ರಜ್ಞಾವಂತ! ಎಷ್ಟೆಲ್ಲ ಓದಿ ತಿಳಿದುಕೊಂಡಿದ್ದಾರೆ. ಬೌದ್ಧಿಕವಾಗಿ ತೀಕ್ಷ್ಣರಾಗಿದ್ದಾರೆ. ನಮ್ಮ ಅಧ್ಯಕ್ಷರಿಂದ ಇಂಥ ಪ್ರತಿಭೆಯನ್ನು ಅಪೇಕ್ಷಿಸುವದು ಅಸಾಧ್ಯ~ ಎಂದು ಅವರನ್ನು ಬಾಯ್ತುಂಬ ಕೊಂಡಾಡಿದರು.

 

ಇದಕ್ಕೆ ವಿರುದ್ಧವಾಗಿ ಸಬ್ ಕಮಿಶನ್‌ನಿನ ಅಮೇರಿಕನ್ ಕಾರ್ಯದರ್ಶಿಯಾದ ಟೆಡ್ ಟ್ಯಾನೆನ್, ಸರಕಾರೀ ಸೇವೆಯಲ್ಲಿ ಅನುಭವವಿದ್ದ ವ್ಯಕ್ತಿ, ನನ್ನನ್ನು ಬದಿಗೆಳೆದುಕೊಂಡು ಹೋಗಿ, `ನಿಮ್ಮ ಪ್ರಧಾನಿಗೆ ಬೇರೆ ಉದ್ಯೋಗವೇ ಇಲ್ಲವೆ? ಅಪರಿಚಿತರಾದ ಅತಿಥಿಗಳೊಡನೆ ಹಾಸ್ಯವಿನೋದದಲ್ಲಿ ಒಂದು ಇಡಿಯ ಗಂಟೆ ವ್ಯಯ ಮಾಡುತ್ತಾರೆ ಎಂದರೇನು? ಇವರು ರಾಜ್ಯಭಾರ ಮಾಡುವದಾದರೂ ಯಾವಾಗ?~ ಎಂದು ಕರುಬಿದ.ಆದರೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಯಶಸ್ವಿಯಾದ ಪ್ರಧಾನಿಗಳಲ್ಲೊಬ್ಬರೆಂದು ಅಜರಾಮರರಾಗಬೇಕಾಗಿದ್ದ ನರಸಿಂಹರಾಯರ ಆಡಳಿತದ ಉಜ್ವಲ ಪ್ರಭಾವಳಿಗೆ ಗ್ರಹಣವೆಸಗಿದ್ದು ಬಾಬರೀ ಮಸೀದೆಯ ಹಗರಣ.ಹಿಂದುತ್ವವಾದಿಗಳು ಕೆಡವೇ ಕೆಡವುತ್ತೇವೆ ಎಂದು ಜಾಹೀರಾಗಿ ಪಣತೊಟ್ಟ ಈ ಮಸೀದೆಯನ್ನು ಅವರ ವಿಧ್ವಂಸಕ ಯೋಜನೆಯಿಂದ ಬದುಕಿಸುವದು ಈ ವ್ಯಕ್ತಿಗೆ ಸಾಧ್ಯವಾಗಲಿಲ್ಲ. ಮಸೀದೆಯನ್ನು ಮಣ್ಣುಗೂಡಿಸಿಯೇ ತೀರುತ್ತೇವೆ ಎಂದು ಅದ್ವಾನಿ, ಉಮಾ ಭಾರತಿ ಮೊದಲಾದವರು ಮೂರು - ನಾಲ್ಕು ವರ್ಷಗಳಿಂದ ಘೋಷಿಸುತ್ತಲೇ ಬಂದಿದ್ದರಷ್ಟೇ ಅಲ್ಲ,ಅದ್ವಾನಿ ಪ್ರತಿ ವರ್ಷ ತಮ್ಮ `ಟೊಯೋಟಾ ರಾಮರಥ~ದಲ್ಲಿ ಅಯೋಧ್ಯೆಯ ತೀರ್ಥಯಾತ್ರೆ ಮಾಡಿ, ದಾರಿಯುದ್ದಕ್ಕೂ ನಿರಪರಾಧಿ ಮುಸಲ್ಮಾನರ ರಕ್ತದ ಹೊಳೆ ಹರಿಸಿದ್ದರು. ಈ ಪ್ರಕ್ಷೋಭಕ ರಾಜಕಾರಣದಿಂದ ಉತ್ತೇಜಿತರಾಗಿ ಲಕ್ಷಾವಧಿ ಜನ ಪ್ರತಿ ವರ್ಷ `ರಾಮಜನ್ಮ ಭೂಮಿ~ಗೆ ಮುಕುರುತ್ತಿದ್ದರು.ಮಸೀದೆಗೆ ಹಾನಿ ತಟ್ಟದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸರಕಾರ ಅಭಿವಚನವಿತ್ತಿತ್ತು. ಅದನ್ನು ರಕ್ಷಿಸುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣಸಿಂಗ್ ಎದೆ ತಟ್ಟಿ ಸಾರಿದ್ದರು. ಮಸೀದೆಯ ರಕ್ಷಣೆಗೆ ಬೇಕಾಗಬಹುದು ಎಂದು ನಮ್ಮ ಸೈನ್ಯ ಸಿದ್ಧವಾಗಿ ನಿಂತಿತ್ತು. ಹೀಗಿದ್ದೂ ಡಿಸೆಂಬರ್ ಆರರಂದು ಮಸೀದೆ ಉಢ್ವಸ್ತವಾಯಿತು.

 

ಇದನ್ನೆಲ್ಲ ಸ್ವಗೃಹದಲ್ಲಿ ಟೆಲಿವಿಷನ್ ಸೆಟ್ಟಿನೆದುರಿಗೆ ಕೂತು ವೀಕ್ಷಿಸುತ್ತಿದ್ದ ನರಸಿಂಹರಾವ್ ಮಸೀದೆಯ ಒಂದೊಂದು ಇಟ್ಟಿಗೆಯೂ ಉರುಳುತ್ತಿದ್ದಂತೆ, `ಹಮಸೆ ಧೋಖಾ ಹೋಗಯಾ~ (ನಾವು ಮೋಸ ಹೋದೆವು!) ಎಂದು ತಲೆ ಜಜ್ಜಿಕೊಳ್ಳುತ್ತ ಮನೆ ತುಂಬ ಓಡಾಡಿದರಂತೆ. ಆ ಕ್ಷಣಕ್ಕೆ ಭಾರತದ ಸೆಕ್ಯುಲರ್ ಇತಿಹಾಸಕ್ಕೆ ಮತ್ತೆ ಎಂದೂ ಪೂರ್ಣಗುಣವಾಗದಂಥ ಆಘಾತವಾಯಿತೆಂಬುದು ನಿಸ್ಸಂದೇಹ.ಇಡಿಯ ಜಗತ್ತು ನಮ್ಮ ರಾಷ್ಟ್ರದ ನೈತಿಕ ಪತನವನ್ನು ಕಂಡು ದಿಗ್ಭ್ರಾಂತವಾಯಿತು. `ಇಂಥ ದುರ್ಧರ ಪ್ರಸಂಗದಲ್ಲಿ ನಿರ್ವೀರ್ಯವಾಗಿ ಕುಳಿತ ಪ್ರಧಾನಿ~ ಎಂದೇ ನರಸಿಂಹರಾಯರ ಚಿತ್ರ ಜಗತ್ತಿನ ಕಣ್ಣಲ್ಲಿ ಪರಿವರ್ತನಗೊಂಡಿತು.

ಇದಾದ ಒಂದು ತಿಂಗಳ ಬಳಿಕ ಅಂದರೆ 1994ರ ಜನವರಿಯಲ್ಲಿ ದಿಲ್ಲಿಯಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಪ್ರತಿ ವರ್ಷದಂತೆ ನಡೆದಿತ್ತು.ಅದರಲ್ಲಿ ಭಾಗವಹಿಸಲು ನನ್ನ ಚಿತ್ರ `ಚೆಲುವಿ~ಗೆ ಆಮಂತ್ರಣ ಬಂದಿದ್ದರಿಂದ ನಾನು ಚಿತ್ರದ ನಾಯಕಿಯಾದ ಸೋನಾಲಿ ಕುಲಕರ್ಣಿ, ಅವಳ ಅಣ್ಣ ಮಕರಂದ ಇವರೊಡನೆ ಅಶೋಕ ಹೋಟಲ್ಲಿನಲ್ಲಿ ತಂಗಿದ್ದೆ. ಆಗ ಅಲ್ಲಿ ಕಮಲಹಾಸನ್, ಶಬನಾ ಆಝ್ಮಿ, ಜಾವೇದ ಅಖ್ತರ್ ಮೊದಲಾದ ಚಿತ್ರರಂಗದ ಮಾನ್ಯ ಕಲಾವಿದರೂ ಬಂದು ಇಳಿದುಕೊಂಡಿದ್ದರು.ಇದೇ ಹೊತ್ತಿಗೆ ಬಾಬರೀ ಮಸೀದೆಯ ಹೆಸರಿನಲ್ಲಾದ ಹತ್ಯಾಕಾಂಡಕ್ಕೆ ಪ್ರತಿಕ್ರಿಯೆಯಾಗಿ ಮುಂಬೈಯಲ್ಲಿ ಮುಸಲಮಾನರು ದಂಗೆ ಎಬ್ಬಿಸಲೆತ್ನಿಸಿದರು. ಆದರೆ ಇಂಥ ಒಂದು ಪ್ರಯತ್ನವಾಗುತ್ತದೆ ಎಂಬುದರ ಸುಳುಹು ಮುಂಬೈ ಪೋಲೀಸರಿಗೆ ಮೊದಲೇ ಹತ್ತಿದ್ದರಿಂದ ಅವರು ಮುಸಲ್ಮಾನರು ತಲೆಯೆತ್ತುವದನ್ನೇ ಕಾಯ್ದು ಕುಳಿತು ದಂಗೆ ಆರಂಭವಾದ ಕ್ಷಣಕ್ಕೆ ಮುಸಲ್ಮಾನರ ಮೇಲೆರಗಿ ಹತ್ಯಾಕಾಂಡವನ್ನಾರಂಭಿಸಿದರು.ಮುಸ್ಲಿಮ ಬಡಾವಣೆಗಳ ಮೇಲೆ ಹಲ್ಲೆ, ಮುಸ್ಲಿಮರ ಮನೆಗಳಿಗೆ ಬೆಂಕಿ, ಹೆಂಗಸರು ಮಕ್ಕಳ ಮೇಲೆ ಅತ್ಯಾಚಾರ, ಕಾರು ನಿಲ್ಲಿಸಿ ಮುಸಲ್ಮಾನ ಹೆಸರಿದ್ದ ಚಾಲಕರ ಕೊಲೆ, ಗಡ್ಡವಿದ್ದವರ ಖೂನಿ, ಎಲ್ಲ ಬಹಿರಂಗವಾಗಿ ಸರಕಾರದ ಬೆಂಬಲದೊಡನೆ ನಡೆಯಿತು.ಸುಪ್ರಸಿದ್ಧ ಮರಾಠಿ ರಂಗ ಅಭಿನೇತ್ರಿ ಫೈಯ್ಾ ಆಮೇಲೆ ನನಗೆ ಹೇಳಿದ್ದು: `ಏನೆಂದು ಹೇಳಲಿ, ಗಿರೀಶ್? ಶಿವಸೇನೆಯ ಗುಂಡರು ಬಡ ಮುಸಲ್ಮಾನರ ಮನೆ - ಗುಡಿಸಲುಗಳ ಮೇಲೆ ಬೆಂಕಿ ತೂರುತ್ತಿದ್ದರು.

 

ಮನೆಯೊಳಗೆ ಅವಿತುಕೊಂಡಿದ್ದ ಜನರು ಮನೆ ಬಿಟ್ಟು ಹೊರಗೆ ಓಡಿ ಬಂದೊಡನೆ ಪೊಲೀಸರು “ಪುಂಡರು, ದಂಗೆಖೋರರು” ಎಂದು ಅವರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರು. ಆ ಹಿಂಸೆ ನೋಡಲಾಗದೆ ನಾನು ಮುಂಬೈ ಬಿಟ್ಟು ಪುಣೆಗೆ ಓಡಿ ಹೋದೆ. ಕೆಲ ತಿಂಗಳು ಹಾಸಿಗೆ ಹಿಡಿದು ಬಿಟ್ಟೆ~.ಈ ರಕ್ತಪಾತ ಮಹಾರಾಷ್ಟ್ರ ಸರಕಾರದ ಬೆಂಬಲದಿಂದಲೇ ನಡೆದಿತ್ತಲ್ಲದೆ ಅದನ್ನು ನಿಲ್ಲಿಸಲು ಕೇಂದ್ರ ಸರಕಾರದಿಂದ ಯಾವ ಪ್ರಯತ್ನವೂ ಆಗುತ್ತಿದ್ದ ಹಾಗೆ ಕಾಣಬರಲಿಲ್ಲವಾದ್ದರಿಂದ ದಿಲ್ಲಿ ಚಿತ್ರೋತ್ಸವಕ್ಕಾಗಿ ಬಂದ ಕಲಾಕಾರರ ತಂಡವೊಂದು ತುರ್ತಾಗಿ ನರಸಿಂಹರಾವ್ ಅವರನ್ನು ಕಾಣಲು appointment ಕೇಳಿಕೊಂಡಿತು. ಶಬಾನಾ, ಜಾವೇದ್, ಕಮಲಹಾಸನ್, ನಾನು ಹಾಗೂ ಇತರ ಕೆಲವರು ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಪ್ರಧಾನಿಯನ್ನು ಭೆಟ್ಟಿಯಾದೆವು.ನರಸಿಂಹರಾವ್ ಅವರನ್ನು ಕಂಡೊಡನೆ ಜಾವೇದ್ ಅಖ್ತರ್ ಮುಂಬೈಯ ರಕ್ತಪಾತ ನಿಲ್ಲಿಸಲು ಕೇಂದ್ರ ಸರಕಾರ ಯಾಕೆ ಯಾವುದೇ ಕ್ರಮವನ್ನು ಕೈಕೊಳ್ಳುತ್ತಿರುವಂತೆ ಕಾಣುವುದಿಲ್ಲ ಎಂದು ಪ್ರಶ್ನಿಸಿದ.`ಹಾಗೆನ್ನಬೇಡಿ~, ಎಂದರು ಪ್ರಧಾನಿ. `ನಾನು ಮುಂಬೈಯ ಮುಖ್ಯಮಂತ್ರಿಗಳೊಡನೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ಎಲ್ಲ ಪ್ರಯತ್ನ ನಡೆಸಿದ್ದಾರೆ~.`ಆದರೆ ಹತ್ಯಾಕಾಂಡವೇನೂ ಕಡಿಮೆಯಾಗುವ ಲಕ್ಷಣಗಳಿಲ್ಲವಲ್ಲ. ತಾವು ವೈಯಕ್ತಿಕವಾಗಿ ಮುಂಬೈಗೆ ಹೋದರೆ ತಮ್ಮ ಆಗಮನವೇ ಪರಿಸ್ಥಿತಿಯನ್ನು ಹಿಡಿತದಲ್ಲಿ ತರುವುದಕ್ಕೆ ಸಹಕಾರಿಯಾಗಬಹುದಲ್ಲವೇ?~ಆಗ ನರಸಿಂಹರಾವ್, `ಅದು ನಿಜ. ನಾಳೆ ಮನೆಯಲ್ಲಿ ಸಂಕ್ರಾಂತಿಯ ಪೂಜೆಯಿದೆ. ಅದನ್ನು ಮುಗಿಸಿ ಹೋಗತೇನೆ!~ ಎಂದರು.ನಾವೆಲ್ಲ ದಂಗುಬಡಿದು ನಿಂತೆವು. ಜಾವೇದ್ `ಸರ್, ಅಲ್ಲಿ ಜನರ ಕೊಲೆಯಾಗುತ್ತಿದೆ. ರಕ್ತದ ಹೊಳೆ ಹರೀತಾ ಇದೆ. ಇಂಥ ಸಂದರ್ಭದಲ್ಲಿ ತಾವು ಸಂಕ್ರಾಂತಿಯ ಪೂಜೆಯ ಬಗ್ಗೆ ಚಿಂತೆ ಮಾಡತಿದ್ದೀರಾ?~ ಎಂದು ಒರಟಾಗಿಯೇ ಕೇಳಿದ.ತಾನೇನು ಎಂದುಬಿಟ್ಟೆ ಎಂಬುದರ ಎಚ್ಚರವಾಗಿ, ನರಸಿಂಹರಾವ್, ಒಮ್ಮೆಲೆ, `ಇಲ್ಲ, ಇಲ್ಲ, ನನಗೆ ಇಂಗ್ಲಿಷ್ ಸರಿಯಾಗಿ ಮಾತನಾಡಲಿಕ್ಕೆ ಬರೋದಿಲ್ಲ. ಏನೋ ಹೇಳಲಿಕ್ಕೆ ಹೋಗಿ ಏನೋ ಅಂದುಬಿಟ್ಟೆ~ ಎಂದೇನೋ ತೊದಲಿದರು.ಮಾತು ಮುಗಿಸಿ ಹೊರಗೆ ಕಾಲಿಡುತ್ತಿದ್ದಾಗ ಕಮಲಹಾಸನ್ ನನಗೆ, `ಈತ ನಮ್ಮ ಪ್ರಧಾನಿ ಎಂದು ಹೇಗೆ ಒಪ್ಪಿಕೊಳ್ಳೋದು? ಅವನು ಹಾಗೆಂದಾಗ ಭೂಮಿತಾಯಿ ಯಾಕೆ ಬಾಯ್ತೆರೆದು ನನ್ನನ್ನು ನುಂಗಿ ಬಿಡೋದಿಲ್ಲ ಎಂಬ ತಳಮಳ ಉಂಟಾಯಿತು ನನಗೆ~ ಎಂದು ಮರುಗಿದ.ದಿಲ್ಲಿಯ ಚಿತ್ರೋತ್ಸವ ಮುಗಿಯುತ್ತ ಬಂದಂತೆ ಹಿಂಸೆಯೂ ಹೊರಪಾಗಿ ಇಳಿಯಿತು. ಆದರೆ ಆ ರಕ್ತಪಾತದೊಡನೆ ಭಾರತೀಯ ನಾಗರಿಕತೆಯ ಶತಮಾನಗಳ ಸಹಿಷ್ಣುತೆಯ, ಅಹಿಂಸಾವಾದದ ಆದರ್ಶ ಕೂಡ ಗಟಾರಿನ ಪಾಲಾಯಿತು.ಇದಾದ ಎರಡು ವರ್ಷಗಳ ತರುವಾಯ ನನ್ನ `ಒಂದಾನೊಂದು ಕಾಲದಲ್ಲಿ~ ಹಾಗೂ `ತಬ್ಬಲಿಯು ನೀನಾದೆ ಮಗನೆ~ ಚಲನಚಿತ್ರಗಳ ಛಾಯಾಗ್ರಾಹಕನಾಗಿದ್ದ ಏ.ಕೆ. ಬೀರ್ ನನಗೆ ಹೇಳಿದ: `ಪ್ರಧಾನಿ ನರಸಿಂಹರಾವ್ ನಿನ್ನನ್ನು ಕಾಣಬೇಕಂತೆ~.ನನಗೆ ಅವರನ್ನು ಭೆಟ್ಟಿಯಾಗುವುದರಲ್ಲಿ ಏನೇನೂ ಆಸಕ್ತಿ ಇರಲಿಲ್ಲವಾದ್ದರಿಂದ ಹೋಗದೆ ಹಿಂದೇಟು ಹಾಕಿದೆ. ಕೊನೆಗೆ ಮತ್ತೆ ಮತ್ತೆ ಕರೆ ಬಂದಾಗ ಹೋಗಲೇ ಬೇಕಾಯಿತು.ನರಸಿಂಹರಾಯರು ಎಂದಿನಂತೆ ಪಂಚೆಯುಟ್ಟು, ಬಿಳಿಯ ಜುಬ್ಬಾ ತೊಟ್ಟು, ಹೆಗಲಮೇಲೆ ತ್ರಿಕೋಣಾಕಾರವಾಗಿ ಶಲ್ಲೆಯನ್ನು ಧರಿಸಿ ಬಂದರು. ಅಚ್ಚುಕಟ್ಟಾಗಿ ಕುಳಿತುಕೊಂಡರು.

`ಆನಂದ ಭೈರವಿ~ ಚಿತ್ರದಲ್ಲಿ ನಿಮ್ಮ ಅಭಿನಯ ಅವಿಸ್ಮರಣೀಯವಾದದ್ದು. ಅಷ್ಟು ಚೆನ್ನಾಗಿ ತೆಲುಗು ಮಾತನಾಡಲಿಕ್ಕೆ ಎಲ್ಲಿ ಕಲಿತಿರಿ?~ ಎಂದು ಕೇಳಿದರು.ನಾನು `ನನಗೆ ತೆಲುಗು ಬರುವುದಿಲ್ಲ~ ಎಂದೆ. `ಸಂವಾದ ಉರು ಹಾಕಿ ಸಹನಿರ್ದೇಶಕರು ಸೂಚಿಸಿದಂತೆ ಒಪ್ಪಿಸಿದೆ. ನೀವು ನನ್ನ ಬಾಯಿಯಿಂದ ಕೇಳಿದ್ದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಧ್ವನಿ. ಅವರ ಆಳವಾದ ಕಂಠ, ಮಾತನಾಡುವ ಠೀವಿ ಪಾತ್ರಕ್ಕೆ ಶೋಭೆ ಕೊಟ್ಟಿತು ಹೊರತು ಆ ಶ್ರೇಯಸ್ಸು ನನಗಲ್ಲ~ ಎಂದೆ.ಈ ಸಂಭಾಷಣೆ ಕೂಡ ಹೊಸದಾಗಿರಲಿಲ್ಲ. ಈ ಮೊದಲೇ ಎರಡು -ಮೂರು ಸರ್ತಿ ನಾನು ಅವರನ್ನು ಭೆಟ್ಟಿಯಾದಾಗ ಇದೇ ಮಾತುಕತೆ ಪ್ರತಿಸಲ ಹೊಸದಾಗಿ ಸ್ಫುರಿತವಾಗಿದೆಯೇನೋ ಎಂಬಂತೆ ನಮ್ಮ ಮುಲಾಖತ್ತನ್ನು ಆರಂಭಿಸುತ್ತಿತ್ತು.ಆ ಮೇಲೆ ಹುಬ್ಬಳ್ಳಿಯ ಈದ್‌ಗಾಹ್‌ದತ್ತ ಮಾತು ಹೊರಳಿತು. ಅಲ್ಲಿ 1994 ಆಗಸ್ಟ್ 15ರಂದು ಆರ್.ಎಸ್.ಎಸ್‌ನವರು ನಡೆಸಿದ ಧ್ವಜಾರೋಹಣೆಯ ಕುಚೋದ್ಯವನ್ನು ನಾನು ಒಂದು ಪತ್ರಿಕಾಗೋಷ್ಠಿಯನ್ನು ನಡೆಯಿಸಿ ಖಂಡಿಸಿದ್ದೆ.`ನಿಮ್ಮ ಹೇಳಿಕೆಯನ್ನು ನನಗೆ ಅಂದೇ ಪಿ.ಚಿದಂಬರಂ ತಂದು ಕೊಟ್ಟರು. ತುಂಬ ಮನೋಜ್ಞವಾಗಿತ್ತು~ ಎಂದೆಲ್ಲ ಮುನ್ನುಡಿ ಹೇಳಿ ಮುಖ್ಯ ಪ್ರಸ್ತಾಪಕ್ಕೆ ಕೈ ಹಾಕಿದರು.

`ದೇಶದಲ್ಲಿ ಹಿಂದುತ್ವವಾದಿಗಳ ಬಲ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಾಬರಿ ಮಸೀದೆಯ ವಿಷಯದಲ್ಲಿ ತಾವು ಮಾಡಿದ್ದೇ ಸರಿ ಎಂದು ವಾದಿಸಿ, ನಮ್ಮ ರಾಜಕೀಯ ವಾತಾವರಣವನ್ನೇ ಕಲುಷಿತಗೊಳಿಸುವ ಪ್ರಯತ್ನ ನಡೆಯುವದು ಖಂಡಿತ.ಧರ್ಮಾತೀತ ಭಾರತದಲ್ಲಿ ನಂಬಿಗೆಯಿದ್ದವರೆಲ್ಲ ಒಂದುಗೂಡಿ ಈ ದುಷ್ಟ ಪ್ರವೃತ್ತಿಯನ್ನು ಎದುರಿಸಬೇಕಾಗಿದೆ~ ಇತ್ಯಾದಿ ಎಲ್ಲ ಉಪೋದ್ಘಾತ ನೀಡಿ, `ಈ ಚುನಾವಣೆಯಲ್ಲಿ ಕಾಂಗ್ರೆಸ್ಸು ಗೆದ್ದು ಬಂದರೆ ಮಾತ್ರ ಭಾರತ ಧರ್ಮನಿರಪೇಕ್ಷ ರಾಷ್ಟ್ರವಾಗಿ ಬದುಕಿ ಉಳಿಯುವದು ಸಾಧ್ಯ. ಬಿಜೆಪಿ ಗೆದ್ದರೆ ನಮ್ಮ ಸಂವಿಧಾನಾತ್ಮಕ ಲೋಕಶಾಹಿಯೇ ನಾಶವಾಗುವದು ನಿಸ್ಸಂದೇಹ.ಇದನ್ನು ಜನರು ಮನಗಾಣುವಂತೆ ನೀವು ಕೆಲವು ಸಾಕ್ಷ್ಯಚಿತ್ರಗಳನ್ನು ಮಾಡಿ, ಕಾಂಗ್ರೆಸ್ಸಿನ ಉದಾತ್ತತೆಯನ್ನು ಜನರೆದುರಿಗೆ ಮಂಡಿಸಬೇಕು. ಇದಕ್ಕಾಗಿ ನಿಮಗೆಷ್ಟು ಬಜೆಟ್ ಬೇಕೋ ಅದನ್ನು ಪೂರೈಸುವ ವ್ಯವಸ್ಥೆಯಾಗಿದೆ. ನೀವು, ಶ್ಯಾಮ ಬೆನೆಗಲ್ ಅಂಥವರು ನಮಗೆ ಬೆಂಬಲ ನೀಡಿದರೆ ಮಾತ್ರ ಧರ್ಮಾತೀತ ದರ್ಶನದ ಉಳಿವು ಸಾಧ್ಯ~.ಅವರು ಉತ್ಕಟವಾಗಿ ಮಾತನಾಡುತ್ತಿದ್ದರು. ಒಳ್ಳೆಯ ಚತುರ ಮಾತುಗಾರ. ಸುಂದರವಾಗಿ ಇಂಗ್ಲೀಷ್ ಮಾತನಾಡುತ್ತಾರೆ. ಆಡುವ ವಿಚಾರಗಳೆಲ್ಲ ಆಳವಾದ ಯೋಚನೆಯಿಂದ ಹೊರಹೊಮ್ಮಿದಂತೆ, ಈ ಮೂರ್ಖತನ ಇಷ್ಟು ಅಪಾಯಕಾರಕವಾಗಿರದಿದ್ದರೆ ಹಾಸ್ಯ - ವಿನೋದದ ವಿಷಯವಾಗಬಹುದಿತ್ತು ಎಂದು ಸೂಚಿಸುವಂತೆ ಚೆಹರೆ ಬುದ್ಧಿವಂತ ಕಳೆಯಿಂದ, ನಗೆಯಿಂದ ಬೆಳಗುತ್ತದೆ.ನನಗೆ ಮಾತ್ರ ಅವರ ಮಾತುಗಳನ್ನು ಆಲಿಸುವದು ಕಷ್ಟಕರವಾಗುತ್ತಿತ್ತು. ಅವರ ಮಾತಿನ ಧಾರೆ ಹರಿಯುತ್ತಿದ್ದಂತೆ ನಾನು ಮೂಕನಾಗಿ ಕೂತೆ. ಆದರೆ ನನ್ನ ಮನಸ್ಸಿನೊಳಗಡೆ ಅವರನ್ನು ಏಕವಚನದಲ್ಲೇ ಸಂಬೋಧಿಸಿ ಪ್ರಶ್ನೆಗಳ ಸರಮಾಲೆಯೇಳುತ್ತಿತ್ತು.

`ಇಂದು ಹಿಂದುತ್ವವಾದ ದೇಶದುದ್ದಕ್ಕೂ ಉಲ್ಬಣಿಸಲಿಕ್ಕೆ ಕಾರಣ ನಿನ್ನ ಆ ನಿಷ್ಕ್ರಿಯತೆ.ರಾಜಕೀಯ ಲಾಭಕ್ಕಾಗಿ ಎಂಥ ಕುಕರ್ಮಕ್ಕೆ ಇಳಿಯಲಿಕ್ಕೂ ನಾವು ಹೇಸುವವರಲ್ಲ ಎಂದು ಹಿಂದುತ್ವವಾದಿಗಳು ಎರಡು ವರ್ಷಗಳಿಂದಲೂ ಸ್ಪಷ್ಟಪಡಿಸುತ್ತ ಬಂದಿದ್ದರು. ಆಗ ನೀನು ಏನೂ ಮಾಡದೆ ಬಧಿರನಾಗಿ ಕೂತುಕೊಂಡೆ.

 

ದಿಲ್ಲಿಯಲ್ಲಿ ಪ್ರಧಾನಿ ಪಟ್ಟದಲ್ಲಿ ಕುಳಿತಿದ್ದರೂ ಒಂದು ಬೆರಳೆತ್ತಲಿಲ್ಲ. ಈಗ ನಾನು ಈ ಕ್ಷೋಭೆಯಲ್ಲಿ ಕಾಂಗ್ರೆಸ್ಸಿನ ಪಾತ್ರವನ್ನು ಚಿತ್ರಿಸಿ ಸಾಕ್ಷ್ಯಚಿತ್ರವನ್ನು ನಿರ್ದೇಶಿಸುವದಾದರೆ, ಅದರಲ್ಲಿ ನಿನ್ನ ನಿಷ್ಕ್ರಿಯತೆಯನ್ನು ಹೇಗೆ ಚಿತ್ರಿಸಲಿ? ರಾಷ್ಟ್ರದ ಸರ್ವೋಚ್ಚ ಅಧಿಕಾರದಲ್ಲಿದ್ದೂ ನೀನು ಏನೂ ಮಾಡದೆ ಕುಳಿತಿದ್ದನ್ನು ಹೇಗೆ ಸಮರ್ಥಿಸಲಿ?~ನರಸಿಂಹರಾಯರಿಗೆ ನನ್ನ ಗಮನ ಅವರ ಮಾತಿನ ಮೇಲಿಲ್ಲ ಎಂಬುದು ಗೊತ್ತಾಗಿರಬೇಕು. ಅಥವಾ ನಾನು ನನ್ನ ಮನಸ್ಸಿನಲ್ಲೇ ಕೇಳುತ್ತಿದ್ದ ಪ್ರಶ್ನೆಗಳನ್ನು ನನ್ನ ಕಣ್ಣಲ್ಲಿ ಕಂಡಿರಬೇಕು.`ನೀನು ಇಲ್ಲವೆ ಶ್ಯಾಮ್ ಬೆನೆಗಲ್~ `ನಿಮ್ಮಂಥವರು~ ಎಂಬ ಜೋಡಿ ಹೆಸರನ್ನೇ ಮತ್ತೆ ಮತ್ತೆ ಉಲ್ಲೇಖಿಸುತ್ತ ಮುಂದರಿಸಿ, `ಧನಸಹಾಯದ ಬಗ್ಗೆ ಚಿಂತೆಯೇ ಬೇಡ. ಬೇಕಾದಷ್ಟು ಧನಸಹಾಯ ನೀಡುತ್ತೇವೆ. ನಿಮಗೆ ಬೇಕಾದ ಅನುಕೂಲಗಳನ್ನು ಒದಗಿಸುತ್ತೇವೆ~ ಎಂದು ಅಭಯವಿತ್ತರು.ಅವರು ಅಂತ್ಯದಲ್ಲಿ ಆಡಿದ ಮಾತಿನಿಂದ ಮಾತ್ರ ನಾನು ಸ್ತಂಭೀಭೂತನಾದೆ.

`ನಿಮಗೆ ಆ ಸಾಕ್ಷ್ಯಚಿತ್ರದ ನಿರ್ದೇಶಕ ಎಂದು ನಿಮ್ಮ ಹೆಸರನ್ನು ನಮೂದಿಸುವುದಿಲ್ಲವಾದರೆ ಬೇಡ. ನಮ್ಮದೇನೂ ಅಭ್ಯಂತರವಿಲ್ಲ. ಚಿತ್ರ ಸಮರ್ಥವಾಗಿರಲಿ. ಅದಕ್ಕೆ ನಿಮ್ಮ ಹೆಸರು ಹಾಕುವುದು ಬೇಡ ಎಂದೆನಿಸಿದರೆ ಚಿತ್ರ ಅನಾಮಿಕವಾಗೇ ಇರಲಿ~.ಈ ಮಾತು ಕೇಳಿದ ಗಳಿಗೆಗೆ ಇವನೆಂಥ ಲಜ್ಜೆಗೇಡಿ ವ್ಯಕ್ತಿ ಎಂಬ ಅರಿವು ಮತ್ತೆ ಉಕ್ಕಿಬಂತು. ತನ್ನದೆಂದು ಒಪ್ಪಿಕೊಳ್ಳಲು ನಾಚಿಕೆಯಾಗುವಂಥ ಚಿತ್ರವನ್ನು ದುಡ್ಡಿಗಾಗಿ ಮಾಡಿಕೊಡು, `ನಿನ್ನ ಸ್ವಾಭಿಮಾನವನ್ನು ಮಾರಿಕೋ~ ಎಂದು ಹೇಳುತ್ತಿದ್ದ ಆತನ ಸಿನಿಕತನವೇ ಅಸಹ್ಯವಾಗಿತ್ತು.ಅದೇ ಹೊತ್ತಿಗೆ ಭಾರತದ ಪ್ರಧಾನಿ ಒಬ್ಬ ಚಿತ್ರ ನಿರ್ದೇಶಕನೆದುರಿಗೆ ಈ ರೀತಿ ದೈನಾಸ ಬಿಟ್ಟುಕೊಂಡು ಕೈಚಾಚುವದೂ ಪ್ರಧಾನಿಯ ದುರ್ಧರ ಪರಿಸ್ಥಿತಿಗೆ ಸಾಕ್ಷಿಯೂ ಆಗಿತ್ತು.`ಆಗಲಿ. ನಿಮ್ಮ ಅಧಿಕಾರಿಗಳನ್ನು ಸಂಪರ್ಕಿಸಿ ವಿವರಗಳನ್ನು ಚರ್ಚಿಸುತ್ತೇನೆ~, ಎಂದೆ. ಎದ್ದೆ. ನಮಸ್ಕಾರ ಮಾಡಿ ಹೊರಬಿದ್ದೆ. ಮತ್ತೆ ತಿರುಗಿ ಹೋಗಲಿಲ್ಲ.ಒಂದೆಡೆಗೆ ಸಿಂಹಾಸನಕ್ಕಾಗಿ ಎಂಥ ದುಷ್ಟತನಕ್ಕೂ ಹೇಸದಂಥ ಅದ್ವಾನಿ - ಬಾಜಪೇಯಿಯಂಥ ಧೂರ್ತರು, ಇನ್ನೊಂದೆಡೆಗೆ ತನ್ನ ಸಿಂಹಾಸನದಲ್ಲೇ ನಡುಗುತ್ತ ಕುಳಿತ ಈ ನೀತಿಹೀನ - ಎಂಥ ಅಧಃಪತನಕ್ಕೆ ಇಳಿದಿದೆ ಭಾರತ ಎಂದು ವ್ಯಥೆಯಾಯಿತು.ಈ ಘಟನೆಯಾದ ನಾಲ್ಕು ವರ್ಷಗಳ ತರುವಾಯ ಅಂದರೆ 2000 ಇಸ್ವಿಯಲ್ಲಿ ನಾನು ಲಂಡನ್‌ದ ನೆಹರೂ ಸೆಂಟರ್ ಸಂಸ್ಥೆಗೆ ನಿರ್ದೇಶಕನಾಗಿ ನೇಮಕಗೊಂಡೆ. ನಾನು ಅಧಿಕಾರವನ್ನು ಸ್ವೀಕರಿಸಿದ ಕೆಲವೇ ಅವಧಿಯಲ್ಲಿ ಬಾಜಪೇಯಿ ಪ್ರಧಾನ ಮಂತ್ರಿಗಳಾದರು.ನರಸಿಂಹರಾಯರು ಅಷ್ಟರಲ್ಲಿ ಪದಚ್ಯುತರಾಗಿದ್ದರು. ಮಾತ್ರವಲ್ಲ, ಅವರ ಪಕ್ಷವೇ ಅವರ ಒಟ್ಟು ಕೊಡುಗೆಯನ್ನು ಅಲ್ಲಗಳೆದು ಅವರನ್ನು ಮೂಲೆಗೊತ್ತಿತ್ತು. ಅವರು ಆಗಾಗ್ಗೆ ಲಂಡನ್ನಿಗೆ ಬಂದಾಗ, ಸರಕಾರಿ ಸಭೆ - ಸಮಾರಂಭಗಳಲ್ಲಿ ಭೆಟ್ಟಿಯಾಗುತ್ತಿತ್ತು.

 

ದಿಲ್ಲಿಯಲ್ಲಿ ನಾನು ಅವರೆದುರಿಗೆ ಮೌನವಾಗಿ ಕೂತು ನನ್ನ ಮನಸ್ಸಿನಲ್ಲೇ ಕೇಳಿದ ಪ್ರಶ್ನೆಗಳನ್ನು ಬಹಿರಂಗವಾಗಿ ದೇಶದ ಮೂಲೆ ಮೂಲೆಗಳಲ್ಲಿ ಮತ್ತೆ ಮತ್ತೆ ಎದುರಿಸಿ ಅವರು ಹಣ್ಣಾಗಿರುವದು ಸ್ಪಷ್ಟವಾಗಿ ಕಾಣುತ್ತಿತ್ತು. ಹಿಂದಿನ ಆತ್ಮವಿಶ್ವಾಸ ಮುರುಟಿ ಹೋಗಿತ್ತು. ಕಣ್ಣೊಳಗಿನ ಹೊಳಪು ಕಂದಿತ್ತು.ಅವರು ಅಧಿಕಾರ ಸ್ಥಾನದಲ್ಲಿದ್ದಾಗ ಅಷ್ಟು ನಗ್ನವಾಗಿ ನನ್ನೆದುರಿಗೆ ತನ್ನ ದುಗುಡವನ್ನು ಬಯಲುಗೊಳಿಸಿದ್ದರ ಅವಮಾನ, ಬೇಕಾದಷ್ಟು ಹಣ ಕೊಡುತ್ತೇನೆ ಎಂದು ಆಮಿಷ ತೋರಿಸಿದಾಗಲೂ ನಾನು ಮರಳಿ ಅವರ ಹತ್ತಿರಕ್ಕೆ ಹಾಯದೆ ತೋರಿಸಿದ ತಿರಸ್ಕಾರ (ಈ ಅವಹೇಳನೆಯನ್ನು ಎಷ್ಟು ಜನರಿಂದ ಅನುಭವಿಸಿದ್ದರೋ ಏನೋ) ಅವರಿಗಿನ್ನೂ ನೆನಪಿದೆ ಎಂಬುದು ಅವರ ಕೃತಕ ಹಾಸ್ಯದಿಂದಲೇ ಗೊತ್ತಾಗುತ್ತಿತ್ತು.

 

ರಾಷ್ಟ್ರೀಯ ಪ್ರಮಾಣದ ರಂಗಭೂಮಿಯ ಮೇಲೆ ಪಾತ್ರವಹಿಸಿ, ಸೋತ ವ್ಯಕ್ತಿಗೆ ಆ ದುರಂತದಷ್ಟೇ ತೀಕ್ಷ್ಣವಾಗಿ ಇಂಥ ಚಿಟುಗುಮುಳ್ಳಾಡಿಸುವ ಕ್ಷುಲ್ಲಕ ಅವಮಾನಗಳೂ ತಿವಿಯುತ್ತಲೇ ಇರುತ್ತವೆ ಎಂಬುದು ಸ್ಪಷ್ಟವಾಗಿತ್ತು.ಅವರನ್ನು ನೋಡಿದಾಗ ಕನಿಕರ ಎನಿಸಿದರೂ, ಅವರ ಅಪರಾಧವನ್ನು ಮನ್ನಿಸುವುದು ಸಾಧ್ಯವಿರಲಿಲ್ಲ.(ಗಿರೀಶ ಕಾರ್ನಾಡರ `ನೋಡ ನೋಡತ ದಿನಮಾನ~ ಸ್ಮೃತಿಚಿತ್ರಗಳಲ್ಲೊಂದು ಅಧ್ಯಾಯ. ಈ ಗ್ರಂಥವನ್ನು ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಲಿದ್ದಾರೆ)`ಪ್ರಜಾವಾಣಿ ದೀಪಾವಳಿ ವಿಶೇಷಾಂಕ-2012~ರಲ್ಲಿ ಪ್ರಕಟಗೊಂಡಿರುವ ಗಿರೀಶ ಕಾರ್ನಾಡರ `ನಾನು ಮತ್ತು ಪ್ರಧಾನಮಂತ್ರಿ~ ಬರಹದಲ್ಲಿ ಕೆಲವು ಭಾಗಗಳು ಬಿಟ್ಟುಹೋಗಿವೆ. ಅದಕ್ಕಾಗಿ ಅವರ ಪೂರ್ಣ ಲೇಖನವನ್ನು ಇಲ್ಲಿ ಪ್ರಕಟ ಮಾಡುತ್ತಿದ್ದೇವೆ. ಈ ಪ್ರಮಾದಕ್ಕಾಗಿ ವಿಷಾದಿಸುತ್ತೇವೆ. 

 -ಸಂ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.