ಬುಧವಾರ, ಜೂಲೈ 8, 2020
28 °C

ನಾಮ ನಿರ್ದೇಶನಗೊಂಡವರ ಸದಸ್ಯತ್ವ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಸರ್ಕಾರ ಉರುಳಿಸಲು ಭಿನ್ನಮತೀಯ ಚಟುವಟಿಕೆ ನಡೆಸಿ ಶಾಸಕತ್ವ ಅನರ್ಹತೆಯ ತೂಗುಗತ್ತಿಗೆ ಸಿಲುಕಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಬಲ ಕುಗ್ಗಿಸಲು ಇದೀಗ ಸರ್ಕಾರ, ನಾಮ ನಿರ್ದೇಶನಗೊಂಡಿದ್ದ ಅವರ ಬೆಂಬಲಿಗರ ಸದಸ್ಯತ್ವ ರದ್ದುಗೊಳಿಸಿದೆ.ಶಿವರಾಜ ತಂಗಡಗಿ ನಾಮ ನಿರ್ದೇಶನ ಮಾಡಿದ್ದ ಗಂಗಾವತಿಯ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಮೂವರು ಮತ್ತು ಕಾರಟಗಿಯ ವಿಶೇಷ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಇಬ್ಬರ ಸದಸ್ಯತ್ವ ರದ್ದುಗೊಳಿಸಿ  ಹೊಸದಾಗಿ ಮತ್ತೆ ಏಳು ಜನರನ್ನು ನಾಮ ನಿರ್ದೇಶನ ಮಾಡಲಾಗಿದೆ.ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಗೊಂಡಿದ್ದರೂ ಕಳೆದ ಜಿಲ್ಲಾ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ ಮತ್ತು ಈಗಲೂ ತಂಗಡಗಿ ಅವರನ್ನು ಬೆಂಬಲಿಸುತ್ತಿರುವ ಸದಸ್ಯರು ಮಾತ್ರ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.ಕಾರಟಗಿ: ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಒಟ್ಟು 14 ಸದಸ್ಯ ಸ್ಥಾನಗಳಿಗೆ ತಂಗಡಗಿ 12 ಸ್ಥಾನಕ್ಕೆ  ಮಾತ್ರ ನಾಮ ನಿರ್ದೇಶನಕ್ಕೆ ಶಿಫಾರಸ್ಸು ಮಾಡಿದ್ದರು. ಈಗ ಬಾಗೋಡಿ ಸಿದ್ದನಗೌಡ ಬೂದಗುಂಪಾ ಮತ್ತು ಸಿದ್ದಾಪುರ ಮೊಮ್ಮದ್‌ರೌಫ್ ಸದಸ್ಯತ್ವ ಕಳೆದುಕೊಂಡಿದ್ದಾರೆ.ಬೂದಗುಂಪಾದ ಸಿದ್ದನಗೌಡ ಮಾಲಿ ಪಾಟೀಲ, ಸಿದ್ದಾಪುರದ ಮುಕ್ತಂಸಾಬ ಕಟಾಂಬ್ಲಿ, ಯರಡೋಣಿ ಶಿವಶರಣಗೌಡ ಮತ್ತು ಕಾರಟಗಿಯ ಯಂಕಣ್ಣ ಶ್ರೇಷ್ಠಿ ಅವರನ್ನು ಹೊಸದಾಗಿ ನಾಮ ನಿರ್ದೇಶನ ಮಾಡಿ ಸರ್ಕಾರದ ಪರವಾಗಿ ಸಹಕಾರ ಇಲಾಖೆ ಆದೇಶ ನೀಡಿದೆ.ಗಂಗಾವತಿ: ಹಾಗೆಯೆ ಗಂಗಾವತಿ ಎಪಿಎಂಸಿಯಲ್ಲಿ ತಂಗಡಗಿ ಬೆಂಬಲಿಗರಾದ ಶಶಿಧರಗೌಡ ಮಾಲಿಪಾಟೀಲ ಹೇರೂರು, ಬಸವರಾಜ ಭೋವಿ ಹುಲಿಹೈದರ ಮತ್ತು ಚಿಕ್ಕಜಂತಕಲ್ ಗ್ರಾಮದ ಭಾಗ್ಯಮ್ಮ ಅವರ ಸದಸ್ಯತ್ವ ರದ್ದಾಗಿದೆ.ಈ ಮೂರು ಸ್ಥಾನದ ಪೈಕಿ ಶ್ರೀರಾಮನಗರದ ಪಿ (ಚುಟ್ಟಾ) ವೆಂಕಟೇಶ್ವರರಾವ್ ಮತ್ತು ಇತ್ತೀಚೆಗೆ ನಡೆದ  ಚುನಾವಣೆಯಲ್ಲಿ ಹುಲಿಹೈದರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡ ನಾಗಪ್ಪ ಶಿರವಾರ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.