ಗುರುವಾರ , ಮಾರ್ಚ್ 30, 2023
24 °C

ನಾರಾಯಣ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾರಾಯಣ ನಾರಾಯಣ

ನಿರ್ದೇಶಕ ಎಸ್.ನಾರಾಯಣ್ ಮುಖದಲ್ಲಿ ನವೋಲ್ಲಾಸ. ಚೂರು ಬೇಸರ, ಕೊಂಚ ಸಿಟ್ಟು, ರವಷ್ಟು ಹತಾಶಾಭಾವ, ಹೆಚ್ಚೇ ಎನ್ನುವಷ್ಟು ಸಂತಸ- ಹೀಗೆ ಹರಿಯುತ್ತಾ ಹೋಯಿತು ಅವರ ಮಾತಿನ ಲಹರಿ. ಹೊಸತನ ಬಯಸುವ ಚಿತ್ರೋದ್ಯಮ ಮತ್ತು ಪ್ರೇಕ್ಷಕರಿಗಾಗಿ ಹೊಸ ಕಲಾವಿದರನ್ನು ಬಳಸಿ ‘ದುಷ್ಟ’ ಚಿತ್ರ ಮಾಡಲು ಹೊರಟಿರುವುದಾಗಿ ನಾರಾಯಣ್ ಹೇಳಿಕೊಂಡರು. ‘2009ರಲ್ಲಿ ತಮ್ಮ ನಿರ್ಮಾಣದ ಎರಡೂ ಚಿತ್ರಗಳು ವಿಫಲವಾವು. 2010ರಲ್ಲಿ ತಮಗೆ ಹೆಸರು ಮತ್ತು ಹಣ ತಂದುಕೊಟ್ಟ ‘ವೀರಪರಂಪರೆ’ಯ ಗೆಲುವಿನ ಉತ್ಸಾಹವೇ ಈ ಚಿತ್ರಕ್ಕೆ ಸ್ಫೂರ್ತಿ’ ಎಂದ ಅವರು, ಜನವರಿಯಲ್ಲಿ ‘ದುಷ್ಟ’ ಚಿತ್ರೀಕರಣ ನಡೆಸಲಿದ್ದಾರೆ.ತಮ್ಮಿಂದ ಅವಕಾಶ ಪಡೆದುಕೊಂಡ ಅದೆಷ್ಟೋ ಹೊಸಬರು ಹಳಬರಾದ ನಂತರ ದೂರ ಸರಿದ ಬಗ್ಗೆ ನಾರಾಯಣ್‌ಗೆ ಖೇದವಿದೆ. ‘ಮಾತನಾಡುವಷ್ಟು ಸೌಜನ್ಯ ತೋರದ ಅಂಥವರಿಂದ ಚಿತ್ರೋದ್ಯಮದ ವಾತಾವರಣ ಹಾಳಾಗುತ್ತಿದೆ. ಮಾತನಾಡಿದ ತಕ್ಷಣ ಇವರೊಂದಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಕನಿಷ್ಠ ಪರಸ್ಪರ ವಿಶ್ವಾಸ ಇಲ್ಲದಿದ್ದರೆ ಹೇಗೆ?’- ಅವರ ಈ ಮಾತು  ಆತ್ಮವಿಶ್ಲೇಷಣೆ ಧಾಟಿಯಲ್ಲಿತ್ತು.‘ಸ್ಟಾರ್ ನಟರಾದ ಶಿವಣ್ಣ, ರವಿಚಂದ್ರನ್, ಪುನೀತ್ ನೇರವಾಗಿ ಸಂಪರ್ಕಕ್ಕೆ ಲಭ್ಯವಾಗುತ್ತಾರೆ. ಆದರೆ ಕೆಲವರ ಸಂಪರ್ಕ ಸಾಧ್ಯವೇ ಇಲ್ಲ. ಅವಕಾಶ ಬೇಕಾದಾಗ ನಮ್ಮ ಮನೆಯ ಮುಂದೆ ನಿಂತಿದ್ದ ದಿನಗಳ್ನು ಅವರು ಮರೆತುಹೋಗಿರುತ್ತಾರೆ’ ಎಂದು ನಾರಾಯಣ್ ನಿಷ್ಠೂರವಾಗಿ ಹೇಳಿದರು. ಹೊಸಬರಿಗೆ ಅವಕಾಶ ನೀಡಿ ನೊಂದಿದ್ದರೂ ‘ದುಷ್ಟ’ ಚಿತ್ರದಲ್ಲಿ ಅವರು ಮಲೆನಾಡಿನ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರಂತೆ. ‘ಹೊಸ ತಂಡ ನನಗೆ ಹೊಸದಲ್ಲ. ಹೊಸದು ಮಾಡಿದಾಗಲೆಲ್ಲಾ ಯಶಸ್ಸು ಕಂಡಿದ್ದೇನೆ. ಅದೊಂದು ಕಷ್ಟಕರ ಪ್ರಯತ್ನ. ಹೊಸ ಕಲಾವಿದರನ್ನು ಪಳಗಿಸುವುದು ತುಂಬಾ ಕಷ್ಟ. ತಮ್ಮ ಈ ಚಿತ್ರದ ಎಲ್ಲಾ 22 ಪಾತ್ರಗಳಿಗೆ ತರಬೇತಿ ನೀಡಿ ನನ್ನ ಕಲ್ಪನೆಯ ಅನುಸಾರ ಅವರನ್ನು ತೆರೆಗೆ ಪರಿಚಯಿಸುವಾಸೆ ಇದೆ’ ಎಂದರು.‘ದುಷ್ಟ ಯುವಕರನ್ನು ಸೆಳೆಯುವ ಸಬ್ಜೆಕ್ಟ್. ರೆಗ್ಯುಲರ್ ಸಿನಿಮಾ ನೀತಿಯನ್ನು ಇದರಲ್ಲಿ ಮುರಿಯಲಾಗಿದೆ. ಭಾಷೆಯಲ್ಲಿ ಹೊಸತನ ಇರುತ್ತದೆ. ಬಹುತೇಕ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆಯ್ಕೆ ಪ್ರಕ್ರಿಯೆ ಮುಗಿದಿದೆ. 2 ವರ್ಷದ ಮಗುವಿನಿಂದ ಹಿಡಿದು ವಯಸ್ಕರವರೆಗೂ ಪಾತ್ರಕ್ಕೆ ಅನುಗುಣವಾಗಿ ಕಲಾವಿದರನ್ನು ಆರಿಸಿಕೊಳ್ಳಲಾಗಿದೆ’ ಎಂದರು. ಅವರು ಈ ಚಿತ್ರಕ್ಕಾಗಿ  ಸ್ಥಳೀಯ ವಾದ್ಯಗಾರರನ್ನು ಬಳಸಿಕೊಳ್ಳುವ ಮತ್ತು ಹೊಸ ಗಾಯಕರಿಂದ ಹಾಡಿಸುವ ಸವಾಲನ್ನೂ ಸ್ವೀಕರಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.