ಮಂಗಳವಾರ, ಆಗಸ್ಟ್ 4, 2020
22 °C

ನಾಲಗೆಯ ಮೊಗ್ಗು ಅರಳಿಸುವ ಮೀನಿನೂಟ!

-ಕೆ.ಎಂ. ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಸಮಯ ಮಧ್ಯಾಹ್ನ 1.30. ರೆಸ್ಟೋರೆಂಟ್ ಹೊರಗಡೆ ಜನರು ಗುಂಪು ಗುಂಪಾಗಿ ನಿಂತು ಹರಟುತ್ತಿದ್ದರು. ಕೆಲವರು ಲಾಂಜ್‌ನಲ್ಲಿ ಕುಳಿತು ಮ್ಯಾಗಝೀನ್ ಮೇಲೆ ಕಣ್ಣಾಡಿಸುತ್ತಿದ್ದರು. ಪುಟಾಣಿಗಳೆಲ್ಲ ಗಾಜಿನೊಳಗೆ ಇಟ್ಟಿದ್ದ ದೈತ್ಯ ಏಡಿಗಳನ್ನು ನೋಡುತ್ತಾ ಖುಷಿಪಡುತ್ತಿದ್ದರು. ಅರ್ಧ, ಮುಕ್ಕಾಲು ತಾಸು ಕಾದಿದ್ದರೂ ಅವರಲ್ಲಿ ಕೊಂಚವೂ ಅಸಹನೆ ಇರಲಿಲ್ಲ. ತಮ್ಮ ಸರದಿ ಬರುವವರೆಗೂ ಕಾದು ಉಣ್ಣುವ ತಾಳ್ಮೆ ಅವರಲ್ಲಿತ್ತು. ಇತ್ತ ರೆಸ್ಟೋರೆಂಟ್ ಒಳಗೆ ಸಪ್ಲೆಯರ್, ಸ್ಟೀವ್ ಆರ್ಡರ್‌ಗಳಿಗೆ ಬಿಡುವಿಲ್ಲದ ಕೆಲಸ. ಗ್ರಾಹಕರಿಂದ ಆರ್ಡರ್ ಪಡೆದು, ಅದನ್ನು ಬಾಣಸಿಗರಿಗೆ ಮುಟ್ಟಿಸಿ, ತಮ್ಮ ಆರ್ಡರ್‌ಗಳನ್ನು ಪಡೆದುಕೊಳ್ಳುವ ತವಕದಲ್ಲಿದ್ದರು.ಹೋಟೆಲ್ ವ್ಯವಸ್ಥಾಪಕ ಸದಾನಂದ ರೈ ಕಾದು ನಿಂತಿದ್ದ ಗ್ರಾಹಕರಿಗೆ ಆಸನ ದೊರಕಿಸಿಕೊಡುತ್ತಿದ್ದರು.ಇದೇನು, ದುಡ್ಡು ಕೊಟ್ಟು ಗಂಟೆಗಟ್ಟಲೇ ಕಾದುನಿಂತು ಇಲ್ಲಿ ಊಟ ಮಾಡಬೇಕೆ ಅನ್ನುವ ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣ ಇದೆ. ಈ ರೆಸ್ಟೋರೆಂಟ್‌ನಲ್ಲಿ ಒಮ್ಮೆ ಮೀನಿನ ಖಾದ್ಯಗಳನ್ನು ಸವಿದವರು ಮತ್ತೆ ಬರುವುದು ಹೆಚ್ಚು. ವಾರಾಂತ್ಯದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಗ್ರಾಹಕರು ಈ ರೆಸ್ಟೋರೆಂಟ್‌ಗೆ ನುಗ್ಗುತ್ತಾರೆ. ಕುಳಿತುಕೊಳ್ಳಲು ಜಾಗವಿಲ್ಲದಿದ್ದಾಗ ತಮ್ಮ ಸರದಿ ಬರುವವರೆಗೂ ಕಾದು ನಂತರ ಊಟ ಸವಿದು ಹೋಗುವವರು ಕಡಿಮೆ ಏನಿಲ್ಲ. ಮುಂಬೈನಲ್ಲಿ ಬಾಲಿವುಡ್ ನಟನಟಿಯರ ಮೀನು ಖಾದ್ಯಗಳ ಮೋಹ ತಣಿಸಿದ್ದ `ಮಹೇಶ್ ಲಂಚ್ ಹೋಂ' ಈಗ ನಗರದಲ್ಲೂ ಸಾಗರಖಾದ್ಯ ಪ್ರಿಯರ ರುಚಿಯ ಮೊಗ್ಗನ್ನು ತಣಿಸುತ್ತಿದೆ.ಒಳಗೆ ಹೋಗುವ ಅವಕಾಶ ಸಿಕ್ಕಿದ್ದೇ ಅರ್ಧ ಗಂಟೆ ಕಾದ ನಂತರ. ಟೇಬಲ್ ಆಯ್ಕೆ ಮಾಡಿಕೊಳ್ಳಲು ಅವಕಾಶವೇ ಇಲ್ಲದಿದ್ದರಿಂದ ಅವರು ತೋರಿಸಿದ ಟೇಬಲ್ ಎದುರು ಕುಳಿತೆವು. ಅಷ್ಟರಲ್ಲಿ ರೆಸ್ಟೋರೆಂಟ್ ಮಾಲೀಕ ಸೂರಜ್ ಶೆಟ್ಟಿ ಬಂದರು. ಕೆಲವು ಖಾದ್ಯಗಳನ್ನು ಅವರೇ ಆರ್ಡರ್ ಮಾಡಿ, ನಂತರ ಆಹಾರೋತ್ಸವದ ವಿಶೇಷತೆಗಳನ್ನು ಹೇಳುತ್ತಾ ಹೋದರು.`ಇತ್ತೀಚೆಗೆ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿದೆ. ಕೋಳಿ, ಕುರಿ ಮಾಂಸಕ್ಕಿಂತ ಈಗ ಮೀನಿನ ಖಾದ್ಯಗಳನ್ನು ಹೆಚ್ಚು ಇಷ್ಟಪಡತೊಡಗಿದ್ದಾರೆ. ಎಣ್ಣೆಯಲ್ಲಿ ಕರಿದ ಆಹಾರ ಮಾಂಸಾಹಾರಿ ಖಾದ್ಯಕ್ಕಿಂತ ಸ್ಟೀಮ್ ಮಾಡಿದ ಖಾದ್ಯಗಳನ್ನು ಹೆಚ್ಚು ಬಯಸುತ್ತಿದ್ದಾರೆ. ಇದನ್ನು ಗಮನದಲ್ಲಿರಿಸಿಕೊಂಡು ನಮ್ಮ ರೆಸ್ಟೋರೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಟೀಮ್ ಸೀಫುಡ್ ಫೆಸ್ಟಿವಲ್ ಆಯೋಜಿಸಿದ್ದೇವೆ' ಎಂದರು ಸೂರಜ್.ವಿಶೇಷ ಮೆನು

ಈ ಆಹಾರೋತ್ಸವಕ್ಕಾಗಿ ವಿಶೇಷ ಮೆನುವೊಂದನ್ನು ಸಿದ್ಧಪಡಿಸಲಾಗಿದೆ. ಮೆನುವಿನಲ್ಲಿರುವ ಎಲ್ಲ ಖಾದ್ಯಗಳನ್ನು ಸ್ಟೀಮ್ ಮಾಡಿಯೇ ತಯಾರಿಸಿ ಕೊಡಲಾಗುತ್ತದೆ. `ಪತ್ರಾಣಿ ಮಚ್ಚಿ' ಇಲ್ಲಿನ ವಿಶೇಷ ಖಾದ್ಯಗಳಲ್ಲೊಂದು. ದೊಡ್ಡದಾದ ಪತ್ರಾಣಿ ಮೀನನ್ನು ಸ್ಟೀಮ್ ಮಾಡಿದ ನಂತರ ಅದರ ಮೇಲ್ಪದರಕ್ಕೆ ಹಸಿರು ಖಾರ ಲೇಪಿಸಿರುತ್ತಾರೆ. ಕ್ಯಾರೆಟ್, ಈರುಳ್ಳಿ ಸಲಾಡನ್ನು ಅದಕ್ಕೆ ಕಾಂಬಿನೇಷನ್ ಆಗಿ ಕೊಡುತ್ತಾರೆ. ತೀರಾ ಖಾರವೂ ಅಲ್ಲದ ಪತ್ರಾಣಿ ಮಚ್ಚಿಯ ಒಂದು ತುಂಡನ್ನು ಎಬ್ಬಿಸಿ ಬಾಯಿಗಿಟ್ಟುಕೊಂಡರೆ ನಾಲಗೆ ಮೇಲಿನ ರುಚಿಯ ಮೊಗ್ಗುಗಳು ಅರಳುತ್ತವೆ. `ಚೀಸಿ ಕ್ರಾಬ್ ಮೀಟ್ ಟಾರ್ಟಲೆಟ್ಸ್, ಚಿಕನ್ ಹರ್‌ಗೋವಾ, ಕ್ರಾಬ್ ಕ್ಲಾವ್ ಡಂಪ್ಲಿಂಗ್ಸ್, ಕ್ರಿಯೋಲ್ ಮಶ್ರೂಮ್ಸ, ಹರ್ಯಾಲಿ ಫಾಂಪ್ರಿಟ್, ಹರ್ಬೆಡ್ ಪ್ರಾನ್ಸ್ ಕಾಕ್‌ಟೇಲ್, ಸ್ಟೀಮ್ಡ ಕ್ರಾಬ್ ಕ್ಲಾ ಡಂಪ್ಲಿಂಗ್ಸ್ ಮೊದಲಾದವು ಇಲ್ಲಿನ ಕ್ಲಾಸಿಕ್ ತಿನಿಸುಗಳು. ಇದರ ಜತೆಗೆ ಕರಾವಳಿಯ ಜನಪ್ರಿಯ ತಿನಿಸುಗಳು ಲಭ್ಯ. ಅಂದಹಾಗೆ, ಈ ಆಹಾರೋತ್ಸವಕ್ಕೆಂದು ತಯಾರಿಸಿರುವ ಮೆನುವಿನಲ್ಲಿರುವ ಸಿಗ್ನೇಚರ್ ತಿನಿಸುಗಳ ಮುಂದೆ ಜಿಎಫ್‌ವೈ (ಗುಡ್ ಫಾರ್ ಯು) ಎಂದು ಮುದ್ರಿಸಲಾಗಿದೆ' ಎಂದು ವಿವರಿಸಿದರು ಸದಾನಂದ ರೈ. ಸೆಲೆಬ್ರಿಟಿ ಸೊಬಗು

ಸಾಗರ ಖಾದ್ಯಗಳ ಅಪ್ಪಟ ರುಚಿ ಉಣಬಡಿಸುವುದು ಮಹೇಶ್ ಲಂಚ್ ಹೋಂನ ಜನಪ್ರಿಯತೆಗೆ ಸಾಕ್ಷಿ. ಮುಂಬೈನಲ್ಲಿರುವ ರೆಸ್ಟೋರೆಂಟ್‌ಗೆ ಬಾಲಿವುಡ್ ಮಂದಿ ಬರುವಂತೆ ಇಲ್ಲಿನ ಲಂಚ್‌ಹೋಂಗೂ ಸೆಲೆಬ್ರಿಟಿಗಳು ಬರುತ್ತಾರೆ. ಸುದೀಪ್, ಶಿವರಾಜ್ ಕುಮಾರ್, ರಮ್ಯಾ, ಪೂಜಾ ಗಾಂಧಿ ಹೀಗೆ ಕನ್ನಡದ ಅನೇಕ ನಟ ನಟಿಯರು ಈ ಲಂಚ್ ಹೋಂನ ಆತಿಥ್ಯವನ್ನು ಮನಸಾರೆ ಸವಿದವರೇ. ಅಂದಹಾಗೆ, `ಸ್ಟೀಮ್ ಸೀಫುಡ್ ಫೆಸ್ಟಿವಲ್' ಇದೇ ಆಗಸ್ಟ್ 14ರವರೆಗೆ ನಡೆಯಲಿದೆ. ನೀವೂ ಸಾಗರ ಖಾದ್ಯಗಳ ಪ್ರಿಯರಾಗಿದ್ದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.ಸ್ಥಳ: ಮಹೇಶ್ ಲಂಚ್ ಹೋಂ, ಚಾನ್ಸರಿ ಪೆವಿಲಿಯನ್ ಪಕ್ಕ, ರೆಸಿಡೆನ್ಸಿ ರಸ್ತೆ. ಟೇಬಲ್ ಕಾಯ್ದಿರಿಸಲು: 4131 1101, 2, 3.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.