ಸೋಮವಾರ, ಜೂನ್ 21, 2021
24 °C

ನಾಲ್ಕು ಬಾರಿ ಸಂಸದ: ಆದರೂ ಪಕ್ಷವಿಲ್ಲದೆ ಅತಂತ್ರ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಕಸರತ್ತು ಆರಂಭವಾಗಿದೆ. ಆದರೆ ತುಮಕೂರು ಲೋಕಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಲೋಕಸಭೆಗೆ ಆರಿಸಿ ಹೋಗಿದ್ದ ಹಾಲಿ ಸಂಸದ ಜಿ.ಎಸ್‌. ಬಸವರಾಜ್‌ ಅವರದು ಮಾತ್ರ ಅತಂತ್ರ ಸ್ಥಿತಿ. ಈ ಸಲವೂ ಸ್ಪರ್ಧಿಸಲು ಅವರಿಗೆ ಆಸೆ ಇದ್ದರೂ ಸರಿಯಾದ ಪಕ್ಷ ಮಾತ್ರ ಸಿಗುತ್ತಿಲ್ಲ.1984, 1989, 1999ರಲ್ಲಿ ಮೂರು ಅವಧಿಗೆ ಅವರು ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದರು. ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಅಂದಿನ ಮುಖ್ಯಮಂತ್ರಿ ಬಿ.ಎಸ್‌.­ಯಡಿಯೂರಪ್ಪ ಅವರು ಬಸವರಾಜ್‌ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್‌ ಕೊಟ್ಟರು. ಹೀಗಾಗಿ 2009ರಲ್ಲಿ ಬಿಜೆಪಿಯಿಂದ ಸಂಸದರಾದರು. ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ನಂತರ ಆ ಪಕ್ಷದ ಜತೆಗೆ ಗುರುತಿಸಿ­ಕೊಂಡರು. ತಮ್ಮ ಪುತ್ರ ಜ್ಯೋತಿ ಗಣೇಶ್ ಅವರನ್ನು ಕೆಜೆಪಿಯಿಂದ ವಿಧಾನಸಭೆ ಚುನಾವಣೆಗೆ ನಿಲ್ಲಿಸಿ ಪ್ರಚಾರವನ್ನೂ ಮಾಡಿದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿಯಿಂದ ಅಮಾನತು­ಗೊಂಡರು.ಯಡಿಯೂರಪ್ಪ ಕೆಜೆಪಿ ತೊರೆದು ಬಿಜೆಪಿ ಸೇರಿದ ನಂತರ ಬಸವರಾಜು ಅವರಿಗೆ ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳುವುದು ಸವಾಲಾಗಿ ಕಾಡಿತು. ‘ಬಿಜೆಪಿಯಲ್ಲಿ ಇರುವುದಿಲ್ಲ, ಕಾಂಗ್ರೆಸ್ ಸೇರುವುದು ಖಚಿತ’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು. ಬಿಜೆಪಿ ನಾಯಕರನ್ನು ಟೀಕಿಸಿದರು. ತಮ್ಮ ಹಳೆಯ ಸ್ನೇಹಿತರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.­ಮುನಿಯಪ್ಪ ಇತರರ ಮೂಲಕ ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿದರು. ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಹುಮತವಿಲ್ಲದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಕೆಜೆಪಿ ಸದಸ್ಯರ ಬೆಂಬಲ ನೀಡುವ ಮೂಲಕ ಸಹಕಾರಿಯಾದರು.ಹಿಂದೆ ಪಕ್ಷ ತೊರೆಯುವಾಗ ಪಕ್ಷ­ವನ್ನು, ಹೈಕಮಾಂಡನ್ನು ಟೀಕಿಸಿ­ದವರನ್ನು ಮತ್ತೆ ಸೇರಿಸಿಕೊಳ್ಳಲು ಜಿಲ್ಲೆಯವರೇ ಆದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಇತರರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಸಹ ಮನಸ್ಸು ಮಾಡ­ಲಿಲ್ಲ. ಕಾಂಗ್ರೆಸ್ ಬಾಗಿಲು ಮುಚ್ಚಿದ ನಂತರ ಮತ್ತೆ ಬಿಜೆಪಿಯತ್ತ ವಾಲಿದರು.ಯಡಿಯೂರಪ್ಪ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮುಂದುವರಿಸಿ­ದ್ದಾರೆ. ಬಿಜೆಪಿ ಸ್ಥಳೀಯ ಮುಖಂಡರು ಬಸವರಾಜು ಅವರಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸು­ತ್ತಲೇ ಇದ್ದಾರೆ. ಇನ್ನೂ ಅಮಾನತು ಆದೇಶವನ್ನು ವಾಪಸ್ ಪಡೆದಿಲ್ಲ. ಇತ್ತ ಬಿಜೆಪಿಯಲ್ಲೂ ಟಿಕೆಟ್ ಸಿಗುವುದು ಕಷ್ಟ, ಅತ್ತ ಕಾಂಗ್ರೆಸ್‌ನವರೂ ಸೇರಿಸಿಕೊಳ್ಳದ ಅತಂತ್ರ ಸ್ಥಿಯಲ್ಲಿ ಇದ್ದಾರೆ.ಕಾಂಗ್ರೆಸ್– ಬಿಜೆಪಿ ಕೋಟೆ

ತುಮಕೂರು ಲೋಕಸಭೆ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್, ಬಿಜೆಪಿಗೆ ಒಲಿದು ಬಂದಿದೆ. ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾದ ಸಮಯದಲ್ಲಿ 1996ರಲ್ಲಿ ಸಿ.ಎನ್.ಭಾಸ್ಕರಪ್ಪ ಜೆಡಿಎಸ್‌ನಿಂದ ಆಯ್ಕೆ ಆಗಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ.1951ರಿಂದ 2009ರ ವರೆಗೆ ನಡೆದ 15 ಚುನಾವಣೆಯಲ್ಲಿ (ಉಪ ಚುನಾವಣೆ ಸೇರಿ) ಐದು ಬಾರಿ ಮಾತ್ರ ಇತರ ಪಕ್ಷದವರು ಆಯ್ಕೆ ಆಗಿದ್ದಾರೆ. 10 ಸಲ ಕಾಂಗ್ರೆಸ್ ಸಂಸದರು ಕ್ಷೇತ್ರ ಪ್ರತಿನಿಧಿಸಿದ್ದಾರೆ. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಕೆ.ಲಕ್ಕಪ್ಪ, 1991, 1998, 2004ರಲ್ಲಿ ಬಿಜೆಪಿಯಿಂದ ಎಸ್.­ಮಲ್ಲಿಕಾರ್ಜು­ನಯ್ಯ ಆಯ್ಕೆ ಆಗಿದ್ದರು. ಮಲ್ಲಿ­ಕಾರ್ಜುನಯ್ಯ ಲೋಕಸಭೆ ಉಪಾಧ್ಯಕ್ಷ­ರಾಗಿಯೂ  ಕೆಲಸ ನಿರ್ವಹಿಸಿದರು. ಅನಾರೋಗ್ಯದಿಂದಾಗಿ ಕಳೆದ ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸದೆ  ಹಿಂದೆ ಸರಿದರು.1957ರಿಂದ 1980ರ ವರೆಗೆ ಸತತವಾಗಿ ಆರು ಬಾರಿ ಲಕ್ಕಪ್ಪ ಸಂಸದರಾಗಿದ್ದರು. 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದ್ದನ್ನು ಹೊರತುಪಡಿಸಿದರೆ, ಐದು ಬಾರಿ ಕಾಂಗ್ರೆಸ್ ನಿಂದ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರು. ಕ್ಷೇತ್ರದಲ್ಲಿ ಈವರೆಗೆ ಯಾರೊಬ್ಬರೂ ಆರು ಬಾರಿ ಆಯ್ಕೆ ಆಗಿಲ್ಲ. ಜಿ.ಎಸ್.ಬಸವರಾಜು ನಾಲ್ಕು ಸಲ, ಎಸ್.ಮಲ್ಲಿಕಾರ್ಜುನಯ್ಯ ಮೂರು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.