ಗುರುವಾರ , ಜೂನ್ 24, 2021
29 °C

ನಾಲ್ಕು ರಾಷ್ಟ್ರಗಳ ಟೂರ್ನಿ ನೆರವಾಗಲಿದೆ: ಸುನಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಏಪ್ರಿಲ್ ಮೊದಲ ವಾರದಿಂದ ಇಂಗ್ಲೆಂಡ್‌ನಲ್ಲಿ ನಡೆಯುವ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿ ನಮ್ಮ ಒಲಿಂಪಿಕ್ ಕ್ರೀಡೆಯ ಸಿದ್ಧತೆಗೆ ಸಾಕಷ್ಟು ನೆರವಾಗಲಿದೆ. ವಿಶ್ವದ ಪ್ರಬಲ ತಂಡಗಳ ವಿರುದ್ಧ ನಮ್ಮ ಸಾಮರ್ಥ್ಯ ಒರೆಗೆ ಹಚ್ಚಲು ಅವಕಾಶ ನೀಡಲಿದೆ~ ಎಂದು ಭಾರತ ಹಾಕಿ ತಂಡದ ತಾರೆ ಎಸ್.ವಿ. ಸುನಿಲ್ ಅಭಿಪ್ರಾಯಪಟ್ಟರು.ನಗರದ ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಪತ್ರಕರ್ತರ ಜತೆ ಮಾತನಾಡಿದರು.`ಭಾರತ ಜತೆ ಪ್ರಬಲ ತಂಡಗಳಾದ ಆಸ್ಟ್ರೇಲಿಯ, ಹಾಲೆಂಡ್, ಜರ್ಮನಿ ಈ ಟೂರ್ನಿಯಲ್ಲಿ ಆಡಲಿವೆ. ಒಲಿಂಪಿಕ್ ಹಾಕಿ ಪಂದ್ಯಗಳು ನಡೆಯುವಲ್ಲೇ ಈ ಟೂರ್ನಿಯೂ ನಡೆಯುತ್ತಿದೆ. ಒಲಿಂಪಿಕ್ ಹಾಕಿ ವೇಳೆ ಹಸಿರಿನ ಬದಲು ನೀಲಿ ಟರ್ಫ್ ಬಳಸಲಾಗುತ್ತಿದೆ. ಹಳದಿ ಚೆಂಡು ಬಳಸಲಾಗುವುದು. ಹೀಗಾಗಿ ಈ ಟೂರ್ನಿ ನಮಗೆ ಹೊಂದಿಕೊಳ್ಳಲೂ ಅವಕಾಶವಾಗುತ್ತದೆ~ ಎಂದು ಸೋಮವಾರಪೇಟೆ ವಿಠಲಾಚಾರ್ಯ (ಎಸ್.ವಿ.) ಸುನೀಲ್ ವಿವರಿಸಿದರು.ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಎರಡು ಬಾರಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾಗಿದ್ದ ಸುನೀಲ್, `ಈಗ ನಮ್ಮ ಮೇಲೆ ನಿರೀಕ್ಷೆ ಜಾಸ್ತಿಯಿದೆ. ನವದೆಹಲಿ ಅರ್ಹತಾ ಟೂರ್ನಿಯಲ್ಲಿ ಒಂದು ತಂಡ ಮಾತ್ರ ಆಯ್ಕೆಯಾಗುವ ಅವಕಾಶ ಇದ್ದ ಕಾರಣ ನಾವು ಅಲ್ಲಿ ಅವಕಾಶ ತೆಗೆದುಕೊಳ್ಳುವಂತಿರಲಿಲ್ಲ. ನೀವೇ ನೋಡಿದಂತೆ ಯಶಸ್ಸು ಗಳಿಸಿದ್ದೇವೆ. ಈಗ ನಾಲ್ಕು ರಾಷ್ಟ್ರಗಳ ಟೂರ್ನಿಯ ವೇಳೆ ಕೊರತೆ ಕಂಡುಬಂದಲ್ಲಿ ತಿದ್ದಿಕೊಳ್ಳಲೂ ಒಲಿಂಪಿಕ್ಸ್‌ಗೆ ಮೊದಲು ಎರಡು ತಿಂಗಳ ಅವಕಾಶವಿದೆ~ ಎಂದು ಅವರು ಹೇಳಿದರು.ಈಗ ತಂಡದ ಮನೋಭಾವ ಬದಲಾಗಿದೆ ಎಂಬುದನ್ನು ಅವರು ಬೊಟ್ಟು ಮಾಡಿದರು. `ಈಗಿನ ಕೋಚ್ ಮೈಕೆಲ್ ನಾಬ್ಸ್ ಅವರು ಆಕ್ರಮಣಕಾರಿ ಆಟಕ್ಕೆ ಒತ್ತುನೀಡುತ್ತಿರುವುದು ನಮ್ಮ ಯಶಸ್ಸಿಗೆ ಕಾರಣ. ಹಿಂದೆಲ್ಲ ನಾವು ರಕ್ಷಣಾತ್ಮಕವಾಗಿ ಆಡುತ್ತಿದ್ದ ಕಾರಣ ಇತರ ತಂಡಗಳು ನಮ್ಮ ಮೇಲೆ ಬೇಗನೇ ಒತ್ತಡ ಹೇರುತ್ತಿದ್ದವು. ಈಗ ನಾವೂ ಆಕ್ರಮಣಕಾರಿಯಾಗಿ ಆಡುತ್ತಿದ್ದು, ಕಳೆದ ಮೂರು ಟೂರ್ನಿಗಳಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಇದು ಜುಲೈ ಕೊನೆಯಿಂದ ಆರಂಭವಾಗುವ ಒಲಿಂಪಿಕ್ಸ್‌ನಲ್ಲೂ ಮುಂದುವರಿಯಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.