ಭಾನುವಾರ, ಮೇ 16, 2021
22 °C

ನಾಲ್ವರು ಲೋಕಾಯುಕ್ತರ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಪಂಕಜಾ, ಗುತ್ತಿಗೆ ಸಿಬ್ಬಂದಿ ಮಂಜುಳಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂಗರ್ಭಶಾಸ್ತ್ರಜ್ಞ ಉಮಾ ಶಂಕರ್‌ಹಾಗೂ ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಎ) ನಾರಾಯಣಪ್ಪ ಎಂಬುವವರ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

 

ಪಾದರಹಳ್ಳಿಯ ಚಿಕ್ಕಯಲ್ಲಪ್ಪ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಬುಧವಾರ ಸರ್ಕಾರಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಎಸ್.ಪಿ ಡಿಸೋಜ ಅವರ ನೇತೃತ್ವದ ತಂಡ ಡಾ. ಪಂಕಜಾ ಮತ್ತು ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡಿದೆ.ಚಿಕ್ಕಯಲ್ಲಪ್ಪ ಅವರ ಪತ್ನಿ ಇದೇ ಆಸ್ಪತ್ರೆಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಲು ಡಾ. ಪಂಕಜಾ ಅವರು 5000 ರೂಪಾಯಿ ಲಂಚದ ಬೇಡಿಕೆಯೊಡ್ಡಿದ್ದರು. ಆರಂಭದಲ್ಲಿ 1.500 ರೂಪಾಯಿಯನ್ನು ರೋಗಿಗಳ ಕಡೆಯವರು ವೈದ್ಯರಿಗೆ ನೀಡಿದ್ದರು.ಆದರೆ ಶಸ್ತ್ರ ಚಿಕಿತ್ಸೆ ನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದರೆ 3.500 ರೂಪಾಯಿ ನೀಡಲೇ ಬೇಕು ಎಂದು ವೈದ್ಯರು ಷರತ್ತು ಹಾಕಿದ್ದರು.ಇದರಿಂದ ಕಂಗಾಲಾದ ಚಿಕ್ಕಯಲ್ಲಪ್ಪ ಆಸ್ಪತ್ರೆಯ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ಲೋಕಾಯುಕ್ತರ ಮೊರೆಹೋದರು.ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತರು ಕಾರ್ಯಾಚರಣೆಗೆ ಮುಂದಾಗಿ, ಚಿಕ್ಕಯಲ್ಲಪ್ಪ ಅವರ ಕಡೆ 1000 ರೂಪಾಯಿ ಕೊಟ್ಟು ಕಳುಹಿಸಿದರು. ಈ ಹಣವನ್ನು ಡಾ. ಪಂಕಜಾ ಅವರ ಸೂಚನೆ ಮೇರೆಗೆ ಗುತ್ತಿಗೆ ಸಿಬ್ಬಂದಿ ಮಂಜುಳಾ ಅವರು ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚ ಹಣದ ಸಹಿತ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡರು. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಸೈಯದ್ ನಿಜಾಮ್ ಉದ್ದೀನ್, ಇನ್ಸ್‌ಪೆಕ್ಟರ್ ಪ್ರದೀಪ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.ಭೂಗರ್ಭ ಶಾಸ್ತ್ರಜ್ಞ: ಭೂಗರ್ಭಶಾಸ್ತ್ರಜ್ಞ ಉಮಾಶಂಕರ್ 500 ರೂಪಾಯಿ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ನಾರಾಯಣಪ್ಪ 3000 ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ಬಂಧಿತರಾಗಿದ್ದಾರೆ.

ಕನಕಪುರ ಬಳಿಯ ಕ್ವಾರಿಯ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು ಲೋಕಾಯುಕ್ತ ಎಸ್.ಪಿ ಪರಮೇಶ್ವರ್ ಅವರ ಮಾರ್ಗದರ್ಶನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಲಂಚ ಹಣದ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.ಕ್ವಾರಿಯ ಮಾಲೀಕ ನಾಗರಾಜು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಈ ದಾಳಿ ನಡೆಸಿದ್ದಾರೆ.ಕ್ವಾರಿಯ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ರೂ 5000 ಲಂಚದ ಬೇಡಿಕೆಯನ್ನು ಉಮಾಶಂಕರ್ ಒಡ್ಡಿದ್ದರು.ಅಂತಿಮವಾಗಿ ರೂ 3,000 ಕ್ಕೆ ಒಪ್ಪಿಗೆಯಾಗಿತ್ತು. ಈ ಸಂಬಂಧ ಈಗಾಗಲೇ 2,500 ರೂಪಾಯಿ ಪಾವತಿಸಲಾಗಿತ್ತು. 500 ರೂಪಾಯಿ ನೀಡುವ ಸಂದರ್ಭದಲ್ಲಿ ಲೋಕಾಯುಕ್ತರು ಲಂಚ ಹಣದ ಸಹಿತ ಅಧಿಕಾರಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.ದ್ವಿತೀಯ ದರ್ಜೆ ಗುಮಾಸ್ತ ನಾರಾಯಣಪ್ಪ ಈ ವಿಷಯಕ್ಕೆ 10 ಸಾವಿರ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು. ಕೊನೆಗೆ 5000 ರೂಪಾಯಿಗೆ ಒಪ್ಪಿಗೆಯಾಗಿತ್ತು. ಅದರಲ್ಲಿ 3000 ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ನಾರಾಯಣಪ್ಪ ಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.