ಭಾನುವಾರ, ಜೂನ್ 20, 2021
20 °C

ನಾಲ್ವರು ವಕೀಲರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಬೆಂಗಳೂರು: ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ ದಾಂಧಲೆ ಮಾಡಿದ ಆರೋಪದ ಮೇಲೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್ ಸೇರಿದಂತೆ ನಾಲ್ವರು ವಕೀಲರನ್ನು ಘಟನೆ ನಡೆದ 24 ಗಂಟೆಗಳ ಒಳಗೆ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ನ್ಯಾಯಾಂಗ ತನಿಖೆಗೆ ಸಂಬಂಧಿಸಿ ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ.ಅರುಣ್ ನಾಯಕ್, ಸಂತೋಷ್ ಮತ್ತು ಸೋಮೇಶ್ ಬಂಧಿತ ಇತರ ವಕೀಲರು. ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ವಕೀಲರ ವಿರುದ್ಧ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಟ್ಟು 31 ಪ್ರಕರಣಗಳು ದಾಖಲಾಗಿವೆ. ಮಾಧ್ಯಮ ಸಂಸ್ಥೆಗಳು, ಪೊಲೀಸರು ಮತ್ತು ಸಾರ್ವಜನಿಕರು ದೂರುಗಳನ್ನು ದಾಖಲಿಸಿದ್ದಾರೆ.ಮೂವತ್ತಕ್ಕೂ ಅಧಿಕ ಮಂದಿ ಆರೋಪಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಎಸಿಪಿ ಗಚ್ಚಿನಕಟ್ಟಿ ಅವರು 25 ಮಂದಿ ವಕೀಲರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು ಒಂದು ಸಾವಿರ ವಕೀಲರು ಅಕ್ರಮ ಕೂಟ ರಚಿಸಿಕೊಂಡು ನಾಲ್ಕು ಗುಂಪುಗಳಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದೂ ಅವರು ದೂರಿದ್ದಾರೆ. ಆದರೆ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಎಲ್ಲ ಆರೋಪಿಗಳನ್ನು ಬಂಧಿಸಲು ಶುಕ್ರವಾರವೇ ಅವಕಾಶ ಇತ್ತು. ವಕೀಲರನ್ನು ಬಂಧಿಸುವ ಬಗ್ಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಇರಲಿಲ್ಲ. ಬಂಧನದ ಬಗ್ಗೆ ಮಾಹಿತಿ ಸಿಕ್ಕ ನಂತರ ಹಲವರು ಪರಾರಿಯಾಗಿದ್ದಾರೆ. ಆದರೆ ಆರೋಪಿಗಳ ಬಗ್ಗೆ ಮಾಹಿತಿ ಇದ್ದು ಎಲ್ಲರನ್ನೂ ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಗಾಯ- ಹಾನಿ:  ಶುಕ್ರವಾರ ನಡೆದ ದಾಂಧಲೆ ಪ್ರಕರಣದಲ್ಲಿ ಡಿಸಿಪಿ ಡಾ. ಜಿ. ರಮೇಶ್ ಸೇರಿದಂತೆ ಒಟ್ಟು 57 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ವಕೀಲರು ಹತ್ತು ಕಾರಿಗೆ ಬೆಂಕಿ ಹಚ್ಚಿದರೆ ಇಪ್ಪತ್ತು ಕಾರುಗಳನ್ನು ಜಖಂಗೊಳಿಸಿದ್ದಾರೆ. ಹತ್ತು ದ್ವಿಚಕ್ರ ವಾಹನವನ್ನು ಸುಟ್ಟು ಹಾಕಿದ್ದಾರೆ ಮತ್ತು ಐವತ್ತು ವಾಹವನ್ನು ಜಖಂ ಮಾಡಿದ್ದಾರೆ.ಆರೋಪಿಗಳ ಹೆಸರು: ರಂಗನಾಥ, ಮಹೇಶ್, ದೊಗಾಡಿ, ರಾಜಶೇಖರ್, ಎಂ.ರಾಮಾಂಜನೇಯ, ನಾರಾಯಣಸ್ವಾಮಿ, ದೇವೇಂದ್ರ, ಮುನಿಸ್ವಾಮಿ, ಸುರೇಶ್, ಅರವಿಂದಗೌಡ ಶೆಟ್ಟಿ, ಮೋಹನ್ ದೊರೆ,  ಶ್ರೀನಿವಾಸ, ವೆಂಕಟರಾಮ ರೆಡ್ಡಿ, ಪ್ರಸಾದ್‌ಕುಮಾರ್, ಲಕ್ಷ್ಮಣ, ಶ್ರೀನಿವಾಸ, ಸಂದೀಪ್‌ಶೆಟ್ಟಿ, ಕೆ.ರಮೇಶ್, ರಘು, ಎನ್.ಮಂಜುನಾಥ್, ಗಿರೀಶ್, ಶಿವಕುಮಾರ್, ಶಶಿಧರ್ ಮತ್ತಿತರರು.ಸಭೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಶನಿವಾರ ಅಧಿಕಾರಿಗಳ ಸಭೆ ನಡೆಸಿದರು.ಈಗಾಗಲೇ ಗುರುತು ಸಿಕ್ಕಿರುವ ಆರೋಪಿಗಳನ್ನು ಬಂಧಿಸುವುದು ಮತ್ತು ಉಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಆರೋಪಿಗಳನ್ನು ಗುರುತಿಸುವ ಸಂಬಂಧ ಖಾಸಗಿ ವಾಹಿನಿಗಳಿಂದ ವಿಡಿಯೊ ತುಣಕು ಮತ್ತು ಪತ್ರಿಕೆಗಳಿಂದ ಛಾಯಾಚಿತ್ರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅವರಿಗೆ ಮಿರ್ಜಿ ಅವರು ಘಟನೆಯ ಬಗ್ಗೆ ವರದಿ ನೀಡಿದ್ದಾರೆ.ಉನ್ನತ ಸಭೆ: ಈ ಮಧ್ಯೆ, ಕಾನೂನು ಸಚಿವ ಸುರೇಶ್‌ಕುಮಾರ್ ನೇತೃತ್ವದಲ್ಲಿ ಸರ್ಕಾರದ ಮಟ್ಟದಲ್ಲೂ ಸಭೆ ನಡೆಯಿತು. ನ್ಯಾಯಾಂಗ ತನಿಖೆಗೆ ನ್ಯಾಯಾಧೀಶರ ನೇಮಕ ಸೇರಿದಂತೆ ಇತರ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ಆಯಿತು.

 

ವರದಿಗೆ ರಾಜ್ಯಪಾಲರ ಆದೇಶ

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಇಲ್ಲಿನ ನಗರ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕೆಲವು ವಕೀಲರು ಶುಕ್ರವಾರ ನಡೆಸಿದ ಹಲ್ಲೆ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುವುದಾಗಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರಕಟಿಸಿದರು.

  

ಎ.ಪಿ. ರಂಗನಾಥ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.