ಶುಕ್ರವಾರ, ಜೂನ್ 18, 2021
28 °C

ನಾಳೆ ರಾಜ್ಯ ಬಜೆಟ್: ಸಿಹಿ ನಿರೀಕ್ಷೆಯಲ್ಲಿ ಮಂಡ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾರಿಗೆ ಬರುವ ಯೋಜನೆ ಇರಲಿ

ಮಂಡ್ಯ: ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ, ನಾಲೆಗಳ ಆಧುನೀಕರಣ, ಕೆರೆಗಳಲ್ಲಿ ಹೂಳು ತೆಗೆಯಲು ಒತ್ತು ನೀಡಬೇಕು. ಸಾವಯವ ಕೃಷಿಗೆ ಆದ್ಯತೆ, ಸಾವಯವ ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ, ಕೃಷಿ ಯಂತ್ರೋಪಕರಣಗಳು ಕೈಗೆಟುಕುವ ದರ ಸಿಗಬೇಕು. ಸಂಕಷ್ಟದಲ್ಲಿರುವ ರೈತರಿಗೆ, ಎತ್ತು-ಗಾಡಿ ನೀಡುವ `ಭಾಗ್ಯದ ಬಂಡಿ~ ಯೋಜನೆ; `ಸುವರ್ಣ ಭೂಮಿ~ ಯೋಜನೆ ಜನರಿಗೆ ತಲುಪಿಲ್ಲ. ಹೀಗೆ ಬಂದು ಹಾಗೇ ಹೋಗುವ ಯೋಜನೆ ಪ್ರಕಟಿಸುವ ಬದಲು ಶಾಶ್ವತ ಕಾರ್ಯಕ್ರಮ ರೂಪಿಸಬೇಕು.

-ಎಸ್.ಜೆ.ಜೈಕುಮಾರ್, ಕೃಷಿಕ. ಶಿವಳ್ಳಿಎಲ್ಲ ಕ್ರೀಡೆಗಳಿಗೂ ಸಮಾನ ಪ್ರಾತಿನಿಧ್ಯ ಬೇಕು

ರಾಜ್ಯದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ, ಸೂಕ್ತ ತರಬೇತಿಯೇ ಸಿಗುತ್ತಿಲ್ಲ. ಅವರ ಸಾಮರ್ಥ್ಯ ಗುರುತಿಸಿ, ತರಬೇತಿ ನೀಡಲು ಎಲ್ಲ ಜಿಲ್ಲೆಗಳಲ್ಲೂ, ಎಲ್ಲ ಕ್ರೀಡಾ ವಿಭಾಗಗಳಿಗೂ ತರ ಬೇತು ದಾರರನ್ನು ನೇಮಿಸಿ ಕ್ರೀಡಾ ಸಾಮಗ್ರಿ ಒದಗಿಸಬೇಕು. ತಾಲ್ಲೂಕು ಕೇಂದ್ರಗಳಲ್ಲೂ ಕ್ರೀಡಾಂಗಣ ನಿರ್ಮಿಸಿ, ಅನ್ಯ ಉದ್ದೇಶಕ್ಕೆ ಬಳಕೆಯಾ ಗದಂತೆ ನೋಡಿ ಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲೂ, ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣ, ನಿರ್ವಹಣೆಗೆ ಒತ್ತು ನೀಡಬೇಕು. ವಯೋಮಾನ ಅನುಸಾರ ಕ್ರೀಡಾ ಚಟುವಟಿಕೆ ಸಂಘಟಿಸಬೇಕು.

-ಎಂ.ಎಸ್.ಮಾದೇಗೌಡ, ಕ್ರೀಡಾ ಕ್ಷೇತ್ರದ ಜೀವಮಾನ ಸಾಧನಾ ಪ್ರಶಸ್ತಿ ಪುರಸ್ಕೃತರು.ಸಮಾನ ಶಿಕ್ಷಣ, ಆಹಾರ ಭದ್ರತೆ

ಎಲ್ಲರಿಗೂ ಶಿಕ್ಷಣ ದೊರಕಿಸಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಯೋಜನೆಗಳ ಬಂದಿವೆ. ಹಣವೂ ಯೆಥೇಚ್ಛಾವಾಗಿ ಹರಿದು ಬರುತ್ತಿದೆ. ಆದರೆ, ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಿಸಿಲ್ಲ. ಶಿಕ್ಷಣದ ಗುಣಮಟ್ಟವೂ ಹೆಚ್ಚಿಲ್ಲ. ಅರ್ಹತೆ ಜೊತೆಗೆ ಪ್ರಾಮಾಣಿಕ ಶಿಕ್ಷಕರು/ಉಪನ್ಯಾಸಕರ ನೇಮಕವಾಗಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಕಾಲದಲ್ಲಿ ಪಠ್ಯ- ಪುಸ್ತಕ ದೊರಕಿಸಿ ಕೊಡಬೇಕು. ವಸತಿ ನಿಲಯಗಳಿಗೆ ವಾರ್ಡನ್‌ಗಳ ನೇಮಕಬೇಕು. ಅಲ್ಲಿ, ಆಹಾರದ ಗುಣಮಟ್ಟ ಹೆಚ್ಚಿಸಬೇಕಿದೆ.

-ಪ್ರೊ. ಬಿ.ಕೆ.ಗದ್ದೆಲಿಂಗಯ್ಯ, ವಿಶ್ರಾಂತ ಪ್ರಾಚಾರ್ಯ.

 

ಕ್ರೀಡೆಗೆ ವಿಶೇಷ ಪ್ರೋತ್ಸಾಹ

ಮದ್ದೂರು: ಈ ಬಜೆಟ್‌ನಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಯನ್ನು ಪ್ರಾಥಮಿಕ ಹಂತದಿಂದಲೇ ಕಡ್ಡಾಯಗೊಳಿಸಬೇಕು. ಕ್ರೀಡಾ ಶಾಲೆಗಳಿಗೆ ವಿಶೇಷ ಅನುದಾನ, ಕ್ರೀಡಾಪಟುಗಳಿಗೆ ವಿಶೇಷ ಭತ್ಯೆ, ಎಲ್ಲಾ ರಾಷ್ಟ್ರೀಯ-ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಹಣ ಮೀಸಲಿಡಬೇಕು.

-ಎಚ್.ವಿ.ಕುಮಾರ್, ಶಿಕ್ಷಕರ ಬಡಾವಣೆ, ಮದ್ದೂರು.ಆರೋಗ್ಯ ವಿಮೆ ಬಲಪಡಿಸಿ

ಪ್ರತಿ ತಾಲ್ಲೂಕಿನಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ, ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕ, ಉಚಿತ ಔಷಧಿಗಳ ವಿತರಣೆಗೆ ಅಗತ್ಯ ಕ್ರಮ, ಗ್ರಾಮೀಣ ಗಗಳಲ್ಲಿ ಸಂಚಾರಿ ಆಸ್ಪತ್ರೆಗಳ ಸೌಲಭ್ಯ, ಯಶಸ್ವಿನಿ ಆರೋಗ್ಯ ವಿಮೆ ಇನ್ನಷ್ಟು ಬಲಪಡಿಸುವುದು. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸುವುದು.

-ಪುಟ್ಟಗೌರಮ್ಮ

 

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬೇಕು

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡಿದ್ದು ಕೃಷಿಕರಿಗೆ ಸಾವಯವ ಕೃಷಿ ಅವಲಂಬಿಸಲು ಆದ್ಯತೆ ನೀಡಬೇಕು. ರೈತರು ಬೆಳೆದ ಬೆಳೆಗಳನ್ನು ದಲ್ಲಾಳಿಗಳಿಲ್ಲದೆ ನೇರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನೆರವು ಕಲ್ಪಿಸಬೇಕು. ಯಾವುದೇ ಬೆಳೆಯನ್ನು ಇಂತಿಷ್ಟು ರೈತರು ಬೆಳೆಯಬೇಕೆಂದು ನಿರ್ದಿಷ್ಟಪಡಿಸಬೇಕು. ಇದರಿಂದ ಉತ್ತಮಬೆಲೆ ಪಡೆಯಬಹುದು. ಕೃಷಿಗೆ ನೆರವು ನೀಡಲು ಬ್ಯಾಂಕುಗಳ ಮೂಲಕ ಹೆಚ್ಚಿನ ಆರ್ಥಿಕ ಸಹಾಯವನ್ನು ಕೊಡಲು ಯೋಜನೆ ರೂಪಿಸಬೇಕು.

-ಅಶೋಕ್‌ಕ್ಯಾತನಹಳ್ಳಿ. ಕೃಷಿಕವೈದ್ಯರು ಗ್ರಾಮದಲ್ಲಿರಲಿ..

ಶ್ರೀರಂಗಪಟ್ಟಣ: ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು ಇಲ್ಲ. ವೈದ್ಯರು ಅಷ್ಟೇ ಅಲ್ಲದೆ ನರ್ಸ್‌ಗಳ ಕೊರತೆ ಕೂಡ ಇದೆ. ವೈದ್ಯರು ಗ್ರಾಮಗಳಲ್ಲಿಯೇ ಇರಬೇಕು. ರೋಗಿಗಳಿಗೆ 24 ಗಂಟೆ ಚಿಕಿತ್ಸೆ ದೊರೆಯುವಂತಾಗಬೇಕು. ಔಷಧ ಕೊರತೆ ನೀಗಬೇಕು. ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ಒದಗಿಸಬೇಕು.

-ಆರ್.ಎನ್.ಗುರುಪ್ರಸಾದ್, ಗ್ರಾ.ಪಂ. ಸದಸ್ಯ ರಾಂಪುರ.ರೈತರ ಆತ್ಮಹತ್ಯೆ ತಡೆಯಲಿ

ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದರೂ ಅಸಂಗತ ಕಾರಣಗಳಿಂದಾಗಿ ರೈತರ ಹಿತ ಕಾಯಲು ಸಾಧ್ಯವಾಗಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಸರ್ಕಾರ ಅಥವಾ ಕಂಪೆನಿ ಸ್ವಾಧೀನಕ್ಕೆ ತೆಗೆದು ಕೊಂಡರೆ ರೈತನಿಗೆ ಸಮಪಾಲು ನೀಡಬೇಕು. ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿ ಮೂಲ ಸೌಕರ್ಯ ಒದಗಿಸಬೇಕು. ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು.

-ನಂಜುಂಡೇಗೌಡ, ರೈತ ಮುಖಂಡರು.ಮಠಗಳಿಗೆ ಹಣ ಬೇಡ

ಪಾಂಡವಪುರ: ಬಜೆಟ್‌ನಲ್ಲಿ ಮಠ ಮಾನ್ಯಗಳಿಗೆ ಹಣ ಮೀಸಲಿಡಬಾರದು. ಗ್ರಾಮಗಳಲ್ಲಿಯ ಕೆರೆಗಳನ್ನು ಸುಸ್ಥಿತಿಗೆ ತರಲು ಆದ್ಯತೆ ಕೊಡಬೇಕು. ಅರಣ್ಯಗಳ ರಕ್ಷಣೆಗೆ ಹೆಚ್ಚು ಮಹತ್ವ ಕೊಡಬೇಕು. ಖಾದಿ ಮತ್ತು ಇತರ ಪಾರಂಪರಿಕ ಗ್ರಾಮೋದ್ಯೋಗಗಳಿಗೆ ಆಧುನಿಕ ತಂತ್ರಜ್ಞಾನದ ನೆರವು ಕೊಟ್ಟು ಗ್ರಾಮಗಳಲ್ಲಿಯೇ ಹೆಚ್ಚು ಉದ್ಯೋಗವಕಾಶ ಸೃಷ್ಠಿಯಾವುದಕ್ಕೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸಬೇಕು. ಗಡಿ ಪ್ರದೇಶಗಲ್ಲಿಯ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು.

-ಸುರೇಂದ್ರ ಕೌಲಗಿ, ಹಿರಿಯ ಗಾಂಧಿವಾದಿಗಳು.ಹಸಿವು, ಅಪೌಷ್ಟಿಕತೆ ನಿವಾರಿಸಲಿ

ಜನರ ಜೀವನ ಮಟ್ಟ ಸುಧಾರಣೆ ಹಾಗೂ ಆರ್ಥಿಕ ಸಾಮಾಜಿಕ ಸಮಾನತೆ ಮುಖ್ಯವಾಗಿರಬೇಕು.  ಅಪೌಷ್ಟಿಕತೆ, ಹಸಿವು, ಮೂಲಭೂತ ಸೌಕರ್ಯಗಳ ಕೊರತೆಗಳಿಂದ ನರಳುತ್ತಿರುವ ಕಡೆ ಹೆಚ್ಚು ಗಮನಹರಿಸಬೇಕು. ಕನ್ನಡ ಆಭಿವೃದ್ದಿ ಪ್ರಾಧಿಕಾರದ ಸ್ವಾಯತ್ತತೆಗೆ ಗಮನಹರಿಸಬೇಕು. ಅಕಾಡೆಮಿಗಳನ್ನು ಬಲಪಡಿಸ ಬೇಕು.  ಕಳೆದ ಬಜೆಟ್‌ನಲ್ಲಿನ ಭರವಸೆಗಳು ಹುಸಿಯಾಗಿವೆ ಎಂದಷ್ಟೇ ಹೇಳುತ್ತೇನೆ.

-ಡಾ. ಚಿಕ್ಕಮರಳಿ ಬೋರೇಗೌಡ. ಸಾಹಿತಿಗಳು.ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸಿ

ಕೃಷಿ ಉತ್ಪನ್ನಗಳಿಗೆ ಕೆಎಂಎಫ್ ಮಾದರಿಯಲ್ಲಿ ಮಾರುಕಟ್ಟೆ ಕಲ್ಪಿಸುವುದು. ದೇಸಿಯ ಕೃಷಿ ವಿಶ್ವವಿದ್ಯಾಲಗಳ ಸ್ಥಾಪನೆಗೆ ಅದ್ಯತೆ ನೀಡುವುದು. ಸಾವಯವ ಕೃಷಿಕರು ಬೆಳೆಯುವ  ಕೃಷಿ ಉತ್ಪನ್ನಗಳಿಗೆ ಎಕರೆವಾರು ಸಹಾಧನ ನೀಡುವುದು. ದೇಸಿಯ ಗೋವು ಅಭಿವೃದ್ದಿ, ಸಂರಕ್ಷಣೆ, ಸಂವರ್ಧನೆ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು. ಕಬ್ಬಿನ ಬೆಲೆ ನಿಗದಿಗೆ  ಸಮಿತಿ ರಚಿಸಿ ಬೆಲೆ ನಿಗದಿಗೊಳಿಸಲು ಒತ್ತು ನೀಡುವುದು.

-ಎಚ್.ಕೆ. ರಮೇಶ್‌ರಾಜು, ನೈಸರ್ಗಿಕ ಕೃಷಿಕ.ರೈತರ ಬಜೆಟ್ ಆಗಿರಲಿ

ನಾಗಮಂಗಲ:  ಈ ಬಾರಿ ರೈತರ ಬಜೆಟ್ ಆಗಬೇಕು. ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಡಿ ನೀಡಬೇಕು. ಸಾವಯವ ಕೃಷಿಯನ್ನು ಪ್ರಚುರ ಪಡಿಸಲು ಹಾಗು ಅದನ್ನು ಅನುಸರಿಸುತ್ತಿರುವ ರೈತರನ್ನು ಬೆಂಬಲಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡುತ್ತಾ ಹೆಚ್ಚು ಹಣವನ್ನು ವಿನಿಯೋಗಿಸಬೇಕು. ಕಳೆದ ಬಾರಿಯ ಬಜೆಟ್ ಕೃಷಿಗೆ ಆದ್ಯತೆ ನೀಡಿಲ್ಲ. ಅಧಿಕಾರಿಗಳ ವೈಫಲ್ಯದಿಂದ ರೈತ ಕಂಗಾಲಾಗಿ ಹೋದ. ಈ ಬಾರಿಯಾದರು ರೈತನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡನೆಯಾಗಬೇಕು.

-ಡಿ.ಕೆ.ಸುರೇಶ್, ಕೃಷಿಕ, ದೇವಲಾಪುರ.ಆರೋಗ್ಯ ಸೇವೆ ಉಚಿತವಾಗಲಿ

ಆರೋಗ್ಯ ಸೇವೆ ದುಬಾರಿಯಾಗಿದೆ. ಸಾಮಾನ್ಯರ, ಬಡವರಿಗೆ ಆರೋಗ್ಯ ಗಗನ ಕುಸುಮ. ಶಸ್ತ್ರಚಿಕಿತ್ಸೆ ಮಾಡಿಸುವುದೆಂದರೆ ಯುದ್ಧ ಗೆದ್ದ ಅನುಭವ. ಕಾನೂನುಗಳು ಎಷ್ಟೆ ಬಿಗಿಯಾಗಿದ್ದರು ಎಗ್ಗಿಲ್ಲದೆ ಸಾಗುತ್ತಿರುವ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಅಗತ್ಯ. ಈ ಬಗೆಗೆ ಗಮನಹರಿಸಬೇಕು.

-ಎನ್.ಸಿ.ರಾಜೇಂದ್ರಪ್ರಸಾದ್. ವ್ಯಾಪಾರಿ.ಕೃಷಿ ಉಪಕರಣ ದರ ಕಡಿಮೆಯಾಗಲಿ

ಕೃಷ್ಣರಾಜಪೇಟೆ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೃಷಿ ಉತ್ಪನ್ನಗಳಿಗೆ ಸದೃಢವಾದ, ಸಹಕಾರಿ ಕ್ಷೇತ್ರದ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಬೇಕು. ಕೃಷಿ ಚಟುವಟಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಳಕೆಯಾಗುತ್ತಿರುವ ಆಧುನಿಕ ಯಂತ್ರೋಪಕರಣಗಳ ನಿರ್ವಹಣೆ ಬಗ್ಗೆ ರೈತರಿಗೆ ಸೂಕ್ತ ತರಬೇತಿ ವ್ಯವಸ್ಥೆ ಮಾಡಬೇಕು. ಉತ್ತಮ ಗುಣಮಟ್ಟದಿಂದ ಕೂಡಿದ ಯಂತ್ರೋಪಕರಣ ಒದಗಿಸಬೇಕು.

-ನಂದಿನಿ ಜಯರಾಂ (ಕೃಷಿ) ಪ್ರಗತಿಪರ ರೈತ ಮಹಿಳೆ.ಕ್ರೀಡೆಗೆ ಒತ್ತು ನೀಡಿ

ಈ ಬಾರಿಯ ಬಜೆಟ್‌ನಲ್ಲಿ ಕ್ರೀಡಾ ತರಬೇತಿಗೆ ಹೆಚ್ಚು ಒತ್ತು ನೀಡಬೇಕು. ಪ್ರಮುಖವಾಗಿ ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾ ವಸತಿಶಾಲೆಗಳು,  ನುರಿತ ತರಬೇತುದಾರರು, ತಾಂತ್ರಿಕ ಮತ್ತು ಭೌತಿಕ ಸೌಲಭ್ಯಗಳನ್ನು ಒದಗಿಸಬೇಕು. ಆ ಮೂಲಕ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ಅವಕಾಶ ಸಿಗುತ್ತದೆ.   ಈ ಹಿಂದಿನ ಬಜೆಟ್‌ಗಳಲ್ಲಿ ಭರವಸೆ ನೀಡಿದ್ದಂತೆ ಹೊರಾಂಗಣ, ಒಳಾಂಗಣ ಕ್ರೀಡಾಂಗಣಗಳು, ಟ್ರಾಕ್‌ಗಳು, ಕೋರ್ಟ್‌ಗಳ ನಿರ್ಮಾಣ ಇದುವರೆಗೂ ಪೂರ್ಣಗೊಂಡಿಲ್ಲ. 

-ಎಸ್.ರವಿ, ವಾಲಿಬಾಲ್ ಪಟು.ಆರೋಗ್ಯ ಸೇವೆಗೆ ಇನ್ನಷ್ಟು ಒತ್ತು ನೀಡಲಿ

ಈ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಆರೋಗ್ಯ ಸೇವೆಗಳಿಗಾಗಿ ಮೀಸಲಿಡಬೇಕು. ಸಂಪೂರ್ಣ ಉಚಿತವಾದ ಔಷಧೋಪಚಾರ ನೀಡಿಕೆ, ಆಸ್ಪತ್ರೆಗಳ ಶುಚಿತ್ವ ನಿರ್ವಹಣೆ, ದಿನದ 24 ಗಂಟೆಯೂ ಕೇಂದ್ರ ಸ್ಥಾನಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಲಭ್ಯತೆಗೆ ಸರ್ಕಾರ ಪ್ರಥಮ ಆದ್ಯತೆ ನೀಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.