ಸೋಮವಾರ, ಮಾರ್ಚ್ 8, 2021
29 °C
ಭಾರತದ ದೂರ ಓಟದ ದಂತಕಥೆ ಎಡ್ವಿನ್ ಸಿಕ್ವೇರಾ ಅಳಲು

ನಾವು ಬಹರೇನ್ ಎತ್ತರಕ್ಕಾದರೂ ಏರುವುದೆಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾವು ಬಹರೇನ್ ಎತ್ತರಕ್ಕಾದರೂ ಏರುವುದೆಂದು?

ಪುಣೆ: `ನಮ್ಮವರು ರಾಷ್ಟ್ರೀಯ ದಾಖಲೆ, ಏಷ್ಯಾಡ್ ಪದಕ ಇತ್ಯಾದಿ ಮಹದಾಸೆಗಳನ್ನು ಬದಿಗಿಟ್ಟು ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಪಡೆವ ಹೆಗ್ಗುರಿ ಇರಿಸಿಕೊಳ್ಳಬೇಕು. ವಿದೇಶದಲ್ಲಿ ತರಬೇತಿ ಪಡೆಯಬೇಕು. ನಾವೂ ಅಥ್ಲೆಟಿಕ್ಸ್‌ನಲ್ಲಿ ಕನಿಷ್ಠ ಕತಾರ್, ಬಹರೇನ್ ದೇಶಗಳ ಎತ್ತರಕ್ಕೆ ಏರಬಹುದು...' ಎಂದು ವಯೋವೃದ್ಧ ಎಡ್ವಿನ್ ಸಿಕ್ವೇರಾ ಹೇಳುತ್ತಿದ್ದಾಗ ಆ ಸುಕ್ಕುಗಟ್ಟಿದ ಮೊಗ ಆವೇಶದಿಂದ ಇನ್ನಷ್ಟೂ ಕೆಂಪಾಯಿತು.ಏಷ್ಯಾ ಅಥ್ಲೆಟಿಕ್ಸ್ ನೋಡಿ ಸಂಭ್ರಮಿಸಲು ದೇಶದ ಮೂಲೆ ಮೂಲೆಗಳಿಂದ ನೂರಾರು ಮಂದಿ ಹಿರಿಯ ಅಥ್ಲೀಟ್‌ಗಳು ಇಲ್ಲಿಗೆ ಬಂದಿದ್ದಾರೆ. ಪಿ.ಟಿ.ಉಷಾ, ಶೈನಿ ವಿಲ್ಸನ್ ಅವರಷ್ಟೇ ಅಲ್ಲ, ಏಷ್ಯಾ ಖಂಡದ ವೇಗದ ಓಟದ ದಂತಕಥೆ ಎನಿಸಿರುವ ಕತಾರ್‌ನ ತಲಾಲ್ ಮನ್ಸೂರ್ ಮುಂತಾದವರು ಎದ್ದು ಕಾಣುತ್ತಿದ್ದಾರೆ. ಆದರೆ ಸದ್ದಿಲ್ಲದೆ ಒಂದೆಡೆ ಕುಳಿತು ಎಲ್ಲವನ್ನೂ ನೋಡಿ ಎದ್ದು ಹೋದವರು ಎಡ್ಡಿ ಸಿಕ್ವೇರಾ. ಇವರು ಹಿಂದೆ ಏಷ್ಯಾಡ್‌ನಲ್ಲಿ ಪದಕ ಗೆದ್ದವರು, ಒಲಿಂಪಿಕ್ಸ್ ನಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿದವರು.ಅರವತ್ತರ ದಶಕದಲ್ಲಿ ಐದು ಸಾವಿರ ಮೀಟರ್ಸ್ ಓಟದಲ್ಲಿ ಏಷ್ಯಾಡ್ ಬೆಳ್ಳಿ ಪದಕ ಗೆದ್ದಿದ್ದ ಇವರು, ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಎಂಟನೆಯವರಾಗಿ ಗುರಿ ಮುಟ್ಟಿದ್ದರು. ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಆಫ್ರಿಕಾ ಓಟಗಾರರ ಜತೆಜತೆಗೇ ಓಡಿದ್ದರು. ಪದಕ ಗೆಲ್ಲದಿದ್ದರೂ ಅತ್ಯುತ್ತಮ ಪೈಪೋಟಿ ನೀಡಿದ್ದಕ್ಕಾಗಿ ದೇಶದಾದ್ಯಂತ ಸುದ್ದಿಯಾಗಿದ್ದರು. ಕಿಂಗ್ಸ್‌ಟನ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡೆ, ಬ್ಯಾಂಕಾಕ್ ಏಷ್ಯಾಡ್‌ಗಳಲ್ಲಿ ಮಿನುಗಿದ್ದರು. 1963ರಿಂದ 73ರವರೆಗೆ 1500ಮೀ. 3000ಮೀ. ಮತ್ತು 5000 ಮೀಟರ್ಸ್ ಓಟಗಳಲ್ಲಿ ಇವರು ಏಕಸ್ವಾಮ್ಯ ಸಾಧಿಸಿದ್ದರು. 47 ವರ್ಷಗಳ ಹಿಂದೆ ಇವರು 1500ಮೀಟರ್ಸ್ ಓಟವನ್ನು 3ನಿಮಿಷ 43.7ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು. ಆ ದಾಖಲೆಯನ್ನು 35ವರ್ಷಗಳ ನಂತರ ಬಹದ್ದೂರ್ ಪ್ರಸಾದ್ ಹಿಂದಿಕ್ಕಿದರು.ಎಪ್ಪತ್ತೈದರ ಹರೆಯದ ಎಡ್ವಿನ್ ಅವರಲ್ಲಿ ಇವತ್ತಿಗೂ ಆ ಕ್ರೀಡಾ ಸ್ಫೂರ್ತಿ ಕಡಿಮೆಯಾಗಿಲ್ಲ. ವರ್ಷದ ಹಿಂದೆ ಮನೆಯಲ್ಲಿದ್ದ ಅನಿಲ ಸಿಲಿಂಡರ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡು ಸುಮಾರು ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಮಲಗಿದ್ದ ಇವರು ಈಚೆಗಷ್ಟೇ ಚೇತರಿಸಿಕೊಂಡಿದ್ದಾರೆ. ಆದರೆ ತಮ್ಮ ಅಸ್ವಸ್ಥ ಸ್ಥಿತಿಯಲ್ಲಿಯೂ ಮುಂಬೈನಿಂದ ಹೊರಟು ಇಲ್ಲಿಗೆ ಬಂದು ಜನರ ನಡುವೆ ಕುಳಿತು ಬಹಳಷ್ಟು ಸ್ಪರ್ಧೆಗಳನ್ನು ವೀಕ್ಷಿಸಿ ಹೋಗಿದ್ದಾರೆ. ಮಹಾರಾಷ್ಟ್ರ ಅಥ್ಲೆಟಿಕ್ಸ್ ವಲಯದಲ್ಲಿ ಎಲ್ಲಾ ಪೀಳಿಗೆಯ ಜನರೂ ಅಪಾರವಾಗಿ ಗೌರವಿಸುವ ಈ ಓಟದ ಅಜ್ಜನೊಡನೆ `ಪ್ರಜಾವಾಣಿ'ಗಾಗಿ ನಡೆಸಿದ ಮಾತುಕತೆಯ ವಿವರ ಇಲ್ಲಿದೆ.ಹೊಸ ಪೀಳಿಗೆಯ ಅಥ್ಲೀಟ್‌ಗಳ ಬಗ್ಗೆ ಏನನ್ನಿಸುತ್ತದೆ ?

ನಾವು ಆಗ ದೇಶಕ್ಕಾಗಿ ಪದಕ ಗೆಲ್ಲಲು ಓಡುತ್ತಿದ್ದೆವು. ಈಗ ದೇಶಕ್ಕಿಂತಲೂ ಹಣವನ್ನು ಗುರಿಯಾಗಿರಿಸಿಕೊಂಡು ಓಡುವವರೇ ಹೆಚ್ಚು. ಅರ್ಪಣಾ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಹೀಗಾಗಿ ನಮ್ಮವರಲ್ಲಿ ಆ `ಕಿಲ್ಲಿಂಗ್ ಇನ್‌ಸ್ಟಿಂಕ್ಟ್' ಕಾಣುವುದಿಲ್ಲ.ಹಾಗಿದ್ದರೆ ನಮ್ಮಿಂದ ಅಥ್ಲೆಟಿಕ್ಸ್‌ನಲ್ಲಿ ಎತ್ತರದ ಸಾಮರ್ಥ್ಯ ಸಾಧ್ಯವೇ ಇಲ್ಲ ಎನ್ನುತ್ತೀರಾ ?

ನಮ್ಮಲ್ಲಿ ಅದ್ಭುತ ಪ್ರತಿಭಾವಂತರಿದ್ದಾರೆ. ಆದರೆ ಅವರನ್ನು ಗುರುತಿಸಿ ಸಮರ್ಪಕ ತರಬೇತಿ ನೀಡಿ ಉನ್ನತ ಮಟ್ಟದ ಕನಸುಗಳನ್ನು ಮೂಡಿಸುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿದೆ. ಇವತ್ತು ಎಳವೆಯಲ್ಲಿಯೇ ವೈಜ್ಞಾನಿಕ ರೀತಿಯಲ್ಲಿ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಮೂಲಭೂತ ತರಬೇತಿ ನೀಡಿದ ನಂತರ ಅವರನ್ನು ಅಮೆರಿಕಾ, ಆಸ್ಟ್ರೇಲಿಯಾಗಳಿಗೆ ಕಳುಹಿಸಿಕೊಡಬೇಕು. ಇಂತಹ ಸಂದರ್ಭದಲ್ಲಿ ನಮ್ಮ ಉದ್ಯಮಿಗಳು ಮುಂದೆ ಬಂದು ಅಂತವರಿಗೆ ಪ್ರಾಯೋಜಕತ್ವ ನೀಡಬೇಕು. ಜತೆಗೆ ನಮ್ಮ ರಾಷ್ಟ್ರೀಯ, ರಾಜ್ಯ ಕೂಟಗಳ ಗುರಿಗಳಿಗೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವಿದೇಶದಲ್ಲಿ ನಡೆಯುವ ಡೈಮಂಡ್ ಲೀಗ್‌ಗಳಲ್ಲಿ ಸ್ಪರ್ಧಿಸುವ ಛಾತಿ ಈ ನೆಲದ ಅಥ್ಲೀಟ್‌ಗಳಿಗೆ ಬರಬೇಕು. ಆಗ ನೋಡಿ ಈ ನಾಡಿನ ಟ್ರ್ಯಾಕ್‌ನಲ್ಲಿ ಅದ್ಭುತಗಳೇ ನಡೆಯಲು ಸಾಧ್ಯ.ಏಷ್ಯಾ ಖಂಡದಲ್ಲಿ ಚೀನಾ, ಜಪಾನ್‌ಗಳಿಗೆ ಹೋಲಿಸಿದರೆ ನಾವು ಬಹಳ ಹಿಂದಿದ್ದೇವೆ. ಅವರ ಮಾದರಿ ನಮಗೆ ಬೇಕೆನಿಸುತ್ತದಾ ?

ನಾವು ಓಡುತ್ತಿದ್ದ ಕಾಲದಲ್ಲಿ ಚೀನಾ ನಮ್ಮಂತೇ ಇತ್ತು. ಅದೇನೇ ಇರಲಿ, ಸದ್ಯಕ್ಕೆ ನಾವು ಚೀನಾ ಮಾದರಿಯನ್ನು ನೋಡುವುದಕ್ಕಿಂತ ಬಹರೇನ್, ಕತಾರ್‌ಗಳ ಮಾದರಿಯನ್ನು ನೋಡುವ. ಕೇವಲ ಒಂದು ದಶಕದಲ್ಲಿ ಆ ದೇಶಗಳು ಇವತ್ತು ನಮ್ಮ ನೆಲಕ್ಕೆ ಬಂದು ನಮ್ಮವರನ್ನೆಲ್ಲಾ ಹಿಂದಿಕ್ಕಿ ಹೋಗುತ್ತಿದ್ದಾರಲ್ಲ, ಜತೆಗೆ ಒಲಿಂಪಿಕ್ಸ್ ಎತ್ತರಕ್ಕೂ ಬೆಳೆದಿದ್ದಾರೆ.ಆದರೆ ಅಲ್ಲಿ ಓಡುವವರು ಆಫ್ರಿಕಾ ದೇಶಗಳ ಅಥ್ಲೀಟ್‌ಗಳು ತಾನೆ ?

ಹೌದು. ಅವರಿಗೆ ಸಮರ್ಪಕ ತರಬೇತಿ ನೀಡಿ ಆ ಎತ್ತರಕ್ಕೆ ಬೆಳೆಸಿದ್ದು ಬಹರೇನ್, ಕತಾರ್ ಕ್ರೀಡಾ ವ್ಯವಸ್ಥೆಯಲ್ಲವೆ.ಅಂತಹ ಪ್ರಯೋಗ ಭಾರತದಲ್ಲಿ ನಡೆಯಲು ಸಾಧ್ಯವೇ ?

ಏಕೆ ಸಾಧ್ಯವಿಲ್ಲ. ನಾವು ಮುಂಬೈನಲ್ಲಿ ಸಿದ್ಧಾಂತ್ ತಿಂಗಳಾಯ ಎಂಬ ಕಿರಿಯ  ಪ್ರತಿಭೆಯನ್ನು ಗುರುತಿಸಿ ಮೊದಲಿಗೆ ತರಬೇತಿ ನೀಡಿದ್ದೆವು. ನಂತರ ನಾನೇ ಮಿಟ್ಟಲ್ ಉದ್ದಿಮೆ ಸಂಸ್ಥೆಯವರಿಗೆ ಪತ್ರ ಬರೆದು ಈತನಿಗೆ ಉನ್ನತ ಮಟ್ಟದ ತರಬೇತಿ ನೀಡಬೇಕೆಂದು ಮನವಿ ಮಾಡಿದ್ದೆ. ಆಗ ಆ ಸಂಸ್ಥೆ ತಿಂಗಳಾಯನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿ ತರಬೇತಿ ಕೊಡಿಸಿತು. ಇದೀಗ ಜಿಂದಾಲ್ ಗುಂಪಿನವರು ಈತನನ್ನು ಜರ್ಮನಿಗೆ ತರಬೇತಿಗಾಗಿ ಕಳುಹಿಸಿಕೊಡುತ್ತಿದೆ. ಈತ 110ಮೀಟರ್ಸ್ ಹರ್ಡಲ್ಸ್ ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರುತ್ತಿದ್ದಾನೆ. ಇವನು ಈಗಾಗಲೇ ಜೂನಿಯರ್ ವಿಶ್ವಕಪ್ ಅಥ್ಲೆಟಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದಾನೆ. ಇವನಿಗಿನ್ನೂ 21ರ ಹರೆಯ. ಮುಂದಿನ ಒಲಿಂಪಿಕ್ಸ್ ಅನ್ನ ಗುರಿಯಾಗಿಸಿಕೊಂಡು ಆತ ತರಬೇತಿ ಪಡೆಯುತ್ತಿದ್ದಾನೆ. ಇಂತಹ ಸಾವಿರಾರು ಪ್ರಯೋಗಗಳನ್ನು ನಡೆಸಲು ಭಾರತದಲ್ಲಿ ಅವಕಾಶವಿದೆ. ಜನ ಜಾಗೃತಿಗೊಳ್ಳಬೇಕಷ್ಟೆ. ಆಗ ಭಾರತವು ಬಹರೇನ್‌ನಷ್ಟಾದರೂ ಎತ್ತರಕ್ಕೆ ಏರಲು ಸಾಧ್ಯ.ಈ ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಏನನ್ನಿಸುತ್ತದೆ ?

ಬಹಳ ವಿಷಾದವಾಗುತ್ತಿದೆ. ನಾವು ಈಗ ಕನಿಷ್ಠ ಹತ್ತು ಬಂಗಾರವನ್ನಾದರೂ ಗೆಲ್ಲಬೇಕಿತ್ತು. ಆದರೆ ಸಧ್ಯಕ್ಕೆ ವಿಕಾಸ್ ಗೌಡ ಗೆದ್ದ ಚಿನ್ನದ ಬಗ್ಗೆ ಸಂಭ್ರಮಿಸುತ್ತಿದ್ದೇವೆ. ಅವನು ನಮ್ಮವನಿರಬಹುದು. ಆತ ರೂಪುಗೊಂಡಿದ್ದು ಅಮೆರಿಕಾದಲ್ಲಿ ತಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.