ಗುರುವಾರ , ಮೇ 26, 2022
30 °C

ನಿತ್ಯಾನಂದ ಬಂಧನಕ್ಕೆ ಸಿ.ಎಂ ಆದೇಶ: ಧ್ಯಾನಪೀಠಕ್ಕೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ರಾಮನಗರ: ಬಿಡದಿ ಸಮೀಪದ ಧ್ಯಾನಪೀಠ ಆಶ್ರಮಕ್ಕೆ ಬೀಗ ಜಡಿದು, ಅದರ ಪೀಠಾಧ್ಯಕ್ಷ ನಿತ್ಯಾನಂದ ಸ್ವಾಮೀಜಿಯನ್ನು ತಕ್ಷಣ ಬಂಧಿಸುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.ವಿವಾದದ ಕೇಂದ್ರ ಬಿಂದುವಾಗಿರುವ ಆಶ್ರಮದಲ್ಲಿನ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಗೃಹ ಸಚಿವ ಆರ್.ಅಶೋಕ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸೋಮವಾರ ವಿಧಾನಸೌಧದಲ್ಲಿ ಮಾಹಿತಿ ಪಡೆದ ನಂತರ ಅವರು ಈ ಸೂಚನೆ ನೀಡಿದರು.ಕೆಲವು ದೃಶ್ಯಮಾಧ್ಯಮ ಪ್ರತಿನಿಧಿಗಳು ಮತ್ತು ಆಶ್ರಮದ ಸಿಬ್ಬಂದಿ ನಡುವೆ ಜೂನ್ 8ರಂದು ಘರ್ಷಣೆ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದರ ಬೆನ್ನಿಗೇ ಕನ್ನಡಪರ ಸಂಘಟನೆಗಳು ಸ್ವಾಮೀಜಿ ಬಂಧನಕ್ಕೆ ಆಗ್ರಹಿಸಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಹಾಗೂ ಅವರ ಬೆಂಬಲಿಗರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.ಆಶ್ರಮವನ್ನು ವಶಕ್ಕೆ ತೆಗೆದುಕೊಂಡು, ಇತ್ತೀಚಿನ ವಿದ್ಯಮಾನಗಳ ಕುರಿತು ಪ್ರಾದೇಶಿಕ ಆಯುಕ್ತ ಶಂಬುದಯಾಳ್ ಮೀನಾ ಅವರಿಂದ ವಿಚಾರಣೆ ನಡೆಸಲು ಆದೇಶಿಸಲಾಗಿದೆ.   ವಿಚಾರಣೆ ನಡೆಸಿ ಸರ್ಕಾರಕ್ಕೆ ಅವರು ವರದಿ ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. ಆಶ್ರಮದಲ್ಲಿನ ಎಲ್ಲ ಕೊಠಡಿಗಳನ್ನು ಶೋಧಿಸಬೇಕು. ಅಲ್ಲಿನ ಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಬೇಕು ಎಂದೂ ಅವರು ಸೂಚಿಸಿದ್ದಾರೆ.ಈ ನಡುವೆ ನಿತ್ಯಾನಂದ ಸ್ವಾಮೀಜಿ ಹಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಶೋಧ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಅತ್ಯಾಚಾರ ಸೇರಿದಂತೆ ಇತರೆ ಕ್ರಿಮಿನಲ್ ಮೊಕದ್ದಮೆಗಳು ಸ್ವಾಮೀಜಿ ಅವರ ವಿರುದ್ಧ ಇದ್ದು, ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಇವರ ಜಾಮೀನು ರದ್ದು ಮಾಡುವಂತೆ ಸರ್ಕಾರ ಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.ಮುಖ್ಯಮಂತ್ರಿ ಹೇಳಿಕೆ ಹೊರಬಿದ್ದ ನಂತರ ಆಶ್ರಮದಿಂದ ಹೊರ ಹೋಗುವ ಭಕ್ತರು ಮತ್ತು ಆಶ್ರಮವಾಸಿಗಳ ಸಂಖ್ಯೆ ಸೋಮವಾರ ಹೆಚ್ಚಾಗಿತ್ತು. ನಾಲ್ಕು-ಐದು ದಿನಗಳಿಂದ ಆಶ್ರಮದ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತ ಕೆಲವು ಭಕ್ತರು ಆಶ್ರಮದಿಂದ ಹೊರ ನಡೆದಿದ್ದರು. ಮುಖ್ಯಮಂತ್ರಿ ಹೇಳಿಕೆಯ ಬಳಿಕ ನೂರಾರು ಭಕ್ತರು ಆಶ್ರಮ ಖಾಲಿ ಮಾಡಿದ್ದಾರೆ. ಆಶ್ರಮದಿಂದ ಹೊರ ಹೋಗುತ್ತಿದ್ದ ಭಕ್ತರ ವಸ್ತುಗಳನ್ನು ಪೊಲೀಸರು ತಪಾಸಣೆಗೊಳಪಡಿಸಿ ಅವರನ್ನು ಹೊರಗಡೆ ಕಳುಹಿಸಿದರು. ಈ ಸಂದರ್ಭದಲ್ಲಿ ವಿದೇಶಿ ಮಹಿಳೆಯೊಬ್ಬರ ಬಳಿ `ಹಾರ್ಡ್ ಡಿಸ್ಕ್~ಗಳು ಇದ್ದುದ್ದನ್ನು ಪತ್ತೆ ಹಚ್ಚಿದ ಪೊಲೀಸರು ಅವುಗಳನ್ನು ವಶಕ್ಕೆ ತೆಗೆದುಕೊಂಡು, ಆ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

 

ಆಶ್ರಮದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೀಸಲು ಪಡೆಯ ನಾಲ್ಕು ವಾಹನಗಳು ಆಶ್ರಮದ ಮುಖ್ಯ ದ್ವಾರದ ಬಳಿ ಬೀಡು ಬಿಟ್ಟಿವೆ.ಗುರುವಾರ ಮತ್ತು ಶುಕ್ರವಾರ ಆಶ್ರಮದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಕರ್ನಾಟಕ ನವ ನಿರ್ಮಾಣ ವೇದಿಕೆಯ 16 ಕಾರ್ಯಕರ್ತರಿಗೆ ರಾಮನಗರ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ.ಶುಕ್ರವಾರ ರಾತ್ರಿ ಜಾಮೀನು ಪಡೆದಿದ್ದ ನಿತ್ಯಾನಂದ ಸ್ವಾಮೀಜಿ ಅವರ ಎಂಟು ಶಿಷ್ಯಂದಿರು ಸೋಮವಾರ ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಪ್ರಕಾರ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು.ಮಂಗಳವಾರ ಬೀಗಮುದ್ರೆ ? : ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಜಿಲ್ಲಾ ಆಡಳಿತ ಧ್ಯಾನಪೀಠ ಆಶ್ರಮಕ್ಕೆ ಮಂಗಳವಾರ ಬೀಗಮುದ್ರೆ ಹಾಕುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.`ಆಶ್ರಮಕ್ಕೆ ಬೀಗಮುದ್ರೆ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಧಿಕಾರಿ ಅವರಿಗೆ ಸಮಗ್ರ ವರದಿಯನ್ನು ನೀಡುತ್ತೇನೆ. ನಂತರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ~ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್ `ಪ್ರಜಾವಾಣಿ~ಗೆ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.