ಮಂಗಳವಾರ, ಏಪ್ರಿಲ್ 13, 2021
32 °C

ನಿರೀಕ್ಷೆಗಿಂತ ಕಡಿಮೆ ಲಾಭ ಗಳಿಸಿದ ಇನ್ಫೋಸಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಐಎಎನ್ಎಸ್): ದೇಶದ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪೆನಿ ಇನ್ಫೋಸಿಸ್ ತನ್ನ  ಈ ಸಾಲಿನ ಕೊನೆಯ ತ್ರೈಮಾಸಿಕ ಹಾಗೂ ವಾರ್ಷಿಕ ವರದಿ ಪ್ರಕಟಿಸಿದ್ದು, ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಶೇ. 13.62 ರಷ್ಟು ಲಾಭಾಂಶ ದಾಖಲಿಸಿದ್ದರೆ, 2010-11ರ ಒಟ್ಟಾರೆ ಹಣಕಾಸು ವರ್ಷದಲ್ಲಿ ಶೇ. 9.7 ರಷ್ಟು ಲಾಭ ಪಡೆದಿದೆ.ಆದರೆ ಇದು ಮಾರುಕಟ್ಟೆ ನಿರೀಕ್ಷೆಗಿಂತ ಕಡಿಮೆ ಎಂದು ವರದಿ ತಿಳಿಸಿದೆ. ಇದೇ ವೇಳೆ ಪ್ರತಿ ಷೇರಿನ ಮೇಲೆ 20 ರೂಗಳ ಲಾಭಾಂಶವನ್ನು ಕಂಪೆನಿ ಷೇರುದಾರರಿಗೆ ನೀಡಿದೆ.ವರ್ಷದಿಂದ ವರ್ಷಕ್ಕೆ ತನ್ನ ಲಾಭದಲ್ಲಿ ಏರಿಕೆಯಾಗುತ್ತಿದೆ ಎಂದು ಕಂಪೆನಿ ತಿಳಿಸಿದ್ದರೂ ಸಹ ಮಾರುಕಟ್ಟೆ ತಜ್ಞರು ಮಾರುಕಟ್ಟೆ ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಂಪೆನಿ ಲಾಭ ಗಳಿಸಿದೆ ಎಂದಿದ್ದಾರೆ.2010-11ರ ಹಣಕಾಸು ವರ್ಷದ ಕಡೆಯ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿ 1,818 ಕೋಟಿ ರೂ ಗಳಷ್ಟು ನಿವ್ವಳ ಲಾಭ ಗಳಿಸಿದೆ.

ರಾಜೀನಾಮೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ನ ಸಹ ಸಂಸ್ಥಾಪಕ ಕೆ. ದಿನೇಶ್ ಹಾಗೂ ಮಂಡಳಿ ನಿರ್ದೇಶಕ ಟಿ.ವಿ. ಮೋಹನ್ ದಾಸ್ ಪೈ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕಂಪೆನಿ ಪ್ರಕಟನೆ ತಿಳಿಸಿದೆ. ಅಲ್ಲಿಗೆ ಪೈ ಅವರು 17 ವರ್ಷಗಳ ತಮ್ಮ ಕಂಪೆನಿಯ ಜತೆಗಿನ ಬಾಂಧವ್ಯವನ್ನು ಕಡಿದುಕೊಂಡಿದ್ದಾರೆ.  ದಿನೇಶ್ ಅವರು ನಿವೃತ್ತಿಯಾಗುತ್ತಿದ್ದು, ಅವರೂ ಸಹ ಪುನರ್ ನೇಮಕವನ್ನು ಬಯಸುತ್ತಿಲ್ಲ ಎಂದು ಪ್ರಕಟನೆ ತಿಳಿಸಿದೆ.

ಮೈಕ್ರೋಸಾಫ್ಟ್ ಇಂಡಿಯಾದ ಮಾಜಿ ಅಧ್ಯಕ್ಷ ರವಿ ವೆಂಕಟೇಶನ್ ಅವರನ್ನು ಇನ್ಫೋಸಿಸ್ ಕಂಪೆನಿಯ ಆಡಳಿತ ಮಂಡಳಿಗೆ ಸೇರಿಸಿಕೊಳ್ಳಲಾಗಿದ್ದು, ಅವರನ್ನು ಕಂಪೆನಿಯ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಇನ್ಫೋಸಿಸ್ ನ ಅಧ್ಯಕ್ಷ ನಾರಾಯಣಮೂರ್ತಿ ಅವರು ಹೊರಡಿಸಿರುವ ಪ್ರಕಟನೆ ತಿಳಿಸಿದೆ.

ನೇಮಕಾತಿ : ಮುಂದಿನ ಹಣಕಾಸು ವರ್ಷದಲ್ಲಿ ಕಂಪೆನಿಯು 45 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಪ್ರಕಟನೆ ತಿಳಿಸಿದೆ. ಈಗಾಗಲೇ ಕ್ಯಾಂಪಸ್ ನೇಮಕಾತಿಯಲ್ಲಿ 2012 ನೇ ಹಣಕಾಸು ವರ್ಷಕ್ಕಾಗಿ 26 ಸಾವಿರ ಮಂದಿಯ ನೇಮಕವನ್ನು ಧೃಡಪಡಿಸಿದೆ.

2010-11ರ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ಕಂಪೆನಿ 8,930 ಜನರನ್ನು ನೇಮಕ ಮಾಡಿಕೊಂಡಿತ್ತು. ಸದ್ಯಕ್ಕೆ 1,30,820 ಮಂದಿ ಕೆಲಸಗಾರರು ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.