ಸೋಮವಾರ, ಆಗಸ್ಟ್ 10, 2020
24 °C

ನಿರೀಕ್ಷೆ ಹುಟ್ಟಿಸಿರುವ ಹೊಸ ಬಜೆಟ್

-ಸಂದೀಪ್ ಶಾಸ್ತ್ರಿ,ರಾಜಕೀಯ ವಿಶ್ಲೇಷಕ . Updated:

ಅಕ್ಷರ ಗಾತ್ರ : | |

ನಿರೀಕ್ಷೆ ಹುಟ್ಟಿಸಿರುವ ಹೊಸ ಬಜೆಟ್

ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್  ಸ್ಪಷ್ಟವಾಗಿ ಹೊಸ ನಿರೀಕ್ಷೆಗಳನ್ನು ಮೂಡಿಸಿರುವ  ಹಾದಿಯಲ್ಲಿದೆ. ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ ಯೋಜನೆಗಳ ಜಾರಿಗೆ ಬಜೆಟ್‌ನಲ್ಲಿ ಸಾಕಷ್ಟು ಹಣ ಮೀಸಲು ಇಡಬೇಕಿತ್ತು.ಪಕ್ಷವು ಚುನಾವಣಾ ಪ್ರಣಾಳಿಕೆಯ ಭಾಗವಾಗಿ ನೀಡಿದ ಆಶ್ವಾಸನೆಗಳಲ್ಲಿ ಕೆಲವು ಕೊಡುಗೆಗಳನ್ನು ಮಾತ್ರ ಬಜೆಟ್‌ನಲ್ಲಿ ಸೇರಿಸಿದೆಯಷ್ಟೆ.ಎರಡನೆಯದಾಗಿ, ಇನ್ನೊಂದು ವರ್ಷದಲ್ಲಿ ನಡೆಯುವ ಲೋಕಸಭಾ ಚುನಾವಣೆ  ಗಮನದಲ್ಲಿರಿಸಿ, ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಸಾಲು ಸಾಲಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಮತ್ತು ಒಟ್ಟಾರೆಯಾಗಿ ಯುಪಿಎ ಗೆಲುವಿಗೆ ಕರ್ನಾಟಕದ ಅವಲಂಬನೆ ಹೆಚ್ಚು ನೆರವಾಗಲಿದೆ ಎಂಬ ಭರವಸೆಯಲ್ಲಿ ಕಾಂಗ್ರೆಸ್ ಇದೆ.ಯಾರಾದರೂ, ಸಿದ್ದರಾಮಯ್ಯನವರ ಬಜೆಟ್‌ನ್ನು ಒಂದು ವಿಚಿತ್ರ ಬಗೆಯ `ಮಧು ಚಂದ್ರ' ಆಯವ್ಯಯ ಎನ್ನಬಹುದು. ಇಂತಹ ಸಂದರ್ಭದಲ್ಲಿ, ಈಗಷ್ಟೇ ಅಧಿಕಾರಕ್ಕೆ ಬಂದ ಸರ್ಕಾರವೊಂದು ಮತ್ತೆ ಪಕ್ಷವನ್ನು ಕೇಂದ್ರದಲ್ಲಿಯೂ ಅಧಿಕಾರಕ್ಕೆ ತರುವ ಸಲುವಾಗಿ ಮತದಾರರ ಓಲೈಸಲು ತನ್ನ ಪ್ರಯತ್ನ  ಮುಂದುವರಿಸುತ್ತದೆ.

ಇಂತಹ ಬಜೆಟ್‌ನಿಂದ ಸರ್ಕಾರ ಕೈಗೊಳ್ಳಬೇಕಾದ ಯಾವುದೇ ಬಿಗಿಯಾದ ಮತ್ತು ಹಿತವಲ್ಲದ ಸುಧಾರಣಾ ಕ್ರಮಗಳನ್ನು ನಿರೀಕ್ಷಿಸಲಾಗದು. ಇದನ್ನು ಮುಂದಿನ ವರ್ಷಗಳಲ್ಲಾದರೂ ಮೀಸಲಿರಿಸುವ ಅವಶ್ಯಕತೆ ಇದೆ.ಗ್ರಾಮೀಣ ವಲಯ, ಕೃಷಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಂಬಂಧಿಸಿದ ಯೋಜನೆಗಳ ಜಾರಿಗೆ ಬಜೆಟ್‌ನಲ್ಲಿ ಅವಕಾಶ ನೀಡುವ ಮೂಲಕ ಸರಿಯಾದ ರಾಜಕೀಯ ಕ್ರಮ ಕೈಗೊಳ್ಳಲಾಗಿದೆ.ರೂ 2 ಲಕ್ಷ ಮೊತ್ತದ ಸಾಲದವರೆಗೆ ಬಡ್ಡಿರಹಿತ ಕೃಷಿ ಸಾಲ, ಬಡತನ ರೇಖೆಗಿಂತ ಕೆಳಗಿರುವ ವಿಚ್ಛೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಗುರಿಯ `ಮನಸ್ವಿನಿ' ಯೋಜನೆ, ಹಿಂದುಳಿದ ವರ್ಗಗಳಲ್ಲಿನ ಒಳಮೀಸಲಾತಿ ಹೆಚ್ಚಳ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆ ಇಳಿಕೆ ಮುಂತಾದವು ಬಜೆಟ್ ಮುಖ್ಯಾಂಶಗಳನ್ನು ಪ್ರತಿಬಿಂಬಿಸುತ್ತವೆ.ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ರೂ 4,000 ಕೋಟಿ ಮೀಸಲು, ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ ಸ್ಥಾಪನೆ, ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳು ಹಾಗೂ ಸುತ್ತಮುತ್ತಲ ರಸ್ತೆಗಳ ಸಂಪರ್ಕಕ್ಕೆ `ವೈ-ಫೈ' ಸೌಲಭ್ಯ ಕಲ್ಪಿಸುವುದು ಇತ್ಯಾದಿ ರಾಜಧಾನಿಯ ಅವಶ್ಯಕತೆಗಳನ್ನು ಪೂರೈಸಲು ಬಜೆಟ್‌ನಲ್ಲಿ ಗಮನಹರಿಸಲಾಗಿದೆ.ಸಂಪನ್ಮೂಲ ಕ್ರೋಡಿಕರಣ ಸಾಮರ್ಥ್ಯ ಹೊಸ ಕಲ್ಯಾಣ ಯೋಜನೆಗಳು ಮತ್ತು ಕಾರ್ಯಕ್ರಮಗಳ ಜಾರಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಡಿಕರಿಸುವ ಸಾಮರ್ಥ್ಯವನ್ನೂ ಸರ್ಕಾರ  ಪ್ರದರ್ಶಿಸಬೇಕಿದೆ.

ಹಣಕಾಸು ಸಚಿವರಾಗಿ ಒಳ್ಳೆಯ ದಾಖಲೆ ಹೊಂದಿರುವ ಸಿದ್ದರಾಮಯ್ಯನವರು ಸಂಪನ್ಮೂಲಗಳ ಸಂಗ್ರಹಕ್ಕೆ ಉತ್ತಮ ಅವಕಾಶ ಕಲ್ಪಿಸಬೇಕಿದೆ. ಈ ಸಲವೂ ಅವರು ಇದರಲ್ಲಿ ಯಶಸ್ವಿಯಾಗುವರು ಎಂಬ ವಿಶ್ವಾಸ ಅನೇಕರಲ್ಲಿದೆ. ಈ ಸಂಬಂಧ ಯಾವುದೇ ಕೊರತೆ ಕಂಡುಬಂದಲ್ಲಿ, ಅದರಿಂದ ರಾಜ್ಯದ ಆರ್ಥಿಕ ಸ್ಥಿತಿ ಅಪಾಯಕ್ಕೆ ಸಿಲುಕುವುದು.ಶಿಕ್ಷಣ ವಲಯಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡಬಹುದಿತ್ತು ಎಂದು ಹಲವರು ನಂಬುತ್ತಾರೆ. ಶಿಕ್ಷಣಕ್ಕೆ ರೂ 18,923 ಕೋಟಿ ಮೀಸಲಿರಿಸಲಾಗಿದೆ. ನಿಗದಿಯ ಗುರಿಯ ಯೋಜನೆಗಳೊಂದಿಗೆ ಬಹುಮಟ್ಟದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವ ಕ್ರಮ ಸ್ವಾಗತಾರ್ಹ.ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯದ ಅಭಿವೃದ್ಧಿಗೆ ಕೈಗೊಳ್ಳುವ ಕ್ರಮಗಳ ಬಗ್ಗೆಯೂ ಬಜೆಟ್‌ನಲ್ಲಿ ಇನ್ನಷ್ಟು ವಿವರಗಳು ಇರಬೇಕಾಗಿತ್ತು.  ಇದರ ಜಾರಿಗೆ ಸಾಕಷ್ಟು ಶಕ್ತಿ ಮತ್ತು ಚಾಲನಾ ಕ್ರಮ ಅವಲಂಬಿಸಿದೆ.ಅಧಿಕಾರಕ್ಕೆ ಮರಳಿರುವ ಆಡಳಿತ ಪಕ್ಷದ ನಿಲುವನ್ನು ಈ ಬಜೆಟ್ ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ಇನ್ನೊಂದು ವರ್ಷದೊಳಗೆ ನಡೆಯಲಿರುವ ಮಹತ್ವದ ಮತ್ತೊಂದು ಚುನಾವಣೆಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಉಳಿಸಿಕೊಳ್ಳುವ ವಿಶ್ವಾಸವನ್ನೂ ಬಜೆಟ್ ಹೊಂದಿದೆ.

-ಸಂದೀಪ್ ಶಾಸ್ತ್ರಿ, ರಾಜಕೀಯ ವಿಶ್ಲೇಷಕ .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.