ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಯ ಹತ್ಯೆ: ಲಾಡೆನ್ ಪುತ್ರರ ಖಂಡನೆ

Last Updated 11 ಮೇ 2011, 18:40 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಒಸಾಮ ಬಿನ್ ಲಾಡೆನ್‌ನನ್ನು ‘ನಿರ್ದಯವಾಗಿ ಹತ್ಯೆ’ ಮಾಡಿ ಸಮುದ್ರದಲ್ಲಿ ಶವಸಂಸ್ಕಾರ ನಡೆಸಿದ ಅಮೆರಿಕದ ಕೃತ್ಯವನ್ನು ಲಾಡೆನ್‌ನ ವಯಸ್ಕ ಪುತ್ರರು ಬುಧವಾರ ಉಗ್ರವಾಗಿ ಖಂಡಿಸಿದ್ದಾರೆ.

ಅಮೆರಿಕವು ಅಲ್‌ಖೈದಾ ಮುಖ್ಯಸ್ಥನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಮೂಲಕ ಸತ್ಯವನ್ನು ವಿಶ್ವದ ಮುಂದೆ ಇಡಲಿಲ್ಲವೇಕೆ ಎಂದು ಅವರು ಪ್ರಶ್ನಿಸಿದ್ದಾರೆ.ತಮ್ಮ ತಂದೆಯ ಹತ್ಯೆ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಅವರು ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ಶಸ್ತ್ರರಹಿತ ವ್ಯಕ್ತಿಯನ್ನು ಕೊಂದು ಆತನ ಶವವನ್ನು ಸಮುದ್ರದಲ್ಲಿ ನಾಶ ಮಾಡಿ, ಆತನ ಕುಟುಂಬದ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಅಮೆರಿಕವು ವಿಶ್ವಸಂಸ್ಥೆಯ ಮೂಲ ತತ್ವಗಳನ್ನು ಉಲ್ಲಂಘಿಸಿದೆ ಎಂದು ಪುತ್ರರು ಆರೋಪಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ರಾಜಕೀಯ ಸಮಸ್ಯೆಗಳಿಗೆ ನಿರಂಕುಶ  ಹತ್ಯೆಯು ಪರಿಹಾರವಲ್ಲ. ಲಾಡೆನ್‌ನ ಮೂವರು ಪತ್ನಿಯರು ಮತ್ತು ಮಕ್ಕಳನ್ನು ಕುಟುಂಬದ ವಶಕ್ಕೆ ಒಪ್ಪಿಸಬೇಕು ಎಂದು ಅವರು ಪಾಕಿಸ್ತಾನ ಸರ್ಕಾರವನ್ನು ಕೋರಿದ್ದಾರೆ.

ಈ ಹಿಂದೆ ತನ್ನ ತಂದೆಯ ಭಯೋತ್ಪಾದನೆಯನ್ನು ಬಹಿರಂಗವಾಗಿಯೇ ಖಂಡಿಸಿದ್ದ ಲಾಡೆನ್‌ನ ನಾಲ್ಕನೇ ಪುತ್ರ ಒಮರ್ ಬಿನ್ ಲಾಡೆನ (30) ನಿರ್ದೇಶನದ ಮೇರೆಗೆ ಈ ಪತ್ರ ಬರೆಯಲಾಗಿದ್ದು, ಅಮೆರಿಕದ ಲೇಖಕ ಜೀನ್ ಸ್ಯಾಸನ್ ಇದನ್ನು ಪತ್ರಿಕೆಗೆ ರವಾನಿಸಿದ್ದಾರೆ.

2009ರಲ್ಲಿ ತಾಯಿ ನಜ್ವಾ ಅವರೊಂದಿಗೆ ಸೇರಿ ತನ್ನ ಜೀವನ ವೃತ್ತಾಂತ ಬರೆಯಲು ಒಮರ್‌ಗೆ ಸ್ಯಾಸನ್ ನೆರವಾಗಿದ್ದರು.ಚಿಕ್ಕದಾದ ಮತ್ತು ಕೊಂಚ ಭಿನ್ನವಾದ ಈ ಹೇಳಿಕೆಯನ್ನು ಜಿಹಾದಿಗಳ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ.

1999ರವರೆಗೂ ತನ್ನ ತಂದೆಯೊಂದಿಗೆ ಆಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಒಮರ್ ನಂತರ ತಾಯಿಯೊಟ್ಟಿಗೆ ಆ ದೇಶವನ್ನು ತ್ಯಜಿಸಿದ್ದ. ಪುಸ್ತಕ ಮತ್ತು ಇತರ ಸಾರ್ವಜನಿಕ ಹೇಳಿಕೆಗಳಲ್ಲಿ ಎಲ್ಲ ಬಗೆಯ ಹಿಂಸಾಕೃತ್ಯಗಳನ್ನೂ ಆತ ಖಂಡಿಸುತ್ತಿದ್ದ. ಒಮರ್ ಬಿಟ್ಟರೆ ಉಳಿದವರ್ಯಾರ ಹೆಸರೂ ಹೇಳಿಕೆಯಲ್ಲಿ ಇಲ್ಲ. ಹೀಗಾಗಿ ಇದಕ್ಕೆ ಯಾರ್ಯಾರ ಸಮ್ಮತಿ ಇದೆ ಎಂಬುದು ಸ್ಪಷ್ಟವಾಗಿಲ್ಲ.

‘ಯಾವುದೇ ಬಗೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನನ್ನ ತಂದೆಯ ನಿಲುವುಗಳನ್ನು ನಾನು ಒಪ್ಪುತ್ತಿರಲಿಲ್ಲ.  ತನ್ನ ಮಾರ್ಗ ಬದಲಿಸಿಕೊಳ್ಳುವಂತೆ ಮತ್ತು ಎಂತಹ ಸಂದರ್ಭ ಬಂದರೂ  ನಾಗರಿಕರ ಮೇಲೆ ದಾಳಿ ನಡೆಸದಂತೆ ತಂದೆಗೆ ನಾನು ಆಗಾಗ್ಗೆ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದೆ ಎಂಬುದನ್ನು ವಿಶ್ವದ ಗಮನಕ್ಕೆ ತರಬಯಸುತ್ತೇನೆ’ ಎಂದು ಒಮರ್ ಹೇಳಿಕೆಯಲ್ಲಿ ವಿವರಿಸಿದ್ದಾನೆ.

ಕಾಣೆಯಾದ ಪುತ್ರ: ಲಾಡೆನ್ ಹತ್ಯೆಯಾದ ದಿನದಿಂದ ಆ ಸ್ಥಳದಲ್ಲಿದ್ದ ಆತನ ಪುತ್ರನೊಬ್ಬ ಕಾಣೆಯಾಗಿರುವುದಾಗಿ ಪಾಕಿಸ್ತಾನದ ವಶದಲ್ಲಿರುವ ಆತನ ಮೂವರು ಪತ್ನಿಯರು  ಹೇಳಿದ್ದಾರೆ.
ಹೆಸರು ಹೇಳಲಿಚ್ಚಿಸದ ಪಾಕಿಸ್ತಾನದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಬಿಸಿ ನ್ಯೂಸ್ ಈ ವರದಿ ಮಾಡಿದೆ.

ಕಾಣೆಯಾಗಿರುವ ಲಾಡೆನ್‌ನ ಪುತ್ರ ಯಾರೆಂಬುದನ್ನು ಗುರುತಿಸಲಾಗಿಲ್ಲ. ಆದರೆ ಆ ಮನೆಯಿಂದ ಒಬ್ಬ ವ್ಯಕ್ತಿ ಕಾಣೆಯಾಗಿರುವುದು ನಿಜ ಎಂದು  ಪಾಕಿಸ್ತಾನದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ತಮ್ಮ ಕಮಾಂಡೊಗಳು ಲಾಡೆನ್‌ನನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ಖಾಲಿದ್ ಎಂಬ ಒಬ್ಬ ಪುತ್ರ ಹತ್ಯೆಗೊಳಗಾಗಿದ್ದಾನೆ. ಹಂಜಾ ಎಂಬ ಮತ್ತೊಬ್ಬ ಪುತ್ರ ಆ ಸಂದರ್ಭದಲ್ಲಿ ಅಲ್ಲಿದ್ದನೇ ಎಂಬುದು ತಿಳಿದುಬಂದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ತನ್ನ ಕಮಾಂಡೊಗಳು ಮನೆಯಿಂದ ಲಾಡೆನ್ ಶವವನ್ನು ಬಿಟ್ಟರೆ ಬೇರ್ಯಾರನ್ನೂ ಕರೆದೊಯ್ದಿಲ್ಲ ಎಂದು ಈ ಮೊದಲೇ ಅಮೆರಿಕ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಮುಂಜಾನೆಯೇ ದಾಳಿ ವಿಷಯ ತಿಳಿದಿತ್ತು...
ಲಾಡೆನ್ ಹತ್ಯೆಯ ವಿಷಯವನ್ನು ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಮೊದಲು ತಿಳಿಸಿದವರು ಸೇನಾಪಡೆ ಮುಖ್ಯಸ್ಥ ಅಶ್ಫಾಕ್ ಪರ್ವೇಜ್ ಕಯಾನಿ. ಅಮೆರಿಕದ ಕಾರ್ಯಾಚರಣೆ ನಡೆದ ದಿನ ಮುಂಜಾನೆ 2 ಗಂಟೆಗೆ ಪಾಕಿಸ್ತಾನದ ಅವರು ಪ್ರಧಾನಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಎಂದು ಮಾಧ್ಯಮ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT