ಮಂಗಳವಾರ, ಏಪ್ರಿಲ್ 13, 2021
31 °C

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲಕ್ಷ್ಮಿಲಿಂಗನ ಗುಡಿ...!

ನಾಗರಾಜ ಹಣಗಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲಕ್ಷ್ಮಿಲಿಂಗನ ಗುಡಿ...!

ಲಕ್ಷ್ಮೇಶ್ವರ: ಸಾವಿರಾರು ವರ್ಷಗಳ ಗತ ಇತಿಹಾಸ ಸಾರುವ ಪಟ್ಟಣದ ಜಕಣಾಚಾರಿ ನಿರ್ಮಿತ ದೇವಸ್ಥಾನಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕೆಲವೊಂದು ದೇವಸ್ಥಾನಗಳು ಶಿಥಿಲಾವಸ್ಥೆ ತಲುಪಿವೆ. ಕೋರ್ಟ್ ಹತ್ತಿರದ ಲಕ್ಷ್ಮಿ ಲಿಂಗನ ಗುಡಿ ಇಂಥ ನಿರ್ಲಕ್ಷ್ಯ ದೇವಸ್ಥಾನಗಳಲ್ಲಿ ಮೊದಲ ಸಾಲಿನಲ್ಲಿ ಬರುತ್ತದೆ.ಪಟ್ಟಣದ ಉತ್ತರ ದಿಕ್ಕಿನಲ್ಲಿ ಇರುವ ಲಕ್ಷ್ಮಿ ಲಿಂಗನ ಗುಡಿ ತನ್ನದೇ ಆದ ಇತಿಹಾಸ ಹೊಂದಿದ್ದು ಈ ಗುಡಿಗೆ ಈ ಹೆಸರು ಬರಲು ಕಾರಣ ಏನು ಎಂಬುದು ಇಂದಿಗೂ ರಹಸ್ಯವಾಗಿ ಉಳಿದುಕೊಂಡಿದೆ.ಸಂಕ್ಷಿಪ್ತ ಇತಿಹಾಸ: ಮೊದಲು ಲಕ್ಷ್ಮೇಶ್ವರಕ್ಕೆ ಪುಲಿಗೆರೆ, ಹುಲಿಗೆರೆ, ಪುಲಿಕಾನಗರ ಎಂಬ ಹೆಸರುಗಳಿಂದ ಕರೆಯು ತ್ತಿದ್ದರು. ಆದರೂ ಸಹ ಲಕ್ಷ್ಮೇಶ್ವರ ಪಟ್ಟಣ ಇತಿಹಾಸದ ಪುಟಗಳಲ್ಲಿ ಪುಲಿಗೆರೆ ಎಂದೇ ಪ್ರಸಿದ್ಧವಾಗಿದೆ. ಇಂಥ ಪುಲಿಗೆರೆಯಲ್ಲಿ ಹಿಂದೆ ಲಕ್ಷ್ಮಣರಸ ಎಂಬ ರಾಜನು ರಾಜ್ಯಭಾರ ಮಾಡುತ್ತಿದ್ದನು. ಲಕ್ಷ್ಮಣರಸ ರಾಜ್ಯವಾಳುತ್ತಿದ್ದರಿಂದ ಮುಂದೆ ಇದು ಲಕ್ಷ್ಮಣಪುರ ಎಂದು ಖ್ಯಾತಿ ಗಳಿಸಿತು. ಆದರೆ ಅದೇ ಬರಬರುತ್ತಾ ಲಕ್ಷ್ಮೇಶ್ವರ ಆಗಿರಬೇಕು ಎಂದು ಇತಿಹಾಸಕಾರರು ತರ್ಕಿಸುತ್ತಾರೆ.ಶೈವ ಭಕ್ತನಾಗಿದ್ದ ಲಕ್ಷ್ಮಣರಸ ಇಲ್ಲಿನ ಹಿರೇಬಣದ ಬಯಲು ಪ್ರದೇಶದಲ್ಲಿ ಒಂದು ಬೃಹತ್ ಗುಡಿ ಕಟ್ಟಿಸಿ ಆ ದೇವಾಲಯಕ್ಕೆ ಲಕ್ಷ್ಮಣಲಿಂಗ ಗುಡಿ ಎಂದು ನಾಮಕರಣ ಮಾಡಿದನು ಎಂದು ತಿಳಿದು ಬರುತ್ತದೆ. ಆದರೆ ಲಕ್ಷ್ಮಣಲಿಂಗ ಗುಡಿ ಇದ್ದದ್ದು ಲಕ್ಷ್ಮಿಲಿಂಗನ ಗುಡಿ ಆಗಿ ಹೇಗೆ ಪರಿವರ್ತಿತವಾಯಿತು ಎಂಬುದು ಮಾತ್ರ ಇಂದಿಗೂ ಯಕ್ಷ ಪ್ರಶ್ನೆ.ಇಂಥ ವಿಶಿಷ್ಟ ಕಥೆ ಹೊಂದಿರುವ ಲಕ್ಷ್ಮೀಲಿಂಗನ ದೇವಾಲಯ ಕಲ್ಲಿನಿಂದ ಕಟ್ಟಿರುವ ಒಂದು ಸುಂದರವಾದ ಕ್ಷೇತ್ರ. ಚಾಲುಕ್ಯ ಶೈಲಿಯಲ್ಲಿ ಕಟ್ಟಲಾಗಿರುವ ಲಕ್ಷ್ಮಿ ಲಿಂಗನ ದೇವಸ್ಥಾನ ತ್ರಿಕೂಟಾಚಲವಾಗಿದೆ. ಗರ್ಭಗೃಹ, ಮಧ್ಯದಲ್ಲಿ ನವರಂಗ, ಪ್ರವೇಶ ದ್ವಾರದಲ್ಲಿ ಮುಖ ಮಂಟಪವಿದೆ. ಗರ್ಭ ಗುಡಿಯಲ್ಲಿ ಕಲ್ಲಿನ ಶಿವಲಿಂಗ ಇದೆ.ಗರ್ಭ ಗುಡಿಯ ಎಡ ಹಾಗೂ ಬಲ ಬದಿಯಲ್ಲಿ ಎರಡು ಚಿಕ್ಕ ದೇವಸ್ಥಾನಗಳು ಇವೆ. ದಕ್ಷಿಣ ದಿಕ್ಕಿನ ಸಣ್ಣ ಗುಡಿಯಲ್ಲಿ ಈಶ್ವರನ ಮೂರ್ತಿ ಇದೆ. ಆದರೆ ಅದರ ಎದುರಿನ ದೇವಸ್ಥಾನದಲ್ಲಿದ್ದ ಬಸವಣ್ಣನ ಮೂರ್ತಿ ಭಗ್ನವಾಗಿದ್ದು ಆ ಜಾಗದಲ್ಲಿ ಈಗ ದೊಡ್ಡ ಪಲ್ಲಕ್ಕಿಯನ್ನು ಇಡಲಾಗಿದೆ.ಅಲ್ಲದೆ ಅದೇ ಚಿಕ್ಕ ಗುಡಿಯ ಹೊರಗೆ ಅನವಶ್ಯಕವಾದ ಕಲ್ಲು ಮಣ್ಣು ಇದ್ದು ಇಡೀ ಗುಡಿ ಕಸಕಡ್ಡಿಗಳಿಂದ ತುಂಬಿಕೊಂಡಿದೆ. ಇನ್ನು ಗರ್ಭಗುಡಿಯ ಹೊರಭಾಗದಲ್ಲಿ ಚಿಕ್ಕ ಚಿಕ್ಕ ಗೂಡುಗಳಿದ್ದು ಅಲ್ಲಿ ಯಾವುದೋ ದೇವರ ಮೂರ್ತಿ ಇದ್ದಿರಬೇಕು. ಆದರೆ, ಇಂದು ಅಂಥ ಎಂಟು ಕಲ್ಲಿನ ಮಾಡುಗಳು ಖಾಲಿ ಇವೆ. ಅಲ್ಲದೆ ಅಲ್ಲಿನ ಒಂದು ಮೂಲೆಯಲ್ಲಿ ಈಶ್ವರನ ಪಾಣಿ ಬಟ್ಟಲು ಬಿದ್ದುಕೊಂಡಿದೆ.ನವರಂಗ ಇರುವಲ್ಲಿನ ದೇವಸ್ಥಾನದ ಕಂಬಗಳು ಭಗ್ನಗೊಂಡಿದ್ದು ಗುಡಿ ಅಂದವನ್ನು ಕೆಡಿಸಿವೆ. ಇಲ್ಲಿರುವ ಸುಂದರವಾದ ಕಲ್ಲಿನ ಕಂಬಗಳನ್ನು ಅಲ್ಲಲ್ಲಿ ಕತ್ತರಿಸಲಾಗಿದೆ. ಅಲ್ಲದೆ ದೇವಾಲಯದ ಮೂಲೆ ಮೂಲೆಗಳಲ್ಲಿ ಜೇಡರ ಬಲಿ ಕಟ್ಟಿಕೊಂಡಿದ್ದು ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಒಮ್ಮೆ ದೇವಸ್ಥಾನದ ಒಳಗೆ ಸುತ್ತಾಡಿದರೆ ಇದರ ಸ್ವಚ್ಛತೆ ಬಗ್ಗೆ ಮನವರಿಕೆಯಾಗುತ್ತದೆ. ಒಮ್ಮೆಯೂ ಇಡೀ ಗುಡಿಯನ್ನು ಸ್ವಚ್ಛ ಮಾಡಿದಂತೆ ಕಾಣುವುದಿಲ್ಲ. ಹೀಗಾಗಿ ದೇವಾಲಯದಲ್ಲಿ ಅಲ್ಲಲ್ಲಿ ಕಸಕಡ್ಡಿ, ಸಿಗರೇಟ್‌ನ ಖಾಲಿ ಪಾಕೀಟುಗಳು ಕಣ್ಣಿಗೆ ಬೀಳುತ್ತವೆ.ಯಾರಾದರೂ ಬೇರೆ ಊರಿನ ಪ್ರವಾಸಿಗರು ಇಲ್ಲಿಗೆ ಬಂದರೆ ಅವರಿಗೆ ನಿಜಕ್ಕೂ ಅಸಹ್ಯ ಹುಟ್ಟಿಸುವಂತಿದೆ.

ಇನ್ನು ದೇವಾಲಯದ ಹೊರಗೋಡೆಗಳ ಮೇಲೆ ಶಿಲಾಬಾಲಿಕೆಯರು ಹಾಗೂ ಪಕ್ಷಿಗಳನ್ನು ಕೆತ್ತಲಾಗಿದೆ. ದಿವ್ಯ ನಿರ್ಲಕ್ಷ್ಯದಿಂದಾಗಿ ಅವೂ ಕೂಡ ಅಲ್ಲಲ್ಲಿ ಭಗ್ನಗೊಂಡಿವೆ. ಹಿಂದಿನ ನಮ್ಮ ಹಿರಿಯರು ಕಟ್ಟಿಸಿರುವ ಸುಂದರವಾದ ಗುಡಿಯನ್ನು ನಮಗಿಂದು ಸ್ವಚ್ಛವಾಗಿ ಇಟ್ಟುಕೊಳ್ಳಲೂ ಸಹ ಆಗದಿರುವುದು ನಿಜಕ್ಕೂ ದುಃಖದ ಸಂಗತಿ.ದೇವಸ್ಥಾನದ ಹೊರಭಾಗದಲ್ಲಿ ಪ್ರಾಚ್ಯವಸ್ತು ಇಲಾಖೆಯವರು ನಾಮಫಲಕ ಅಳವಡಿಸಿದ್ದಾರೆ. ಆದರೆ ದೇವಸ್ಥಾನದ ರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಕಾರಣ ಪುರಾತನಿನ ಇತಿಹಾಸ ಸಾರುವ ಲಕ್ಷ್ಮಿಲಿಂಗನ ಗುಡಿ ಇಂದು ಶಿಥಿಲಾವಸ್ಥೆ ತಲುಪುತ್ತಿದೆ. ಈಗಲಾದರೂ ಸಂಬಂಧಿಸಿದ ಇಲಾಖೆಯವರು ದೇವಾಲಯದ ಸ್ವಚ್ಛತೆ ಹಾಗೂ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಸುಂದರವಾದ ಗುಡಿ ಕುಸಿದು ಬಿದ್ದರೂ ಅದರಲ್ಲಿ ಅಚ್ಚರಿ ಇಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.