ಶನಿವಾರ, ಮೇ 8, 2021
26 °C

ನಿರ್ಲಕ್ಷ್ಯ: ಶಿಕ್ಷಕರ ಭವನ ಶಿಥಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ ಸಾವಿರಾರು ಸರ್ಕಾರಿ ಶಿಕ್ಷಕರ ಒಗ್ಗಟ್ಟಿನ ಫಲವಾಗಿ ನಿರ್ಮಾಣಗೊಂಡ ಶಿಕ್ಷಕರ ಭವನ ಸಂಬಂಧಪಟ್ಟವರ ನಿರ್ಲಕ್ಷದಿಂದ ಪ್ರಯೋಜನಕ್ಕೆ ಬಾರದಂತಾಗಿ ಶಿಥಿಲ ವಾಗಿದೆ.ತಾಲ್ಲೂಕಿನ ಶಿಕ್ಷಕರ ಅಗತ್ಯ ಮನಗಂಡು 1978ರಲ್ಲಿ ಶಿಕ್ಷಕರ ಭವನ ನಿರ್ಮಾಣ ಸಮಿತಿ ರಚನೆ ಯಾಯಿತು. ಶಿಕ್ಷಕರಿಂದ  ದೇಣಿಗೆ ಪಡೆದು, ಸಹಾಯಾರ್ಥ ನಾಟಕ ಮತ್ತು ಚಲನಚಿತ್ರ ಪ್ರದರ್ಶನ ಏರ್ಪಡಿಸಿ 2.83 ಲಕ್ಷ ರೂಪಾಯಿ ಸಂಗ್ರಹಿಸಿ, ರಾಷ್ಟ್ರೀಯ ಹೆದ್ದಾರಿ- 48ಕ್ಕೆ ಹೊಂದಿಕೊಂಡಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದಲ್ಲಿ 2.79 ಲಕ್ಷ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಿಸಲಾಯಿತು.ಕಲ್ಯಾಣ ಮಂಟಪಗಳು ಕಡಿಮೆ ಇದ್ದ ಸಮಯದಲ್ಲಿ ಮದುವೆ ಸಮಾರಂಭ ಗಳಿಗೆ ಕಟ್ಟಡವನ್ನು ಬಾಡಿಗೆಗೆ ನೀಡಿ ಹಣ ಸಂಗ್ರಹಿಸಿ, ಉತ್ತಮ ನಿರ್ವಹಣೆ ಮಾಡಿಕೊಂಡು ಬರಲಾಗಿತ್ತು. ಕಾಲಕ್ರಮೇಣ ಶಿಕ್ಷಕರ ಭವನ ಅಭಿವೃದ್ಧಿ ಸಮಿತಿಯ ಅಧಿಕಾರ ವಹಿಸಿಕೊಂಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆಗೆ ಗಮನ ಹರಿಸದ ಕಾರಣ ಭವನ ಶಿಥಿಲಾವಸ್ಥೆ ತಲುಪಿದ್ದು, ಶೈಕ್ಷಣಿಕ ಕಾರ್ಯಕ್ರಮಗಳಿಗೂ ಯೋಗ್ಯವಿಲ್ಲ ದಂತಾಗಿದೆ.ಬಟ್ಟೆ, ಪೀಠೋಪಕರಣ ಮುಂತಾದವುಗಳ ಮಾರಾಟಕ್ಕೆ ಭವನವನ್ನು ಬಾಡಿಗೆಗೆ ನೀಡಿಲಾಗಿತ್ತು. ಕಳೆದ ಮೂರು ವರ್ಷಗಳಿಂದ ತಾಲ್ಲೂಕಿನ ಪ್ರೌಢಶಾಲಾ ಮಕ್ಕಳಿಗೆ ವಿತರಿಸುವ ಸೈಕಲ್‌ಗಳ ಜೋಡಣೆ ಗೋದಾಮಿಗೆ ಬಾಡಿಗೆ ಕೊಟ್ಟಿರುವುದರಿಂದ ಒಳ ಭಾಗ ಸಂಪೂರ್ಣ ನಾಶವಾಗಿದ್ದು, ಕಿಟಕಿ, ಬಾಗಿಲು ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆ ನಾಶವಾಗಿದೆ. ರಾತ್ರಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ.ಹಿಂದೆ ಶಿಕ್ಷಕರ ಭವನದಲ್ಲಿ ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದರು. ಕಳೆದ  ಎರಡು ವರ್ಷಗಳಿಂದ ಶಿಕ್ಷಕರ ದಿನಾಚರಣೆಗೂ ಭವನ ಯೋಗ್ಯವಾಗಿಲ್ಲದ ಕಾರಣ ಪಕ್ಕದ ಜಾಗದಲ್ಲಿ ಹಣ ತೆತ್ತು ಶಾಮಿಯಾನ ಹಾಕಿಸಿ ಶಿಕ್ಷಕರ ದಿನಾಚರಣೆ ನಡೆಸಲಾಗುತ್ತಿದೆ.ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಪ್ಪಾಜಯ್ಯ ಅವಧಿಯಲ್ಲಿ ಶಿಕ್ಷಕರ ಭವನ ಅಭಿವೃದ್ಧಿಗೆ ಮುಂದಾದರೂ ಕೆಲವರ ಕುತಂತ್ರದಿಂದ ಸ್ಥಗಿತಗೊಂಡಿದ್ದು, ಅಧಿಕಾರಿಗಳು ಅಥವಾ ಶಿಕ್ಷಕರು ಭನವದ ನವೀಕರಣಕ್ಕೆ ಪ್ರಯತ್ನ ಪಡಲಿಲ್ಲ ಎಂದು ನಿವೃತ್ತ ಶಿಕ್ಷಕರಾದ ಕೆ.ಎಚ್.ನಾಗರಾಜ್, ಬಿ.ಗಂಗಯ್ಯ, ಕೃಷ್ಣಮೂರ್ತಿ ವಿಷಾದಿಸಿದ್ದಾರೆ.ತಾಲ್ಲೂಕಿನಲ್ಲಿ 1,700ಕ್ಕೂ ಹೆಚ್ಚು ಶಿಕ್ಷಕರಿದ್ದು, ಶಿಕ್ಷಕರ ಭವನ ನವೀಕರಣಕ್ಕೆ ಮುಂದಾಗಬೇಕಿದೆ ಎಂದು ಹಿರಿಯ ನಾಗರಿಕರಾದ ಬಿ.ಎಂ.ಹುಚ್ಚೇಗೌಡ, ಎಸ್‌ಟಿಡಿ ಶ್ರೀನಿವಾಸ್, ಕೆ.ಬಿ. ರಾಮಕೃಷ್ಣಪ್ಪ, ಗಂಗಾಧರಪ್ಪ, ಶಂಕರಪ್ಪ, ನಾರಾಯಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.