ಮಂಗಳವಾರ, ಏಪ್ರಿಲ್ 20, 2021
24 °C

ನಿಲ್ಲದ ರಾಜಕೀಯ ಬಿಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಂಗಾಣ ಚಳವಳಿ ಮತ್ತು ಜಗನ್‌ಮೋಹನ್‌ರೆಡ್ಡಿ ಬಂಡಾಯದಿಂದಾಗಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿರುವ ಆಂಧ್ರಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಮತ್ತೊಂದು ಬಿಕ್ಕಟ್ಟು ಎದುರಾಗಿದೆ.

ಹದಿನಾಲ್ಕು ವರ್ಷಗಳಿಂದ ಕಾಂಗ್ರೆಸ್ ಜತೆ  ಮೈತ್ರಿ ಹೊಂದಿದ್ದ ಮಜ್ಲೀಸ್-ಎ-ಇತ್ತಹಾದುಲ್ ಮುಸ್ಲಿಮೀನ್ (ಎಂಐಎಂ) ಪಕ್ಷ ಬೆಂಬಲವನ್ನು ಹಿಂತೆಗೆದುಕೊಂಡಿದೆ. ಐತಿಹಾಸಿಕ ಚಾರ್‌ಮಿನಾರ್ ಸ್ಮಾರಕದ ಬಳಿ ಭಾಗ್ಯಲಕ್ಷ್ಮಿ ದೇವಸ್ಥಾನ ವಿಸ್ತರಣೆಗೆ ರಾಜ್ಯಸರ್ಕಾರ ಅವಕಾಶ ನೀಡಿರುವುದನ್ನು ವಿರೋಧಿಸಿ ಎಂಐಎಂ ನಿರ್ಧಾರ ಕೈಗೊಂಡಿದ್ದರೂ ಕಾರಣ ಅದೊಂದೇ ಅಲ್ಲ ಎನ್ನುವುದು ಸ್ಪಷ್ಟ.

ಕಾಂಗ್ರೆಸ್ ಜತೆ ಎಂಐಎಂ ಮೈತ್ರಿಗೆ ಮುಖ್ಯ ಕಾರಣ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ್ ರೆಡ್ಡಿ ಜತೆಗಿನ ಸ್ನೇಹ ಸಂಬಂಧ. ವೈಎಸ್‌ಆರ್ ಸಾವಿನ ನಂತರ ಜಗನ್‌ಮೋಹನ್ ರೆಡ್ಡಿ ಬಗ್ಗೆ ಎಂಐಎಂ ನಾಯಕರು ಹಲವಾರು ಬಾರಿ ಸಹಾನುಭೂತಿಯ ಮಾತುಗಳನ್ನಾಡಿದ್ದಾರೆ.

ಅಂತಿಮವಾಗಿ ಮುಂದಿನ ಚುನಾವಣೆಯಲ್ಲಿ ಜಗನ್‌ಮೋಹನ್‌ರೆಡ್ಡಿ ಜತೆಗೆ ಹೋಗುವುದೇ ಅದರ ಉದ್ದೇಶವಾಗಿರಬಹುದು. ಈ ಹಿನ್ನೆಲೆಯಲ್ಲಿ  ದೇವಸ್ಥಾನದ ವಿಸ್ತರಣೆಯಂತಹ ಕೋಮುಸೂಕ್ಷ್ಮ ವಿಷಯವನ್ನು ನೆಪವಾಗಿಟ್ಟುಕೊಂಡು ಎಂಐಎಂ ನಾಯಕರು ನಿರ್ಧಾರ ಕೈಗೊಂಡಂತಿದೆ.

294 ಸದಸ್ಯ ಬಲದ ಆಂಧ್ರವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 155 ಶಾಸಕರನ್ನು ಹೊಂದಿರುವ ಕಾರಣದಿಂದಾಗಿ ತಕ್ಷಣಕ್ಕೆ ಸರ್ಕಾರ ಪತನಗೊಳ್ಳುವ ಭೀತಿಯೇನಿಲ್ಲ. ಆದರೆ ಇದರ ದೂರಗಾಮಿ ಪರಿಣಾಮ ಮುಂದಿನ ಚುನಾವಣೆಯ ಮೇಲೆ ಬೀಳಲಿರುವುದು ಖಂಡಿತ.ಆಂಧ್ರಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಇದು ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆ ಹೊಡೆತ. ಮೊದಲು ಹದಿನಾರು ಶಾಸಕ ಬಲದ ತೆಲಂಗಾಣ ರಾಷ್ಟ್ರೀಯ ಪಕ್ಷ (ಟಿಆರ್‌ಎಸ್) ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಅದರ ನಂತರ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡೆದ್ದ ಜಗನ್‌ಮೋಹನ್‌ರೆಡ್ಡಿಯ ಬೆಂಬಲಿಗರಾದ ಹದಿನಾರು ಶಾಸಕರು ರಾಜೀನಾಮೆ ನೀಡಿದ್ದರು. ಈಗ ಏಳು ಶಾಸಕರು ಮತ್ತು ಒಬ್ಬ ಲೋಕಸಭಾ ಸದಸ್ಯರನ್ನು ಹೊಂದಿರುವ ಎಂಐಎಂ ಕೂಡಾ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಕಡಿದುಕೊಂಡಿದೆ.

ಎಂಐಎಂ ಸದಸ್ಯಬಲದ ಲೆಕ್ಕಾಚಾರದಲ್ಲಿ ಸಣ್ಣಪಕ್ಷವಾದರೂ ಆಂಧ್ರಪ್ರದೇಶದ ಮುಸ್ಲಿಂ ಸಮುದಾಯದ ಮೇಲೆ ಇದರ ಪ್ರಭಾವವನ್ನು ನಿರ್ಲಕ್ಷಿಸುವಂತಿಲ್ಲ. ಈಗಾಗಲೇ ರೆಡ್ಡಿ ಸಮುದಾಯ ತಿರುಗಿಬೀಳುವ ಸೂಚನೆ ಇದೆ. ಇದರ ಜತೆ ವೈಎಸ್‌ಆರ್ ಕಾಲದಿಂದಲೂ ಬೆಂಬಲಿಸುತ್ತಾ ಬಂದಿರುವ ಮುಸ್ಲಿಮರು ಕೂಡಾ ಕೈಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಜಕ್ಕೂ ಕಷ್ಟಕ್ಕೆ ಸಿಲುಕಲಿದೆ. 

ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಬಹುಮತವನ್ನು ಹೊಂದಿದ್ದರೂ ಆ ಪಕ್ಷದ ಸುಮಾರು ಇಪ್ಪತ್ತು ಶಾಸಕರು ಬಹಿರಂಗವಾಗಿಯೇ ಜಗನ್‌ಮೋಹನ್ ರೆಡ್ಡಿ ಗುಂಪಿನ ಜತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಇಲ್ಲ.

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಅಲ್ಲೊಂದು ಸುಭದ್ರ ಮತ್ತು ಸಮರ್ಥ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಯಾರಿಗೂ ಅನಿಸುವುದಿಲ್ಲ. ಇಂತಹ ಅನಿಶ್ಚಿತ ರಾಜಕೀಯ ವಾತಾವರಣದಲ್ಲಿ ಯಾವ ಸರ್ಕಾರವೂ ಉತ್ತಮವಾದ ಆಡಳಿತವನ್ನು ನೀಡುವುದು ಕೂಡಾ ಅಸಾಧ್ಯ. ಇಂತಹ ಸರಣಿ ಬಿಕ್ಕಟ್ಟುಗಳ ನಿವಾರಣೆಗೆ ಚುನಾವಣೆಯೊಂದೇ ಪರಿಹಾರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.