ಬುಧವಾರ, ಏಪ್ರಿಲ್ 14, 2021
32 °C

ನೀತು ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನೀತು ಮಾತು

ಸದಾ ವಿವಾದಗಳನ್ನು ಬೆನ್ನಗಂಟಿಸಿಕೊಂಡೇ ಓಡಾಡುವ ಬಿದಿಗೆ ಚಂದ್ರನಂತಹ ಚೆಲುವೆ ನೀತು ಚಂದ್ರ ಈಗ ರಾಜಸ್ತಾನದ ಬಿಕನೇರ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ. ಹಲವು ವಿಸ್ಮಯ ಹಾಗೂ ಭಿನ್ನತೆಗಳನ್ನು ಹೊಂದಿರುವ ರಾಜಸ್ತಾನದಲ್ಲಿ ಆಕೆಗೆ ಚಿತ್ರೀಕರಣದಲ್ಲಿ ಭಾಗವಹಿಸಿರುವುದು ತುಂಬಾ ಖುಷಿಯಂತೆ. ಸದ್ಯಕ್ಕೆ ಬಿಕನೇರ್‌ನಲ್ಲಿ `ಆದಿ ಭಗವಾನ್~ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವ ನೀತು, ಆದಿ ಭಗವಾನ್ ಮತ್ತು ರಾಜಸ್ತಾನದ ಬಗ್ಗೆ ಸಿಕ್ಕಾಪಟ್ಟೆ ಮಾತನಾಡುತ್ತಿದ್ದಾರೆ.ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಸದಾ ನನ್ನನ್ನು ಹಿಂಬಾಲಿಸುತ್ತಿರುತ್ತಾರೆ. ಹಾಗಾಗಿ ರಾಜಸ್ತಾನದಲ್ಲಿನ ನನ್ನ ಅನುಭವ ಹಂಚಿಕೊಳ್ಳಬೇಕು ಅನ್ನಿಸಿತು. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಬಿಕನೇರ್ ವಿಸ್ಮಯ ನಗರಿ. ಇಲ್ಲಿನ ಮಹಿಳೆಯರು ಕೋಮಲ ಸ್ವಭಾವದವರು.ಮನೆಯಿಂದ ಹೊರಗೆ ಬಂದು ಸ್ವತಂತ್ರವಾಗಿ ತಿರುಗಾಡಲು ಮುಜುಗರ ಪಟ್ಟುಕೊಳ್ಳುತ್ತಾರೆ. ಬಿಕನೇರ್ ಮಹಿಳೆಯರಿಗಿಂತ ಜೈಪುರ್ ಮಹಿಳೆಯರು ಹೆಚ್ಚು ಸ್ವತಂತ್ರವಾಗಿ ಜೀವಿಸುವ ಪ್ರವೃತ್ತಿ ಹೊಂದಿದ್ದಾರೆ. ಸ್ವತಃ ಬಿಕನೇರ್ ನಾಗರಿಕರಿಂದ ಈ ವಿಷಯ ಕೇಳಿ ನನಗೆ ತುಂಬಾ ಅಚ್ಚರಿ ಆಯಿತು, ಒಂದೇ ರಾಜ್ಯದಲ್ಲಿರುವ ಎರಡು ನಗರಗಳಲ್ಲಿ ಎಷ್ಟೊಂದು ಭಿನ್ನತೆ ಇದೆ ಅನಿಸಿತು~ ಅನ್ನುತ್ತಿದ್ದಾರೆ ನೀತು.ಚಿತ್ರದ ಬಗ್ಗೆ ಮಾತು ಹೊರಳಿಸಿದ ನೀತು, `ಆದಿ ಭಗವಾನ್ ಚಿತ್ರವನ್ನು ಖ್ಯಾತ ನಿರ್ದೇಶಕ ಅಮೀರ್ ಸುಲ್ತಾನ್ ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡ ಬಿಕನೇರ್‌ನಲ್ಲಿ ಬೀಡುಬಿಟ್ಟು ಆಗಲೇ ವಾರ ಕಳೆದಿದೆ. ಚಿತ್ರೀಕರಣಕ್ಕೆಂದು ಚಿತ್ರತಂಡ ಜೈಸಲ್ಮೇರ್, ಜೋಧ್‌ಪುರ್‌ನಲ್ಲಿ ಅಡ್ಡಾಡುತ್ತಿದೆ. ಇನ್ನೂ ಎಂಟು ದಿನ ರಾಜಸ್ತಾನದಲ್ಲೇ ಠಿಕಾಣಿ~ ಎನ್ನುತ್ತಾರೆ.`ಮೊದಲಿಗೆ ನನಗೆ ಅಚ್ಚರಿಯಾಗಿತ್ತು. ದಕ್ಷಿಣ ಭಾರತೀಯ ಸಿನಿಮಾಗಳು ಯಾಕೆ ರಾಜಸ್ತಾನದಲ್ಲಿ ಚಿತ್ರೀಕರಣಕ್ಕೆ ಬರಬೇಕು ಅಂತ. ಆದರೆ, ಚಿತ್ರಕಥೆಗೆ ಈ ಜಾಗವೇ ಬೇಕಿತ್ತು. ಅರಮನೆ, ಮರುಭೂಮಿ ನಮ್ಮ ಚಿತ್ರಕಥೆಗೆ ಪೂರಕವಾಗಿದ್ದರಿಂದ ಇಲ್ಲಿಗೆ ಬರಬೇಕಾಯ್ತು. ನಾನು ಈ ಚಿತ್ರದಲ್ಲಿ ಉತ್ತರ ಭಾರತೀಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದೇನೆ~ ಎಂಬುದು ನೀತು ಮಾತು.ಅಂದಹಾಗೆ, ನೀತು ಚಂದ್ರ ದಕ್ಷಿಣ ಭಾರತೀಯ ಚಿತ್ರಗಳ ಜತೆಗೆ ಬಾಲಿವುಡ್ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರಂತೆ.

 

---

ಶ್ರುತಿ ನಟಿಸುತ್ತಾರಾ...?

ಕುಮಾರ್ ತೌರಾಣಿ ಮಗ ಗಿರೀಶ್ ನಟಿಸುತ್ತಿರುವ ಮೊದಲ ಸಿನಿಮಾದಲ್ಲಿ ಶ್ರುತಿ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಬಿ-ಟೌನ್‌ನಲ್ಲಿ ಹರಿದಾಡುತ್ತಿದೆ.

ಆದರೆ, ಪ್ರಭುದೇವ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುವುದು ಇನ್ನೂ ಪಕ್ಕಾ ಆಗಿಲ್ವಂತೆ. ಹಾಗಂತ ಕುಮಾರ್ ತೌರಾಣಿ ಸ್ಪಷ್ಟಪಡಿಸಿದ್ದಾರೆ.

`ಶ್ರುತಿ ಹಾಸನ್ ಈ ಚಿತ್ರದಲ್ಲಿ ನಟಿಸುವುದು ಇನ್ನೂ ಪಕ್ಕಾ ಆಗಿಲ್ಲ. ಆಕೆ ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಸ್ವಲ್ಪ ಸಮಯ ಕಾಯಬೇಕು. ಈ ಬಗ್ಗೆ ಈಗಲೇ ಇನ್ನೂ ಏನನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ತೌರಾಣಿ.ಈ ಚಿತ್ರ ರೀಮೇಕ್ ಅಥವಾ ಸ್ವಮೇಕಾ? ಅಂತ ಕೇಳಿದರೆ, ತೌರಾಣಿ ಈ ಬಗ್ಗೆ ಹೆಚ್ಚೇನೂ ಹೇಳುತ್ತಿಲ್ಲ. ಆದರೆ, ಆಗಸ್ಟ್‌ನಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ ಎನ್ನುತ್ತಾರೆ ಅವರು.

 

---

ಪೃಥ್ವಿ `ಅಲೆಗ್ಸಾಂಡರ್~

ಮಲಯಾಳಂ ಸಿನಿಮಾ ಉದ್ಯಮದ ಸೂಪರ್‌ಸ್ಟಾರ್ ಪೃಥ್ವಿರಾಜ್ `ಸನ್ ಆಫ್ ಅಲೆಗ್ಸಾಂಡರ್~ ಚಿತ್ರದಲ್ಲಿ ನಟಿಸುತ್ತಾರಾ? ಹೌದು ಎನ್ನುತ್ತಿದೆ ಚಿತ್ರತಂಡ. ಕಾಲಿವುಡ್‌ನ ಜನಪ್ರಿಯ ನಟ ಆರ್ಯ ಅವರ ಜಾಗಕ್ಕೆ ಈಗ ಪೃಥ್ವಿರಾಜ್ ಬಂದು ಕುಳಿತಿದ್ದಾರೆ.`ಸನ್ ಆಫ್ ಅಲೆಗ್ಸಾಂಡರ್~ ಚಿತ್ರ ತಯಾರಕರು ಹೇಳುವಂತೆ, 1990ರಲ್ಲಿ ತೆರೆಕಂಡು ಯಶಸ್ಸು ಗಳಿಸಿದ ಮುಮ್ಮುಟ್ಟಿ ಅಭಿನಯದ `ಸಾಮ್ರಾಜ್ಯಂ~ ಚಿತ್ರದ ಮುಂದಿನ ಭಾಗವಂತೆ ಅಲೆಕ್ಸಾಂಡರ್. ಚಿತ್ರತಂಡ ಮೊದಲು ಯೋಜಿಸಿದ್ದಂತೆ ಆಗಿದ್ದರೆ ಈ ಚಿತ್ರದಲ್ಲಿ ಆರ್ಯ, ಆಸಿಫ್ ಆಲಿ ಮತ್ತು ದುಲ್‌ಕ್ವಾರ್ ಸಲ್ಮಾನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಬೇಕಿತ್ತು.ಕಾಲಿವುಡ್ ನಟ ಆರ್ಯ ಅವರೇ ಈ ಚಿತ್ರದ ನಾಯಕ ನಟನಾಗಿ ಕಾಣಿಸಿಕೊಳ್ಳಬೇಕು ಎಂಬುದು ಎಲ್ಲರ ಇಚ್ಛೆ ಆಗಿತ್ತು. ಆದರೆ ಮಲಯಾಳಂ ಸಿನಿಮಾ ಉದ್ಯಮದಲ್ಲಿ ಈತನಿಗೆ ಅಷ್ಟೊಂದು ಚಾರ್ಮ್ ಇಲ್ಲ. ಈ ಕಾರಣದಿಂದ ಆರ್ಯ ಅವರನ್ನು ಕೈಬಿಡಲಾಯಿತು. ಆತನ ನಂತರ ಉಳಿದ ಆಯ್ಕೆ ನಮಗಿದ್ದುದು ಪೃಥ್ವಿರಾಜ್ ಎನ್ನುತ್ತಿದೆ ಚಿತ್ರತಂಡ.ಪೆರರಸು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಅರ್ಜುನ್, ಬಿಜು ಮೋಹನ್, ಮನೋಜ್ ಕೆ. ಜಯನ್ ತಾರಾಬಳಗದಲ್ಲಿದ್ದಾರೆ. ಅಂದಹಾಗೆ ಈ ಚಿತ್ರ ಮಲಯಾಳಂ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಬಜೆಟ್‌ನ ಚಿತ್ರ ಎಂಬ ಖ್ಯಾತಿ ಗಳಿಸಿದೆಯಂತೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.