ಶನಿವಾರ, ಮೇ 28, 2022
26 °C

ನೀರಾವರಿ ಊರಲ್ಲಿ ಶುಚಿತ್ವಕ್ಕೆ ಬರ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಎಂ. ಶೆಟ್ಟಹಳ್ಳಿ ಶೇ 100ರಷ್ಟು ನೀರಾವರಿ ಸೌಲಭ್ಯ ಇರುವ ಗ್ರಾಮ. ತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರದ, ಹಸಿರು ಪರಿಸರದ ಮಧ್ಯೆ ಇರುವ ಈ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಗ್ರಾಮದಲ್ಲಿ ಸೊಳ್ಳೆ ಹಾಗೂ ನೊಣಗಳ ಹಾವಳಿ ಮಿತಿ ಮೀರಿದೆ.ಗ್ರಾಮದ ಮುತ್ತಲಮ್ಮ ದೇವಾಲಯದ ಮುಂದಿನ ರಸ್ತೆಯಲ್ಲಿ ಕಸದ ರಾಶಿಯೇ ಬಿದ್ದಿದೆ. ಚರಂಡಿಗಳಲ್ಲಿ ಮಲಿನ ನೀರು ಮಡುಗಟ್ಟಿದೆ. ಚರಂಡಿಗೂ ಕಸವನ್ನು ಸುರಿದಿದ್ದು, ತಿಪ್ಪೆಗುಂಡಿಯಾಗಿ ಮಾರ್ಪಟ್ಟಿದೆ. ವಾರಕ್ಕೆ ಒಮ್ಮೆಯೂ ಸ್ವಚ್ಛತೆ ನಡೆಯುತ್ತಿಲ್ಲ. ಸುವರ್ಣ ಗ್ರಾಮೋದಯ ಯೋಜನೆಯಡಿ ಊರಿನ ರಸ್ತೆಗಳಿಗೆ ಸಿಮಿಂಟ್ ಹಾಕಲಾಗಿದೆ. ಆದರೆ, ಯಾವೊಂದು ರಸ್ತೆಗೂ ಚರಂಡಿ ನಿರ್ಮಿಸಿಲ್ಲ. ಹಾಗಾಗಿ ಮನೆಗಳಿಂದ ಹರಿಯುವ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.ಊರಿನ ಮಧ್ಯೆ ಹರಿಯುವ ಸಿಡಿಎಸ್ ನಾಲೆಯ ಬಳಿ 6 ತಿಂಗಳ ಹಿಂದಷ್ಟೇ ನಿರ್ಮಿಸಿರುವ ನೀರಿನ ಟ್ಯಾಂಕ್ ಸೋರುತ್ತಿದೆ. ಈ ಟ್ಯಾಂಕ್ ಓರೆಯಾಗಿದ್ದು, ಕುಸಿಯುವ ಭೀತಿ ಇದೆ ಎಂದು ಗ್ರಾಮದ ಎಂ.ಸಿ. ಚಂದ್ರೇಗೌಡ ಆತಂಕ ವ್ಯಕ್ತಪಡಿಸುತ್ತಾರೆ.ಗ್ರಾಮದ ಹೊಸ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಇಲ್ಲಿನ ಮಣ್ಣಿನ ರಸ್ತೆಗಳ ಕೆಸರು ಮಯವಾಗುತ್ತವೆ.ಕಾಲಿಡಲೂ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತದೆ. ಊರಿನಲ್ಲಿ 20ಕ್ಕೂ ಹೆಚ್ಚು ಗುಡಿಸಲುಗಳಿದ್ದು ಅವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಇದೂವರೆಗೆ ನೆರವು ಸಿಕ್ಕಿಲ್ಲ. ಸ್ಥಿತಿವಂತರು ವಸತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ಕಡು ಬಡವರು ಇನ್ನೂ ಮುರಕು ಚೋಪಡಿಗಳಲ್ಲಿ ವಾಸ ಮಾಡುತ್ತಿದ್ದಾರೆ.ನಿವೇಶನ ಇನ್ನೂ ಹಂಚಿಲ್ಲ:

  ನಮ್ಮೂರಿನಲ್ಲಿ ಕಳೆದ 20 ವರ್ಷಗಳಿಂದ ಬಡವರಿಗೆ ನಿವೇಶನ ಹಂಚಿಲ್ಲ. ಒಂದು ಮನೆಯಲ್ಲಿ ಎರಡು, ಮೂರು ಕುಟುಂಬಗಳು ಇಕ್ಕಟ್ಟಿನಲ್ಲಿ ವಾಸ ಮಾಡುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಫಾಲ್ಕಾನ್ ರವಿ, ಸೋಮಣ್ಣ ಅವರ ಗೋಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.