ಭಾನುವಾರ, ಮಾರ್ಚ್ 26, 2023
31 °C

ನೀರಾವರಿ ಯೋಜನೆ: ದೂರದೃಷ್ಟಿಯೇ ಇಲ್ಲ

ಕ್ಯಾ.ರಾಜಾರಾವ್‌ ನೀರಾವರಿ ತಜ್ಞರು Updated:

ಅಕ್ಷರ ಗಾತ್ರ : | |

ನೀರಾವರಿ ಯೋಜನೆ: ದೂರದೃಷ್ಟಿಯೇ ಇಲ್ಲ

ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಯಲ್ಲೇ ಪರ್ಯಾಯ ನೀರಿನ ಲಭ್ಯತೆ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸುವುದು ಸರಿಯಲ್ಲ. ಎತ್ತಿನಹೊಳೆ ಯೋಜನೆಗೆ ಈಗಾಗಲೇ ₹1500 ಕೋಟಿಗೂ ಅಧಿಕ ಹಣ ಖರ್ಚಾಗಿದೆ. ಈಗ ಪರ್ಯಾಯ ಮೂಲಗಳತ್ತ ಗಮನಹರಿಸುವುದರಿಂದ ಹಣ ಮತ್ತು ಸಮಯ ವ್ಯರ್ಥವಾಗಲಿದೆ.



ಹೀಗಾಗಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಬೇಕೋ ಅಥವಾ ಪರ್ಯಾಯ ನೀರಿನ ಲಭ್ಯತೆಯತ್ತ ಗಮನಹರಿಸಬೇಕೋ ಎಂಬ ಬಗ್ಗೆ ಮೊದಲು ತೀರ್ಮಾನವಾಗಬೇಕು. ಪರ್ಯಾಯ ಮೂಲಗಳು ಲಭ್ಯವಿವೆ. ತಜ್ಞರ ಸಮಿತಿಯಲ್ಲಿ ನಮ್ಮನ್ನು ಸೇರಿಸಿದರೆ ಆ ಬಗ್ಗೆ ಸಲಹೆ ನೀಡಬಹುದು. ಇಲ್ಲದಿದ್ದರೆ ಮಾಧ್ಯಮಗಳ ಮೂಲಕ ನಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಬೇಕಾಗುತ್ತದೆ ಅಷ್ಟೆ.



ಕೃಷ್ಣಾ ಮತ್ತು ಕಾವೇರಿ ಜಲಾನಯನ  ಪ್ರದೇಶದಲ್ಲಿನ ಅಂತರ್ಜಲ ಬಳಕೆಗೆ ನ್ಯಾಯಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ. ಈ ನೀರನ್ನು ಬಳಸಿಕೊಳ್ಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ. ಈ ನೀರನ್ನು ಯಾವ ಭಾಗಕ್ಕಾದರೂ ಬಳಸಿಕೊಳ್ಳಬಹುದು. ಅಂತರ್ಜಲದಿಂದ ಸುಮಾರು 100 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ.



ಇದನ್ನು ಬಳಸಿಕೊಳ್ಳುವತ್ತ ಗಮನಹರಿಸಬೇಕು. ಎತ್ತಿನಹೊಳೆಯಿಂದ ನೀರನ್ನು ತೆಗೆದು ಸಂಗ್ರಹಣೆ ಮಾಡಲು ಡ್ಯಾಂ ಎಲ್ಲಿದೆ? ಡ್ಯಾಂ ಕಟ್ಟಲು ಪರಿಸರ ಇಲಾಖೆಯ ಅನುಮತಿ ದೊರೆತಿದೆಯೇ? ನೀರನ್ನು ಪಂಪ್‌ ಮಾಡಲು ಬೇಕಾಗುವ ವಿದ್ಯುತ್‌ ಲಭ್ಯವಿದೆಯೇ? ವಿದ್ಯುತ್‌ ಪೂರೈಸುವ ಭರವಸೆಯನ್ನು ಕೆಪಿಟಿಸಿಎಲ್‌ ನೀಡಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು.



ಕೊಳಚೆ ನೀರನ್ನು ಹೊರಕ್ಕೆ ಬೇಡ: ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಣೆ ಮಾಡಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಮುನ್ನ,  ರಾಜಧಾನಿಯಲ್ಲಿನ ನೀರಿನ ಬೇಡಿಕೆಯನ್ನು ಯಾವ ರೀತಿ ಬಗೆಹರಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಶರಾವತಿಯಿಂದ ಬೆಂಗಳೂರಿಗೆ ನೀರು ತರಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಬೆಂಗಳೂರಿನ ಕೊಳಚೆ ನೀರನ್ನೂ ಹೊರಗೆ ಕೊಟ್ಟರೆ ಇಲ್ಲಿನ ಜನರ ಗತಿಯೇನು? 



ಕಾವೇರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಿಗೆ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಕೊಳಚೆ ನೀರನ್ನು ಶುದ್ದೀಕರಿಸಿ ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಮೊದಲು ಅಳವಡಿಸಿಕೊಳ್ಳಬೇಕು. ಪ್ರತ್ಯೇಕ ನಿಗಮ ಅಗತ್ಯವಿಲ್ಲ: ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗಾಗಿ ಪ್ರತ್ಯೇಕ ನೀರಾವರಿ ನಿಗಮ ಸ್ಥಾಪಿಸುವ ಅಗತ್ಯವಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿ ಬೆಂಗಳೂರು ಬದಲು, ಆ ಭಾಗದಲ್ಲೇ ಇದ್ದಿದ್ದರೆ ಚೆನ್ನಾಗಿತ್ತು. 



ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ನಿಗಮದ ಕೇಂದ್ರ ಕಚೇರಿಯನ್ನು ಬೆಂಗಳೂರಿನ ಸ್ಥಾಪಿಸಿದರೆ ಉಪಯೋಗವಿಲ್ಲ. ನಿಗಮ ಸ್ಥಾಪಿಸುವುದೇ ಆದರೆ, ಮಧ್ಯ ಕರ್ನಾಟಕದ ಅಚ್ಚುಕಟ್ಟು ಪ್ರದೇಶದಲ್ಲಿ ಕೇಂದ್ರ ಕಚೇರಿ ಇರುವಂತೆ ನೋಡಿಕೊಳ್ಳಬೇಕು. ಆ ಭಾಗದವರನ್ನೇ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಬೇಕು. ನೀರಾವರಿಗೆ ₹14,477 ಕೋಟಿ ಅನುದಾನ ನೀಡಿರುವುದು ಒಳ್ಳೆಯದು. ಆದರೆ, ಕೃಷ್ಣಾ ಭಾಗ್ಯಜಲ ನಿಗಮದ ವ್ಯಾಪ್ತಿಯಲ್ಲಿ ಭೂ ಸ್ವಾಧೀನವೇ ಪೂರ್ಣಗೊಂಡಿಲ್ಲ.



ಆಲಮಟ್ಟಿ ಡ್ಯಾಂನ ಗೇಟ್‌ ಎತ್ತರಿಸಲು ಇದುವರೆಗೂ ಸರ್ಕಾರ ಕ್ರಮಕೈಗೊಂಡಿಲ್ಲ. ಈ ಕೆಲಸಗಳನ್ನು ಯುದ್ಧೋಪಾದಿಯಲ್ಲಿ ಮಾಡಬೇಕು. ಆದರೆ, ಈಗಿನ ಪರಿಸ್ಥಿತಿಯನ್ನು ನೋಡಿದರೆ ಐದು ವರ್ಷವಾದರೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗುವುದಿಲ್ಲ. ಅಂತಿಮ ತೀರ್ಪು ಪರಿಶೀಲನೆ ಕೋರಿ ಕಾವೇರಿ ನ್ಯಾಯಮಂಡಳಿಗೆ ಸಲ್ಲಿಸಿರುವ ಮೇಲ್ಮನವಿಯ ತೀರ್ಪು 5–6 ತಿಂಗಳಲ್ಲಿ ಬರಲಿದೆ. ಆಗ ಕಾವೇರಿ ಜಲಾನಯನ ಪ್ರದೇಶದಲ್ಲೂ ನೀರಾವರಿಗೆ ಬಳಸುವ ನೀರಿನ ಪ್ರಮಾಣ ಕಡಿಮೆ ಆಗುತ್ತದೆ. ಇದರಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ.



ಒಟ್ಟಾರೆ ಹೇಳುವುದಾದರೆ ನೀರಾವರಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದ ದೂರದೃಷ್ಟಿಯೇ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.