ಗುರುವಾರ , ಏಪ್ರಿಲ್ 22, 2021
25 °C

ನೀರಾವರಿ, ವಿದ್ಯುತ್ ಉತ್ಪಾದನೆಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ (ಬಾಗಲಕೋಟೆ): ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಪ್ರಥಮ ಆದ್ಯತೆ ನೀಡಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಘೋಷಿಸಿದರು.ಕೂಡಲಸಂಗಮದಲ್ಲಿ ಭಾನುವಾರ ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲಾ ಕಾಂಗ್ರೆಸ್ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ `ಶರಣು ಸಮರ್ಪಣೆ~ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳಿಗೆ ಜನತೆ ಮರುಳಾಗಿದ್ದರು. ಆದರೆ, ಇದೀಗ ಬಿಜೆಪಿ ರಾಜ್ಯದಲ್ಲಿ ಏನು ಮಾಡಿದೆ ಎಂಬುದು ಅರಿವಿಗೆ ಬಂದಿದೆ ಎಂದರು.ಬಿಜೆಪಿಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣಗಳನ್ನು ಕಂಡು ಪ್ರಕೃತಿ ಕೂಡ ಮುನಿಸಿಕೊಂಡಿದೆ. ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. 148 ತಾಲ್ಲೂಕಿನಲ್ಲಿ ವಾಡಿಕೆ ಮಳೆಯಾಗಿಲ್ಲ. ಈಗಾಗಲೇ 124 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ, ಜನ-ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಿಲ್ಲ ಎಂದು ಟೀಕಿಸಿದರು.2009ರಲ್ಲಿ ಉಂಟಾದ ನೆರೆಯಲ್ಲಿ ಸೂರು ಕಳೆದುಕೊಂಡವರು ಈಗಲೂ ಶೆಡ್‌ಗಳಲ್ಲೇ ವಾಸವಾಗಿದ್ದಾರೆ. ರಾಜ್ಯ ಸರ್ಕಾರ ಇದುವರೆಗೂ ಆಸರೆ ಮನೆ ಗಳನ್ನು ನಿರ್ಮಿಸಿಕೊಟ್ಟಿಲ್ಲ. ದಾನಿಗಳು ನಿರ್ಮಿಸಿದ ಮನೆಗಳು ಮಾತ್ರ ಸಂತ್ರಸ್ತರಿಗೆ ಸಿಕ್ಕಿವೆ. ಕೇಂದ್ರ ಸರ್ಕಾರ ಮನೆ ನಿರ್ಮಾಣಕ್ಕೆ ಕೊಟ್ಟಿದ್ದ ಹಣವನ್ನು ಸದುಪಯೋಗಪಡಿಸಿಕೊಂಡಿಲ್ಲ, ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಎಂಬುದೇ ಇಲ್ಲ ಎಂದರು.ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಸಂಪೂರ್ಣ ಸ್ಥಗಿತವಾಗಿದೆ ಎಂದು ಹೇಳಿದರು.ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಐದು ವರ್ಷದ ಅವಧಿ ಯಲ್ಲಿ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದಾಗಿ ಹೇಳಿತ್ತು. ಆದರೆ, ಇದುವರೆಗೆ ಒಂದೇ ಒಂದು ಮೆಗಾ ವ್ಯಾಟ್ ವಿದ್ಯುತ್ ಸಹ ಉತ್ಪಾದನೆ ಮಾಡಿಲ್ಲ ಎಂದು ಆರೋಪಿಸಿದರು.ಎನ್‌ಆರ್‌ಇಜಿ, ಮಾಹಿತಿ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, ನರ್ಮ್ ಯೋಜನೆ ಮತ್ತು ಭಾರತ ನಿರ್ಮಾಣ್ ಎಂಬ ಹೊಸ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿ ಜಾರಿ ಮಾಡುವ ಮೂಲಕ ಕೇಂದ್ರ ಯುಪಿಎ ಸರ್ಕಾರ ದೇಶದ ಪ್ರಗತಿಗೆ ನಾಂದಿ ಹಾಡಿದೆ. ಆದರೆ, ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನ ಗೊಳಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ಹೊಸ ಚಿಂತನೆ ಇರುವ ಯುವ ಸಮೂಹ ರಾಜ್ಯ ರಾಜಕೀಯ ಪ್ರವೇಶ ಮಾಡಬೇಕಿದೆ ಎಂದು ಕರೆ ನೀಡಿದರು.ಕಾಂಗ್ರೆಸ್ ಅನಿವಾರ್ಯ: ಸ್ಥಿರ ಸರ್ಕಾರ ಮತ್ತು ಅಭಿವೃದ್ಧಿ ಪರ ಆಡಳಿತ ಬೇಕಾದರೆ ರಾಜ್ಯದ ಜನತೆಗೆ ಕಾಂಗ್ರೆಸ್ ಆಯ್ಕೆ ಅನಿವಾರ್ಯ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.ದುರಾಡಳಿತದ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮರುಸ್ಥಾಪನೆ ಮಾಡಬೇಕಿದೆ ಎಂದರು.ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಎಸ್.ಆರ್. ಪಾಟೀಲ ಮತ್ತು ಡಾ. ಜಿ. ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು.ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಬಿ.ಸೌದಗರ, ವಿಜಾಪುರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಶರಣಪ್ಪ ಸುಣಗಾರ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಎಚ್.ವೈ. ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಅಜಯ ಕುಮಾರ ಸರನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಮಾಶ್ರೀ, ಮಾಜಿ ಶಾಸಕರಾದ ಎಸ್.ಜಿ. ನಂಜಯ್ಯನಮಠ, ಜೆ.ಟಿ.ಪಾಟೀಲ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಮಂಜುನಾಥ ಕುನ್ನೂರ,ವೇಣುಗೋಪಾಲ, ಪ್ರಕಾಶ ರಾಠೋಡ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಹಾಂತೇಶ ಕೌಜಲಗಿ, ಮಾಜಿ ಸಂಸದರಾದ ಸಿದ್ದು ನ್ಯಾಮಗೌಡ, ಆರ್.ಎಸ್.ಪಾಟೀಲ, ಆರ್.ಎಂ.ಕಲೂತಿ, ಶಿವಾನಂದ ಪಾಟೀಲ, ಡಾ. ದೇವರಾಜ ಪಾಟೀಲ, ಹಣಮಂತ ರಾಕುಂಪಿ, ಮುತ್ತಣ್ಣ ಬೆಣ್ಣೂರ, ಆನಂದ ಜಿಗಜಿನ್ನಿ, ಮಾದವಿ ರಾಠೋಡ, ಎಸ್.ಡಿ.ಜೋಗಿನ, ಭೀಮಾ ಶಂಕರ, ವಿಜಯಾನಂದ ಕಾಶಪ್ಪನವರ, ಎಸ್.ಎ.ಜಿದ್ದಿ, ಕೈಲಾಸನಾಥ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.