ಶುಕ್ರವಾರ, ಮೇ 20, 2022
21 °C

ನೀರಿಗಾಗಿ ಬಂದ್: ಬೀದಿಗಿಳಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಒತ್ತಾಯಿಸಿ ಕರೆ ನೀಡಲಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬಂದ್‌ಗೆ ಸೋಮವಾರ ಕೆಜಿಎಫ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.ಬಂದ್ ಪ್ರಯುಕ್ತ ನಗರದ ಎಲ್ಲ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದ್ದವು. ಎಂ.ಜಿ.ಮಾರುಕಟ್ಟೆ ವರ್ತಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ಮಾರುಕಟ್ಟೆಯ 1200ಕ್ಕೂ ಹೆಚ್ಚು ಅಂಗಡಿಗಳು ಬಾಗಿಲು ಮುಚ್ಚಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಘಟಕದಿಂದ ಹೊರಗೆ ಬರಲಿಲ್ಲ.ಇದರಿಂದ ಬೆಮಲ್ ಕಾರ್ಮಿಕರು ಕಾರ್ಖಾನೆಗೆ ಕೆಲಸಕ್ಕೆ ಹೋಗಲು ತೊಂದರೆ ಉಂಟಾಯಿತು. ಬಂದ್ ಸಂಪೂರ್ಣವಾಗಿದ್ದರೂ ಬೆಮಲ್‌ಗೆ ರಜೆ ಘೋಷಿಸಿರಲಿಲ್ಲ. ತಡವಾಗಿ ಬಂದ ಕಾರ್ಮಿಕರಿಗೆ ಕೊಂಚ ವಿನಾಯಿತಿಯನ್ನು ಬೆಮಲ್ ಆಡಳಿತ ವರ್ಗ ನೀಡಿತ್ತು.ಶಾಲೆ-ಕಾಲೇಜು ರಜೆ ಘೋಷಿಸಿದ್ದವು. ಆಟೊ ಮತ್ತು ಖಾಸಗಿ ಬಸ್‌ಗಳು ಸಹ ರಸ್ತೆಗಿಳಿಯಲಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಸಹ ಎಂದಿನಂತೆ ಕರ್ತವ್ಯ ನಿರ್ವಹಿಸಲಿಲ್ಲ.ಬಂದ್ ಆಚರಣೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ನಂಜುಂಡಪ್ಪ, ಕನ್ನಡ ಸೇನೆಯ ಮುನಿಸ್ವಾಮಿ, ಕನ್ನಡ ಸಂಘದ ವೀರವೆಂಕಟಪ್ಪ, ಮಾಜಿ ಶಾಸಕ ಎಂ.ಭಕ್ತವತ್ಸಲಂ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ರೀಧರ್‌ರಾಜ್, ಜರ್ಮನ್ ಮುಂತಾದವರು ರಾಬರ್ಟಸನ್‌ಪೇಟೆಯ ಸೂರಜ್‌ಮಲ್ ವೃತ್ತದ ಬಳಿ ಜಮಾಯಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಆಗ್ರಹಿಸಿದರು.ಯರಗೋಳ್ ಯೋಜನೆಯ ನೀರನ್ನು ಮೊದಲ ಹಂತದಲ್ಲಿ ಕೆಜಿಎಫ್‌ಗೆ ತರುವುದು ಮತ್ತು ಕೂಡಲೇ ಬೇತಮಂಗಲ ಜಲಾಶಯದ ಹೂಳನ್ನು ತೆಗೆಯಲು ಈ ಬಾರಿಯ ಮುಂಗಡ ಪತ್ರದಲ್ಲಿ ಹಣ ನಿಗದಿ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಮಾಲೂರು: ಉತ್ತಮ ಪ್ರತಿಕ್ರಿಯೆ

ಮಾಲೂರು
: ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ ಕೋಲಾರ ಜಿಲ್ಲಾ ಬಂದ್‌ಗೆ ತಾಲ್ಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿತು.

ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದೆ ಶಾಂತಿಯುತವಾಗಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ನೀರಿಗಾಗಿ ಬೀದಿಗಿಳಿದು ಒಗ್ಗಟ್ಟು ಪ್ರದರ್ಶಿಸಿದರು. ಬೆಳಗಿನ ಜಾವದಿಂದಲೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್, ಕಾಂಗ್ರೆಸ್, ಕನ್ನಡ ಸಂಘಟನೆಗಳು, ವಕೀಲರ ಸಂಘ, ಕಸಾಪ, ಸಿಪಿಎಂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಅಂತರ್ಜಲ ಮಟ್ಟ ಸಾವಿರ ಅಡಿಗೆ ಕುಸಿದಿದ್ದು, ಈಗಾಗಲೆ ರೈತರು  ಸಂಕಷ್ಟದಲ್ಲಿದ್ದಾರೆ. ಮುಂದಿನ 15 ವರ್ಷಗಳಲ್ಲಿ ಮರುಭೂಮಿಯಾಗಲಿರುವ ಎರಡೂ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಲು ನೀರಾವರಿ ತಜ್ಞ ಪರಮಶಿವಯ್ಯ ವರದಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫೆ.27ರಂದು ಮಂಡಿಸುವ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು ಎಂದು ಒತ್ತಾಯಿಸಿದರು.ಕೋಲಾರ ಜಿಲ್ಲಾ ಬಂದ್‌ನಿಂದ ತಾಲ್ಲೂಕಿನಲ್ಲಿ ವಾಹನ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವ  ಪರಿಸ್ಥಿತಿ ಉಂಟಾಗಿತ್ತು. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಹಾಜರಾಗದೇ ಬಿಕೋ ಎನ್ನುವಂತಿತ್ತು. ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕರಿಸಿದರು. ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಎಸ್.ಪ್ರಕಾಶ್, ಸಂಚಾಲಕ ಎ.ಅಶ್ವಥ್‌ರೆಡ್ಡಿ, ಜೆಡಿಎಸ್‌ನ ತಾಲ್ಲೂಕು ಅಧ್ಯಕ್ಷ ಎಚ್.ವಿ. ಚಂದ್ರಶೇಖರ್‌ಗೌಡ, ಕಾಂಗ್ರೆಸ್ ಅಧ್ಯಕ್ಷರಾದ ಕೆ.ಮುನಿರಾಜು, ಕೆ. ಚನ್ನರಾಯಪ್ಪ, ಮುಖಂಡರಾದ ಎಸ್.ಎನ್.ರಘುನಾಥ್, ಆರ್. ಪ್ರಭಾಕರ್, ಕೆ.ವೈ.ನಂಜೇಗೌಡ, ಅಂಜನಿ ಸೋಮಣ್ಣ, ಎಸ್.ವಿ.ಶ್ರೀಹರಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಂ.ವಿ.ಹನುಮಂತಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ನಾರಾಯಣಪ್ಪ, ಹಿರಿಯ ವಕೀಲರಾದ ಆರ್.ಸಿ.ಅಪ್ಪಾಜಿಗೌಡ, ಜಿ.ಪಂ ಮಾಜಿ ಸದಸ್ಯ ಆರ್.ರಾಜಣ್ಣ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂತೂರು ಚಂದ್ರಪ್ಪ ಭಾಗವಹಿಸಿದ್ದರು.ಮಾಸ್ತಿ: ಬಂದ್ ಯಶಸ್ವಿ

ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯಿಸಿ ಕಾಂಗ್ರೆಸ್, ಜೆಡಿಎಸ್ ಮತ್ತು ಎಲ್ಲ ಸಂಘ ಸಂಸ್ಥೆಗಳು ಸೋಮವಾರ ಶಾಶ್ವತ ನೀರಾವರಿ ಸಮಿತಿ ನೀಡಿದ ಬಂದ್ ಕರೆಗೆ ಪೂರ್ಣ ಬೆಂಬಲ ನೀಡುವ ಮುಖಾಂತರ ಮಾಸ್ತಿಯಲ್ಲಿ ಬಂದ್ ಯಶಸ್ವಿಯಾಗಿದೆ.ಮಾಸ್ತಿ ಗ್ರಾ.ಪಂ ಅಧ್ಯಕ್ಷ ಶ್ಕೌತುಲ್ಲಾಬೇಗ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್. ಚನ್ನರಾಯಪ್ಪ, ಇಂದುಮಂಗಲ ನಾರಾಯಣಸ್ವಾಮಿ, ಜೊನ್ನಮುನಿಯಪ್ಪ ಕೃಷ್ಣಕುಮಾರ್, ವೆಂಕಟೇಶ್, ನಾರಾಯಣಸ್ವಾಮಿ, ಪ್ರವೀಣ್ ನೇತೃತ್ವ ವಹಿಸಿದ್ದರು.ಎಲ್ಲೆಡೆ ಬಂದ್ ಆಚರಣೆ

ಜಿಲ್ಲಾ ಬಂದ್‌ಗೆ ತಾಲ್ಲೂಕಿನ ಟೇಕಲ್ ಹೋಬಳಿ ಮತ್ತು ಮಾಸ್ತಿ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಮಾಲೂರು-ಟೇಕಲ್ ಮುಖ್ಯ ರಸ್ತೆಗೆ ಕಬ್ಬಿಣದ ಪೈಪುಗಳನ್ನು ಅಡ್ಡಗಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಚಿಕ್ಕುಕುಂತೂರು ಗ್ರಾ.ಪಂ. ಉಪಾಧ್ಯಕ್ಷ ವಿ.ನಾಗರಾಜರೆಡ್ಡಿ  ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದರು.

ತಾಲೂಕಿನಲ್ಲಿ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿದ್ದು, ಅಂತರ್ಜಲ ಮಟ್ಟ ಸಾವಿರ ಅಡಿಗಳ ಆಳಕ್ಕೆ ಕುಸಿದಿದೆ. ಸರ್ಕಾರ ಕೂಡಲೆ ಗಮನ ಹರಿಸಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಮುಖಂಡರಾದ ರಾಜಗೋಪಾಲ್‌ರೆಡ್ಡಿ, ಭುವನಹಳ್ಳಿ ಅಬ್ಬಯ್ಯಪ್ಪ, ಮುನಿನಾರಾಯಣಪ್ಪ, ಆಟೊ ನಾಗೇಶ್, ವೆಂಕೋಬರಾವ್, ವೆಂಕಟೇಶಪ್ಪ, ಅಕ್ಕೋಜಪ್ಪ, ಆಂಜಿ, ಕುಮಾರ್, ಎಂ.ಜಿ.ರಾಜು, ಕೇಶವ, ಗೋಪಾಲ್, ಚಂದ್ರು, ಕೃಷ್ಣಪ್ಪ ಭಾಗವಹಿಸಿದ್ದರು.ಸಂಪೂರ್ಣ ಯಶಸ್ವಿ

ಮುಳಬಾಗಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಿಗಾಗಿ ಸೋಮವಾರ ಕರೆ ನೀಡಲಾದ ಬಂದ್ ಯಶಸ್ವಿಯಾಯಿತು. ಎಲ್ಲ ಪಕ್ಷಗಳು ಬಂದ್‌ಗೆ ಸಹಕಾರ ನೀಡಿದವು. ಬೆಳಗ್ಗಿನಿಂದಲೇ ಅಂಗಡಿ, ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದವು. ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ದಲಿತ ಸಂಘಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಹೊನ್ನಶೆಟ್ಟಿಹಳ್ಳಿ ಗ್ರಾಮೀಣ ಮಹಿಳಾ ಒಕ್ಕೂಟ, ಕರ್ನಾಟಕ ರೈತ ಸೇನೆ, ಗಡಿನಾಡ ಕನ್ನಡ ಸಂಘರ್ಷ ಸಮಿತಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ, ಭಾರತೀಯ ಕಿಸಾನ್ ಸಂಘ ಬಂದ್‌ನಲ್ಲಿ ಭಾಗವಹಿಸಿದ್ದವು.ಮೊದಲಿಗೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ  ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಇತರೆ   ಸಂಘಟನೆಗಳ ಕಾರ್ಯಕರ್ತರು ಬೇರೆ ಬೇರೆಯಾಗಿ ಕುಳಿತಿದ್ದರು. ನಂತರ ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಬರುವ ವೇಳೆಗೆ ಎಲ್ಲ ಪಕ್ಷದವರು ಒಂದೇ ವೇದಿಕೆಗೆ ಬಂದರು.ಬಂದ್‌ಗೆ ಸಹಕರಿಸಲು ಎಲ್ಲ ಪಕ್ಷದವರು ಒಗ್ಗೂಡಿ ಮನವಿ ಮಾಡುತ್ತಿದ್ದುದು ಕಂಡು ಬಂದಿತು. ಬಂದ್‌ನಲ್ಲಿ ಮಾಜಿ ಶಾಸಕ ಆಲಂಗೂರು ಶ್ರೀನಿವಾಸ್, ಶಾಸಕ ಅಮರೇಶ್, ಪುರಸಭೆ ಅಧ್ಯಕ್ಷ ಬಷೀರ್‌ಸಾಬ್, ಜೆಡಿಎಸ್ ಮುಖಂಡ ಮುನಿಆಂಜಪ್ಪ, ಜಿ.ಪಂ. ಸದಸ್ಯರಾದ ಅಳ್ಳಾಲಸಂದ್ರ ಶ್ರೀನಿವಾಸ್, ಕೆ.ಆರ್.ಕಿಟ್ಟಪ್ಪ, ಶ್ಯಾಮೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಕೊತ್ತೂರು ಮಂಜುನಾಥ್, ಸಿಂಗಪೂರ್ ಗೋವಿಂದ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ತಾ.ಪಂ.ಮಾಜಿ ಅಧ್ಯಕ್ಷರಾದ ಎಂ.ವೆಂಕಟರವಣಪ್ಪ, ಸಿ.ವಿ.ಗೋಪಾಲ್, ರಾಜ್ಯ ರೈತಸೇನೆ ಗೌರವಾಧ್ಯಕ್ಷ ಡಾ.ರಮೇಶ್, ತಾ.ಪಂ. ಸದಸ್ಯರಾದ ಎಂ.ಎಸ್.ಶ್ರೀನಿವಾಸರೆಡ್ಡಿ, ಶಿವರಾಮರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟಪ್ಪ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿ.ಪಂ. ಮಾಜಿ ಸದಸ್ಯ ರಾಜಗೋಪಾಲ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ವಿ.ಶ್ರೀನಿವಾಸಗೌಡ, ತಾಲ್ಲೂಕು ಭೂ ಬ್ಯಾಂಕ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಉತ್ತನೂರು ಶ್ರೀನಿವಾಸ್, ಜಿ.ನಾಗರಾಜ್, ಆರ್.ಎಸ್.ಕೃಷ್ಣಯ್ಯಶೆಟ್ಟಿ ವೆಂಕಟೇಶಮೂರ್ತಿ, ಶ್ರೀರಾಮುಲು, ದಲಿತ ಮುಖಂಡರಾದ ಗೊಲ್ಲಹಳ್ಳಿ ವೆಂಕಟೇಶ್, ವಿಜಯಕುಮಾರ್, ತಾಯಲೂರು ಶೇಖರ್, ಮೆಕಾನಿಕ್ ಶ್ರೀನಿವಾಸ್, ಪುರಸಭೆ ಸದಸ್ಯರಾದ ಬಿ.ವೆಂಕಟೇಶಯ್ಯ, ಪುಷ್ಪಾ ನಾರಾಯಣಸ್ವಾಮಿ, ಹರೀಶ್ ಭಾಗವಹಿಸಿದ್ದರು.

ಶಾಂತಿಯುತ ಬಂದ್

ಶ್ರೀನಿವಾಸಪುರ: ಪಟ್ಟಣದಲ್ಲಿ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಸಂಪೂರ್ಣ ಶಾಂತಿಯುತ ಬಂದ್ ಆಚರಿಸಲಾಯಿತು.

 ಬಂದ್ ಪ್ರಯುಕ್ತ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ಸಿನೆಮಾ ಮಂದಿರಗಳು, ಮಾರುಕಟ್ಟೆ, ಹೋಟೆಲ್ ಮತ್ತಿತರ ಉದ್ಯಮ ಮುಚ್ಚಲಾಗಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದಿಂದ ಸಮೀಪದ ಗ್ರಾಮಗಳಿಗೆ ಜನ ನಡೆದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಪಟ್ಟಣದ ರಾಯಲ್ಪಾಡ್, ಗೌನಿಪಲ್ಲಿ, ರೋಣೂರು, ಯಲ್ದೂರು, ಲಕ್ಷ್ಮೀಪುರ, ರೋಜೇನಹಳ್ಳಿ ಕ್ರಾಸ್ ಮತ್ತಿತರ ಕಡೆಗಳಲ್ಲಿ ಬಂದ್ ಆಚರಿಸಿದ ಬಗ್ಗೆ ವರದಿಯಾಗಿದೆ.ಮೆರವಣಿಗೆ: ಪಟ್ಟಣದ ಪ್ರವಾಸಿ ಮಂದಿರದಿಂದ ಬೇರೆ ಬೇರೆ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ನಾಗರಿಕರು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಆಗ್ರಹ: ಮುಖ್ಯ ಮಂತ್ರಿಗಳು ಮಂಡಿಸಲಿರುವ ಬಜೆಟ್‌ನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಮಹತ್ವ ನೀಡಬೇಕು. ಅನುಕೂಲವಾದ ಯಾವುದೇ ನದಿಯಿಂದ ಅವಳಿ ಜಿಲ್ಲೆಗಳ ಕೆರೆಗಳಿಗೆ ನೀರನ್ನು ಒದಗಿಸುವ ಕಾಮಗಾರಿ ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.ಪಟ್ಟಣದ ಮಿನಿ ವಿಧಾನ ಸೌಧದ ಎದುರು ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇದೇ 17ರಂದು ಶಾಶ್ವತ ನೀರಾವರಿ ಕುರಿತು ಜನ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಸಭೆ ಕರೆದಿದ್ದಾರೆ. ಅದು ಇಂದಿನ ಬಂದ್‌ನ ಪ್ರತಿಫಲವಾಗಿದೆ. ಈ ಯೋಜನೆಗೆ ಅಗತ್ಯವಾದ ಹಣದ ಕೊರತೆ ಇಲ್ಲ. ಅದರೆ ಸರ್ಕಾಗಳ ಇಚ್ಚಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಜನ ನೀರಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ಎದುರಾಗುವ ಮುನ್ನಾ ನೀರನ್ನು ಪಡೆದುಕೊಳ್ಳಲು ನಿರಂತರ ಹೋರಾಟ ನಡೆಸಬೇಕು ಎಂದ ಅವರು ಪಕ್ಷ ಭೇದ ಮರೆತು ನೀರಿಗಾಗಿ ಒಂದಾಗಬೇಕು. ಸಮಾಜದ ಎಲ್ಲ ವರ್ಗದ ಜನರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಜಿ.ಪಂ.ಉಪಾಧ್ಯಕ್ಷ ಜಿ.ಸೋಮಶೇಖರ್, ಕಾಂಗ್ರೆಸ್ ಮುಖಂಡ ಬಿ.ವೆಂಕಟರೆಡ್ಡಿ, ಜಿ.ಪಂ.ಮಾಜಿ ಸದಸ್ಯ ಜಿ.ರಾಜಣ್ಣ, ಪುರಸಭಾ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ, ಮುಖಂಡ ಕೊಟ್ರಗುಳಿ ವೆಂಕಟರಾಮರೆಡ್ಡಿ ಅವಳಿ ಜಿಲ್ಲೆಗಳಿಗೆ ಶಾಶ್ವತ ನೀರಾವರಿಯ ಅಗತ್ಯ ಕುರಿತು ಮಾತನಾಡಿದರು. ಪಟ್ಟಣ ವರ್ತಕರ ಸಂಘದ ಮುಖಂಡರಾದ ಸೂರ್ಯನಾರಾಯಣ ಶೆಟ್ಟಿ, ಎಚ್.ಸತ್ಯನಾರಾಯಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಮುನಿವೆಂಕಟರೆಡ್ಡಿ, ತಾಲ್ಲೂಕು ಛಲವಾದಿ ಸಂಘಟನೆ ಮುಖಂಡ ವೆಂಕಟೇಶ್ ಇದ್ದರು. ಈ ಸಂದರ್ಭದಲ್ಲಿ ಅವಳಿ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವಂತೆ ಕೋರಿ ತಹಶೀಲ್ದಾರ್ ಡಾ. ಎಸ್.ರೂಪಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಬಂದ್ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಲಿಂಗಯ್ಯ ಹಾಗೂ ಸಬ್ ಇನ್ಸ್‌ಪೆಕ್ಟರ್ ಡಿ.ಆರ್.ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಬಂಗಾರಪೇಟೆ: ಯಶಸ್ವಿ ಬಂದ್


ಬಂಗಾರಪೇಟೆ: ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹತ್ತಾರು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಕರೆ ನೀಡಿದ್ದ ತಾಲ್ಲೂಕು ಬಂದ್ ಯಶಸ್ವಿಯಾಯಿತು. ಬೆಳಗಿನಿಂದಲೇ ಸ್ವಯಂ ಪ್ರೇರಿತ ಬಂದ್ ಕಳೆ ಅವತರಿಸಿತ್ತು. ಬಿಜೆಪಿ ಹಾಗೂ ಅದರ ಅಂಗ ಸಂಘ-ಸಂಸ್ಥೆಗಳ ಕಾರ್ಯಕರ್ತ, ನಾಯಕರನ್ನು ಹೊರತುಪಡಿಸಿ ಮಿಕ್ಕುಳಿದ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು, ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಒಳಗೊಂಡಂತೆ ಎಲ್ಲ ಜಾತಿ ಧರ್ಮ ಮುಖಂಡರು ಬಂದ್ ಮೆರವಣಿಗೆಯಲ್ಲಿ ಹಾಜರಿದ್ದರು. ನೀರಿಗಾಗಿ ಗಂಡಸರಿಗಿಂತ ಹೆಚ್ಚಾಗಿ ಪರದಾಡುವ ಗೃಹಿಣಿಯರು ಸಹ ಪುರುಷರಷ್ಟೇ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಸುಕಿಗೆ ಬಿಇಎಂಎಲ್ ಕಾರ್ಖಾನೆಗೆ ಕಾರ್ಮಿಕ, ಸಿಬ್ಬಂದಿಯನ್ನು ಒಯ್ಯುವ ಬಸ್ತಡೆಗಟ್ಟುವುದರೊಂದಿಗೆ ಬಂದ್ ಕಾರ್ಯಾಚರಣೆ ಶುರುವಾಯಿತು ಎನ್ನಲಾಗಿದೆ. ಬೆಳಗ್ಗೆ 4ಕ್ಕೆ ಕಾರ್ಖಾನೆಗೆ ಹೋಗುವ ಬಸ್‌ಗಳನ್ನು ಅಲ್ಲಲ್ಲಿ ತಡೆದು ನಿಲ್ಲಿಸಲಾಗಿತ್ತು. ಇಡೀ ತಾಲ್ಲೂಕಿನ ಬಹುತೇಕ ಅಂಗಡಿ, ಹೋಟೆಲ್‌ಗಳನ್ನು ಸ್ವ ಇಚ್ಚೆಯಿಂದಲೇ ಮುಚ್ಚಲಾಗಿತ್ತು. ಶಾಲಾ-ಕಾಲೇಜು, ಕಚೇರಿ ಮುಚ್ಚಲಾಗಿತ್ತು. ತಾಲ್ಲೂಕು ವಕೀಲರ ಸಂಘದ ಸದಸ್ಯರು ಸಹ ನ್ಯಾಯಾಲಯ ಕಲಾಪ ತ್ಯಜಿಸಿ ಬಂದ್ ಬೆಂಬಲಿಸಿದ್ದರು.ತಾಲ್ಲೂಕಿನ ಜನತೆ ತಾವಾಗಿಯೇ ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲಿಸಿರುವಾಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮಾಡಿದ ಪ್ರತ್ಯೇಕ ಮೆರವಣಿಗೆ ಸಾರ್ವಜನಿಕ ಅಸಮಾಧಾನಕ್ಕೂ ದಾರಿ ಮಾಡಿತ್ತು.ಕಾಂಗ್ರೆಸ್‌ನ ಕೆ.ಎಂ.ನಾರಾಯಣಸ್ವಾಮಿ ನೇತೃತ್ವದ ಸುಮಾರು ಇನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಗೆ ಜೆಡಿಎಸ್ ಒಡಗೂಡಿರಲಿಲ್ಲ. ಕಿಂಗ್ ಎಡ್ವರ್ಡ್ ಹಾಲ್ ಸಮೀಪದ ಗಾಂಧಿ ಪ್ರತಿಮೆ ಬಳಿಯಿಂದ ಹೊರಟ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಯು ಕುವೆಂಪು ವೃತ್ತ, ಬಜಾರ್ ರಸ್ತೆ, ನಿಲ್ದಾಣ, ದೇಶಿ ಹಳ್ಳಿ, ಕಾರೋನೇಷನ್ ರಸ್ತೆ ಮೂಲಕ ನಡೆದು ಅಳಿದುಳಿದ ಅಂಗಡಿ, ಕಾರ್ಖಾನೆ ಮುಚ್ಚಿಸಿತು.ಇದೆಲ್ಲಾ ನಡೆಯುತ್ತಿದ್ದ ವೇಳೆಯಲ್ಲಿ ಜೆಡಿಎಸ್ ಮುಖಂಡರಾದ ರಾಮಪ್ಪ, ನಂಜುಂಡಪ್ಪ, ಅರುಣ್, ಅನಿಲ್ ಸೇಗು, ಹೂವರಸನಹಳ್ಳಿ ರಾಜಪ್ಪ, ಟಿಎಸ್‌ಎಸ್ ಆಜಂ ಷರೀಫ್ ಅವರನ್ನೊಳಗೊಂಡ ಸುಮಾರು ನೂರು ಜನ ಕಾರ್ಯಕರ್ತರ ಇನ್ನೊಂದು ತಂಡವು ಇದೇ ಮಾರ್ಗವಾಗಿ ಪ್ರತ್ಯೇಕವಾಗಿ ಮೆರವಣಿಗೆ ಮಾಡಿದರು. ಕೊನೆಗೆ ಎಲ್ಲರೂ ಪುರಸಭೆಯ ಬಯಲುರಂಗ ಮಂದಿರದ ಬಳಿ ಒಂದಾಗಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಸಿ.ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಶಂಶುದ್ದೀನ್‌ಬಾಬು, ಜಿ.ಪಂ.ಮಾಜಿ ಸದಸ್ಯ ರಾಮಚಂದ್ರ, ತಾ.ಪಂ.ಮಾಜಿ ಅಧ್ಯಕ್ಷ ಭಾರತಿ ಭೀಮಣ್ಣ, ಕೇಂದ್ರ ರೈಲ್ವೆ ಸಲಹಾ ಸಮಿತಿ ಸದಸ್ಯ ಡಿ.ಕಿಶೋರ್‌ಕುಮಾರ್, ಅನ್ಬುರಾಜ್, ತಾಲ್ಲೂಕು ಅಭಿವೃದ್ಧಿ ಸಮಿತಿಯ ಎಂ.ಎನ್.ಭಾರದ್ವಾಜ್, ನಾಗರತ್ನ, ಆಜಂ ಷರೀಫ್, ಶಾರದ, ಕಿರಣ್, ರಾಜನ್, ಸ್ಟ್ಯಾನ್ಲಿ, ರಫೀಕ್, ಫಯಾಜ್, ಅಪ್ಸರ್, ಲಯನ್ ಆದಿಲ್ ಪಾಷ, ಶ್ರೀನಿವಾಸ್, ಆನಂದ್, ನಾಗರಾಜ್, ಸೂಲಿಕುಂಟೆ ರಮೇಶ್, ವಿವಿಧ ದಲಿತ ಸಂಘಟನೆಗಳ ರಾಮಣ್ಣ, ವೆಂಕಟೇಶ್, ರಾಜೇಂದ್ರ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಚಂದ್ರಶೇಖರ್, ಟ್ರೀಸ್ ಸಂಸ್ಥೆಯ ಎಂ.ನಾರಾಯಣಸ್ವಾಮಿ, ಹೊಳಲಿ ಪ್ರಕಾಶ್, ಕರವೇ ನಗರ ಘಟಕ ಅಧ್ಯಕ್ಷ ಶಾಂತಿನಗರ ಕೃಷ್ಣಮೂರ್ತಿ, ಪಾಕರಹಳ್ಳಿ ಕೃಷ್ಣೇಗೌಡ, ಚಿನ್ನಾ ವೆಂಕಟೇಶ್, ಎಂ.ಎಸ್.ಆನಂದ್, ಬೂದಿಕೋಟೆ ಮಾರ್ಕಂಡೇಗೌಡ, ಜಿ.ಪಂ ಸದಸ್ಯರಾದ ಸಿ.ವಿ.ಕೃಷ್ಣಪ್ಪ, ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ ಹಾಜರಿದ್ದರು.  ಸಹನೆ ಪರೀಕ್ಷೆ ಬೇಡ:
ಜನತೆಯ ಸಹನೆ ಕಟ್ಟೆ ಒಡೆಯುವ ಮುನ್ನ ಶಾಶ್ವತ ನೀರಾವರಿ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎಂ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.ಸೋಮವಾರ ಬಂದ್ ಸಂದರ್ಭದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ಅವರು, ಸರ್ವೇ ಮಾಡಲಾಗುವುದು, ಮನೆಮನೆಗೂ ಕೊಳಾಯಿ ಅಳವಡಿಸಲಾಗುವುದು. ಕೋಟಿ ಅನುದಾನ ಮೀಸಲಿಟ್ಟಿದ್ದೇವೆ ಎಂಬ ಕಣ್ಕಟ್ಟು ಮಾತು ಬಿಟ್ಟು ಮೊದಲು ಜನತೆಗೆ ನೀರು ಕೊಡಬೇಕಾಗಿದೆ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.