ಮಂಗಳವಾರ, ಜನವರಿ 21, 2020
29 °C

ನೀರಿನ ಕರ ಹೆಚ್ಚಳ: ನಗರಸಭೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ನಾಗರಿಕರು ಇನ್ನು ನೀರಿಗೂ ಹೆಚ್ಚು ಬೆಲೆ ನೀಡಬೇಕಾಗಿದೆ. ಹೊಸ ವರ್ಷದಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ನೀರಿಕ ಕರ ಏರಿಸುವ ತೀರ್ಮಾನವನ್ನು ನಗರಸಭೆ ಸದಸ್ಯರು ಅಂಗೀಕರಿಸಿದ್ದಾರೆ.ನೀರಿನ ಕರವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ನಗರಸಭೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಗುರುವಾರದ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಇಡಲಾಗಿತ್ತು. ಕರ ಹೆಚ್ಚಿಸುವ ಪ್ರಸ್ತಾವನೆಗೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರೂ, ಶಾಸಕ ಎಚ್.ಎಸ್. ಪ್ರಕಾಶ್, `ಸರ್ಕಾರವೇ ತೀರ್ಮಾನ ಕೈಗೊಂಡ ಮೇಲೆ ನಾವೇನೂ ಮಾಡಲು ಬರುವುದಿಲ್ಲ. ನಗರದ ಜನಸಂಖ್ಯೆ ಒಂದು ಲಕ್ಷ ಮೀರಿದರೆ ಸಹಜವಾಗಿ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಜಲ ಮಂಡಳಿಯವರು ವಹಿಸುತ್ತಾರೆ. ನಗರಕ್ಕೆ ಇನ್ನೂ ಕೆಲವು ಬಡಾವಣೆಗಳು ಸೇರ್ಪಡೆಯಾದರೆ ಜನಸಂಖ್ಯೆ ಆ ಮಟ್ಟಕ್ಕೆ ತಲುಪುತ್ತದೆ. ಆದ್ದರಿಂದ ಈಗ ಸರ್ಕಾರದ ನಿರ್ದೇಶನವನ್ನು ಪಾಲಿಸುವುದು ಅನಿವಾರ್ಯ~ ಎಂದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶ್ಯಾಮಸುಂದರ್,   `ನಗರದಲ್ಲಿ ಸುಮಾರು ಹತ್ತು ಸಾವಿರ ಅಕ್ರಮ ನೀರಿನ ಸಂಪರ್ಕಗಳಿವೆ. ಹಾಗೂ ಸುಮಾರು ಏಳು ಸಾವಿರ ಒಳಚರಂಡಿ ಸಂಪರ್ಕಗಳಿವೆ. ಇವುಗಳನ್ನು ಸಕ್ರಮಗೊಳಿಸುವ ಯೋಜನೆ ರೂಪಿಸಿದರೆ ವೆಚ್ಚವನ್ನು ಸರಿದೂಗಿಸಬಹುದು~ ಎಂದರು. ಇದನ್ನು                 ಬೆಂಬಲಿಸಿದ ಕಾಂಗ್ರೆಸ್ ಸದಸ್ಯ, ಯಶವಂತ್, `ಒಬ್ಬ ನಾಗರಿಕನಿಗೆ 135 ಲೀಟರ್ ನೀರು ಕೊಡಬೇಕು. ಆದರೆ ನಾವು ಅಷ್ಟು ನೀರು ಕೊಡುತ್ತಿಲ್ಲ. ಹೀಗಿರುವಾಗ ಕರ ಹೆಚ್ಚಳ ಸರಿಯಲ್ಲ~ ಎಂದರು.ಸದಸ್ಯ ಸುರೇಶ್ ಕುಮಾರ್, `ಸರ್ಕಾರದ ನಿರ್ದೇಶನ ಇರುವುದರಿಂದ ಅದನ್ನು ಉಲ್ಲಂಘಿ ಸುವುದು ಸರಿಯಲ್ಲ~ ಎಂದ ಮೇಲೆ ಕರ ಹೆಚ್ಚಿಸಲು ತೀರ್ಮಾನಿಸಲಾಯಿತು. ಹೊಸ ದರದಂತೆ ಗೃಹಬಳಕೆಯ ನೀರಿನ ಕರ ಮಾಸಿಕ 120 ರೂಪಾಯಿ, ವಾಣಿಜ್ಯ ಬಳಕೆಗೆ ರೂ. 240  ಹಾಗೂ ಕೈಗಾರಿಕಾ ಬಳಕೆಗೆ 480  ರೂಪಾಯಿ ನೀಡಬೇಕಾಗುತ್ತದೆ. ಒಳಚರಂಡಿ ಸಂಪರ್ಕಕ್ಕೆ ಕ್ರಮವಾಗಿ ರೂ 15, ರೂ. 30 ಹಾಗೂ ರೂ. 60ರಂತೆ ನಿಗದಿ ಮಾಡಲಾಯಿತು.ಮೀಟರ್ ಅಳವಡಿಕೆ: ಕಡ್ಡಾಯ ಮಾಡಿರುವನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಕೆಯನ್ನು  ಹಿನ್ನೆಲೆಯಲ್ಲಿ ಟೆಂಡರ್  ಆಹ್ವಾನಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಸಂಪರ್ಕಗಳಿಗೂ ಮೀಟರ್ ಅಳವಡಿಕೆ ಮಾಡಲಾಗುವುದು ಎಂದು ಅಧ್ಯಕ್ಷ ಶಂಕರ್ ಸಭೆಗೆ ತಿಳಿಸಿದರು.ಕೆ.ಎಂ.ಎಫ್‌ಗೆ ಭೂಮಿ; ವಿರೋಧ


ನಗರದ ವಿವಿಧೆಡೆ ಹಾಲಿನ ಬೂತ್‌ಗಳನ್ನು ಆರಂಭಿಸಲು ನೆಲಬಾಡಿಗೆ ಆಧಾರದಲ್ಲಿ ಜಾಗ ನೀಡಿದ ವಿಚಾರ ಮತ್ತೆ ಭಾರಿ ಕೋಲಾಹಲಕ್ಕೆ ಕಾರಣವಾಯಿತು.ನೂರು ರೂಪಾಯಿ ಬಾಡಿಗೆಯಲ್ಲಿ ನಗರಸಭೆ ಜಾಗ ಕೊಟ್ಟರೆ ಡೇರಿಯವರು ಅದೇ ಜಾಗವನ್ನು 5500 ರೂಪಾಯಿ ಬಾಡಿಗೆಗೆ ನೀಡುತ್ತಿದ್ದಾರೆ. ಆ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಟೆಂಡರ್ ಸಹ ನೀಡಿದ್ದಾರೆ. ಅದೂ ಅಲ್ಲದೆ ಹಾಲಿನ ಬೂತ್‌ಗಳನ್ನು ಫುಟ್‌ಪಾತ್‌ಗಳಲ್ಲಿ ನಿರ್ಮಿಸಲಾಗಿದೆ. ನಗರಸಭೆ ಯಾಕೆ ಇಷ್ಟು ಕಡಿಮೆ ಬಾಡಿಗೆ ಪಡೀಬೇಕು ಎಂದು ಪ್ರಸನ್ನಕುಮಾರ್  ಪ್ರಶ್ನಿಸಿದರು.ಯಶವಂತ್ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, `ಡೇರಿ ಹಾಗೂ ನಗರಸಭೆ ನಡುವೆ ಈ ಬಗ್ಗೆ ಒಪ್ಪಂದ ಆಗಿದೆಯೇ ? ಆಬಗ್ಗೆ ವಿವರ ಕೊಡಿ ಎಂದರು. ಕೊನೆಗೆ ಅಂಥ ಒಪ್ಪಂದ ಆಗಿಲ್ಲ, ಬಾಯಿಮಾತಿನಲ್ಲೇ ಜಾಗ ನೀಡಲಾಗಿದೆ ಎಂದು ಒಪ್ಪಿಕೊಂಡ ಅಧ್ಯಕ್ಷರು, ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಬೂತ್‌ಗಳನ್ನು ಹಾಕಿಲ್ಲ ಎಂದರು. ಶೀಘ್ರದಲ್ಲೇ ಡೇರಿ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಜತೆಗೆ ಬಾಡಿಗೆಯನ್ನೂ ಹೆಚ್ಚಿಸಲಾಗುವುದು~ ಎಂದು ಅವರು ಭರವಸೆ ನೀಡಿದರು.`ನಗರಸಭೆ ಜಾಗವನ್ನು ನೆಲಬಾಡಿಗೆ ಆಧಾರದಲ್ಲಿ ಕೊಡಲು ಕಾನೂನಿನಲ್ಲೇ ಅವಕಾಶವಿಲ್ಲ~ ಎಂದು ಕೆಲವು ಸದಸ್ಯರು ವಾದಿಸಿದರು. ಈ ಸಂದರ್ಭದಲ್ಲಿ ವಾದ ಪ್ರತಿವಾದಗಳು ಜೋರಾಗಿ ನಡೆದು, ನಗರಸಭೆಯೇ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಅನುಮತಿ ನೀಡಿದಂತಾಗಿದೆ ಎಂದು ಆರೋಪಿಸಿ ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದಸ್ಯರು ಪರಸ್ಪರರ ಮೇಲೆ ಹಲವು ಆರೋಪಗಳನ್ನು ಮಾಡಿದರು. ಬೇಸತ್ತ ಅಧ್ಯಕ್ಷ ಸಿ.ಆರ್. ಶಂಕರ್ ಅವರು,  `ಎಲ್ಲ ಅಕ್ರಮ ಕಟ್ಟಡಗಳನ್ನು ತೆರವು ಮಾಡಲು ಬಹುಮತದಿಂದ ತೀರ್ಮಾನಿಸಲಾಗಿದೆ~ ಎಂದು ಬರೆಸಿದರು.ಜಾಹೀರಾತಿಗೆ ವಿರೋಧ

ಹಬ್ಬ ಹರಿದಿನಗಳ ಸಂದರ್ಭದಲ್ಲಿ ನಗರಸಭೆಯಿಂದ ಜನತೆಗೆ ಶುಭಾಶಯ ಕೋರಿ ಪತ್ರಿಕೆಗಳಿಗೆ ಜಾಹೀರಾತು ನೀಡುವುದಕ್ಕೆ ಯಶವಂತ್ ವಿರೋಧ ವ್ಯಕ್ತಪಡಿಸಿದರು.ವಿವಿಧ ಪತ್ರಿಕೆಗಳಿಗೆ ಜಾಹೀರಾತು ನೀಡುವ ಅಗತ್ಯವಿಲ್ಲ. ಇದು ಜನರ ತೆರಿಗೆಯ ಹಣವಾಗಿರುವುದರಿಂದ ಅದನ್ನು ಈ ರೀತಿ ವೆಚ್ಚ ಮಾಡಬಾರದು~ ಎಂದರು. ಆದರೆ ಇದಕ್ಕ ಇತರ ಸದಸ್ಯರು ಒಪ್ಪಲಿಲ್ಲ. ಸರ್ಕಾರವೇ ಎಲ್ಲ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತದೆ. ಸ್ಥಳೀಯವಾಗಿ ನಾವು ನೀಡಬಹುದು ಎಂದರು. ಆದರೆ ಸಂಬಂಧಪಟ್ಟ ಎಲ್ಲರ ಹೆಸರು ಭಾವಚಿತ್ರಗಳನ್ನು ಹಾಕಬೇಕು ಎಂದು ಇತರ ಸದಸ್ಯರು ನುಡಿದರು.

ಎಲ್ಲರ ಗುಟ್ಟೂ ಬಯಲು

ಸದಸ್ಯರೆಲ್ಲರೂ ನಗರಸಭೆಯ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂಬ ಸಂದೇಹ ಬರುವಂಥ ಪ್ರಸಂಗವೂ ಗುರುವಾರದ ಸಭೆಯಲ್ಲಿ ನಡೆಯಿತು.ಸದಸ್ಯ ಪ್ರಸನ್ನ ಹಾಲಿನ ಬೂತ್‌ಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸುತ್ತಿದ್ದಂತೆ ಜೆಡಿ ಎಸ್ ಸದಸ್ಯರು ಬಿಜೆಪಿಯ ಕೆಲವು ಸದಸ್ಯರನ್ನು ಗುರಿಯಾಗಿಟ್ಟು, ಸಿ.ಎ. ನಿವೇಶನದಲ್ಲಿ ಕಟ್ಟಿದ ಶೆಡ್ ತೆರವು ಮಾಡೋಣ ಎಂದರು. ಇರ್ಷಾದ್ ಪಾಶಾ ಬಿಜೆಪಿ ಸದಸ್ಯರೊಬ್ಬರತ್ತ ಗುರಿಮಾಡಿ ನೀವು ನಿರ್ಮಿಸಿದ್ದ ಕಟ್ಟಡ ತೆರವು ಮಾಡಿಸೋಣ ಎಂದರು. ಅದಕ್ಕೆ ಉತ್ತರ ನೀಡಿದ ಬಂಗಾರಿ ಮಂಜು, ನಾನೇನೂ ನಗರಸಭೆಯಿಂದ ಏಳು ಲಕ್ಷ ರೂಪಾಯಿ ಬಿಲ್  ಪಡೆದಿಲ್ಲ. ಎಂದರು.ಕೆ.ಟಿ ಪ್ರಕಾಶ್ ಅವರು ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುವ ಸಂಪ್ರದಾಯವನ್ನು ಹಿಂದಿನಿಂದಲೇ ಎಲ್ಲರೂ ಮಾಡಿಕೊಂಡು ಬಂದಿದ್ದಾರೆ. ಹಿಂದಿನ ಶಾಸಕರೂ ಮಾಡಿದ್ದಾರೆ, ಈಗಲೂ ನಡೆಯುತ್ತಿದೆ. ಇಲ್ಲ ಎಂದು ಹೇಳಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ~ ಎಂದರು. ಒಟ್ಟಿನಲ್ಲಿ ಆರೋಪ ಪ್ರತ್ಯಾರೋಪಗಳ ಮೂಲಕ ಎಲ್ಲರ ಗುಟ್ಟೂ ಬಯಲಾಯಿತು.ಅಧ್ಯಕ್ಷರು `ಪಾಪ~

ನಗರಸಭೆ ಅಧ್ಯಕ್ಷ ಪದೇ ಪದೇ `ಪಾಪ~ ಎಂಬ ಪದವನ್ನು ಬಳಕೆಮಾಡುವ ಮೂಲಕ ನಗೆಪಾಟಲಾದ ಘಟನೆಯೂ ಗುರುವಾರ ನಡೆಯಿತು.ಮಾತುಮಾತಿಗೂ ಅಧ್ಯಕ್ಷರು ಈ ಪದ ಬಳಸುತ್ತಿದ್ದರು. `ನಾನು ಪಾಪ ಓದಿಲ್ಲ, ಇಂಗ್ಲಿಷ್ ಕಲಿತಿಲ್ಲ, ನಮ್ಮಪ್ಪ ಪಾಪ ಹೆಚ್ಚು ಓದಿಸಿಲ್ಲ. ಎಲ್ಲರ ಸಹಕಾರ ಸಿಕ್ಕರೆ ನಾನೂ ಪಾಪ ಒಂದು ಪದವಿ ಮಾಡ್ತೀನಿ, ಪಾಪ ಕಾನೂನು ಕಲಿತು ನಿಮ್ಮ ಮುಂದೆ ಬರುತ್ತೇನೆ....~ ಹೀಗೆ ಮಾತನಾಡುತ್ತಲೇ ಹೋದರೆ ಸದಸ್ಯರು ಬಿದ್ದು ಬಿದ್ದು ನಗುತ್ತಿದ್ದರು. ಇದು ಅಧ್ಯಕ್ಷರ ಜಗಮನಕ್ಕೂ ಬಂದಿತ್ತು. ಕೊನೆಯಲ್ಲಿ ಇನ್ನೊಬ್ಬ ಸದಸ್ಯರು ಈ ಪದ ಬಳಸಿದಾಗ `ನಾನು ಆಡಿದರೆ ಗೇಲಿ ಮಾಡುತ್ತೀರಿ. ನೀವು ಆ ಪದ ಬಳಕೆ ಮಾಡಬಹುದೇ ? ಎಂದು ತಮಾಷೆಯಿಂದಲೇ ಪ್ರಶ್ನಿಸಿದರು.

 

ಪ್ರತಿಕ್ರಿಯಿಸಿ (+)