ಗುರುವಾರ , ಮೇ 6, 2021
26 °C

ನೀರಿನ ಕೊರತೆ: ಎಂಆರ್‌ಪಿಎಲ್ ಎರಡು ಘಟಕ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು:ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನಲ್ಲಿನ 2 ಮತ್ತು 3ನೇ ಹಂತದ ಶುದ್ಧೀಕರಣ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.ಬಂಟ್ವಾಳ ಸಮೀಪದ ಸರಪಾಡಿಯಲ್ಲಿ ನಿರ್ಮಿಸಲಾದ ಅಣೆಕಟ್ಟೆಯಿಂದ ಎಂಆರ್‌ಪಿಎಲ್‌ಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಎಂಆರ್‌ಪಿಎಲ್ ನೀರೆತ್ತುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.ನೇತ್ರಾವತಿ ಒಳಹರಿವು ಮತ್ತಷ್ಟು ಕುಸಿದಿರುವುದರಿಂದ ನೇತ್ರಾವತಿ ನದಿಯಿಂದ ನೀರೆತ್ತುವುದನ್ನು ಎಂಆರ್‌ಪಿಎಲ್ ಕಂಪೆನಿ ಬುಧವಾರದಿಂದ ಸಂಪೂರ್ಣ ಸ್ಥಗಿತಗೊಳಿಸಿದೆ. ಹೀಗಾಗಿ ಮಳೆ ಬಂದು ನೀರು ಲಭ್ಯವಾಗುವವರೆಗೆ 2 ಮತ್ತು 3ನೇ ಘಟಕಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕಂಪೆನಿಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂಜಯ್ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎಂಆರ್‌ಪಿಎಲ್ ಯೋಜನಾ ಪ್ರದೇಶದಲ್ಲಿ ಒಟ್ಟು ನಾಲ್ಕು ಜಲಸಂಗ್ರಹ ತಾಣಗಳಿದ್ದು, ಈ ಸಂಗ್ರಹದಿಂದ ಒಂದು ಘಟಕವನ್ನು ಒಂದು ವಾರ ಕಾಲ ನಡೆಸಬಹುದು. ವಾರದೊಳಗೆ ಮಳೆ ಬಂದು ನೇತ್ರಾವತಿಯಲ್ಲಿ ನೀರು ಹರಿಯದಿದ್ದರೆ ಇನ್ನೊಂದು ಘಟಕವನ್ನೂ ಸ್ಥಗಿತಗೊಳಿಸಬೇಕಾಗಬಹುದು ಎಂದು ಹೇಳಲಾಗಿದೆ.ಎಂಆರ್‌ಪಿಎಲ್‌ನಲ್ಲಿನ ತೈಲ ಶುದ್ಧೀಕರಣ ಕಾರ್ಯ ಬಹುತೇಕ ಸ್ಥಗಿತಗೊಂಡಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಇತರ ಶುದ್ಧೀಕರಣ ಸ್ಥಾವರಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸಿಕೊಂಡು ಕೊರತೆ ನಿವಾರಿಸುವ ಭರವಸೆಯನ್ನು ತೈಲ ಕಂಪೆನಿಗಳು ನೀಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.