ಮಂಗಳವಾರ, ಏಪ್ರಿಲ್ 13, 2021
23 °C

ನೀರಿನ ತಿಜೋರಿಯಾಗಲಿ ಕೆರೆ-ಕಟ್ಟೆ

ಕೆ.ಎಂ.ಸಂತೋಷ್‌ಕುಮಾರ್ Updated:

ಅಕ್ಷರ ಗಾತ್ರ : | |

ತುಮಕೂರು: ರಕ್ತದ ಕೊರತೆ ಕಂಡುಬಂದರೆ ಉತ್ಪಾದನೆ ಮಾಡಬಹುದು. ಆದರೆ ನೀರ ಉತ್ಪಾದನೆ ಸಾಧ್ಯವಿಲ್ಲ. ಇರುವ ಜೀವಜಲವನ್ನು ರಕ್ಷಿಸಿ, ಉಳಿಸಿ, ಮಿತವಾಗಿ ಬಳಸುವುದೊಂದೇ ದಾರಿ. ಉಸಿರಾಡಲು ಗಾಳಿ ಎಷ್ಟು ಮುಖ್ಯವೋ, ಜೀವಿಸಲು ನೀರು ಅಷ್ಟೇ ಮುಖ್ಯ. ಶುದ್ಧ ಮತ್ತು ಸಿಹಿ ನೀರಿನ ಪ್ರಮಾಣ ಭೂಮಿ ಮೇಲೆ ಇರುವುದು ತೀರಾ ಕಡಿಮೆ. ಭವಿಷ್ಯದಲ್ಲಿ ಯುದ್ಧ ನಡೆದರೆ ಅದು ಕುಡಿಯುವ ನೀರಿಗಾಗಿ ಮಾತ್ರ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿಯೇ ಜಗತ್ತಿನ ವಿಜ್ಞಾನಿಗಳು ಅನ್ಯಗ್ರಹಗಳಲ್ಲಿ ನೀರು ಅರಸುತ್ತಾ ಶೋಧನೆ, ಅನ್ವೇಷಣೆ ನಡೆಸುತ್ತಿದ್ದಾರೆ.ಶರವೇಗದಲ್ಲಿ ಬೆಳೆಯುತ್ತಿರುವ ಮಹಾನಗರದಲ್ಲಿ ಕುಡಿಯುವ ನೀರಿನ ಅಗತ್ಯ ಪೂರೈಸಿಕೊಳ್ಳಲು ದೂರದೃಷ್ಟಿ ಯೋಜನೆ ಪ್ರಸ್ತಾಪಗಳು ನಡೆದಿವೆ. ನಗರದ ಬಹುತೇಕ ಬಡಾವಣೆಗಳಿಗೆ ಈಗಲೂ ವಾರಕ್ಕೊಮ್ಮೆ ನೀರು ಪೂರೈಸುತ್ತಿರುವ ನಿದರ್ಶನಗಳು ಇವೆ. ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಕಂಡಿತಾ ಸಾಧ್ಯವಿದೆ. ಮಳೆ ನೀರು ಹಿಡಿದಿಟ್ಟುಕೊಳ್ಳಬೇಕಿದ್ದ ‘ಅಮೃತ ಬಟ್ಟಲು’ ಎನಿಸಿಕೊಂಡ ಕೆರೆಗಳೆಲ್ಲವನ್ನೂ ಉಳಿಸಿಕೊಳ್ಳಲು ಆಡಳಿತ ಯಂತ್ರಕ್ಕೆ ಸಾಧ್ಯವಾಗಿಲ್ಲ. ಜನರ ಮೌನ, ರಿಯಲ್‌ಎಸ್ಟೇಟ್ ದಂದೆಯಿಂದಾಗಿ ಬಹಳಷ್ಟು ಕೆರೆಗಳು ಕಣ್ಮರೆಯಾಗಿರುವುದು ವಾಸ್ತವ. ನಗರಕ್ಕೆ ಮಂಜೂರಾಗಿರುವ ಹೇಮಾವತಿ ನೀರಿನ ಪ್ರಮಾಣದಲ್ಲಿ ಅರ್ಧದಷ್ಟನ್ನು ಇಂದಿಗೂ ಬಳಸಿಕೊಳ್ಳಲು ಆಗಿಲ್ಲ.ಬುಗುಡನಹಳ್ಳಿ, ಮೈದಾಳ ಕೆರೆಗಳಿಂದ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಬುಗುಡನಹಳ್ಳಿ ಕೆರೆಯಿಂದ ನಗರಕ್ಕೆ ನೀರು ಪೂರೈಸುವುದಕ್ಕಿಂತಲೂ ಮೊದಲು ಮೈದಾಳ ಕೆರೆಯಿಂದಲೇ ನೀರು ಪೂರೈಸಲಾಗುತ್ತಿತ್ತು. ಈಗಲೂ ಈ ಕೆರೆಯಿಂದ 0.90 ಎಂಎಲ್‌ಡಿ (ಮಿಲಿಯನ್ ಲೀಟರ್‌ಡೇ) ನೀರನ್ನು ಕೆಲ ಭಾಗಕ್ಕೆ ಕೊಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಗರ ಬೆಳೆದಂತೆಲ್ಲ ನೀರಿನ ಬೇಡಿಕೆಯೂ ಹೆಚ್ಚಲಿದೆ. ಇದರ ಜತೆಗೆ ಕೈಗಾರಿಕೆ ಬೆಳವಣಿಗೆಗೆ ನೀರು ಹೆಚ್ಚು ಬೇಕಾಗಲಿದೆ. ತುಮಕೂರು ನಗರ ತನ್ನ ಪಾಲಿನ ನೀರನ್ನು ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ಕೆರೆಯಲ್ಲಿ ತುಂಬಿಸಿಟ್ಟುಕೊಂಡರೆ ಅಗತ್ಯಬಿದ್ದಾಗ ಬಳಸಿಕೊಳ್ಳಲು ಆಗುವುದಿಲ್ಲವೇ? ಜತೆಗೆ ನಗರ ವ್ಯಾಪ್ತಿಯ ಕೊಳವೆ ಬಾವಿಗಳಿಗೂ ಅಂತರ್ಜಲ ಮರುಪೂರಣ ಮಾಡಿದಂತಾಗುತ್ತದೆ.ಅಭಿವೃದ್ಧಿಯಾಗುತ್ತಿರುವ ಹೆಬ್ಬಾಕ ಕೆರೆ, ಅಮಾನಿಕೆರೆ ಕೆರೆ ಜತೆಗೆ, ದೇವರಾಯಪಟ್ಟಣ, ಮೈದಾಳಕೆರೆಯಂತೆಯೇ ಶೆಟ್ಟಿಹಳ್ಳಿ, ಮರಳೂರು, ಗುಂಡ್ಲಮ್ಮನಕೆರೆ, ಬಡ್ಡಿಹಳ್ಳಿ ಕೆರೆ ಸೇರಿದಂತೆ ಪ್ರಮುಖ ಕೆರೆಗಳನ್ನು ಕುಡಿಯುವ ನೀರಿನ ತಿಜೋರಿಯಾಗಿ ರೂಪಿಸಬಹುದು. ಈ ಬಗ್ಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಗಮನ ಹರಿಸಬೇಕು ಎನ್ನುವುದು ಜಲಸಾಕ್ಷರರ ಆಶಯ. ಇಡೀ ರಾಜ್ಯದಲ್ಲಿ 35 ಸಾವಿರ ಕೆರೆಗಳಿದ್ದರೆ ಜಿಲ್ಲೆಯಲ್ಲಿ ಒಂದು ಕಾಲಕ್ಕೆ 2010 ಕೆರೆಗಳಿದ್ದವು. ನೀರಾವರಿ ಇಲಾಖೆ ಪ್ರಕಾರ ಈಗ ಇವುಗಳ ಸಂಖ್ಯೆ 1726ಕ್ಕೆ ಇಳಿದಿದೆ.ಜಿ.ಎಸ್.ಪರಮಶಿವಯ್ಯ ನಡೆಸಿರುವ ಅಧ್ಯಯನದ ಪ್ರಕಾರ ಈ ಎಲ್ಲ ಕೆರೆಗಳಿಂದ ಸುಮಾರು 27 ಟಿಎಂಸಿ ನೀರನ್ನು ಇಂದಿಗೂ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಜಿಲ್ಲೆಯಲ್ಲಿ ಸರಾಸರಿ 600ರಿಂದ 700 ಮಿ.ಮೀ. ಆಸುಪಾಸಿನಲ್ಲಿ ವಾರ್ಷಿಕ ಮಳೆ ಸುರಿಯುತ್ತದೆ. ಅದರಲ್ಲೂ ಕಳೆದ ವರ್ಷ 900 ಮಿ.ಮೀ.ಗೂ ಅಧಿಕ ಮಳೆ ಜಿಲ್ಲೆಯಲ್ಲಿ ಆಗಿದೆ. ‘ಜೀವಂತವಾಗಿದ್ದ’ ಕೆರೆಗಳಲ್ಲಿ ಮಾತ್ರ ಕೋಡಿ ಹರಿದಿದೆ. ಉಳಿದವು ಕಳೆದ ಮಳೆಗಾಲದಲ್ಲೂ ತುಂಬದೆ ಹನಿ ನೀರಿಗಾಗಿ ಬಾಯ್ದೆರೆದಿವೆ.ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುತ್ತಿರುವ ಪಶ್ಚಿಮಘಟ್ಟದ ನದಿಗಳ ನೀರನ್ನು ಬಯಲು ಸೀಮೆಗೆ ತರುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆ ಕಾರ್ಯಸಾಧುವಾಗಿ ಕಾರ್ಯರೂಪಕ್ಕೆ ಬಂದರೆ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳಿಗೆ ಮರುಜೀವ ಬರಲಿದೆ. ಅಂತರ್ಜಲವೂ ವೃದ್ಧಿಸಲಿದೆ. ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.