ಸೋಮವಾರ, ಮೇ 17, 2021
21 °C
ಕೊಠಡಿಗಳ ಕೊರತೆ: ಅಪಾಯದಲ್ಲಿ ಮಕ್ಕಳು

ನೀರಿನ ಸಂಪ್ ಬಳಿ ಮಕ್ಕಳಿಗೆ ಪಾಠ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ / -ವಿ.ರಾಜಗೋಪಾಲ್ Updated:

ಅಕ್ಷರ ಗಾತ್ರ : | |

ಮಾಲೂರು: ನೀರಿನ ಸಂಪಿನ ಪಕ್ಕದಲ್ಲೇ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಸಾಧ್ಯವೇ?

-ಹೌದು ಎನ್ನುತ್ತಾರೆ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು.ಈ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಕೊಠಡಿಗಳ ಕೊರತೆಯೂ ಇದೆ. ಹೀಗಾಗಿ ಒಂದೇ ಕೊಠಡಿಯಲ್ಲಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತದೆ. ಅಲ್ಲೇ ಬಿಸಿಯೂಟ ಕೂಡ ತಯಾರಾಗುತ್ತದೆ. ಈ ಶಾಲೆಯಲ್ಲಿ ಶೌಚಾಲಯವೂ ಇಲ್ಲ!

ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವು ಪಟ್ಟಣಕ್ಕೆ 2 ಕಿ.ಮೀ. ದೂರದಲ್ಲಿದೆ. ಇಲ್ಲಿ 380 ಮತದಾರರು, 60 ಮನೆಗಳಿವೆ. ಗ್ರಾಮದ ಬಹುತೇಕ ಮಕ್ಕಳು ಪಟ್ಟಣದ ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಗ್ರಾಮದ ಬಡ ಮಕ್ಕಳು ಸೇರಿದಂತೆ ಸುತ್ತ-ಮುತ್ತಲಿನ ಇಟ್ಟಿಗೆ ಕಾರ್ಖಾನೆಗಳ ಕಾರ್ಮಿಕರ ಮಕ್ಕಳು ಮಾತ್ರ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಒಂದನೇ ತರಗತಿಯಲ್ಲಿ 16 ಮಕ್ಕಳು, 2ನೇ ತರಗತಿಯಲ್ಲಿ 18, 3ನೇ ತರಗತಿಯಲ್ಲಿ 12, 4 ಮತ್ತು 5ನೇ ತರಗತಿಯಲ್ಲಿ ತಲಾ 6 ಸೇರಿ ಶಾಲೆಯಲ್ಲಿ 58 ಮಕ್ಕಳಿದ್ದಾರೆ. ಮುಖ್ಯ ಶಿಕ್ಷಕರು, ಇಬ್ಬರು ಸಹಶಿಕ್ಷಕರು ಹಾಗೂ ಇಬ್ಬರು ಅಡುಗೆ ಸಿಬ್ಬಂದಿ ಕೂಡ ಇದೇ ಕೊಠಡಿಯಲ್ಲಿ ಕೆಲಸ ಮಾಡಬೇಕು.ಅಪಾಯ-ಆತಂಕ: ಪಾಠ ಮಾಡುವ ಸ್ಥಳದಲ್ಲೇ ಬಿಸಿಯೂಟ ತಯಾರಿಸುತ್ತಿರುವುದರಿಂದ ಆತಂಕದ ನೆರಳಲ್ಲೇ ಶಾಲೆ ನಡೆಯುತ್ತಿದೆ. ಮಕ್ಕಳು ಬಿಸಿ ಪಾತ್ರೆಯಲ್ಲಿ ಹಾಗೂ ಗ್ಯಾಸ್ ಸ್ಟೌಗೆ ಕೈ ಇಡುವ ಸಂಭವ ಹೆಚ್ಚಾಗಿದೆ.ಶಾಲೆ ಮುಂಭಾಗದಲ್ಲಿರುವ ತಿಪ್ಪೆ ಗುಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ಸೊಳ್ಳೆಗಳ ಕಾಟ, ದುರ್ವಾಸನೆಯನ್ನೂ ಸಹಿಸಬೇಕಾಗಿದೆ. ಶೌಚಾಲಯವಿಲ್ಲದೆ ಮಕ್ಕಳು ಬಯಲು ಮಲ-ಮೂತ್ರ ವಿಸರ್ಜನೆಗೆ ಹೊಂದಿಕೊಂಡಿದ್ದಾರೆ.ಸಂಭ್ರಮ ನಾಪತ್ತೆ: ಶಾಲೆಗಳ ಪುನರಾರಂಭದ ದಿನವಾದ ಶುಕ್ರವಾರ ಈ ಶಾಲೆಯ ಮಕ್ಕಳಲ್ಲಿ ಯಾವುದೇ ಸಂತಸ ಕಂಡುಬರಲಿಲ್ಲ.ಮಳೆ ನೀರಿನಿಂದ ತೊಯ್ದು ತೊಪ್ಪೆಯಾಗಿದ್ದ ದಾಖಲಾತಿ ಪುಸ್ತಕಗಳು, ಪಾಠ ಪ್ರವಚನಗಳ ಯೋಜನಾ ಪುಸ್ತಕಗಳು, ಆಹಾರ ಪದಾರ್ಥಗಳು ಹಾಗೂ ಕಲಿ-ನಲಿ ಫಲಕಗಳನ್ನು ಒಣಗಿಸುವಲ್ಲಿ ಶಿಕ್ಷಕರು ತೊಡಗಿದ್ದರು. ತಳಿರು ತೋರಣಗಳಾಗಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದಾಗಲಿ ಇರಲಿಲ್ಲ. ಎಸ್‌ಡಿಎಂಸಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು, ಪೋಷಕರ ಸುಳಿವಿರಲಿಲ್ಲ. ಅಗತ್ಯವಿರುವಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿರಲಿಲ್ಲ.ಇತ್ತೀಚೆಗೆ ಶಿಥಿಲ ಶಾಲಾ ಕಟ್ಟಡ ದುರಸ್ತಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ರೂ. 10 ಸಾವಿರ ಬಿಡುಗಡೆಯಾಗಿದ್ದರೂ ಕಳಪೆ ಕಾಮಗಾರಿ ಪರಿಣಾಮವಾಗಿ ಮಳೆ ನೀರು ಸೋರಿಕೆ ಹೆಚ್ಚಾಗಿದೆ. ಶಾಲಾ ಕೊಠಡಿಯಲ್ಲಿದ್ದ ದಾಖಲಾತಿ ಪುಸ್ತಕಗಳು, ಬಿಸಿಯೂಟ ಪದಾರ್ಥಗಳಾದ ಅಕ್ಕಿ, ಬೇಳೆ ನೆನೆದು ಹಾಳಾಗಿವೆ ಎಂದು ಮುಖ್ಯಶಿಕ್ಷಕ ಮುನಿನಾರಾಯಣ್ ಅಸಹಾಯಕತೆ ವ್ಯಕ್ತಪಡಿಸಿದರು.ಪ್ರತಿ ಶಾಲೆಯಲ್ಲೂ ಮೂಲ ಸೌಕರ್ಯದ ಸಮಸ್ಯೆಗಳು ಹಾಗೂ ಇತರೆ ಸಮಸ್ಯೆಗಳ ಪರಿಶೀಲನೆ ನಡೆಸುವ ಸಲುವಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಒಂದು ವಾರದೊಳಗೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲಾಗುವುದು. ಸಮಸ್ಯೆ ಇರುವ ಶಾಲೆಗಳ ಕಡೆಗೆ ಗಮನಹರಿಸಲಾಗುವುದು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ವಿ.ಸುಬ್ರಮಣ್ಯಂ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.