ಸೋಮವಾರ, ಮೇ 23, 2022
30 °C

ನೀರಿನ ಸೌಕರ್ಯ: ಮುಖ್ಯಮಂತ್ರಿ ಭರವಸೆ-ವರ್ತೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸುವ ಸಂದರ್ಭದಲ್ಲಿ ನಾನು ನೀರಾವರಿ ತಜ್ಞ ಡಾ. ಪರಮಶಿವಯ್ಯ ವರದಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳ ಗಮನ ಸೆಳೆದಿರುವೆ.

ಈಗಾಗಲೇ ಎಸ್.ಎಂ.ಕೃಷ್ಣ ಸರ್ಕಾರ ಯೋಜನೆಯ ಸರ್ವೆ ಕಾರ್ಯವನ್ನ್ಕು ಹೈದರಾಬಾದ್ ಮೂಲದ ಖಾಸಗಿ ಕಂಪೆನಿಗೆ ಒಪ್ಪಿಸಿರುವುದರಿಂದ ಸರ್ವೆ ವರದಿ ತರಿಸಿಕೊಳ್ಳಲು ಸದರಿ ಕಂಪೆನಿಗೆ ಬಾಕಿಯಿರುವ ಹಣವನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗುವುದು. ಸರ್ವೆ ವರದಿಯ ಸಾಧಕ-ಬಾಧಕ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಶಾಸಕ ಆರ್.ವರ್ತೂರ್ ಪ್ರಕಾಶ್ ಹೇಳಿದರು.ತಾಲ್ಲೂಕಿನ ಸೀತಿ ಹೊಸೂರಿನಲ್ಲಿ ಸೋಮವಾರ ರೂ.10 ಲಕ್ಷ ವೆಚ್ಚದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪರಮಶಿವಯ್ಯ ವರದಿ ಜಾರಿಗೆ ಸರ್ವೆ ಕಾರ್ಯದ ಮಾಹಿತಿ ಅತ್ಯಗತ್ಯ. ಕಂಪೆನಿಗೆ ಬಾಕಿಯಿರುವ ಹಣ ನೀಡಿ ವರದಿ ತರಿಸಿಕೊಂಡು ಕೂಲಂಕಷ ಚರ್ಚೆ ನಡೆಸಿ ಎರಡೂ ಜಿಲ್ಲೆಗಳ ಜನತೆಗೆ ಅನುಕೂಲ ಮಾಡಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.ಜಿಲ್ಲೆಯ ನೀರಾವರಿ ಯೋಜನೆಗಳು ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಬಾರಿ ಬಜೆಟ್‌ನಲ್ಲಿ ಈ ಎರಡು ಜಿಲ್ಲೆ ಜನತೆ ಕನಸು ಸಾಕಾರಗೊಳ್ಳಲಿದೆ ಎಂಬ ನಂಬಿಕೆ ನನಗಿದೆ. ಶಾಶ್ವತ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಪರಮಶಿವಯ್ಯ ವರದಿ ಮತ್ತು ಮೇಕೆದಾಟು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಜನರ ಮುಂದಿವೆ. ಯೋಜನೆಗಳ ಸಾಧಕ-ಬಾಧಕ ಬಗ್ಗೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ನೀರಾವರಿ ತಜ್ಞರ ಜೊತೆ ಮಾತುಕತೆ ನಡೆಸಿ ಅವಿಭಜಿತ ಜಿಲ್ಲೆ ಜನತೆಗೆ ಒಳಿತು ಮಾಡುವಂತಹ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಯರಗೋಳ್ ಯೋಜನೆಗೆ ಪ್ರಸ್ತುತ ಅಡ್ಡಿಯಿರುವ ಅರಣ್ಯ ಇಲಾಖೆ ಜಮೀನು ಹಸ್ತಾಂತರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕೆಲವೇ ದಿನಗಳಲ್ಲಿ ಯೋಜನೆಯ ಪೂರ್ಣ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಳಿದ್ದಾರೆ ಎಂದರು.ಗ್ರಾ.ಪಂ. ಅಧ್ಯಕ್ಷ ಬೈರಪ್ಪ, ಸದಸ್ಯರಾದ ಟಿ.ವಿ.ರಾಮಚಂದ್ರಪ್ಪ, ನಾರಾಯಣಸ್ವಾಮಿ, ನಾಗಮಣಿ, ಶೋಭಾ, ಸುಬ್ಬಾರೆಡ್ಡಿ, ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ನರಸಿಂಹಮೂರ್ತಿ, ಸದಸ್ಯರಾದ ಹುಲ್ಲಂಕಲ್ಲು ಈರಪ್ಪ, ಟಿ.ಕೆ.ಶ್ರೀರಾಮಪ್ಪ, ಮುಖಂಡ ಮದ್ದೇರಿ ದೊಡ್ಡಪ್ಪಯ್ಯ ಉಪಸ್ಥಿತರಿದ್ದರು.ಸಿಮೆಂಟ್ ರಸ್ತೆ ಉದ್ಘಾಟನೆ: ತಾಲ್ಲೂಕಿನ ಕೋಡಿಕಣ್ಣೂರಿನಲ್ಲಿ ತಮ್ಮ ಅನುದಾನ ರೂ.2.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸಿಮೆಂಟ್ ರಸ್ತೆಯನ್ನು ಶಾಸಕ ಆರ್. ವರ್ತೂರ್ ಪ್ರಕಾಶ್ ಉದ್ಘಾಟಿಸಿದರು.ನಂತರ ಗ್ರಾಮದಲ್ಲಿ ನಡೆದ ವೇಣುಗೋಪಾಲಸ್ವಾಮಿ ದೇವಾಲಯದ ಸಂಪ್ರೋಕ್ಷಣಾ ಸಮಾರಂಭದಲ್ಲಿ ಶಾಸಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಇ.ರಂಗನಾಥ್, ರತ್ನಮ್ಮ, ಮೆಹಬೂಬ್‌ಜಾನ್, ಹಿರಿಯ ಮುಖಂಡ ಎಚ್.ಎನ್. ನಾರಾಯಣಸ್ವಾಮಿ, ಉರಿಗಿಲಿ ರುದ್ರಸ್ವಾಮಿ, ಚಕ್ರವರ್ತಿ, ಗೋವಿಂದಪ್ಪ, ಕೆಂಪಣ್ಣ, ರವೀಂದ್ರ, ನಾರಾಯಣಸ್ವಾಮಿ, ಗುತ್ತಿಗೆದಾರ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.