ಗುರುವಾರ , ಏಪ್ರಿಲ್ 15, 2021
31 °C

ನೀರು, ಸ್ವಾಸ್ಥ್ಯ ರಕ್ಷಣೆ ಸಮೀಕ್ಷೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ಕುಡಿಯುವ ನೀರು, ಸ್ವಚ್ಛತೆ, ಸ್ವಾಸ್ಥ್ಯ ರಕ್ಷಣೆ ಮತ್ತು ಮನೆಗಳ ಸ್ಥಿತಿಗಳ ಬಗ್ಗೆ 69ನೇ ಸಮೀಕ್ಷೆ ಮಾದರಿಯನ್ನು ಆರಂಭಿಸಲಾಗುತ್ತಿದೆ~ ಎಂದು ನಿರ್ದೇಶಕ ಎಚ್.ಇ.ರಾಜಶೇಖರಪ್ಪ ಹೇಳಿದರು.ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ `ರಾಷ್ಟ್ರೀಯ ಮಾದರಿ ಸಮೀಕ್ಷೆ 69 ನೇ ಸುತ್ತಿನ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮನೆಗಳ ಸ್ಥಿತಿ ಮತ್ತು ಜೀವನದ ಸೌಕರ್ಯಗಳ ಬಗ್ಗೆ ಸರ್ಕಾರವು ಹಾಗೂ ಯೋಜನಾ ಮಂಡಳಿಗಳು ಸಮರ್ಪಕ ಯೋಜನೆಗಳ ತಯಾರಿಕೆಗೆ ನಂಬುವಂತಹ ಮಾಹಿತಿಯನ್ನು ಈ ಸಮೀಕ್ಷೆಗಳಿಂದ ಪಡೆಯಬಹುದಾಗಿದೆ~ ಎಂದರು.`ವಾಸಿಸಲು ಅವಶ್ಯವಿರುವ ಜೀವನ ಸೌಕರ್ಯಗಳಾದ ಕುಡಿಯುವ ನೀರು, ಸ್ನಾನದ ಮನೆ ಮತ್ತು ಶೌಚಾಲಯಗಳ ವ್ಯವಸ್ಥೆ, ವಾಸಸ್ಥಾನ ಮತ್ತು ಅದರ ಸುತ್ತಮುತ್ತಲ ಪರಿಸರದ ಸ್ವಾಸ್ಥ್ಯ ಸ್ಥಿತಿ, ವಿದ್ಯುತ್ ಸ್ಥಿತಿ,, ವಾಸ ಸ್ಥಾನದಲ್ಲಿ ವಾಯು ಸಂಚಾರ, ಕಟ್ಟಡ ನಿರ್ಮಾಣ ಮತ್ತು ದುರಸ್ತಿಯ ವಿವರಗಳು, ಅದಕ್ಕೆ ಉಂಟಾದ ಖರ್ಚು, ಹಣದ ಪೂರೈಕೆಯ ಮೂಲ ಮುಂತಾದವುಗಳ ಮಾಹಿತಿಯನ್ನು ಮನೆಗಳ ಸ್ಥಿತಿಯಲ್ಲಿ ಸಂಗ್ರಹಿಸಲಾಗುವುದು~ ಎಂದು ವಿವರಿಸಿದರು.`ಜಿಲ್ಲೆಯಲ್ಲಿರುವ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡಿ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿನ ಅಧಿಕಾರಿಗಳ ಕಾರ್ಯ ತೃಪ್ತಿಕರವಾಗಿಲ್ಲ. ಎರಡು ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಬೇಕು ಎಂದಿದ್ದರೂ ನೀವು ವರ್ಷದ ಕೊನೆಯಲ್ಲಿ ಕೆಲಸ ಆರಂಭಿಸಿ, ಸರಿಯಾಗಿ ನಿರ್ವಹಿಸದೆ ಕೆಲಸವನ್ನು ಮುಗಿಸುತ್ತೀರಿ~ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.`ರಾಜ್ಯದ ಎಲ್ಲ 30 ಜಿಲ್ಲೆಗಳಿಂದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸುವರು. ಸಮೀಕ್ಷೆಯ ಕ್ಷೇತ್ರ ಕಾರ್ಯವು 3 ತಿಂಗಳ ಅವಧಿಯದಾಗಿದ್ದು, 2 ಉಪಸುತ್ತುಗಳಾಗಿ ವಿಂಗಡಿಸಲಾಗಿದೆ. ಕ್ಷೇತ್ರ ಕಾರ್ಯದ ಅವಧಿಯು ಒಟ್ಟು 6 ತಿಂಗಳು ಆಗಿರುತ್ತದೆ ಎಂದು ತಿಳಿಸಿದರು. ರಾಜ್ಯವು ಸಮ ಪ್ರಮಾಣದಲ್ಲಿ ಕೇಂದ್ರದ ಮಾದರಿಗಳೊಂದಿಗೆ ಭಾಗವಹಿಸುವುದು~ ಎಂದೂ ವಿವರಿಸಿದರು.

 ಕಾರ್ಯಕ್ರಮದಲ್ಲಿ  ವಿಭಾಗೀಯ ಕಚೇರಿ ಉಪಮಹಾನಿರ್ದೇಶಕ ಕೆ.ಪಿ.ಉನ್ನಿಕೃಷ್ಣನ್, ದಕ್ಷಿಣ ಪ್ರಾಂತ್ಯದ ಕ್ಷೇತ್ರ ಕಾರ್ಯ ವಿಭಾಗದ ಉಪ ಮಹಾನಿರ್ದೇಶಕ ಬಿ.ಅಹ್ಮದ್ ಆಯೂಬ್ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.