ಸೋಮವಾರ, ಜೂನ್ 21, 2021
23 °C

ನೃತ್ಯ ಪ್ರಯೋಗದ ಭಿನ್ನ ಶಾಲೆ

ರಮೇಶ ಕೆ. Updated:

ಅಕ್ಷರ ಗಾತ್ರ : | |

ನೂರಾರು ನೃತ್ಯ ಬಂಧಗಳನ್ನು ಸಂಯೋಜನೆ ಮಾಡಿ ಅವುಗಳನ್ನು ಸಮೂಹ ನೃತ್ಯಕ್ಕೆ ಅಳವಡಿಸುವ ಮೂಲಕ ಅನೇಕ ಹೊಸ ಹೊಸ ಭರತನಾಟ್ಯ ನೃತ್ಯ ರೂಪಕಗಳನ್ನು ಪರಿಚಯಿಸುತ್ತಿದೆ ಜೆ.ಪಿ.ನಗರದಲ್ಲಿರುವ ನ್ಯಾಟ್ಯಾಂಜಲಿ ನೃತ್ಯ ಶಾಲೆ.ಇಪ್ಪತ್ತೈದು ವರ್ಷಗಳಿಂದ ಭರತನಾಟ್ಯ ಶಿಕ್ಷಣ ಕಲಿಸಿಕೊಡುತ್ತಿರುವ ನಾಟ್ಯಾಂಜಲಿ ಟ್ರಸ್ಟ್‌ನಿಂದ ಇದುವರೆಗೂ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯಕಲಾವಿದರಾಗಿ ಹೊರಹೊಮ್ಮಿದ್ದಾರೆ. ಭರತನಾಟ್ಯಕ್ಕೆ ಹೆಚ್ಚು ಒತ್ತು ನೀಡಿ ಸಮೂಹ ನೃತ್ಯ ಸಂಯೋಜನೆ ಮಾಡುವಲ್ಲಿ ನಿಪುಣರಾಗಿದ್ದಾರೆ ಟ್ರಸ್ಟ್‌ನ ಸ್ಥಾಪಕ ಎ. ಅಶೋಕ್‌ ಕುಮಾರ್.ಭರತನಾಟ್ಯದ ಚೌಕಟ್ಟಿನಲ್ಲಿಯೇ ಹೊಸತನ್ನು ವ್ಯಕ್ತಪಡಿಸುವ ಉದ್ದೇಶ ಇವರದ್ದು. ಇದುವರೆಗೂ ‘ರಾಮಾಯಣ’, ‘ಶಕ್ತಿ’, ‘ದಶಾವತಾರಂ’, ‘ನಾಟ್ಯರಾಣಿ ಶಾಂತಲಾ‘, ‘ಸಾಮ್ರಾಟ್‌ ಅಶೋಕ’, ‘ಭರತ ಬಾಹುಬಲಿ’ ‘ವನಗಳನ್ನು ಉಳಿಸಿ ಪ್ರಾಣಿಗಳನ್ನು ರಕ್ಷಿಸಿ‘ ಮತ್ತು ‘ಭಗವದಜ್ಜುಕೀಯಂ’ ನೃತ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ.‘ಭರತನಾಟ್ಯವನ್ನೇ ಇಟ್ಟುಕೊಂಡು ಅನೇಕ ಪ್ರಯೋಗಗಳನ್ನು ಮಾಡುತ್ತೇನೆ. ವಸ್ತ್ರ, ಬೆಳಕು, ಸಂಗೀತ ಸಂಯೋಜನೆಯಲ್ಲೂ ಬದಲಾವಣೆ ಮಾಡಲಾಗುತ್ತದೆ. ಜಾನಪದ ನೃತ್ಯ ಶೈಲಿಯನ್ನು ಅಳವಡಿಸಿಕೊಂಡು ನೃತ್ಯನಾಟಕಗಳನ್ನು ನಿರ್ದೇಶಿಸುತ್ತೇನೆ. ಹಾಗಾಗಿ ಭರತನಾಟ್ಯಕ್ಕೆ ವಿಶೇಷ ಮೆರುಗು ನೀಡಿದಂತಾಗುತ್ತದೆ. 1986ರಲ್ಲಿ ಆರಂಭವಾದ ನಮ್ಮ ಶಾಲೆಯಲ್ಲಿ ಇದುವರೆಗೂ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭರತನಾಟ್ಯ ಕಲಿತಿದ್ದಾರೆ. ನಮ್ಮ ತಂದೆ ಅನಂತರಾಜಯ್ಯ ಅವರಿಗೆ ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಇತ್ತು. ಹಾಗಾಗಿ ನಾನು ಎಂಟು ವರ್ಷದವನಿದ್ದಾಗಲೇ ಭರತನಾಟ್ಯ ಹಾಗೂ ಕೂಚಿಪುಡಿ ಶಾಲೆಗೆ ಸೇರಿಸಿದರು. ಭರತನಾಟ್ಯವನ್ನು ಭಾನುಮತಿ, ರಾಧಾ ಶ್ರೀಧರ್‌ ಅವರ ಬಳಿ, ಕೂಚಿಪುಡಿಯನ್ನು ಸುನಂದಾ ದೇವಿ ಅವರ ಬಳಿ ಹಾಗೂ ಕಥಕನ್ನು ಮಾಯಾರಾವ್‌ ಅವರ ಬಳಿ ಕಲಿತೆ. ಭರತನಾಟ್ಯದಲ್ಲಿ ವಿದ್ವತ್‌ ಮಾಡಿಕೊಂಡು ನಾಟ್ಯಾಂಜಲಿ ನೃತ್ಯಶಾಲೆ ಆರಂಭಿಸಿದೆ’ ಎಂದು ತಮ್ಮ ‘ನೃತ್ಯ ಪಯಣ’ವನ್ನು ವಿವರಿಸುತ್ತಾರೆ ಅಶೋಕ್‌ ಕುಮಾರ್‌.ಅಂಧರಿಗೆ ನೃತ್ಯ ಪಾಠ

ಶಾಲೆ ಆರಂಭವಾದ ನಂತರ 20 ವರ್ಷ 40ಕ್ಕೂ ಹೆಚ್ಚು ಅಂಧರಿಗೆ ‘ಟಚ್‌ ಅಂಡ್ ಫೀಲ್‌’ ಮಾದರಿಯಲ್ಲಿ ಶಾಸ್ತ್ರೀಯ ನೃತ್ಯವನ್ನು ಹೇಳಿಕೊಟ್ಟ ಹೆಗ್ಗಳಿಕೆ ಅಶೋಕ್‌ ಅವರದ್ದು. ದೇಶ, ವಿದೇಶಗಳಲ್ಲಿ ಅವರಿಂದ 800ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಡಿಸಿದ್ದಾರೆ. ಅದಕ್ಕಾಗಿ ಟ್ರಸ್ಟ್‌ ಲಿಮ್ಕಾ ದಾಖಲೆ ಪುಟ ಸೇರಿತು.‘ದೃಷ್ಟಿಮಾಂದ್ಯರು ಕೂಡ ಸಾಮಾನ್ಯರಂತೆ ಶಾಸ್ತ್ರೀಯ ನೃತ್ಯವನ್ನು ಕಲಿಯಬೇಕು, ಆ ಮೂಲಕ ಅವರೂ ಬೇರೆಯವರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳ ಆಸಕ್ತರಿಗೆ ನೃತ್ಯವನ್ನು ಕಲಿಸಲು ಮುಂದಾದೆ. ಅವರಿಗೆ ಒಂದು ನೃತ್ಯದ ಮಟ್ಟು ಹೇಳಿಕೊಡಲು 5ರಿಂದ 6 ಗಂಟೆ ಬೇಕಾಗುತ್ತಿತ್ತು. ಸ್ಪರ್ಶದ ಮೂಲಕವೇ ಹೇಳಿಕೊಡಬೇಕಿತ್ತು. ಗಣೇಶಸ್ತುತಿ, ತಿಲ್ಲಾನ, ಶಿವಸ್ತುತಿಯಂಥ ನೃತ್ಯ ಬಂಧಗಳನ್ನು ಕಲಿಸಿಕೊಡಲಾಯಿತು. ಅಲ್ಲದೇ ನೃತ್ಯ ರೂಪಕಗಳನ್ನು ಕಲಿತರು. ವೇದಿಕೆ ಮೇಲೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು’ ಎಂದು ಹೇಳುತ್ತಾರೆ ಅಶೋಕ್‌.ನಾಟ್ಯಾಂಜಲಿ ನೃತ್ಯ ತಂಡ ಅಶೋಕ್‌ ಕುಮಾರ್‌ ಅವರ ನೇತೃತ್ವದಲ್ಲಿ ರಾಜ್ಯದಲ್ಲಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ಆಸ್ಟ್ರೇಲಿಯಾ, ಸಿಂಗಪುರ, ಮಲೇಷ್ಯಾ, ಹಾಂಕಾಂಗ್‌, ದುಬೈ, ಅಮೆರಿಕ, ಕೆನಡಾದಲ್ಲೂ ಭರತನಾಟ್ಯ ಪ್ರದರ್ಶನ ನೀಡಿದೆ. ಟ್ರಸ್ಟ್‌ ವತಿಯಿಂದ ಪ್ರತಿವರ್ಷ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿದ್ದಾರೆ. ಅಶೋಕ್‌ ಅವರ ಮಕ್ಕಳಾದ ಅದಿತಿ ಹಾಗೂ ಸ್ಫೂರ್ತಿ ಸಹ ಭರತನಾಟ್ಯ ಕಲಾವಿದರು.ಅಶೋಕ್ ಅವರು ‘ಕೃಷ್ಣ’ ಹೆಸರಿನ ನೃತ್ಯನಾಟಕದ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಭಾವಗೀತೆ ಹಾಗೂ ಶಾಸ್ತ್ರೀಯ ನೃತ್ಯಗಳ ಸಮ್ಮಿಲನದಿಂದ ಕೂಡಿರುವ ಈ ನೃತ್ಯ ನಾಟಕಕ್ಕೆ ಪ್ರವೀಣ್‌ ಡಿ. ರಾವ್‌ ಸಂಗೀತ ನೀಡಿದ್ದಾರೆ.ಯಾವುದೇ ಲಾಭದ ಉದ್ದೇಶವಿಲ್ಲದೆ ನೃತ್ಯ ಪಾಠ ಹೇಳಿಕೊಡುತ್ತಿರುವ ಅಶೋಕ್‌ ಕುಮಾರ್‌, ಕಾರ್ಯಕ್ರಮದಿಂದ ಬರುವ ಹಣದ ಒಂದು ಭಾಗವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡುತ್ತಾರೆ. ಇವರ ಸೇವೆಗೆ ರಾಜ್ಯ ಪ್ರಶಸ್ತಿ, ನಾಟ್ಯಶಿಲ್ಪಿ, ನಾಟ್ಯ ಶಿಖಾಮಣಿ, ಯುವಕಲಾ ಭಾರತಿ (ಚೆನ್ನೈ) ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ.ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರ ಪಟ್ಟಿಯಲ್ಲಿ ಅಶೋಕ್‌ ಕುಮಾರ್‌ ಅವರೂ ಇದ್ದಾರೆ.ವಿದ್ಯಾರ್ಥಿಗಳು ಹೀಗೆನ್ನುತ್ತಾರೆ...

‘ನೃತ್ಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದು ನಾಟ್ಯಾಂಜಲಿ ಶಾಲೆಯಲ್ಲಿ. ನೃತ್ಯದ ತಂತ್ರಗಾರಿಕೆ ಬಗ್ಗೆ ಹೇಳಿಕೊಡುತ್ತಾರೆ. ಯಾವುದೇ ಪ್ರಶ್ನೆಗಳಿದ್ದರೂ ಮುಕ್ತವಾಗಿ ಉತ್ತರ ನೀಡುತ್ತಾರೆ.  ಗುರು ಅಶೋಕ್‌ ಮಾರ್ಗದರ್ಶಕರಾಗಿ ಶಿಕ್ಷಣ ನೀಡುತ್ತಾರೆ. ನಾನು ಅವರ ಬಳಿ  ಅಭಿನಯ, ನೃತ್ತ, ಭರತನಾಟ್ಯಂ ಮಾರ್ಗವನ್ನು ಕಲಿತಿದ್ದೇನೆ. ಇದೀಗ ಅವರ ಶಾಲೆಯಲ್ಲಿಯೇ ಗುರುವಾಗಿರುವುದಕ್ಕೆ ಖುಷಿಯಾಗುತ್ತದೆ’ ಎನ್ನುತ್ತಾರೆ ನಾಟ್ಯಾಂಜಲಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಭಾರ್ಗವಿ.‘ನಾನು 2002ರಿಂದ ನೃತ್ಯಾಭ್ಯಾಸ ಮಾಡುತ್ತಿದ್ದೇನೆ. ನಮ್ಮೂರು ಚನ್ನರಾಯಪಟ್ಟಣ. ಒಮ್ಮೆ ಶ್ರವಣಬೆಳಗೊಳದಲ್ಲಿ ಅಂಧ ಮಕ್ಕಳ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದರು. ಅವರ ಪ್ರದರ್ಶನ ನೋಡಿ ನಾನು ಪ್ರೇರಣೆಗೊಂಡು ಅಶೋಕ್‌ ಅವರ ಬಳಿ ನೃತ್ಯಾಭ್ಯಾಸಕ್ಕಾಗಿಯೇ ಬೆಂಗಳೂರಿಗೆ ಬಂದೆ. ಭರತನಾಟ್ಯ ಕಲಿತು ಈಗ ವಿದ್ವತ್ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ವಿದ್ಯಾರ್ಥಿಗಳನ್ನು ಬೆಳೆಸಲು ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಕೊರಿಯೋಗ್ರಫಿಯಲ್ಲಿ ನಮ್ಮ ಕಲ್ಪನೆಗೆ ಅವಕಾಶ ಕೊಡುತ್ತಾರೆ. ಹಾಗಾಗಿ ನಾವು ಕಲಿಯಲು ಸಹಕಾರವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿ ಸುಚೀಂದ್ರ.ಹೆಚ್ಚಿನ ಮಾಹಿತಿಗೆ: 94480 67952.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.