ಶನಿವಾರ, ಮೇ 15, 2021
24 °C

`ನೆಟ್ಟ ಸಸಿ ಎಲ್ಲಿ? ತೋರಿಸ್ರಿ...'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: “ಜಿಲ್ಲಾದಾಗ ಎಷ್ಟ ಸಸಿ ನೆಟ್ಟಿರಿ? ಎಲ್ಲಿ ನೆಟ್ಟಿರಿ ಅನ್ನೂದನ್ನ ನಮಗೂ ಸ್ವಲ್ಪ ತೋರಿಸಿದ್ರ ಭಾಳ ಛೋಲೋ ಆಗ್ತದ್ರಿ. ಎಲ್ಲಾನೂ ಬ್ಯಾಡ, ಬರೇ ಹತ್ತ ತೋಪ ತೋರಿಸ್ರಿ ಸಾಕು”ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಸಭೆಯ ಆರಂಭದಲ್ಲಿ ಎಸ್‌ಡಿಪಿ ಯೋಜನೆಯಡಿ 86 ಹೆಕ್ಟೇರ್ ಪ್ರದೇಶದಲ್ಲಿ 1.68 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆಯೇ, ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ ಆಕ್ಷೇಪ ವ್ಯಕ್ತ ಪಡಿಸಿದರು.

“

ಆಗಿಲ್ರಿ ನೀವು ನೆಟ್ಟ ಸಸಿ ಎಲ್ಲಿ ಅದಾವ ಅಂತ ತೋರಿಸರಿ ಅಂತಹ ಹಿಂದಿನ ಮೀಟಿಂಗ್‌ನ್ಯಾಗ ಕೇಳಿದ್ದೇ. ನೀವು ತೋರಿಸಲಿಲ್ಲ. ಈಗಾದ್ರು               ತೋರಸ್ರಿ” ಎಂದು ತರಾಟೆಗೆ ತೆಗೆದುಕೊಂಡರು. ನೀವು ಸಸಿಗಳನ್ನು ಎಲ್ಲೆಲ್ಲಿ ನೆಟ್ಟಿದ್ದೀರಿ? ಅವುಗಳನ್ನು ತೋರಿಸುವವರೆಗೆ ನಿಮ್ಮ  ಕ್ರಿಯಾ ಯೋಜನೆಗೆ ಅನುಮೋದನೆ ಕೊಡುವುದಿಲ್ಲ ಎಂದುಪಟ್ಟು ಹಿಡಿದರು.ಜಿಲ್ಲೆಯಲ್ಲಿ ಎಷ್ಟು ಸಸಿ ನೆಟ್ಟಿದ್ದೀರಿ ಎಂಬುದನ್ನು ತೋರಿಸುವಂತೆ ಕೇಳಿದರೂ ತೋರಿಸುತ್ತಿಲ್ಲ. ಕೇವಲ ಹತ್ತು ತೋಪುಗಳನ್ನು ತೋರಿಸಿ ಸಾಕು. ಬೋಗಸ್ ಕಾಮಗಾರಿಗಳನ್ನು ತೋರಸುತ್ತಿದ್ದೀರಿ ಎಂದು ದೂರಿದರು. ನೆಟ್ಟ ಸಸಿಗಳನ್ನು ತೋರಿಸಿದ ಮೇಲೆ ಪ್ರಗತಿ ವರದಿ ನೀಡಿ ಎಂದು ಹೇಳಿದರು.ಬಹಳಷ್ಟು ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸಿದ್ದಾರೆ. ಅವರಿಗೇನು ಗೊತ್ತಿರುತ್ತೆ. ಅವರಿಂದ ಇಲಾಖೆಯ ಪ್ರಗತಿ ವರದಿ ನೀಡಲು ಸಾಧ್ಯವೇ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್ ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜ, ಸರಿಯಾದ ಮಾಹಿತಿ ಇದ್ದರೆ ಒದಗಿಸಿ. ಇಲ್ಲದಿದ್ದರೆ ನಿಮ್ಮ ಮೇಲಾಧಿಕಾರಿಗಳನ್ನು ಕಳುಹಿಸಿ. ಸಭೆಗೆ ಗೈರು ಹಾಜರಾಗುವ ಮುನ್ನ ಅಧ್ಯಕ್ಷರ ಅಪ್ಪಣೆ ಪಡೆದುಕೊಳ್ಳಬೇಕು ಎಂಬ ಜ್ಞಾನವಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಜಿಲ್ಲೆಯಲ್ಲಿ ಎಷ್ಟು ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿವೆ. ಸ್ವಂತ ಕಟ್ಟಡಗಳೆಷ್ಟು? ಎಷ್ಟು ಆಶ್ರಮ ಶಾಲೆಗಳಿವೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣಧಿಕಾರಿಗೆ ಸೂಚಿಸಿದರು. ಆದರೆ ಕಚೇರಿಯ ಸಿಬ್ಬಂದಿ ಸಭೆಗೆ ಆಗಮಿಸಿದ್ದನ್ನು ಕಂಡು ಅಧ್ಯಕ್ಷೆ ಮರೆಮ್ಮ, ಯಾಕ್ರಿ ಎಲ್ಲಿ ಹೋಗ್ಯಾರ ನಿಮ್ಮ ಸಾಹೇಬರು ಎಂದು ಕೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.