ಬುಧವಾರ, ಮೇ 12, 2021
18 °C

ನೆನೆಗುದಿಗೆ ಬಿದ್ದ ವರದಿಗಳು ಅನುಷ್ಠಾನವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತನೂರು ರಾಜಮ್ಮ ವೇದಿಕೆ (ಚಿಂತಾಮಣಿ): ಕನ್ನಡ ನಾಡು, ಗಡಿಪ್ರದೇಶ ಹಾಗೂ ಕನ್ನಡ ಭಾಷೆ ಉಳಿವಿಗಾಗಿ ಮಹಾಜನ್ ವರದಿ, ಡಾ.ಸರೋಜಿನಿ ಮಹಿಷಿ ವರದಿ, ಗೋಕಾಕ್ ವರದಿಯನ್ನು ಸಂಪೂರ್ಣ ಜಾರಿಗೆ ತರಬೇಕು ಎಂದು ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ವಿ.ನಾಗಸುಬ್ರಮಣ್ಯಂ ಆಗ್ರಹಪಡಿಸಿದರು.ನಗರದ ಬಾಲಕರ ಸರ್ಕಾರಿ ಕಾಲೇಜಿನ ಆವರಣದಲ್ಲಿ ಶನಿವಾರ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಅವರು ಮಾತನಾಡಿ, ಈವರೆಗೆ ಅಧಿಕಾರಕ್ಕೆ ಬಂದ ಪಕ್ಷಗಳು ಈ ವರದಿಗಳನ್ನು ಮರೆತುಹೋಗಿವೆ. ಇಲ್ಲ ಮರೆತಂತೆ ನಟಿಸುತ್ತಿವೆ ಎಂದು ಟೀಕಿಸಿದರು. ಸದಾ ಬರಗಾಲಕ್ಕೆ ತುತ್ತಾಗುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿದರು.ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿದ್ದು, ಈ ಭಾಷೆಗೆ ಅನೇಕ ಶತಮಾನಗಳ ಇತಿಹಾಸವಿದೆ. ಮಾನವನಿಗೆ ಪ್ರಕೃತಿ ಕೊಟ್ಟ ವರ ಭಾಷೆ. ಕೆಲವು ಭಾಷೆಗಳಿಗೆ ಲಿಪಿ ಇದೆ, ಕೆಲವಕ್ಕೆ ಲಿಪಿಯಿಲ್ಲ. ಕೆಲವು ಮೌಖಿಕವಾಗಿಯೂ ಚಾಲನೆಯಲ್ಲಿರುತ್ತವೆ. ಆದರೆ ಲಿಪಿಯಿರುವ ಭಾಷೆ ಶಾಶ್ವತವಾಗಿರುತ್ತದೆ. ಭಾಷೆಗೆ ಶಬ್ದವಿದೆ, ಶಬ್ದಕ್ಕೆ ಶಕ್ತಿ, ಸೌಂದರ್ಯ, ಮಾಧುರ್ಯವಿರುತ್ತದೆ ಎಂದರು.ಯಾವುದೇ ಸಾಹಿತ್ಯ, ಭಾಷೆ ಹೃದಯಕ್ಕೆ ನೇರವಾಗಿ ತಲುಪಬೇಕಾದರೆ, ಬಹುಕಾಲ ನಿಲ್ಲಬೇಕಾದರೆ, ಬದಲಾವಣೆ ತರಬೇಕಾದರೆ ಮಾತು ಹಿತವಾಗಿ, ಮಿತವಾಗಿ, ಲಯಬದ್ಧವಾಗಿರಬೇಕು. ಪ್ರಾಚೀನ ಕಾವ್ಯಗಳು ಇಂದಿನವರೆಗೂ ಉಳಿಯಲು ಇದೇ ಕಾರಣ ಎಂದು ಅಭಿಪ್ರಾಯಪಟ್ಟರು.ಇತ್ತೀಚೆಗೆ ಚಿಂತನೆಗೆ ಹಚ್ಚುವ ರಚನೆಗಳು ಹೊರಬರುತ್ತಿರುವುದು ಸಂತಸದ ವಿಷಯ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಲು ಸಾಹಿತ್ಯದಲ್ಲಿ ಅಡಗಿರುವ ಭಾವನೆ, ಪದ ಜೋಡಣೆ, ಲಯವಿನ್ಯಾಸಗಳೇ ಕಾರಣ ಎಂದರೆ ತಪ್ಪಾಗಲಾರದು ಎಂದರು.ಕನ್ನಡದ ಪದಗಳು ಮಾಯವಾಗಿ ಪರಭಾಷಾ ಪದ ಸೇರಿ ಭಾಷೆ ಮಲಿನವಾಗುತ್ತಿದೆ. ಭಾಷಾಭಿಮಾನಿಗಳು, ಸಾಹಿತಿಗಳು, ಚಿಂತಕರು, ಶಿಕ್ಷಕರು ಈ ಬಗ್ಗೆ ಗಮನಹರಿಸಬೇಕು. ಸ್ಲೇಟು, ಬಳಪ, ತಿದ್ದುವುದು, ಬರೆಯುವುದು, ಕಾಗುಣಿತ, ಮಗ್ಗಿ ಮಾಯವಾಗಿವೆ. ಆದರೆ ಕನ್ನಡ ಮಾಯವಾಗುವುದು ಬೇಡ ಎಂದು ಮನವಿ ಮಾಡಿದರು.ತಾಲ್ಲೂಕು ಮಳೆಯಿಲ್ಲದೆ ಬರಡು ಭೂಮಿಯಾಗುತ್ತಿದೆ. ರೈತರು, ಕಾರ್ಮಿಕರು ಸಾಲದಿಂದ ತತ್ತರಿಸುತ್ತಿದ್ದಾರೆ. ಇಂದಿನ ಸಮಾಜ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದೆ. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಎನ್ನುವ ವಿಚಾರ ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ ಎಂದು ವಿಷಾದಿಸಿದರು.ನಿಕಟಪೂರ್ವ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಸಮಾಜದಲ್ಲಿ ಎಲ್ಲಿಯವರೆಗೆ ಜಾತಿ ಬೇರುಗಳನ್ನು ಕಿತ್ತೆಸೆಯುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದರು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಸ್.ನಾಗರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಎಂ.ಕೃಷ್ಣಾರೆಡ್ಡಿ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಮೀನಾಶ್ರಿರಾಮರೆಡ್ಡಿ, ಉಪಾಧ್ಯಕ್ಷ ಸುಲ್ತಾನ್ ಷರೀಫ್, ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಟಿ.ಎನ್.ರಾಜಗೋಪಾಲ್, ತಹಶೀಲ್ದಾರ್ ಎಂ.ಎನ್.ಮಂಜುನಾಥ್, ಡಿವೈಎಸ್ಪಿ ವಿ.ಶೇಖರ್, ನಗರಸಭೆ ಸದಸ್ಯ ಶ್ರಿನಿವಾಸರೆಡ್ಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.