ನೆಲದ ನಡೆಯ ವಿಧಾನ

ಮಂಗಳವಾರ, ಜೂನ್ 18, 2019
24 °C

ನೆಲದ ನಡೆಯ ವಿಧಾನ

Published:
Updated:

ಈ ಇದೇ ಮಣ್ಣು ನೆಲವನ್ನಗೆಯತೊಡಗಿದರೆ;

ಸ್ವರ್ಣ ಖಚಿತ ಸಿಂಹಾಸನದ ಜೊತೆಜೊತೆಗೇ

ಬತ್ತೀಸ ಪುತ್ಥಳಿಗಳು ತಡೆ ತಡೆದು ಹೇಳಿದ ಕತೆ-

ಕೇಳ ಕೇಳುತ್ತಲೇ ಗುರಿಯಿಂದ ದೂರವಾದವರ ವ್ಯಥೆ.

ಈ ಇದೇ ಮಣ್ಣು ನೆಲವನ್ನು ಚಣಕಾಲ ದಿಟ್ಟಿಸಿದರೆ;

ನೆಲದ ಮರೆಯ ನಿಧಾನವನ್ನನುಸರಿಸಿ

ಪ್ರಭುವಾಗಿ ಬೆಳೆದ ಅಲ್ಲಮನ ಕಾಮಲತೆ

ತಿರು ತಿರುಗಿ ಅನಾಥವಾಗುತ್ತಲೇ ಉಳಿದ ಭಾವ-ಗೀತೆ.

ಈ ಇದೇ ಮಣ್ಣು ನೆಲವನ್ನುತ್ತತೊಡಗಿದರೆ;

ನೇಗಿಲ ಚೂಪಿಗೆ ಸಿಕ್ಕು ನರಳುವಳು ಸೀತೆ

ಪುರುಷೋತ್ತಮನ ಮಡದಿಯಾದರೂ ಕುಲಟೆ

ಅಗ್ನಿಪರೀಕ್ಷೆಗೆ ದಬ್ಬುವುದು ನಾಲಿಗೆಯ ತೀಟೆ.

ಈ ಇದೇ ಮಣ್ಣು ನೆಲವನ್ನಳೆಯತೊಡಗಿದರೆ;

ಹೆಜ್ಜೆ ಹೆಜ್ಜೆಗೂ ತೊಡರುವ ವೀರಗಲ್ಲುಗಳು

ಒಬ್ಬನ ಹೆಸರನ್ನಳಿಸಿ ಕೆತ್ತಿಸಿದ ಮತ್ತೊಬ್ಬನ ಫಲಕಗಳು

ಆಚಂದ್ರಾರ್ಕ ಕಾಡುತ್ತಲೇ ಇರುವ ಶ್ರೇಷ್ಠತೆಯ ವ್ಯಸನಗಳು.

ಈ ಇದೇ ಮಣ್ಣು ನೆಲವನ್ನಗೆದಗೆದು,

ಸವೆದು ಮೊಂಡಾಗಿರುವ ಹಾರೆ, ಗುದ್ದಲಿ, ಸನಿಕೆ

ಅರಗಿನರಮನೆಯಲ್ಲಿ ತಡೆಯಲಾರದ ಸೆಖೆ

ಗಡುವು ಮೀರಿದರೂ, ಮುಂದುವರಿಯುವುದು ತನಿಖೆ!

ಈ ಇದೇ ಮಣ್ಣು ನೆಲದ ಪರಿಧಿಯೊಳಗೇ ಸುಳಿಸುಳಿದು,

ಬಿಡದೇ ಬೆಂಬತ್ತಿರುವ ಪೂರ್ವ ಸೂರಿಗಳ ಬಿಕ್ಕುಗಳು

ಸುಖದ ಉಷ್ಣದ ಜೊತೆಗೇ ಶೀತ ಮಾರುತದ ವಾಕ್ಕುಗಳು

ಮಥುರೆಯ ದಬ್ಬಾಳಿಕೆಯಲ್ಲರಳಿದ ದ್ವಾರಕೆಯ ನಕಾಶೆಗಳು.

ಈ ಇದೇ ಮಣ್ಣು ನೆಲದ ಘಮವನ್ನಾಸ್ವಾದಿಸತೊಡಗಿದರೆ;

ಪುಳಕ ಮೈಯಲ್ಲೆಲ್ಲ ಹರಡಿ, ಕನಸು ಕಾಮರಥಿ

ತಡೆಯಿಂದಿಳಿದಿಳಿದು ಹೊರ ಚಿಮ್ಮುವ ಬಾಗೀರಥಿ

ರಂಗು ರಂಗಿನುತ್ಸವಕೆ ಕಾಯ ಕರ್ಪೂರದಾರತಿ!

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry