ಶುಕ್ರವಾರ, ಫೆಬ್ರವರಿ 21, 2020
31 °C
ನೇತಾಜಿ ಸುಭಾಷ್ ಚಂದ್ರ ಬೋಸ್

ನೇತಾಜಿ ಕುಟುಂಬದ ಪಡಿಪಾಟಲು

ಚೂಡಿ ಶಿವರಾಂ Updated:

ಅಕ್ಷರ ಗಾತ್ರ : | |

ನಾಜಿ ಆಕ್ರಮಿತ ಹಂಗೆರಿಯಲ್ಲಿ ಸಾಮೂಹಿಕ ಹತ್ಯಾಕಾಂಡವಾದಾಗ ಸ್ವೀಡಿಶ್ ರಾಜತಾಂತ್ರಿಕ ರಾಲ್ ಗುಸ್ತಾಫ್ ವ್ಯಾಲೆನ್‌ಬರ್ಗ್ ಸಾವಿರಾರು ಯಹೂದಿಗಳನ್ನು ಪಾರು ಮಾಡಿದ್ದರು. ಆ ಸಂಭ್ರಮದಲ್ಲಿದ್ದಾಗಲೇ ಅವರು ನಿಗೂಢ ರೀತಿಯಲ್ಲಿ ಮೃತಪಟ್ಟರೆಂದು ವರದಿಯಾಯಿತು. ಅವರು ಕೂಡ 1945ರಲ್ಲಿ ಸೋವಿಯತ್ ಯೂನಿಯನ್‌ನಲ್ಲಿ ಇದ್ದರೆನ್ನಲಾಗಿತ್ತು. ಸ್ವೀಡಿಶ್‌ ಸರ್ಕಾರವು ಪದೇಪದೇ ಉನ್ನತ ಮಟ್ಟದ ಮಾತುಕತೆ ನಡೆಸಿದ ನಂತರವೂ ರಷ್ಯನ್ನರು ಆ ನೆಲದಲ್ಲಿ ಗುಸ್ತಾಫ್ ಇದ್ದರೆನ್ನುವುದನ್ನು ನಿರಾಕರಿಸಿದರು. ಉಭಯ ರಾಷ್ಟ್ರಗಳ ಸಂಬಂಧಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸ್ವೀಡಿಶ್‌ ಸರ್ಕಾರ ಒಂದು ದಶಕದ ನಂತರ ಎಚ್ಚರಿಕೆ ನೀಡಿತು. ಆಗ ಸೋವಿಯತ್ ರಾಷ್ಟ್ರದವರು ತಮ್ಮ ದೇಶದಲ್ಲಿ ವ್ಯಾಲೆನ್‌ಬರ್ಗ್ ಕೆಜಿಬಿ ಕೈದಿಯಾಗಿ ಇದ್ದರೆನ್ನುವುದನ್ನು ಒಪ್ಪಿಕೊಂಡರು.

1945ರಲ್ಲಿ ಸೋವಿಯತ್ ರಷ್ಯಾದಲ್ಲಿ ನೇತಾಜಿ ಇದ್ದರೆನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕವು. ಅವನ್ನು ಆಧರಿಸಿ ನೇತಾಜಿ ಅವರ ಕುಟುಂಬದ ಸಹೋದರರು, ಸಹೋದರರ ಮಕ್ಕಳು, ಮೊಮ್ಮಕ್ಕಳು ನಿರಂತರವಾಗಿ ಸತ್ಯಕ್ಕಾಗಿ ಒತ್ತಾಯಿಸುತ್ತಾ ಬಂದಿದ್ದಾರೆ. ಅವರ ರಕ್ತಸಂಬಂಧಿಗಳಷ್ಟೇ ಅಲ್ಲ, ಅವರ ಜೊತೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಲ್ಲಿ (ಐಎನ್‌ಎ) ಕೆಲಸ ಮಾಡಿದವರೆಲ್ಲ ಅವರ ಕುಟುಂಬದ ಸದಸ್ಯರಂತೆಯೇ ಆಗಿಬಿಟ್ಟಿದ್ದರು. ಅವರನ್ನು ಗೌರವದಿಂದ ನೋಡುತ್ತಿದ್ದವರು, ಸಂಶೋಧಕರು ಕೂಡ ನೇತಾಜಿ ಮೃತಪಟ್ಟಿದ್ದು ಎಲ್ಲಿ, ಹೇಗೆ ಎಂದು ಅರಿಯಲು ಸತತವಾಗಿ ಹೋರಾಡುತ್ತಲೇ ಇದ್ದಾರೆ.

ಖೋಸ್ಲಾ ಆಯೋಗದಲ್ಲಿಯೂ ಇದ್ದ ನೇತಾಜಿ ಅವರ ಅಣ್ಣ ಸುರೇಶ್ ಚಂದ್ರ ಬೋಸ್, ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರು ಎನ್ನುವ ನಿರ್ಧಾರವನ್ನು ನಿರಾಕರಿಸಿ 1956ರಲ್ಲಿ ಪತ್ರ ಬರೆದಿದ್ದರು. ನೇತಾಜಿ ಅವರ ಅಣ್ಣ ಶರತ್ ಚಂದ್ರ ಬೋಸರ ಮಗ ಅಮಿಯ ನಾಥ್ ಬೋಸ್ 1964ರಲ್ಲಿ ನೆಹರೂ ಅವರಿಗೆ ಪತ್ರ ಬರೆದು, ಸತ್ಯದ ಪತ್ತೆ ಮಾಡುವ ಹೊಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿಗೆ ವಹಿಸಿಕೊಡಬೇಕು ಎಂದು ಆಗ್ರಹಿಸಿದ್ದರು. 1964ರ ಏಪ್ರಿಲ್ 22ರಂದು ಆ ಪತ್ರಕ್ಕೆ ಉತ್ತರಿಸಿದ್ದ ಆಗಿನ ಪ್ರಧಾನಿ ನೆಹರೂ, ಹಾಗೆ ಮಾಡುವುದು ಸಮಂಜಸವಲ್ಲ ಎಂದಿದ್ದರು.

ಹಿಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರಿಗೂ ಅಮಿಯ ನಾಥ್ ಪತ್ರ ಬರೆದು, ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರು ಎಂಬ ವಾದವನ್ನು ಪಕ್ಕಕ್ಕಿಟ್ಟು, ಸತ್ಯವನ್ನು ಪತ್ತೆಹಚ್ಚಬೇಕು ಎಂದು ಕೇಳಿಕೊಂಡಿದ್ದರು. ದೂರ ಪ್ರಾಚ್ಯದ ಅಂತರರಾಷ್ಟ್ರೀಯ ಮಿಲಿಟರಿ ನ್ಯಾಯಮಂಡಳಿಯಲ್ಲಿ ಕೆಲಸ ಮಾಡಿದ್ದ ನ್ಯಾಯಮೂರ್ತಿ ರಾಧಾ ಬಿನೋಡೆ ಪಾಲ್ ಅವರಿಗೆ ತನ್ನ ತಂದೆ ಏನನ್ನು ಹೇಳಿದ್ದರೆಂದು 1992ರ ಆಗಸ್ಟ್‌ನಲ್ಲಿ ಅಮಿಯ ನಾಥ್ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ತಿಳಿಸಿದರು.

1945ರ ಆಗಸ್ಟ್‌ನಲ್ಲಿ (ನೇತಾಜಿ ಮೃತಪಟ್ಟರೆಂದು ವರದಿಯಾದ ದಿನ) ತೈಹೋಕು ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತ ಆಗಿರಲಿಲ್ಲ ಹಾಗೂ ಅದೇ ತಿಂಗಳ 18ರಂದು ನೇತಾಜಿ ಯು.ಎಸ್.ಎಸ್‌ಆರ್. ಗಡಿಯಲ್ಲಿದ್ದ ಮಂಚೂರಿಯಾದ ಡೈರೆನ್‌ಗೆ ಸುರಕ್ಷಿತವಾಗಿ ತಲುಪಿದ್ದರು ಎಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆಯು ಮಾಡಿದ್ದ ವರದಿಯ ಪ್ರತಿಯನ್ನು ಡಾ. ಪಾಲ್ ಅವರು ನೋಡಿದ್ದರು. ನೇತಾಜಿ ಮೃತಪಟ್ಟರೆಂದು ವರದಿಯಾದ ಒಂದು ವರ್ಷದ ನಂತರ, ಅವರು ರಷ್ಯಾದಲ್ಲಿ ಇದ್ದರೆನ್ನುವ ಮಾಹಿತಿಯು ಬ್ರಿಟಿಷ್ ಅಥವಾ ಅಮೆರಿಕದ ಮೂಲಗಳಿಂದ ಮಹಾತ್ಮ ಗಾಂಧಿ ಅವರಿಗೆ ಲಭ್ಯವಾಗಿತ್ತೆಂದೂ ಅಮಿಯ ನಾಥ್ ಉಲ್ಲೇಖಿಸಿದರು.

ನೆಹರೂ, ವಿ.ಪಿ. ಸಿಂಗ್, ಪಿ.ವಿ. ನರಸಿಂಹ ರಾವ್ ಪ್ರಧಾನಿಗಳಾಗಿದ್ದ ಕಾಲದಿಂದ ವಾಜಪೇಯಿ ಪ್ರಧಾನಿ ಆಗಿದ್ದ ಕಾಲದವರೆಗೆ ಅಮಿಯ ನಾಥ್ ನೇತಾಜಿ ನಾಪತ್ತೆಯ ಸತ್ಯಶೋಧ ಆಗಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಾ ಬಂದರು. ಸರ್ಕಾರವು ಕೆ.ಜಿ.ಬಿ.ಯ ಪ್ರಮುಖ ಕಡತಗಳು, ಸೇನಾ ಪ್ರಧಾನ ಕಚೇರಿಯ ಕಡತಗಳು ಹಾಗೂ ಸೋವಿಯತ್ ಸರ್ಕಾರದ ಕಡತಗಳನ್ನು ನೋಡುವ ಅವಕಾಶ ಕಲ್ಪಿಸಬೇಕು ಎಂದೂ ಒತ್ತಿಹೇಳುತ್ತಲೇ ಬಂದರು. 1996ರಲ್ಲಿ ಅಮಿಯ ನಾಥ್ ತೀರಿಹೋದರು. ಅದಕ್ಕೆ ಕೆಲವು ದಿನಗಳ ಮುಂಚೆ ಅವರು ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೀಗೆ ಎಚ್ಚರಿಸಿದ್ದರು: ‘ನಾನು ನಿಮಗೆ ಬರೆಯುತ್ತಿರುವ ಸಂಗತಿಯು ಬೋಸ್ ಕುಟುಂಬಕ್ಕಷ್ಟೇ ಅಲ್ಲದೆ ಇಡೀ ದೇಶಕ್ಕೆ ಮುಖ್ಯವಾದುದು. ರಷ್ಯಾ ಪಾರ್ಲಿಮೆಂಟನ್ನು ಕಮ್ಯುನಿಸ್ಟರು ಮತ್ತೆ ವಶಪಡಿಸಿಕೊಂಡಿದ್ದಾರೆ. ನೇತಾಜಿ ಅಲ್ಲಿ ಇದ್ದುದು ನಿಜವೇ ಎಂದು ತಿಳಿಯುವುದು ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ.

ಯಾಕೆಂದರೆ, ಆ ಕೆಲಸವು ಯೆಲ್ಟ್‌ಸಿನ್ ಅವರ ಅಧ್ಯಕ್ಷಾವಧಿ ಮುಗಿಯುವುದರ ಒಳಗೆ ಆಗಬೇಕಿದೆ’.  ಈ ಪತ್ರಕ್ಕೆ ವಾಜಪೇಯಿ ಉತ್ತರ ನೀಡುವ ಮೊದಲೇ ಅಮಿಯ ನಾಥ್ ಕೊನೆಯುಸಿರೆಳೆದರು. ಈ ಯಾವ ಆಗ್ರಹಗಳಿಂದಲೂ ನೇತಾಜಿ ಕುಟುಂಬದವರಿಗೆ ಹಾಗೂ ದೇಶಕ್ಕೆ ಸಿಗಬೇಕಾದ ಉತ್ತರ ದೊರೆಯಲಿಲ್ಲ. ದೇಶದ ಪ್ರತಿಷ್ಠಿತ ವ್ಯಕ್ತಿ ಎನಿಸಿದ್ದ ತಮ್ಮ ಸಹೋದರನ ನಾಪತ್ತೆಯ ಸತ್ಯ ಅರಿತು, ನ್ಯಾಯ ಪಡೆಯಬೇಕೆಂದು ಎಲ್ಲಾ ಅವಕಾಶದ ಬಾಗಿಲುಗಳನ್ನು ತಟ್ಟಿದರೂ ಪ್ರಯೋಜನವಾಗಲಿಲ್ಲ.

ಇದೇ ತಿಂಗಳ 14ರಂದು ಒಂದು ಸ್ವಾಗತಾರ್ಹ ಬೆಳವಣಿಗೆ ನಡೆಯಿತು. ಮುಂದಿನ ವರ್ಷ ಜನವರಿ 23ರಂದು ನೇತಾಜಿ ಅವರ 117ನೇ ಜನ್ಮದಿನದ ಸಂದರ್ಭದಲ್ಲಿ ಮೊದಲ ಕಂತಿನ ಕಡತಗಳನ್ನು ಅನಾವರಣಗೊಳಿಸುವುದಾಗಿ ನೇತಾಜಿ ಕುಟುಂಬದವರಿಗೆ ಹಾಗೂ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ಕೊಟ್ಟರು. ಅಷ್ಟೇ ಅಲ್ಲದೆ, ಅಮೆರಿಕ, ಯು.ಕೆ., ಜಪಾನ್‌ನಲ್ಲಿರುವ ಕಡತಗಳ ವಿಚಾರ ಅನಾವರಣಗೊಳಿಸಲು ಆಯಾ ಸರ್ಕಾರಗಳ ಜೊತೆ ಮಾತನಾಡುವುದಾಗಿಯೂ ಹೇಳಿದರು. ವಿಶೇಷವಾಗಿ, ಬರುವ ಡಿಸೆಂಬರ್‌ನಲ್ಲಿ ತಾನು ರಷ್ಯಾಗೆ ಹೋದಾಗ ಅಲ್ಲಿನ ಕಡತಗಳ ಕುರಿತು ಖುದ್ದು ಪರಿಶೀಲಿಸುವುದಾಗಿಯೂ ಅವರು ಭರವಸೆ ಕೊಟ್ಟರು. ಮೋದಿ ಅವರ ಈ ನಡೆ ಭಾರತೀಯ ಇತಿಹಾಸದಲ್ಲಿಯೇ ಸಂಪೂರ್ಣ ಹೊಸ ಅಧ್ಯಾಯವಾಗಲಿದೆ.

ನೇತಾಜಿ ಅವರಿಗೆ ಸಂಬಂಧಿಸಿದ 64 ಕಡತಗಳನ್ನು ಹಾಗೂ ಬಂಗಾಳದ ಸಚಿವ ಸಮಿತಿಯಲ್ಲಿ ನಡೆದಿದ್ದ ಚರ್ಚೆಗಳ ಟಿಪ್ಪಣಿಗಳನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೇ ವರ್ಷ ಸೆಪ್ಟೆಂಬರ್ 18ರಂದು ಅನಾವರಣಗೊಳಿಸಿದರು. 1938ರಿಂದ 1947ರವರೆಗಿನ ಅವಧಿಯ 12,744 ಪುಟಗಳಷ್ಟು ಮಾಹಿತಿಯನ್ನು ಈ ಕಡತಗಳು ಒಳಗೊಂಡಿವೆ. ಅವುಗಳಲ್ಲಿ 1941ರಲ್ಲಿ ಭಾರತದಿಂದ ಬೋಸ್ ತಪ್ಪಿಸಿಕೊಂಡು ಹೋಗಲು ಕಾರಣವಾದ ವಿದ್ಯಮಾನ ಹಾಗೂ ಭಾರತೀಯ ಬೇಹುಗಾರಿಕಾ ಸಂಸ್ಥೆಗಳ ಕಣ್ಗಾವಲಿನಲ್ಲಿ ಅವರ ಕುಟುಂಬದ ಸದಸ್ಯರಿದ್ದುದು ಮೊದಲಾದ ವಿವರಗಳಿವೆ.

ಸುಭಾಷ್ ಚಂದ್ರ ಬೋಸ್ ಅವರ ಕುಟುಂಬವರ್ಗ 1948ರಿಂದ 1968ರವರೆಗೆ ಕಲ್ಪಿಸಿಕೊಳ್ಳಲೂ ಆಗದಂಥ ಸವಾಲುಗಳನ್ನು ಎದುರಿಸಬೇಕಾಯಿತು. ಅದರಲ್ಲೂ ಅವರ ಅಣ್ಣನ ಮಕ್ಕಳಾದ ಶಿಶಿರ್ ಕುಮಾರ್ ಬೋಸ್ ಹಾಗೂ ಅಮಿಯ ನಾಥ್ ಬೋಸ್ (ಶರತ್ ಚಂದ್ರ ಬೋಸ್ ಅವರ ಮಕ್ಕಳು) ತೀವ್ರ ಕಣ್ಗಾವಲಿನಲ್ಲೇ ಬದುಕಿದ್ದರು. ಬೋಸ್ ಬದುಕಿದ್ದಾರೆನ್ನುವುದಕ್ಕೆ ಈ ಸವಾಲುಗಳೇ ಸಾಕ್ಷ್ಯ ಎನಿಸಿದ್ದಲ್ಲದೆ, ಕುಟುಂಬದವರಿಗೆ ಆಘಾತ ಉಂಟುಮಾಡಿದವು. ಬೋಸ್ ಬದುಕಿದ್ದು, ಅವರು ಮರಳಿ ಬಂದಾರು ಎಂಬ ಆತಂಕ ನೆಹರೂ ಅವರಿಗೆ ಇದ್ದಿರಬಹುದೆನ್ನುವುದಕ್ಕೆ ಇವೆಲ್ಲವೂ ಸೂಚನೆಗಳಂತೆ ಕಂಡವು.

ಅಕಸ್ಮಾತ್ತಾಗಿ ಕೆಲವು ಕಡತಗಳ ಮಾಹಿತಿ ಸೋರಿಕೆಯಾಗಿ, ಅವನ್ನು 2012ರಲ್ಲಿ ರಾಷ್ಟ್ರೀಯ ಪತ್ರಾಗಾರಕ್ಕೆ ಕಳುಹಿಸಲಾಯಿತು. ಅವುಗಳ ಪ್ರಕಾರ ನೇತಾಜಿ ಕುಟುಂಬದವರ ಮೇಲೆ ಕಣ್ಗಾವಲು ಇಡುವಂತೆ ದೆಹಲಿಯಿಂದ ಆದೇಶ ಬಂದಿತ್ತು. ‘1957ರಲ್ಲಿ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಸುಬಿಮಲ್ ದತ್ ಅವರಿಗೆ ಆಗಿನ ಪ್ರಧಾನಿ ನೆಹರೂ ಪತ್ರ ಬರೆದು, 1957ರಲ್ಲಿ ಅಮಿಯ ನಾಥ್ ಬೋಸ್ ಜಪಾನ್‌ಗೆ ಭೇಟಿ ನೀಡಲಿದ್ದು, ಅವರ ಮೇಲೆ ನಿಗಾ ಇಡಬೇಕೆಂದು ಸೂಚಿಸಿದ್ದರು. ಅವರು ಜಪಾನ್‌ನಲ್ಲಿ ಎಲ್ಲೆಲ್ಲಿಗೆ ಹೋಗುತ್ತಾರೆ, ಯಾರು ಯಾರನ್ನು ಭೇಟಿ ಮಾಡುತ್ತಾರೆ ಎಂದು ಗಮನಿಸಿ, ಅದರ ಕುರಿತು ವರದಿ ಕಳುಹಿಸಿಕೊಡುವಂತೆಯೂ ತಾಕೀತು ಮಾಡಿದ್ದರು.

ಖುದ್ದು ನೆಹರೂ ಇಂಥ ಕಣ್ಗಾವಲು ಇಡಲು ಆದೇಶಿಸಿದ್ದರೆನ್ನುವುದಕ್ಕೆ ಸಾಕ್ಷ್ಯಗಳು ಇವೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಬೇಹುಗಾರಿಕಾ ಇಲಾಖೆಯ ವರದಿಗಳನ್ನು ಬ್ರಿಟಿಷ್ ಬೇಹುಗಾರಿಕಾ ಸಂಸ್ಥೆ ಎಂಐ5ಕ್ಕೆ ಕಳುಹಿಸಿಕೊಟ್ಟಿದ್ದಾದರೂ ಯಾಕೆ? ಸುಭಾಷ್ ಬಾಬು ಹಾಗೂ ಅವರ ಕುಟುಂಬದವರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದರೇ ವಿನಾ ಯಾವುದೇ ಅಪರಾಧ ಎಸಗಲಿಲ್ಲ. ಹಾಗಿದ್ದಾಗ ಅವರ ಕುಟುಂಬದವರ ಮೇಲೆ ಕಣ್ಗಾವಲು ಇಟ್ಟಿದ್ದಾದರೂ ಏಕೆ?’ ಎಂದು ಬೋಸರ ಅಣ್ಣನ ಮೊಮ್ಮಗ ಚಂದ್ರ ಬೋಸ್ ಕೋಪದಿಂದ ಪ್ರಶ್ನಿಸಿದ್ದರು.

ಅಮಿಯ ನಾಥ್ ಬೋಸ್ ಹಾಗೂ ಶಿಶಿರ್ ಕುಮಾರ್ ಬೋಸ್ ಬರೆದಿದ್ದ ಎಲ್ಲಾ ಪತ್ರಗಳನ್ನು ತಡೆಹಿಡಿದು, ಅವುಗಳ ಪ್ರತಿಗಳನ್ನು ಮಾಡಿಸುತ್ತಿದ್ದ ಕ್ರಮವನ್ನು ಹಾಗೂ ಕೆಲವು ಸೂಕ್ಷ್ಮವಾದ ಪತ್ರಗಳನ್ನು ಯಾವ ವಿಳಾಸಕ್ಕೆ ಬರೆಯಲಾಗಿತ್ತೋ ಅಲ್ಲಿಗೆ ತಲುಪಿಸದೇ ಹೋದ ಕಾರಣವನ್ನು ನೇತಾಜಿ ಕುಟುಂಬ ಪ್ರಶ್ನಿಸಿದ್ದಷ್ಟೇ ಅಲ್ಲದೆ ಜಾಹೀರುಗೊಳಿಸಿತು. ನೇತಾಜಿ ಕುಟುಂಬದವರು ಎಲ್ಲಿ ಹೋದರೂ ಬೇಹುಗಾರಿಕಾ ಸಂಸ್ಥೆಗಳ ಸಿಬ್ಬಂದಿ ಹಿಂಬಾಲಿಸುತ್ತಿದ್ದರು.

ನೇತಾಜಿ ಕುಟುಂಬದವರ ಚಲನವಲನಗಳ ಕುರಿತು ಗುಪ್ತಚರ ಏಜೆಂಟರು ಬೇಹುಗಾರಿಕಾ ಇಲಾಖೆಯ ಕಚೇರಿಗೆ ವರದಿ ಒಪ್ಪಿಸುತ್ತಿದ್ದರು ಎನ್ನುವುದಕ್ಕೆ ಹಸ್ತಾಕ್ಷರದ ಕೆಲವು ಸರಣಿ ಸಂದೇಶಗಳೇ ಪುಷ್ಟಿ ಕೊಡುತ್ತವೆ. 16ರಿಂದ 20 ವರ್ಷಗಳಷ್ಟು ಅವಧಿಯವರೆಗೆ ನೆಹರೂ ಪ್ರಧಾನಿ ಆಗಿದ್ದರು. ಆಗ ಬೇಹುಗಾರಿಕಾ ಇಲಾಖೆಯ ಸಿಬ್ಬಂದಿ ಅವರಿಗೆ ನೇರವಾಗಿ ಸಂದೇಶಗಳನ್ನು ರವಾನಿಸುತ್ತಿದ್ದರು. ನಮ್ಮ ಮನೆಗಳು ಬ್ರಿಟಿಷರ ಕಾಲದಂತೆ ಕಣ್ಗಾವಲಿನಲ್ಲೇ ಇರುತ್ತಿದ್ದವು’ ಎಂದು ಚಂದ್ರ ಬೋಸ್ ಒಮ್ಮೆ ಹೇಳಿದ್ದರು.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಿದ ಕಡತಗಳನ್ನು ಗಮನಿಸಿದರೆ ನೇತಾಜಿ ಕುಟುಂಬದ ವನಿತೆಯರ ಮೇಲೂ ಆಗ ಗುಪ್ತಚರ ದಳಗಳ ಸಿಬ್ಬಂದಿ ಕಣ್ಣಿಟ್ಟಿದ್ದು ಸ್ಪಷ್ಟವಾಗುತ್ತದೆ. ‘ನೇತಾಜಿಯ ಅಣ್ಣ ಶರತ್‌ ಬೋಸ್‌ ಅವರ ಮಕ್ಕಳಾದ ಚಿತ್ರಾ ಬೋಸ್‌ ಹಾಗೂ ರೋಮಾ ಬೋಸ್‌ ತಮ್ಮ ಹರೆಯದಲ್ಲಿದ್ದಾಗ ಹಾಗೂ ಆಮೇಲೆ ಮದುವೆ ಮಾಡಿಕೊಂಡು ತಂತಮ್ಮ ಸಂಸಾರಗಳನ್ನು ನಿಭಾಯಿಸತೊಡಗಿದಾಗಲೂ ನೆಹರೂ ಹಾಗೂ ಇಂದಿರಾ ಗಾಂಧಿ ಸರ್ಕಾರಗಳು 25 ವರ್ಷ ಅವರ ಮೇಲೆ ಕಣ್ಣಿಟ್ಟಿದ್ದವು. ತಮ್ಮ ಪಾಡಿಗೆ ತಾವು ಸಂಸಾರ ಹೂಡಿಕೊಂಡು ಇದ್ದ ಆ ಹೆಣ್ಣು ಮಕ್ಕಳ ಮೇಲೂ ನಿಗಾ ಇಟ್ಟಿದ್ದು ಯಾಕೆ’ ಎನ್ನುವುದು ಚಂದ್ರ ಬೋಸ್‌ ಪ್ರಶ್ನೆ. 

ನೇತಾಜಿ ಕುಟುಂಬದ ಸದಸ್ಯರಷ್ಟೇ ಅಲ್ಲದೆ ಅವರ ಜೊತೆ ಒಡನಾಟವಿದ್ದ ಜನರ ಮೇಲೂ ಸರ್ಕಾರಗಳು ಕಣ್ಣಿಟ್ಟಿದ್ದವು. ಡಾರ್ಜಿಲಿಂಗ್‌ನಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ 15ರ ಹುಡುಗ ಪಿರ್ತಿ ಲಾಲ್‌ ಸುಬ್ಬ ಕೂಡ ಪೊಲೀಸ್‌ ಹಾಗೂ ಬೇಹುಗಾರಿಕಾ ಸಿಬ್ಬಂದಿಯ ನೆರಳಲ್ಲೇ ಇದ್ದುದು ಅಚ್ಚರಿ. 1949ರ ನವೆಂಬರ್‌ನಲ್ಲಿ ನೇತಾಜಿ ಬದುಕಿದ್ದಾರೋ ಇಲ್ಲವೋ ಎಂದು ಶರತ್‌ ಬೋಸ್‌ ಅವರಿಗೆ ಸುಬ್ಬ ಪತ್ರ ಬರೆದಿದ್ದ. ಕುತೂಹಲಿಯಾಗಿದ್ದ ಅವನಿಗೆ ರಾಜಕೀಯ ಕಾರಣಗಳೇನೂ ಇರಲಿಲ್ಲವಾದ್ದರಿಂದ ಬಚಾವಾದ. ಗುಜರಾತಿ ಭಾಷೆಯಲ್ಲಿ ನೇತಾಜಿ ಅವರ ಆತ್ಮಚರಿತ್ರೆ ಬರೆಯಲು ಅನುಮತಿ ಕೋರಿ ಎಚ್‌.ಎಂ. ತ್ರಿವೇದಿ 1949ರಲ್ಲಿ ಶರತ್‌ ಬೋಸ್‌ ಅವರಿಗೆ ಪತ್ರ ಬರೆದಿದ್ದರು. ಅವರನ್ನು ಕೂಡ ಬೇಹುಗಾರಿಕೆಯವರು ಹಿಂಬಾಲಿಸಿದ್ದರು.

ನೇತಾಜಿ ರಷ್ಯಾದಲ್ಲಿ ಇದ್ದರೆಂದು ಬಹುತೇಕ ಸಾಬೀತುಪಡಿಸಿದ್ದ ಏಷ್ಯಾಟಿಕ್‌ ಸೊಸೈಟಿ ವಿದ್ವಾಂಸರನ್ನು ಕೂಡ ಬೇಹುಗಾರಿಕೆ ಸಿಬ್ಬಂದಿ ನಿಗಾ ಮಾಡದೇ ಬಿಟ್ಟಿರಲಿಲ್ಲ. ‘ಸೋವಿಯತ್‌ನಲ್ಲಿನ ಗುಪ್ತ ದಾಖಲೆಗಳನ್ನು ನೋಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ ನಮ್ಮಂಥವರನ್ನು ಸರ್ಕಾರ ಹದ್ದಿನ ಕಣ್ಣಿನಿಂದ ನೋಡಿತು. ನಮ್ಮ ವಿಷಯದಲ್ಲಿ ಕಠಿಣವಾಗಿಯೂ ವರ್ತಿಸಿತು. 15 ವರ್ಷಗಳ ಕಾಲ ನಿರಂತರವಾಗಿ ಸಂಶೋಧನೆ ನಡೆಸಿ ನಾನು ಬರೆದ ಪುಸ್ತಕ ‘ವಾಟೆವರ್‌ ಹ್ಯಾಪನ್ಡ್‌ ಟು ನೇತಾಜಿ?’ಯನ್ನು ಪುಸ್ತಕದಂಗಡಿಗಳಿಂದ ಹಿಂಪಡೆಯುವಂತೆ ಮಾಡಿದ್ದೇ ಅಲ್ಲದೆ ಸುಮಾರು ಎರಡು ವರ್ಷಗಳ ಕಾಲ ಕೃತಿಯ ಮೇಲೆ ನಿಷೇಧ ಹೇರಿದ್ದರು’– ಇದು ಪುರಭಿ ರಾಯ್‌  ಅವರ ಅನುಭವದ ನುಡಿ.

‘ನಿಜಕ್ಕೂ ನೇತಾಜಿ ಮೃತಪಟ್ಟಿದ್ದರ ಕುರಿತು ಖಾತರಿ ಇದ್ದಿದ್ದರೆ ಭಾರತ ಸರ್ಕಾರ 1970–80ರ ದಶಕಗಳವರೆಗೆ ಅವರ ಕುರಿತ ಸಣ್ಣ ಸುದ್ದಿಯನ್ನೂ ಗಂಭೀರವಾಗಿ ಪರಿಗಣಿಸಿದ್ದು ಯಾಕೆ? ಬೋಸ್‌ ಬದುಕಿದ್ದಿದ್ದರೆ ನೆಹರೂ ಅವರನ್ನು ಹಿಂದಿಕ್ಕುತ್ತಿದ್ದರು’ ಎನ್ನುವುದು ಲೇಖಕ, ಸಂಶೋಧಕ ಅನುಜ್‌ ಧರ್‌ ಅಭಿಪ್ರಾಯ.

ದಶಕದಷ್ಟು ಅವಧಿ ಸಂಶೋಧನೆ ನಡೆಸಿ, ನೇತಾಜಿ ಬಗೆಗಿನ ಮಹತ್ವದ ಮಾಹಿತಿ ಕಲೆಹಾಕಿದ ಅನುಜ್‌ ಸ್ಫೋಟಿಸಿದ ಈ ಸತ್ಯ ಮಹತ್ವವಾದುದು: ‘ಮಾಸ್ಕೊದಲ್ಲಿ ಆಗ ಭಾರತದ ರಾಯಭಾರಿಯಾಗಿದ್ದ ವಿಜಯ ಲಕ್ಷ್ಮಿ ಪಂಡಿತ್‌ ಅವರಿಗೆ ಬೋಸ್‌ ಸೋವಿಯತ್‌ ರಷ್ಯಾದಲ್ಲಿ ಇದ್ದ ಸಂಗತಿ ಗೊತ್ತಿತ್ತು. ಮಾಸ್ಕೋದಿಂದ ಭಾರತಕ್ಕೆ ಬಂದಮೇಲೆ ಅವರು,  ತನಗೆ ಒಂದು ರೋಮಾಂಚನಕಾರಿ ಸಂಗತಿ ತಿಳಿದಿದ್ದು, ಅದನ್ನು ಹೇಳಿದರೆ ಇಡೀ ದೇಶದ ಜನತೆಗೆ 1947ರ ಆಗಸ್ಟ್‌ 15ರಂದು ಆಗಿದ್ದ ಸಂತೋಷಕ್ಕಿಂತ ಹೆಚ್ಚು ಆನಂದವಾಗುತ್ತದೆ ಎಂದು ಖಾಸಗಿಯಾಗಿ ಹೇಳಿದ್ದರಂತೆ. ಅದನ್ನು ಕೇಳಿದ ನೆಹರೂ ಬಾಯಿಮುಚ್ಚಿಕೊಂಡು ಇರುವಂತೆ ಅವರಿಗೆ ಸೂಚಿಸಿದ್ದರಿಂದ ಆ ಸತ್ಯ ಬಹಿರಂಗವಾಗಲಿಲ್ಲ’.

ಮಾಸ್ಕೋದಲ್ಲಿನ ರಾಮಕೃಷ್ಣ ಮಿಷನ್‌ನ ಮುಖ್ಯಸ್ಥ ಸ್ವಾಮಿ ಜ್ಯೋತಿರೂಪಾನಂದ ಕೂಡ ವಿಜಯ ಲಕ್ಷ್ಮಿ ಅವರದ್ದೇ ಅಭಿಪ್ರಾಯವನ್ನು ಉಪ್ಪು–ಖಾರ ಹಾಕಿ 2013ರಲ್ಲಿ ಹೇಳಿದ್ದರು. ‘ಜೈಲಿನಲ್ಲಿ ಇರಿಸಲಾಗಿದ್ದ ನೇತಾಜಿ ಅವರನ್ನು ಸಣ್ಣ ಕಿಂಡಿಯಿಂದ ವಿಜಯ ಲಕ್ಷ್ಮಿ ನೋಡಿದ್ದರು. ಜ್ವರದಿಂದ ತುಂಬಾ ಬಳಲಿ ಕ್ಷೋಭೆಗೆ ಒಳಗಾದಂತೆ ಹಾಗೂ ಮನೋಬೇನೆ ಅನುಭವಿಸುತ್ತಿದ್ದಂತೆ ನೇತಾಜಿ ಆಗ ಅವರ ಕಣ್ಣಿಗೆ ಕಂಡಿದ್ದರಂತೆ. ಕೊರೆಯುವ ಆ ಚಳಿಯಲ್ಲೂ ಅವರಿಗೆ ಮೈಮುಚ್ಚಲು ಸಾಕಷ್ಟು ಬಟ್ಟೆಗಳನ್ನು ಕೊಟ್ಟಿರಲಿಲ್ಲವಂತೆ.  ಈ ವಿಷಯವನ್ನು ಬಹಿರಂಗಪಡಿಸಲು ವಿಜಯ ಲಕ್ಷ್ಮಿ ಸಿದ್ಧರಿದ್ದರೂ, ಅವರು ಪತ್ರಿಕಾ ಮಾಧ್ಯಮದವರನ್ನು ಭೇಟಿ ಮಾಡದಂತೆ ತಡೆಹಿಡಿದಿದ್ದರು’ ಎಂದು ಜ್ಯೋತಿರೂಪಾನಂದ ಹೇಳಿದ್ದನ್ನು ಅನುಜ್‌ ಧರ್‌ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೆ ಆ ಜೈಲಿನಲ್ಲೇ ನೇತಾಜಿ ಮೃತಪಟ್ಟಿರಬೇಕು ಎಂದೂ ಸ್ವಾಮಿ ಊಹಿಸಿದ್ದರು.

ಜವಾಹರಲಾಲ್‌ ನೆಹರೂ ಅವರಿಗೆ ಅಧಿಕಾರದ ಹಾದಿಯಲ್ಲಿ ಅಡ್ಡ ಆಗುತ್ತಿದ್ದುದು ಸುಭಾಷ್‌ ಚಂದ್ರ ಬೋಸ್‌ ಒಬ್ಬರೇ ಎನ್ನುವುದು ನೇತಾಜಿ ಕುಟುಂಬ ವರ್ಗದವರ ನಂಬಿಕೆ. ‘ಅಕಸ್ಮಾತ್‌ ಬೋಸ್‌ ಬದುಕಿದ್ದರೆ  ಎಂದಾದರೂ ಕಾಣಿಸಿಕೊಳ್ಳಬಹುದು ಎಂಬ ಆತಂಕವಿತ್ತು’ ಎಂದು ಚಂದ್ರ ಬೋಸ್‌ ತಮ್ಮ ಅನುಭವಗಳ ಉದಾಹರಣೆಯೊಂದಿಗೆ ಹೇಳುತ್ತಾರೆ. ‘ನನಗೆ ಯಾರೂ ಜವಾಹರಲಾಲ್‌ ನೆಹರೂ ಅವರಷ್ಟು ತೊಂದರೆ ಕೊಡಲಿಲ್ಲ’ ಎಂದು 1939ರಲ್ಲಿ ನೇತಾಜಿ ತಮ್ಮ ಅಣ್ಣನ ಮಗ ಅಮಿಯ ನಾಥ್‌ ಬೋಸ್‌ ಅವರಿಗೆ ಪತ್ರ ಬರೆದಿದ್ದರು.

ಕೌಟುಂಬಿಕ ಭಿನ್ನಾಭಿಪ್ರಾಯ: ಸುಭಾಷ್‌ ಚಂದ್ರ ಬೋಸರ ದೊಡ್ಡ ಕುಟುಂಬದ ಮೂವರು ಸದಸ್ಯರು ಮಾತ್ರ ಬೇರೆಯದೇ ಅಭಿಪ್ರಾಯ ಹೊಂದಿದ್ದಾರೆ. ಶರತ್‌ ಚಂದ್ರ ಅವರ ಮಗ ಶಿಶಿರ್‌ ಬೋಸ್‌, ಅವರ ಪತ್ನಿ ಕೃಷ್ಣಾ ಬೋಸ್‌ ಹಾಗೂ ಅವರ ಮಗ ಸುಗತ ಬೋಸ್‌ ಕುಟುಂಬದ ಉಳಿದವರ ಅಭಿಪ್ರಾಯಕ್ಕೆ ಸಹಮತ ಸೂಚಿಸಲೇ ಇಲ್ಲ. ಪ್ರಧಾನಿ ಮೋದಿ ಅವರನ್ನ ಭೇಟಿಯಾದ ಕುಟುಂಬದ ಸದಸ್ಯರ ಗುಂಪಿನಲ್ಲಿ ಈ ಮೂವರೂ ಇರಲಿಲ್ಲ. ‘ನೇತಾಜಿ ವಿಮಾನ ಅಪಘಾತದಲ್ಲಿ ನಿಧನರಾದರು ಎಂಬ ಕಾಂಗ್ರೆಸ್‌ನ ಅಭಿಪ್ರಾಯವನ್ನು ಆ ಮೂವರೂ ಒಪ್ಪಿಕೊಂಡರಲ್ಲದೆ ಯಾವ ಕಡತಗಳನ್ನೂ ಜಾಹೀರುಗೊಳಿಸುವುದು ಬೇಕಿಲ್ಲ ಎಂದರು’ ಎನ್ನುವುದು ಚಂದ್ರ ಬೋಸ್‌ ಸ್ಪಷ್ಟನೆ.

ನವದೆಹಲಿಯಲ್ಲಿ ಇರುವ ಇಂಡಿಯನ್‌ ನ್ಯಾಷನಲ್‌ ಆರ್ಮಿ ಟ್ರಸ್ಟ್‌ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಬ್ರಿಗೇಡಿಯರ್‌ ಚಿಕ್ಕಾರ ಅವರ ಅಭಿಪ್ರಾಯ ಹೀಗಿದೆ: ‘ಬೋಸ್‌ ಕುಟುಂಬದಲ್ಲಿ ಕೆಲವು ಮೋಸಗಾರರು ಇದ್ದಾರೆ.  ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರು ಎನ್ನುವುದನ್ನೇ ಅವರ ಕುಟುಂಬದವರೂ ಅನುಮೋದಿಸಿದರೆ ವಿಶ್ವದ ಎಲ್ಲರೂ ಅದನ್ನು ನಂಬುತ್ತಾರೆ ಎಂದು ನೆಹರೂ ಭಾವಿಸಿದ್ದರು.

ಅದಕ್ಕೇ ಅವರು ಶಿಶಿರ್‌ ಹಾಗೂ ಕೃಷ್ಣಾ ಬೋಸ್‌ ಅಲ್ಲದೆ ನೇತಾಜಿ ಅವರ ಒಡನಾಡಿಯಾಗಿದ್ದ ಶಾ ನವಾಜ್‌ ಖಾನ್‌ ಅವರನ್ನು ತಮ್ಮ ಕಡೆಗೆ ಎಳೆದುಕೊಂಡರು. ಮೊದಲ ಕ್ಯಾಬಿzನೆಟ್‌ನಲ್ಲೇ ಶಾ ನವಾಜ್‌ ಅವರನ್ನು ಮಂತ್ರಿ ಮಾಡಿದರು. ಕೃಷ್ಣಾ ಬೋಸ್‌ ಅವರನ್ನು ಕಾಂಗ್ರೆಸ್‌ನ ಸಂಸದೆಯನ್ನಾಗಿಸಿದರು. ಕಾಂಗ್ರೆಸ್‌ ದೃಷ್ಟಿಕೋನದ ಇತಿಹಾಸವನ್ನೇ ನೇತಾಜಿ ಅವರಿಗೆ ಸಂಬಂಧಿಸಿದಂತೆ ಪ್ರಚಾರ ಮಾಡುವಂತೆ ಕೃಷ್ಣಾ ಬೋಸ್‌ ಅವರಿಗೆ ದೊಡ್ಡ ಮೊತ್ತದ ಹಣವನ್ನು ನೆಹರೂ ಕೊಟ್ಟಿದ್ದರು’.

ಚಂದ್ರ ಬೋಸ್‌ ಕೂಡ ಇದೇ ಮಾತನ್ನು ಅನುಮೋದಿಸುವುದು ಹೀಗೆ: ‘ಕಾಂಗ್ರೆಸ್‌ ಸಂಸದೆಯಾಗಿರುವುದರಿಂದ ಕೃಷ್ಣಾ ಬೋಸ್‌ ಆ ಪಕ್ಷ ವಾದಿಸುತ್ತಾ ಬಂದಿರುವ ವಿಮಾನ ಅಪಘಾತದ ಸಿದ್ಧಾಂತವನ್ನೇ  ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಈಗ ಸುಗತ ಬೋಸ್‌, ಕೃಷ್ಣ ಬೋಸ್‌ ಟಿ.ಎಂ.ಸಿ. ಜೊತೆ ಗುರ್ತಿಸಿಕೊಂಡಿದ್ದಾರೆ. ನೇತಾಜಿ ಅವರ ಮನೆ, ನೇತಾಜಿ ಭವನವನ್ನು 1946ರಲ್ಲಿ ಸಂಶೋಧನೆಗೆ ಬಳಕೆಯಾಗಲಿ ಎಂದು ಇಡೀ ದೇಶಕ್ಕೆ ಶರತ್‌ ಚಂದ್ರ ಬೋಸ್‌ ಅರ್ಪಿಸಿದ್ದರು. ಅದರ ಉದ್ದೇಶವನ್ನೇ ಹಾಳುಮಾಡಿದ ಶಿಶಿರ್‌ ಕುಮಾರ್‌ ಬೋಸ್‌, ಕೃಷ್ಣಾ ಬೋಸ್‌ ಹಾಗೂ ಸುಗತ ಬೋಸ್‌ ತಮ್ಮ ವ್ಯಾಪಾರ ಹಾಗೂ ರಾಜಕೀಯದ ವೇದಿಕೆಯಾಗಿ ಅದನ್ನು ಬದಲಿಸಿಬಿಟ್ಟರು. ನೇತಾಜಿ ಅವರ ಆಸ್ತಿಯನ್ನು ತಕ್ಷಣವೇ ಸರ್ಕಾರ ತನ್ನ ವಶಕ್ಕೆ ಪಡೆದು, ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು ಎಂದು ಬೋಸ್‌ ಕುಟುಂಬ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದರು’.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ಅಕ್ಟೋಬರ್ 18, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು